Monday, June 17, 2024

ಸತ್ಯ | ನ್ಯಾಯ |ಧರ್ಮ

ಅನ್ನರಾಮಯ್ಯ ಅನ್ನುವಾಗ ಸಿದ್ರಮುಲ್ಲಾಖಾನ್‌ ಅಂದರೂ ಖುಷಿ ಪಡುವೆ : ಸಿದ್ಧರಾಮಯ್ಯ

ಬೆಂಗಳೂರು: ಸುಳ್ಳು, ಅಪಪ್ರಚಾರ ಮತ್ತು ಚಾರಿತ್ರ್ಯವನ್ನೇ ರಾಜಕೀಯ ಪ್ರಚಾರದ ಸರಕನ್ನಾಗಿ ಮಾಡಿಕೊಂಡ ಭಾರತೀಯ ಜನತಾ ಪಕ್ಷ ನನ್ನ ಹೆಸರಿಗೆ ಮುಸ್ಲಿಂ ಹೆಸರು ಸೇರಿಸಿ ನಡೆಸುತ್ತಿರುವ ಅಪ ಪ್ರಚಾರದಲ್ಲಿ ಅಚ್ಚರಿ ಪಡುವಂತಹದ್ದೇನಿಲ್ಲ ಎಂದು  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬುಧವಾರದಂದು ಮಾತನಾಡಿದ್ದಾರೆ.

ಬಿಜೆಪಿ ಪಕ್ಷವು ಸಿದ್ರಮುಲ್ಲಾಖಾನ್ ಎಂದು ಕರೆಯುತ್ತಿರುವ ಬಗ್ಗೆ ಮಾಧ್ಯಮಗಳ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ʼಇಂತಹ ಅಪ ಪ್ರಚಾರವಲ್ಲದೆ ಅವರಾದರೂ ಬೇರೆ ಏನು ಮಾಡಲು ಸಾಧ್ಯ? ಶೂನ್ಯ ಸಾಧನೆ, ಭ್ರಷ್ಟಾಚಾರ, ಅನಾಚಾರಗಳನ್ನು ಮಸಿ ಬಳಿದುಕೊಂಡ ಮುಖವನ್ನು ತೋರಿಸಿ ಮತಯಾಚನೆ ಮಾಡಲಿಕ್ಕಾಗುತ್ತದೆಯೇ? ಮೈತುಂಬ ಕಪ್ಪು ಬಳಿದುಕೊಂಡ ದುಷ್ಟರಿಗೆ ಬಿಳಿ ಬಟ್ಟೆ ನೋಡಿದಾಕ್ಷಣ ಕಪ್ಪು ಬಳಿಯೋಣ ಎಂದು ಮನಸ್ಸಾಗುವುದು ಸಹಜ ಗುಣ ಎಂದು ಟೀಕಿಸಿದರು.

ಸಿದ್ರಮುಲ್ಲಾಖಾನ್ ಎಂದು ನನ್ನ ಹೆಸರಿಗೆ ಮುಸ್ಲಿಂ ಹೆಸರು ಸೇರಿಸಿರುವ ಬಗ್ಗೆ ನನಗೇನು ಬೇಸರವಿಲ್ಲ. ಮುಸ್ಲಿಂ ಕುಟುಂಬದಲ್ಲಿ ಹುಟ್ಟಿ ಗೋವಿಂದ ಭಟ್ಟರ ಶಿಷ್ಯನಾಗಿ ಈಗಲೂ  ನಮ್ಮ ಆತ್ಮಸಾಕ್ಷಿಯನ್ನು ಎಚ್ಚರಿಸುತ್ತಲೇ ಇರುವ ಸಂತ ಶಿಶುನಾಳ ಷರೀಫರ ಪರಂಪರೆ ನಮ್ಮದು. ಮುಸ್ಲಿಂ ಕುಟುಂಬದಲ್ಲಿ ಹುಟ್ಟಿ ಸಂತ ರಮಾನಂದರ ಶಿಷ್ಯತ್ವವನ್ನು ಒಪ್ಪಿಕೊಂಡು ಜಗಮೆಚ್ಚಿದ ಸೂಫಿ ಕವಿ ಕಬೀರನೂ ನಮ್ಮದೇ ಪರಂಪರೆಯವರು. ಆದ್ದರಿಂದ ಮುಸ್ಲಿಂ ಹೆಸರನ್ನು ನನ್ನ ಹೆಸರಿಗೆ ಜೋಡಿಸುವ ಮೂಲಕ  ಜಾತ್ಯತೀತತೆಯ ಮೇಲಿನ ನನ್ನ ನಂಬಿಕೆಯನ್ನು ಅವರು ಪುರಸ್ಕರಿಸಿದ್ದಾರೆಂದು ಎಂದು ತಿಳಿದುಕೊಳ್ಳುವೆ ಎಂದು ಮಾತನಾಡಿದರು.

