ಬೆಂಗಳೂರು: ಧರ್ಮಸ್ಥಳದಲ್ಲಿ ನಡೆಯುತ್ತಿರುವ ತನಿಖೆಯ ಬಗ್ಗೆ ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್ ಅವರು ವಿಧಾನಸಭೆಯಲ್ಲಿ ಸರ್ಕಾರದ ಕ್ರಮಗಳನ್ನು ಪ್ರಶ್ನಿಸಿದರು. “ಧರ್ಮಸ್ಥಳದಲ್ಲಿ ಇನ್ನೆಷ್ಟು ಗುಂಡಿ ತೆಗೆಯುತ್ತೀರಿ?” ಎಂದು ಪ್ರಶ್ನಿಸಿದ ಅವರು, ತನಿಖೆಯ ಹೆಸರಿನಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ನಿರಂತರವಾಗಿ ಅವಹೇಳನ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಧರ್ಮಸ್ಥಳದ ಪಾವಿತ್ರ್ಯತೆಯನ್ನು ಕಾಪಾಡಲು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸುನೀಲ್ ಕುಮಾರ್, ಕಳೆದ 12-13 ದಿನಗಳಿಂದ ಧರ್ಮಸ್ಥಳದ ಕುರಿತು ನಡೆಯುತ್ತಿರುವ ಎಸ್‌ಐಟಿ ತನಿಖೆಯನ್ನು ಸ್ವಾಗತಿಸುವುದಾಗಿ ತಿಳಿಸಿದರು. “ಸತ್ಯ ಹೊರಬರಬೇಕು ಎಂಬುದು ನಮ್ಮೆಲ್ಲರ ಅಭಿಪ್ರಾಯ. ಆದರೆ, ತನಿಖೆಯ ನೆಪದಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಅವಮಾನಿಸುವ ಪ್ರಕ್ರಿಯೆ ನಡೆಯುತ್ತಿದೆ” ಎಂದು ಆರೋಪಿಸಿದರು.
ತನಿಖೆ ದಾರಿ ತಪ್ಪುವ ಮುನ್ನ ಮಾಹಿತಿ ನೀಡಿ
“ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆಲವು ವ್ಯಕ್ತಿಗಳ ಹೇಳಿಕೆಗಳನ್ನು ನೋಡಿದಾಗ ಇಡೀ ಧರ್ಮಸ್ಥಳವನ್ನು ಗುರಿ ಮಾಡಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ. ಇದು ನಮ್ಮ ನಂಬಿಕೆ ಮತ್ತು ಶ್ರದ್ಧೆಗೆ ದೊಡ್ಡ ಆಘಾತ ಉಂಟುಮಾಡಿದೆ” ಎಂದು ಅವರು ಹೇಳಿದರು. ಇಲ್ಲಿಯವರೆಗೆ 15-16 ಗುಂಡಿಗಳನ್ನು ತೆಗೆದಿದ್ದರೂ ಯಾವುದೇ ಪ್ರಮುಖ ಸುಳಿವು ಸಿಕ್ಕಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಎಂದ ಅವರು, “ತನಿಖೆ ಬೇರೆ ದಾರಿಯಲ್ಲಿ ಹೋಗುವ ಮುನ್ನ ಅದು ಯಾವ ಹಂತದಲ್ಲಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು” ಎಂದು ಆಗ್ರಹಿಸಿದರು. “ಯಾರೋ ಬಂದು ಏನೋ ಹೇಳಿದ ಮಾತ್ರಕ್ಕೆ ಎಷ್ಟು ಬೇಕಾದರೂ ಗುಂಡಿ ತೆಗೆಯುವುದು ಸರಿಯಲ್ಲ” ಎಂದು ಕಿಡಿಕಾರಿದರು.
ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಜಟಾಪಟಿ
ಸುನೀಲ್ ಕುಮಾರ್ ಪ್ರಶ್ನೆಗಳಿಗೆ ಉತ್ತರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, “ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಥಳೀಯ ಸಮುದಾಯದ ಒತ್ತಡದ ಮೇರೆಗೆ ಜುಲೈ 19ರಂದು ಎಸ್‌ಐಟಿ ರಚಿಸಿ ತನಿಖೆಗೆ ಆದೇಶಿಸಲಾಗಿದೆ. ತನಿಖೆ ಮುಂದುವರಿದಿದೆ. ಅದಕ್ಕೆ ಕಾಲಮಿತಿ ಇರುತ್ತದೆ. ನೂರಾರು ಗುಂಡಿಗಳನ್ನು ಅಗೆಯಲು ಸಾಧ್ಯವಿಲ್ಲ. ಒಂದು ಹಂತಕ್ಕೆ ತಲುಪಿದ ಬಳಿಕ ಎಸ್‌ಐಟಿ ವರದಿ ನೀಡುತ್ತದೆ. ಆ ವರದಿ ಬಂದ ನಂತರ ನಾನು ಉತ್ತರಿಸುತ್ತೇನೆ” ಎಂದು ಸಂಕ್ಷಿಪ್ತವಾಗಿ ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಶಾಸಕರಾದ ಸುರೇಶ್ ಕುಮಾರ್ ಮತ್ತು ಆರಗ ಜ್ಞಾನೇಂದ್ರ, ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರಿಗೆ ಈ ಪ್ರಕರಣ ನಿಭಾಯಿಸುವ ಸಾಮರ್ಥ್ಯವಿತ್ತು ಎಂದು ಹೇಳಿದರು. ಎಸ್‌ಡಿಪಿಐ ಮತ್ತು ಇತರ ಎಡಪಂಥೀಯ ಸಂಘಟನೆಗಳ ಒತ್ತಡದಿಂದಾಗಿ ಎಸ್‌ಐಟಿ ರಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿರುವುದನ್ನು ಅವರು ಪ್ರಸ್ತಾಪಿಸಿದರು. “ಅನಾಮಿಕ ವ್ಯಕ್ತಿ ಯಾರು? ಆತನ ಹಿಂದೆ ಯಾರಿದ್ದಾರೆ? ಆತ ಮನಬಂದಂತೆ ಹೇಳುತ್ತಿದ್ದಾನೆ. ಇವರು ಗುಂಡಿ ಅಗೆಯುತ್ತ ಹೋಗುತ್ತಿದ್ದಾರೆ” ಎಂದು ಆರಗ ಜ್ಞಾನೇಂದ್ರ ಹರಿಹಾಯ್ದರು.
ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಾಗ, ಮಧ್ಯಪ್ರವೇಶಿಸಿದ ಸಚಿವ ದಿನೇಶ್ ಗುಂಡೂರಾವ್, “ನಾವು ಎಡಪಂಥೀಯರೂ ಅಲ್ಲ, ಬಲಪಂಥೀಯರೂ ಅಲ್ಲ. ನಾವು ಸತ್ಯ ಮತ್ತು ನ್ಯಾಯದ ಪರವಾಗಿ ಇದ್ದೇವೆ. ನಾವು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದ್ದೇವೆ” ಎಂದು ಹೇಳುವ ಮೂಲಕ ಚರ್ಚೆಯನ್ನು ಕೊನೆಗೊಳಿಸಿದರು.