Thursday, May 2, 2024

ಸತ್ಯ | ನ್ಯಾಯ |ಧರ್ಮ

ಬೆಳಗಾವಿಯಲ್ಲಿ ತಗ್ಗಿದ ಉದ್ವಿಗ್ನತೆ : ಶಾಂತಿ ಕದಡಲು ‘ಮಹಾಮೇಳ’ವನ್ನು ಯೋಜಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿ

ಬೆಳಗಾವಿ: ಡಿಸೆಂಬರ್ 19 ರಿಂದ 30 ರವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದ ಭುಗಿಲೇಳುವ ಸೂಚನೆಗಳಿದ್ದರೂ ಬೆಳಗಾವಿಯ ಕೆಲವು ಭಾಗಗಳಲ್ಲಿ ಬುಧವಾರದಿಂದ ಉದ್ವಿಗ್ನತೆ ತಗ್ಗಿತ್ತು. ಆದರೆ ಬೆಳಗಾವಿ ಮತ್ತು ಇತರ ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಬಗ್ಗೆ ಧ್ವನಿ ಎತ್ತುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಗಡಿ ನಗರದಲ್ಲಿ ನಡೆಯುವ ಅಧಿವೇಶನದಲ್ಲಿ ಪ್ರತಿಭಟಿಸಲು ತನ್ನ ಯೋಜಿತ ‘ಮಹಾಮೇಳ’ದೊಂದಿಗೆ ಮುಂದುವರಿಯುವುದಾಗಿ ತಿಳಿಸಿದೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಎಂಇಎಸ್ ಮಾಜಿ ಶಾಸಕ ಮನೋಹರ್ ಕಿನೇಕರ್ ಅವರು, ಡಿಸೆಂಬರ್ ನಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಅಧಿವೇಶನವನ್ನು ವಿರೋಧಿಸಿ ತಮ್ಮ ವಾರ್ಷಿಕ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

ಪ್ರಸ್ತುತವಾಗಿ ಕರ್ನಾಟಕ ರಾಜ್ಯದ ಗಡಿ ಭಾಗವಾಗಿರುವ ಬೆಳಗಾವಿಯಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ. ಆದರೆ ಹಿರೇಬಾಗೇವಾಡಿ ಬಳಿ ಮಹಾರಾಷ್ಟ್ರ ನಂಬರ್ ಪ್ಲೇಟ್ ಗಳನ್ನು ಹೊಂದಿದ್ದ ವಾಹನಗಳನ್ನು ಧ್ವಂಸಗೊಳಿಸಿರುವುದಕ್ಕೆ, ಎಂಇಎಸ್ ನ ಯಾವುದೇ ಕ್ರಮವು ಕನ್ನಡ ಸಂಘಟನೆಗಳ ಕ್ರಮಕ್ಕೆ ಪ್ರತಿಕ್ರಿಯೆಯಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಮನೋಹರ್ ಕಿನೇಕರ್ ಹೇಳಿಕೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದು, ʼಬೆಳಗಾವಿ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಗಡಿ ವಿವಾದದ ಬಗ್ಗೆ ಮೌನವಾಗಿದ್ದಾರೆ. ಏಕೆಂದರೆ ಅದು ತಮ್ಮ ವೋಟ್ ಬ್ಯಾಂಕ್ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೆದರುತ್ತಾರೆʼ ಎಂದು ಟೀಕಿಸಿದ್ದಾರೆ.

ಈ ಕುರಿತು ಕನ್ನಡ ಹೋರಾಟಗಾರ ಅಶೋಕ್ ಚಂದರಗಿ ಸುದ್ದಿಗಾರರೊಂದಿಗೆ ಮಾತನಾಡಿ, ʼಈ ವಿವಾದವು ಮಹಾರಾಷ್ಟ್ರರಾಜಕೀಯ ಬೆಳವಣಿಗೆಗಳೊಂದಿಗೆ ಸಂಬಂಧ ಹೊಂದಿದೆ. ರಾಜಕೀಯ ಲಾಭಕ್ಕಾಗಿ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ (NCP) ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದೆ. ಹೀಗಾಗಿ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗಳು ಮುಗಿಯುವವರೆಗೆ ವಿವಾದವು ಮುಂದುವರಿಯುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು