Friday, August 29, 2025

ಸತ್ಯ | ನ್ಯಾಯ |ಧರ್ಮ

ಕರ್ನಾಟಕದಲ್ಲಿ ಸುಮ್ಮನೆ ಚುನಾವಣೆ ಎದುರಿಸಿದರು ಕಾಂಗ್ರೆಸ್‌ ಗೆಲ್ಲುತ್ತೆ: ಸಿದ್ದರಾಮಯ್ಯ

ಮೈಸೂರು: ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಸುಮ್ಮನೆ ಚುನಾವಣೆ ಎದುರಿಸಿದರೂ ಗೆಲ್ಲಲಿದೆ, ಇಲ್ಲಿ ಯಾವ ತಂತ್ರಗಾರಿಕೆಯ ಅವಶ್ಯಕತೆಯೂ ಇಲ್ಲ  ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶದ ಬಗ್ಗೆ ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಮಾತನಾಡಿದ ಅವರು, ʼನನಗಿದ್ದ ಮಾಹಿತಿ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಇದೆ ಮತ್ತು ಗುಜರಾತ್‌ ನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬುದಾಗಿತ್ತು. ಗುಜರಾತ್‌ ನಲ್ಲಿ ಬಿಜೆಪಿ ಗೆದ್ದಿರುವುದರಲ್ಲಿ ಆಶ್ಚರ್ಯ ಇಲ್ಲ, ಆಮ್‌ ಆದ್ಮಿ ಪಕ್ಷದವರು ಸ್ಪರ್ಧೆ ಮಾಡಿ, ನಮ್ಮ ಮತಗಳನ್ನು ಪಡೆದುಕೊಂಡಿದ್ದಾರೆ, ಬಹುತೇಕ ಕ್ಷೇತ್ರಗಳಲ್ಲಿ ಆಮ್‌ ಆದ್ಮಿ ಪಕ್ಷ ನಮ್ಮ ಮತಗಳನ್ನೇ ಕಬಳಿಸಿದೆ. ಇದರಿಂದ ಗುಜರಾತ್‌ ನಲ್ಲಿ ಹಿನ್ನಡೆಯಾಗಿದೆ ಆದರೆ ಹಿಮಾಚಲ ಪ್ರದೇಶದಲ್ಲಿ ಈ ರೀತಿ ಆಗಿಲ್ಲ. ಕಾಂಗ್ರೆಸ್‌ ಪಕ್ಷ ಮುನ್ನಡೆಯಲ್ಲಿದೆ, ಹಾಗೆಯೇ ಕಾಂಗ್ರೆಸ್‌ ಬಹುಮತ ಪಡೆಯಲಿದೆ ಎಂಬ ಮಾಹಿತಿ ಇದೆ ಎಂದರು. 

ಒಂದು ರಾಜ್ಯದ ಚುನಾವಣಾ ಫಲಿತಾಂಶ ಇನ್ನೊಂದು ರಾಜ್ಯದ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಲ್ಲ. ಹಾಗೆ ಯೋಚಿಸುವುದಾದರೆ ದೆಹಲಿಯ ಪಾಲಿಕೆ ಚುನಾವಣೆಯ ಫಲಿತಾಂಶ ಬೇರೆ ರಾಜ್ಯಗಳ ಮೇಲೆ ಪ್ರಭಾವ ಬೀರುತ್ತಾ? ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರದ ಚುನಾವಣೆಯ ಫಲಿತಾಂಶ ಬೇರೆ ಕಡೆ ಪ್ರಭಾವ ಬೀರುತ್ತದಾ? ಆಯಾ ರಾಜ್ಯದ ಸಮಸ್ಯೆಗಳು ಮತ್ತು ಸ್ಥಳೀಯ ವಿಚಾರಗಳ ಮೇಲೆ ಫಲಿತಾಂಶ ನಿರ್ಧಾರವಾಗುತ್ತದೆ. ನಮ್ಮ ರಾಜ್ಯದಲ್ಲಿ ಅತೀ ಭ್ರಷ್ಟ ಸರ್ಕಾರವಿದೆ, ಇಲ್ಲಿ ಕಾಂಗ್ರೆಸ್‌ ಪಕ್ಷ ಸಂಘಟನಾ ದೃಷ್ಟಿಯಿಂದ ಹೆಚ್ಚು ಶಕ್ತಿಶಾಲಿಯಾಗಿದೆ. ಹಾಗಾಗಿ ಗುಜರಾತ್‌ ಫಲಿತಾಂಶ ಇಲ್ಲಿನ ಚುನಾವಣೆಯ ಮೇಲೆ ಯಾವ ಪ್ರಭಾವ ಬೀರಲ್ಲ ಎಂದು ಸಿದ್ದರಾಮಯ್ಯ ಅಭಿಪ್ರಾಪಟ್ಟಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಇತ್ತು, ಬಿಜೆಪಿ ಸರ್ಕಾರದ ವಿರುದ್ಧ ಜನಾಕ್ರೋಶ ಇತ್ತು. ಹಾಗಾಗಿ ಕಾಂಗ್ರೆಸ್‌ ಪಕ್ಷಕ್ಕೆ ಬಹುಮತ ಸಿಗುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರ ಇತ್ತು, ಆದರೆ ಗುಜರಾತ್‌ ನಲ್ಲಿ ಆಮ್‌ ಆದ್ಮಿ ಪಕ್ಷ ಬಹಳಷ್ಟು ಹಣ ಖರ್ಚು ಮಾಡಿದೆ, ನನಗಿರುವ ಮಾಹಿತಿ ಪ್ರಕಾರ ಬಿಜೆಪಿ ಪಕ್ಷವೇ ಆಮ್‌ ಆದ್ಮಿ ಪಕ್ಷಕ್ಕೆ ಹಣ ನೀಡಿ ಕಾಂಗ್ರೆಸ್‌ ಮತಗಳನ್ನು ಒಡೆಯುವ ತಂತ್ರ ಮಾಡಿದೆ. ಕರ್ನಾಟಕದಲ್ಲಿ ಆಮ್‌ ಆದ್ಮಿ ಪಕ್ಷ ಇಲ್ಲ, ಹಾಗಾಗಿ ಜೆಡಿಎಸ್‌ ಜೊತೆ ಬಿಜೆಪಿ ರಾಜ್ಯದಲ್ಲಿ ತಂತ್ರಗಾರಿಕೆ ಮಾಡಬಹುದು, ಆದರೆ ಇದರಿಂದ ಯಾವ ಲಾಭ ಆಗಲ್ಲ ಎಂದರು.

