Home ರಾಜಕೀಯ ಬಂಧಿತ ರೈತರನ್ನು ಈ ಕೂಡಲೇ ಬಿಡುಗಡೆ ಮಾಡಿ: ಮಧ್ಯಪ್ರದೇಶ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹ

ಬಂಧಿತ ರೈತರನ್ನು ಈ ಕೂಡಲೇ ಬಿಡುಗಡೆ ಮಾಡಿ: ಮಧ್ಯಪ್ರದೇಶ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹ

0

ಭೋಪಾಲ್/ಬೆಂಗಳೂರು: ನಾಳೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹೋರಾಟವನ್ನು ಆಯೋಜಿಸಲು ಯೋಜಿಸಿದ್ದ ರೈತರನ್ನು ಮತ್ತು ರೈತ ಸಂಘಟನೆಗಳ ನಾಯಕರ ಬಂಧನವನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಖಂಡಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು “ಈ ಕೂಡಲೇ ಎಲ್ಲಾ ರೈತರನ್ನು ಬಿಡುಗಡೆ ಮಾಡಬೇಕು” ಎಂದು ಮಧ್ಯಪ್ರದೇಶ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಅವರು ತಮ್ಮ ಹೇಳಿಕೆಯಲ್ಲಿ “ದೆಹಲಿಯಲ್ಲಿ ನಾಳೆ ನಡೆಯಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದ ಹುಬ್ಬಳ್ಳಿಯ ರೈತರನ್ನು ಭೋಪಾಲ್ ನಲ್ಲಿ ಬಂಧಿಸಿರುವ ಮಧ್ಯಪ್ರದೇಶ ಸರ್ಕಾರದ ಕ್ರಮ ಅತ್ಯಂತ ಖಂಡನೀಯ. ಬಂಧಿಸಲಾದ ರಾಜ್ಯದ ನಮ್ಮ ಎಲ್ಲ ರೈತರನ್ನು ತಕ್ಷಣ ಬಿಡುಗಡೆಗೊಳಿಸಿ ನಾಳೆ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಿಕೊಳ್ಳಲು ಕಳಿಸಿಕೊಡಬೇಕು ಎಂದು‌ ಮಧ್ಯಪ್ರದೇಶ ಸರ್ಕಾರವನ್ನು ಒತ್ತಾಯಿಸುತ್ತಿದ್ದೇನೆ. ಬಂಧಿಸಿರುವುದು ಮಧ್ಯಪ್ರದೇಶದ ಸರ್ಕಾರವಾದರೂ ಈ ದುಷ್ಕೃತ್ಯದ ಹಿಂದಿನ ಕ್ರಿಮಿನಲ್ ಮೆದುಳು ಪ್ರಧಾನಿ ಮೋದಿಯವರದು” ಎಂದು ಕಿಡಿ ಕಾರಿದ್ದಾರೆ.

“ಬಿಜೆಪಿ ಸರ್ಕಾರ ಈ ರೀತಿ ಬಂಧಿಸಿ, ಬೆದರಿಸಿ ರೈತರ ಹೋರಾಟವನ್ನು ಹತ್ತಿಕ್ಕಲಾಗದು. ಇಂತಹ ದಬ್ಬಾಳಿಕೆಯಿಂದ ಇನ್ನಷ್ಟು ರೈತರು ಬೀದಿಗಿಳಿಯಬಹುದೇ ಹೊರತು ಮಣ್ಣಿನ ಮಕ್ಕಳ ಹೋರಾಟ ನಿಲ್ಲದು. ಶಾಂತಿ-ಸುವ್ಯವಸ್ಥೆಯ‌ ಕಾಳಜಿಯನ್ನು ಕೇಂದ್ರ ಸರ್ಕಾರ ಹೊಂದಿದ್ದರೆ ತಕ್ಷಣ ರೈತರ ಬೇಡಿಕೆಗಳನ್ನು ಈಡೇರಿಸಿ ಸಮಸ್ಯೆ ಬಗೆಹರಿಸಬೇಕೇ ಹೊರತು ಈ ರೀತಿ ದಮನ-ದೌರ್ಜನ್ಯ ನಡೆಸಿ ರೈತರ ಬಾಯಿ ಮುಚ್ಚಿಸುವುದಲ್ಲ. ಕೇಂದ್ರದಲ್ಲಿ ಇರಲಿ, ರಾಜ್ಯಗಳಲ್ಲಿ ಇರಲಿ‌ ಬಿಜೆಪಿ ಕೈಗೆ ಅಧಿಕಾರ ಬಂದ ಕೂಡಲೇ ಅವರು ಮೊದಲು ದಂಡ ಪ್ರಯೋಗ ಮಾಡುವುದು ಅನ್ನದಾತರ ಮೇಲೆ‌ ಎನ್ನುವುದಕ್ಕೆ ಇತಿಹಾಸ ಸಾಕ್ಷಿ.

ಕರ್ನಾಟಕದಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಗೊಬ್ಬರ ಕೇಳಿದ್ದ ರೈತರನ್ನು ನಿರ್ದಯವಾಗಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಗುಂಡಿಕ್ಕಿ ಕೊಂದಿತ್ತು. ಕೇಂದ್ರದ ನರೇಂದ್ರ ಮೋದಿಯವರ ಸರ್ಕಾರ ದೆಹಲಿ ಮತ್ತು ಉತ್ತರಪ್ರದೇಶಲ್ಲಿ ಪ್ರತಿಭಟನಾನಿರತ ರೈತರ ಮೇಲೆ ನಡೆಸಿದ್ದ ದೌರ್ಜನ್ಯದಲ್ಲಿ ಹಲವಾರು ರೈತರು ಸಾವಿಗೀಡಾಗಿದ್ದರು. ನರೇಂದ್ರ ಮೋದಿ ಅವರ ಸರ್ಕಾರದ ಈಗಿನ ಕ್ರಮಗಳನ್ನು ನೋಡಿದರೆ ರೈತರನ್ನು ಬೆದರಿಸಿ ತಲೆ ಎತ್ತದಂತೆ‌ ಮಾಡುವುದೇ ಮುಖ್ಯ ಉದ್ದೇಶವಿದ್ದಂತೆ ಕಾಣುತ್ತಿದೆ” ಎಂದು ಅವರು ಬಿಜೆಪಿ ಹಾಗೂ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

You cannot copy content of this page

Exit mobile version