ಬೆಂಗಳೂರು: “ನನಗೆ ಬೇಸರವಿಲ್ಲ, ನಾನು ಯಾವುದಕ್ಕೂ ಬೇಸರ ಮಾಡಿಕೊಳ್ಳುವುದಿಲ್ಲ. ನಾನು ಯಾವಾಗಲೂ ಸಮಚಿತ್ತದಿಂದ ಇರುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಾಜಣ್ಣ ವಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ಸದಸ್ಯರು ವಿಧಾನಸಭೆಯಲ್ಲಿ ಕಾಲೆಳೆದಾಗ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಆರ್‌ಸಿಬಿ ಕಾಲ್ತುಳಿತ ಪ್ರಕರಣದ ಚರ್ಚೆಯ ಸಂದರ್ಭದಲ್ಲಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸಿದ್ದರಾಮಯ್ಯನವರನ್ನು ಕೆಣಕಿದರು. “ನೀವು ಹಳೆಯ ಸಿದ್ದರಾಮಯ್ಯ ಅಲ್ಲ. ಆ ಸಿದ್ದರಾಮಯ್ಯ ಕಳೆದು ಹೋಗಿದ್ದಾರೆ. ಹಿಂದೆ ನೀವು ನಡೆದಿದ್ದೇ ದಾರಿಯಾಗಿತ್ತು, ಆದರೆ ಈಗ ಎರಡು ಶಕ್ತಿ ಕೇಂದ್ರಗಳಿವೆ. ಹಿಂದಿನ ಸಿದ್ದರಾಮಯ್ಯ ಆಗಿದ್ದರೆ ನಿಮ್ಮ ಪರಮಾಪ್ತ, ನಿಮ್ಮ ಬಲಗೈ ಬಂಟ ರಾಜಣ್ಣ ಅವರನ್ನು ವಜಾ ಮಾಡುವುದಕ್ಕೆ ಬಿಡುತ್ತಿರಲಿಲ್ಲ” ಎಂದು ಅಶೋಕ್ ಹೇಳಿದರು.
ಇದಕ್ಕೆ ಧ್ವನಿಗೂಡಿಸಿದ ಶಾಸಕ ಸತೀಶ್ ರೆಡ್ಡಿ, “ನಿಮ್ಮ ಮುಖದಲ್ಲಿ ರಾಜಣ್ಣ ಅವರನ್ನು ಸಂಪುಟದಿಂದ ಕೈ ಬಿಟ್ಟ ಬೇಸರ ಎದ್ದು ಕಾಣುತ್ತಿದೆ” ಎಂದು ಹೇಳಿದಾಗ, ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಈ ಸ್ಪಷ್ಟನೆ ನೀಡಿದರು.
ಇದೇ ವೇಳೆ, ವಿಪಕ್ಷ ನಾಯಕ ಆರ್. ಅಶೋಕ್‌ರನ್ನು ಟೀಕಿಸಿದ ಸಿದ್ದರಾಮಯ್ಯ, “ಅಶೋಕ್, ನೀನು ವಿಪಕ್ಷ ನಾಯಕನಾಗಿರುವುದು ಸರಿಯಿಲ್ಲ ಎಂದು ನಿಮ್ಮ ಪಕ್ಷದವರೇ ಹೇಳುತ್ತಿದ್ದಾರೆ. ನೋಡು ನಾನು ಹೀಗೆ ಹೇಳಿದರೂ ನಿನ್ನ ಬೆಂಬಲಕ್ಕೆ ಮೂವರು ಮಾತ್ರ ಎದ್ದು ನಿಂತಿದ್ದಾರೆ” ಎಂದು ವ್ಯಂಗ್ಯವಾಡಿದರು.
ಆಗ ಅಶೋಕ್, “ನಾನು ಮೊದಲ ಬಾರಿಗೆ ವಿಪಕ್ಷ ನಾಯಕನಾಗಿದ್ದೇನೆ. ಇನ್ನೂ ಕಲಿಯುತ್ತಿದ್ದೇನೆ” ಎಂದು ತಿರುಗೇಟು ನೀಡಿದರು. ಇದಕ್ಕೆ ಸಿದ್ದರಾಮಯ್ಯ, “ಜೀವನದಲ್ಲಿ ಕಲಿಕೆ ನಿರಂತರ. ಸಾಯುವವರೆಗೂ ಕಲಿಯುತ್ತಲೇ ಇರಬೇಕು. ಯಾರೂ ಬೃಹಸ್ಪತಿಗಳಲ್ಲ” ಎಂದು ಹೇಳುವ ಮೂಲಕ ಚರ್ಚೆಯನ್ನು ಮುಕ್ತಾಯಗೊಳಿಸಿದರು.