ಕರ್ನಾಟಕದಲ್ಲೇ ಬೇರೆ ರೀತಿಯ ವಿಚಾರಗಳು ಇವೆ, ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯದಲ್ಲಿ ಪ್ರಬಲವಾದ ಆಡಳಿತ ವಿರೋಧಿ ಅಲೆ ಇದೆ. ಇಲ್ಲಿನ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ನಿಷ್ಕ್ರಿಯತೆ ಇವುಗಳು ಮುಖ್ಯವಾದುದು. ಲಂಚ ನೀಡದೆ ಯಾವ ಕೆಲಸಗಳು ಇಲ್ಲಿ ಆಗುತ್ತಿಲ್ಲ, 40% ಕಮಿಷನ್‌ ಗುಜರಾತ್‌ ನಲ್ಲಿ ಇದೆ ಎಂದು ಯಾರಾದರೂ ಹೇಳಿದ್ದರಾ? ಇದು ಇರುವುದು ರಾಜ್ಯದಲ್ಲಿ ಎಂದು ಟೀಕಿಸಿದ್ದಾರೆ.

ಜೆಡಿಎಸ್‌ ಪಕ್ಷ ರಾಜ್ಯದಲ್ಲಿ ಹೊಸದಾಗಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ, 1999 ರಿಂದಲೂ ಚುನಾವಣಾ ಅಖಾಡದಲ್ಲಿದೆ.

ಆಮ್‌ ಆದ್ಮಿ ಪಕ್ಷ ಗುಜರಾತ್‌ ನಲ್ಲಿ 10% ಮತ ಪಡೆದರೂ ಕೂಡ ಕಾಂಗ್ರೆಸ್‌ ನ ಗೆಲ್ಲುವ ಸೀಟುಗಳು ಕಡಿಮೆಯಾಗಿಬಿಡುತ್ತದೆ. ಆಮ್‌ ಆದ್ಮಿ ಪಕ್ಷ ಕಾಂಗ್ರೆಸ್‌ ಗಿಂತ ಹೆಚ್ಚು ಪ್ರಚಾರ ಮಾಡಿದರೂ ಕೇವಲ ಆರು ಸೀಟುಗಳನ್ನು ಗೆಲ್ಲಲಿದೆ. ಹೆಚ್ಚು ಹಣವನ್ನು ಆಮ್‌ ಆದ್ಮಿ ಪಕ್ಷ ಚುನಾವಣೆಗೆ ಖರ್ಚು ಮಾಡಿದೆ. ರಾಹುಲ್‌ ಗಾಂಧಿ ಅವರು ಭಾರತ ಐಕ್ಯತಾ ಯಾತ್ರೆಯಲ್ಲಿ ಇದ್ದುದ್ದರಿಂದ 2 ದಿನ ಅಷ್ಟೆ ಪ್ರಚಾರ ಮಾಡಲು ಹೋಗಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರು ಪ್ರಚಾರ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಚುನಾವಣೆ ಗೆಲ್ಲಲು ಯಾವ ತಂತ್ರಗಾರಿಕೆಯೂ ಬೇಡ, ನಾವು ಸುಮ್ಮನೆ ಇದ್ದರೂ ಗೆಲ್ಲುತ್ತೇವೆ. ನರೇಂದ್ರ ಮೋದಿ ಅವರ ಹವಾ ರಾಜ್ಯದಲ್ಲಿ ಇಲ್ಲ. ನರೇಂದ್ರ ಮೋದಿ ಅವರು ವಾಸ ಮಾಡುವ ದೆಹಲಿಯಲ್ಲೇ ಅವರ ಹವಾ ಇಲ್ಲ. ಇನ್ನು ಇಲ್ಲಿ ಇರುತ್ತಾ? ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page