ರಾಜ್ಯದಲ್ಲಿ ಹಿಂದಿ ಹೇರಿಕೆ ವಿರೋಧದ ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತಿರುವ ನಡುವೆಯೇ, ‘ಹಿಂದಿ ಹೇರಿಕೆ ವಿರೋಧಿ ಕರ್ನಾಟಕ ಒಕ್ಕೂಟ’ವು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಮನೆಗೆ ಮುತ್ತಿಗೆ ಹಾಕಲು ನಿರ್ಧಾರ ಮಾಡಿದೆ.
ನಗರದ ಶಿವಾನಂದ ಸರ್ಕಲ್ ಸಮೀಪದ ಗಾಂಧಿ ಭವನದಲ್ಲಿರುವ ಮಹಾದೇವಿ ತಾಯಿ ಕಿರು ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ರಾಜ್ಯ ಶಿಕ್ಷಣ ನೀತಿ ಆಯೋಗ ಶಿಫಾರಸು ಮಾಡಿರುವ ‘ಎರಡು ನುಡಿ ನೀತಿ’ಯನ್ನು 2026-27ನೇ ಸಾಲಿನಿಂದ ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಯಿತು. ಆದರೆ, ಸರ್ಕಾರ ಇದನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ ಎಂದು ಸಂಘಟನೆಗಳು ಆರೋಪಿಸಿವೆ.
ಇನ್ನೊಂದೆಡೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯವನ್ನು ಕಡ್ಡಾಯಗೊಳಿಸಿರುವ ಕ್ರಮವನ್ನು ತೀವ್ರವಾಗಿ ವಿರೋಧಿಸಿರುವ ಒಕ್ಕೂಟ, ಹಿಂದಿ ವಿಷಯವನ್ನು ಸಂಪೂರ್ಣವಾಗಿ ರದ್ದುಪಡಿಸಬೇಕೆಂದು ಆಗ್ರಹಿಸಿದೆ. ಇದೇ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮಾರ್ಚ್ 11ರಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಲಾಗಿತ್ತು.
ಅಲ್ಲದೆ, ಮಾರ್ಚ್ 30ರಂದು ನಡೆಯಲಿರುವ ಹಿಂದಿ ಭಾಷಾ ಪರೀಕ್ಷೆಯ ದಿನ ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕುವುದಾಗಿ ಈಗಾಗಲೇ ಎಚ್ಚರಿಕೆ ನೀಡಲಾಗಿದೆ.
ಈ ನಡುವೆ, ತಮ್ಮ ಬೇಡಿಕೆಗಳನ್ನು ಸಚಿವ ಮಧು ಬಂಗಾರಪ್ಪ ಅವರ ಗಮನಕ್ಕೆ ತರುವ ಉದ್ದೇಶದಿಂದ ಹಲವು ಬಾರಿ ಭೇಟಿ ಮಾಡಲು ಪ್ರಯತ್ನಿಸಿದರೂ ಅವಕಾಶ ಸಿಗಲಿಲ್ಲ ಎಂದು ಒಕ್ಕೂಟದ ಸದಸ್ಯರು ತಿಳಿಸಿದ್ದಾರೆ. ಈ ಹಿನ್ನೆಲೆ, “ಹಿಂದಿ ತೊಲಗಲಿ – ಕನ್ನಡ ಬೆಳಗಲಿ” ಎಂಬ ಘೋಷಣೆಯಡಿ ಮಾರ್ಚ್ 27ರಂದು ಬೆಳಿಗ್ಗೆ 8:45ಕ್ಕೆ ಸದಾಶಿವನಗರದಲ್ಲಿರುವ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಸಾರಾ ಗೋವಿಂದು, ರಾಧಾಕೃಷ್ಣ, ಪಾರ್ವತೀಶ್, ಅಭಿ ಒಕ್ಕಲಿಗ, ಶಿವರಾಮೇಗೌಡ, ಶಂಕರೇಗೌಡ, ಚೇತನ್ ಒಕ್ಕಲಿಗ ಸೇರಿದಂತೆ ಹಲವು ಹೋರಾಟಗಾರರು ಭಾಗವಹಿಸಿದ್ದರು.