ಮುಖ್ಯಮಂತ್ರಿಯಾಗಿ ಜನರಿಗಾಗಿ ಮಾಡಿರುವ ಸೇವೆಯನ್ನು ಗುರುತಿಸಿ ಬಹಳಷ್ಟು ಜನ ನನ್ನನ್ನು ‘ಅನ್ನರಾಮಯ್ಯ’, ರೈತರಾಮಯ್ಯ, ಕನ್ನಡ ರಾಮಯ್ಯ, ದಲಿತರಾಮಯ್ಯ ಎಂದೆಲ್ಲಾ ಕರೆಯುತ್ತಾರೆ. ಅದೇ ರೀತಿ ಮುಸ್ಲಿಂ ಸಮುದಾಯಕ್ಕೆ ನಾನು ಮಾಡಿರುವ ಕೆಲಸವನ್ನು ಗುರುತಿಸಿ ನನ್ನನ್ನು ‘ಸಿದ್ರಮುಲ್ಲಾ ಖಾನ್’ ಎಂದು ಕರೆದರೆ ಅದಕ್ಕೂ ಖುಷಿಪಡುವೆ ಎಂದು ತಿಳಿಸಿದರು.

ಹಿಂದೂ ಕೋಮುವಾದದಷ್ಟೇ ಸ್ಪಷ್ಟತೆ ಮತ್ತು ಬದ್ದತೆಯಿಂದ ನಾನು ಮುಸ್ಲಿಂ ಮತ್ತಿತರ ಧರ್ಮಗಳ ಕೋಮುವಾದವನ್ನೂ ವಿರೋಧಿಸುತ್ತಾ ಬಂದಿದ್ದೇನೆ.  ಭಾರತೀಯ ಜನತಾ ಪಕ್ಷದ ರೀತಿಯಲ್ಲಿ ರಾಜಕೀಯ ಕಾರಣಕ್ಕಾಗಿ ಒಳ್ಳೆಯವರು-ಕೆಟ್ಟವರು ಎಂಬ ಭೇದವಿಲ್ಲದೆ ಸಾರಾಸಗಟಾಗಿ ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡ ಕೋಮುವಾದದ ರಾಜಕೀಯವನ್ನು ನಾನು ಮಾಡಿದವನಲ್ಲ. ಮುಸ್ಲಿಂ ಬಂಧುಗಳ ಮೂಲಭೂತ ಅವಶ್ಯಕತೆಗಳಾದ ಭದ್ರತೆ, ಶಿಕ್ಷಣ, ಆರೋಗ್ಯ, ಉದ್ಯೋಗಳನ್ನು ಒದಗಿಸಲು ಮುಂಗಡ ಪತ್ರದಲ್ಲಿ ನ್ಯಾಯಬದ್ದವಾದ ಪಾಲನ್ನು ಎತ್ತಿಟ್ಟು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದೇನೆ. ಈ ಬಗ್ಗೆ ನನಗೆ ಹೆಮ್ಮೆಯೂ ಇದೆ, ಅಭಿಮಾನವೂ ಇದೆ ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು