Home ರಾಜಕೀಯ ಭಿನ್ನಮತಕ್ಕೆ ಕಾರಣವಾದ ಎಸ್‌ಐಆರ್ ವಿವಾದ: ಚಿರಾಗ್ ಪಾಸ್ವಾನ್ ಬೆನ್ನಲ್ಲೇ ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಟಿಡಿಪಿ,...

ಭಿನ್ನಮತಕ್ಕೆ ಕಾರಣವಾದ ಎಸ್‌ಐಆರ್ ವಿವಾದ: ಚಿರಾಗ್ ಪಾಸ್ವಾನ್ ಬೆನ್ನಲ್ಲೇ ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಟಿಡಿಪಿ, ಆರ್‌ಎಲ್‌ಎಂ

0

ದೆಹಲಿ: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಚುನಾವಣಾ ಆಯೋಗದ ಆಂತರಿಕ ಭಿನ್ನಾಭಿಪ್ರಾಯಗಳ ವರದಿಗಳು ಹೊರಬಿದ್ದ ಬೆನ್ನಲ್ಲೇ, ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷಗಳು ಆಯೋಗದಿಂದ ಸ್ಪಷ್ಟೀಕರಣ ನೀಡುವಂತೆ ಆಗ್ರಹಿಸಿವೆ. ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ನಂತರ ತೆಲುಗು ದೇಶಂ ಪಕ್ಷ (ಟಿಡಿಪಿ) ಹಾಗೂ ರಾಷ್ಟ್ರೀಯ ಲೋಕ ಮೋರ್ಚಾ (ಆರ್‌ಎಲ್‌ಎಂ) ಪಕ್ಷಗಳು ಸಹ ಜನರ ಮನಸ್ಸಿನಲ್ಲಿ ಮೂಡಿರುವ ಅನುಮಾನಗಳನ್ನು ಆಯೋಗವೇ ನಿವಾರಿಸಬೇಕೆಂದು ಒತ್ತಾಯಿಸಿವೆ.

ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳ ಅವಧಿಯಲ್ಲಿ ಕನಿಷ್ಠ 14 ಬಾರಿ ತಮ್ಮ ಗಮನಕ್ಕೆ ತಾರದೆ ತೆಗೆದುಕೊಂಡ ಎಸ್‌ಐಆರ್ ನಿರ್ಧಾರಗಳ ವಿರುದ್ಧ ಲಿಖಿತ ಆಕ್ಷೇಪಣೆ ದಾಖಲಿಸಿದ್ದರು ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲೇ ಎನ್‌ಡಿಎ ಪಾಲುದಾರರಿಂದ ಈ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಮಾತನಾಡಿ, ಚುನಾವಣಾ ಆಯೋಗದಂತಹ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯ ಮೇಲೆ ಪ್ರಶ್ನೆಗಳು ಏಳುತ್ತಿದ್ದರೆ, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ಸಾರ್ವಜನಿಕರ ಮುಂದೆ ಬಂದು ವಸ್ತುಸ್ಥಿತಿಯನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಇದು ರಾಹುಲ್ ಗಾಂಧಿಯವರಿಗೆ ನೀಡಬೇಕಾದ ವಿವರಣೆಯಲ್ಲ, ಬದಲಾಗಿ ದೇಶದ ಜನರಿಗೆ ನೀಡಬೇಕಾದ ಸ್ಪಷ್ಟೀಕರಣವಾಗಿದ್ದು, ಜನರ ಮನಸ್ಸಿನಲ್ಲಿರುವ ಗೊಂದಲವನ್ನು ಪರಿಹರಿಸುವುದು ಆಯೋಗದ ಕರ್ತವ್ಯ ಎಂದು ಅವರು ಪ್ರತಿಪಾದಿಸಿದರು.

ಟಿಡಿಪಿಯ ಲೋಕಸಭಾ ಸಂಸದೀಯ ನಾಯಕ ಲವು ಶ್ರೀಕೃಷ್ಣ ದೇವರಾಯಲು ಮಾತನಾಡಿ, ಚುನಾವಣಾ ಆಯೋಗವು ಪ್ರಜಾಪ್ರಭುತ್ವದ ಪ್ರಮುಖ ಆಧಾರಸ್ತಂಭವಾಗಿದ್ದು, ಯಾರೇ ಪ್ರಶ್ನೆ ಎತ್ತಿದರೂ ಸಂಸ್ಥೆಯ ಮೇಲಿನ ನಂಬಿಕೆಯನ್ನು ಉಳಿಸಿಕೊಳ್ಳಲು ಪಾರದರ್ಶಕತೆ ಕಾಯ್ದುಕೊಳ್ಳುವುದು ಮತ್ತು ಸೂಕ್ತ ಸ್ಪಷ್ಟನೆ ನೀಡುವುದು ಅಗತ್ಯ ಎಂದಿದ್ದಾರೆ. ಆರ್‌ಎಲ್‌ಎಂ ಮುಖ್ಯಸ್ಥ ಹಾಗೂ ರಾಜ್ಯಸಭಾ ಸಂಸದ ಉಪೇಂದ್ರ ಕುಶ್ವಾಹಾ ಕೂಡ ಆಯೋಗದ ಕಾರ್ಯವೈಖರಿಯ ಬಗ್ಗೆ ಎದ್ದಿರುವ ಗಂಭೀರ ಪ್ರಶ್ನೆಗಳಿಗೆ ಸಿಇಸಿ ಉತ್ತರಿಸಲೇಬೇಕು ಎಂದು ಒತ್ತಾಯಿಸಿದರು.

ಆದರೆ ಮತ್ತೊಂದು ಮಿತ್ರಪಕ್ಷ ಜೆಡಿಯು, ವಿಪಕ್ಷಗಳ ಆರೋಪಗಳನ್ನು ತಳ್ಳಿಹಾಕಿದ್ದು, ಆರೋಪಗಳಲ್ಲಿ ಹುರುಳಿದ್ದರೆ ವಿರೋಧ ಪಕ್ಷಗಳು ಚುನಾವಣಾ ಆಯೋಗಕ್ಕೆ ಅಧಿಕೃತ ದೂರನ್ನು ಏಕೆ ದಾಖಲಿಸಿಲ್ಲ ಎಂದು ಪ್ರಶ್ನಿಸಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಪ್ರತಿಕ್ರಿಯೆ ನೀಡಿರುವ ಚುನಾವಣಾ ಆಯೋಗವು, ಆಂತರಿಕ ಚರ್ಚೆಗಳು ಮತ್ತು ಭಿನ್ನಾಭಿಪ್ರಾಯಗಳು ಯಾವುದೇ ಸಾಂಸ್ಥಿಕ ನಿರ್ಧಾರ ಪ್ರಕ್ರಿಯೆಯ ಸಹಜ ಭಾಗವಾಗಿದ್ದು, ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಇಂತಹ ಅಭಿಪ್ರಾಯಗಳು ವ್ಯಕ್ತವಾಗುತ್ತವೆ ಎಂದು ಸಮಜಾಯಿಷಿ ನೀಡಿದೆ.

You cannot copy content of this page

Exit mobile version