Thursday, June 13, 2024

ಸತ್ಯ | ನ್ಯಾಯ |ಧರ್ಮ

ಕಾಂಗ್ರೆಸ್ ಹಿರಿಯರ ಅಸಮಾಧಾನ ತಣಿಸಲು ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್

ಹಿರಿತನದ ಆಧಾರದಲ್ಲೂ ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ಹೊಂದಿದ್ದ ಮೂವರು ಹಿರಿಯ ಕಾಂಗ್ರೆಸ್ಸಿಗರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಹುದ್ದೆಗಳನ್ನು ನೀಡಿದ್ದಾರೆ. ಆ ಮೂಲಕ ಸರ್ಕಾರದ ಮೇಲೆ ಅಸಮಾಧಾನ ಹೊಂದಿದ್ದ ಬಸವರಾಜ ರಾಯರೆಡ್ಡಿ, ಬಿ.ಆರ್.ಪಾಟೀಲ್ ಹಾಗೂ ಆರ್.ವಿ.ದೇಶಪಾಂಡೆ ಅವರಿಗೆ ಸಂಪುಟ ದರ್ಜೆಯ ಜವಾಬ್ದಾರಿಯನ್ನು ಸಿದ್ದರಾಮಯ್ಯ ನೀಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ದಿನದಿಂದ, ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಬರೆದು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕಿದ್ದ ಯಲಬುರ್ಗಾ ಶಾಸಕ ಬಸವರಾಜ್ ರಾಯರೆಡ್ಡಿ ‌ ಮತ್ತು ಆಳಂದ ಶಾಸಕ ಬಿ.ಆರ್‌ ಪಾಟೀಲ್‌ ಸಮಯ ಸಿಕ್ಕಾಗಲೆಲ್ಲ ಸರ್ಕಾರದ ಕಾರ್ಯವೈಖರಿ ಬಗ್ಗೆ ಕುಟುಕಿದ್ದಿದೆ. ಅದರಲ್ಲೂ ರಾಜಕೀಯದಲ್ಲಿ ತಮಗಿಂತ ಕಿರಿಯರಾದ ಸಚಿವರ ಕೆಳಗೆ ಕೆಲಸ ಮಾಡಲು ಆಗುವ ಮುಜುಗರದ ಬಗ್ಗೆಯೂ ಹಿರಿಯ ಶಾಸಕರು ತಮ್ಮ ನೋವು ತೋಡಿಕೊಂಡದ್ದು ಇದೆ.

ಆದರೆ ಈಗ ಈ ಎಲ್ಲಾ ಅಸಮಾಧಾನಕ್ಕೆ ಬ್ರೇಕ್ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಬಸವರಾಜ ರಾಯರೆಡ್ಡಿ ಅವರನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿ ನೇಮಕ ಮಾಡಲಾಗಿದೆ. ಅಳಂದ ಕ್ಷೇತ್ರದ ಶಾಸಕರಾಗಿರುವ ಬಿ.ಆರ್‌. ಪಾಟೀಲ್‌ ಅವರನ್ನು ಸಿಎಂ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಇನ್ನು ಉತ್ತರ ಕನ್ನಡದ ಹಳಿಯಾಳ ಕ್ಷೇತ್ರದ ಶಾಸಕರಾಗಿರುವ ಆರ್‌.ವಿ ದೇಶಪಾಂಡೆ ಅವರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಮೂರೂ ಹುದ್ದೆಗಳು ಸಂಪುಟ ದರ್ಜೆ ಸ್ಥಾನಮಾನವಾಗಿದೆ.

ಬಸವರಾಜ ರಾಯ ರೆಡ್ಡಿ ಅವರು ಹಿಂದಿನಿಂದಲೂ ಸಿದ್ದರಾಮಯ್ಯ ಅವರ ಆಪ್ತರಾಗಿದ್ದು, ಹಿಂದೆ ಸರ್ಕಾರದ ದಿಲ್ಲಿ ಪ್ರತಿನಿಧಿಯಾಗಿ ಕೆಲಸ ಮಾಡಿದ್ದರು. ಅವರನ್ನು ಸಮಾಧಾನ ಮಾಡುವುದು ಸಿದ್ದರಾಮಯ್ಯ ಅವರಿಂದ ಮಾತ್ರ ಸಾಧ್ಯ ಎಂಬ ಮಾತು ಕೇಳಿಬಂದಿತ್ತು. ಈಗ ಅವರನ್ನು ಸಿಎಂ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ.

ಇನ್ನು ಸರ್ಕಾರದ ಮತ್ತು ಸಚಿವರ ಕಾರ್ಯವೈಖರಿ ಬಗ್ಗೆ ಬಹಿರಂಗ ಪತ್ರ ಬರೆದು ದೊಡ್ಡ ಸುದ್ದಿ ಮಾಡಿದ್ದ ಬಿ.ಆರ್.ಪಾಟೀಲ್ ಕೂಡಾ ಕಾಂಗ್ರೆಸ್ ಪಕ್ಷದ ರೆಬೆಲ್ ಶಾಸಕರಲ್ಲಿ ಒಬ್ಬರು. ಸಚಿವರು ತಮಗೆ ಸಹಕಾರ ನೀಡುತ್ತಿಲ್ಲ ಎಂಬ ಅವರ ದೂರಿಗೆ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಶಾಸಕರ ಸಭೆಯನ್ನು ಕರೆಯುವಷ್ಟರ ಮಟ್ಟಿಗೆ ಅವರ ಪತ್ರ ಕೆಲಸ ಮಾಡಿತ್ತು. ಬಿ.ಆರ್.ಪಾಟೀಲರನ್ನೂ ತಮ್ಮ ಬಳಿಯೇ ಇರಿಸಿಕೊಂಡಿರುವ ಸಿದ್ದರಾಮಯ್ಯ ತಮ್ಮ ಸಲಹೆಗಾರರನ್ನಾಗಿ ನೇಮಕ ಮಾಡಿದ್ದಾರೆ.

ಹಾಗೆಯೇ ಮತ್ತೋರ್ವ ಹಿರಿಯ ನಾಯಕ ಹಳಿಯಾಳ ಕ್ಷೇತ್ರದ ಶಾಸಕರಾದ ಆರ್.ವಿ.ದೇಶಪಾಂಡೆ ಅವರಿಗೆ ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷರ ಸ್ಥಾನಮಾನ ನೀಡಲಾಗಿದೆ. ಆರ್‌.ವಿ. ದೇಶಪಾಂಡೆ ಅವರು ಕೂಡಾ ಸಿದ್ದರಾಮಯ್ಯ ಆಪ್ತರೆ. ಆದರೆ, ವಯಸ್ಸು ಮತ್ತು ಒತ್ತಡವನ್ನು ಪರಿಗಣಿಸಿ ಅವರಿಗೆ ಸಂಪುಟದಲ್ಲಿ ಹುದ್ದೆ ಸಿಕ್ಕಿರಲಿಲ್ಲ. ಅದಕ್ಕೆ ಪ್ರತಿಯಾಗಿ ಈಗ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಸ್ಥಾನ ಸಿಕ್ಕಿದೆ.

Related Articles

ಇತ್ತೀಚಿನ ಸುದ್ದಿಗಳು