- ಅಗ್ನಿಸ್ಪರ್ಶ ಮಾಡದೇ ಹೂತಿದ್ದೇ ಒಂದಲ್ಲಾ ಒಂದು ದಿನ ಅಗೆಯಲೆಂದು
- ಈಗ ಕಾಲ ಬಂದಿದೆ. ನೆಲ ಅಗೆದು ಪದ್ಮಲತಾಗೆ ನ್ಯಾಯಕೊಡಿ
ದಕ್ಷಿಣ ಕನ್ನಡ : ‘1986 ರಲ್ಲಿ ಪದ್ಮಲತಾ ಕೊಲೆಯಾದ ಸ್ಥಿತಿಯಲ್ಲಿ ಕೊಳೆತ ದೇಹ ಪತ್ತೆಯಾದಾಗ ಅದನ್ನು ನಮ್ಮ ಸಂಪ್ರದಾಯದಂತೆ ಅಗ್ನಿಸ್ಪರ್ಶ ಮಾಡಲಿಲ್ಲ. ಬದಲಾಗಿ, ಒಂದಲ್ಲಾ ಒಂದು ದಿನ ತನಿಖೆ ನಡೆದೇ ನಡೆಯುತ್ತೆ ಎಂಬ ವಿಶ್ವಾಸದಿಂದ ಪದ್ಮಲತಾ ಪಾರ್ಥೀವ ಶರೀರವನ್ನು ಹೂಳಲಾಯಿತು. ಎಸ್ಐಟಿ ಈಗ ಹೂತ ಶವಗಳ ಅಸ್ತಿಪಂಜರ ಮೇಲೆತ್ತಿ ತನಿಖೆ ನಡೆಸುತ್ತಿದೆ.. ನಾವು ತನಿಖೆಗೆಂದೇ ಹೂತ ಪದ್ಮಲತಾ ಅಸ್ತಿಪಂಜರವನ್ನೂ ಮೇಲೆತ್ತಿ ಎಸ್ಐಟಿಯವರು ತನಿಖೆ ನಡೆಸಬೇಕು’ ಇದು ಪದ್ಮಲತಾರ ಸಹೋದರಿ ಇಂದ್ರವತಿ ಹೇಳುವ ಮಾತುಗಳು ! 2025 ಆಗಸ್ಟ್ 04 ರಂದು ನಾವು ಬೆಂಗಳೂರಿನಿಂದ ಬಂದಿದ್ದ ಸಿಪಿಐಎಂ ಮುಖಂಡ, ಚಿಂತಕ ಡಾ ಕೆ ಪ್ರಕಾಶ್, ಕೆ ಎಸ್ ವಿಮಲಾ ಜೊತೆ ಮುನೀರ್ ಕಾಟಿಪಳ್ಳ, ಬಿ ಎ ಭಟ್, ಈಶ್ವರೀ ಪದ್ಮುಂಜ ನಿಯೋಗ ಪದ್ಮಲತಾ ಮನೆಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದೆವು.
‘ಹೊಳೆಯಲ್ಲಿ ಪದ್ಮಲತಾ ಮೃತ ದೇಹ ಪತ್ತೆಯಾದಾಗ ಕೈ ಮತ್ತು ಕಾಲುಗಳು ಕಟ್ಟಿದ ಸ್ಥಿತಿಯಲ್ಲಿದ್ದವು. ಪದ್ಮಲತಾ ನಾಪತ್ತೆಯಾದ ಬರೋಬ್ಬರಿ 56 ದಿನಗಳ ಬಳಿಕ ಮೃತ ದೇಹ ನದಿಯಲ್ಲಿ ಪತ್ತೆಯಾಗಿತ್ತು. ಅದು ದೇಹವಾಗಿರಲಿಲ್ಲ. ಅಸ್ತಿಪಂಜರವೇ ಆಗಿತ್ತು. ಬಟ್ಟೆ ಮತ್ತು ವಾಚ್ ಆಧಾರದಲ್ಲಿ ಅದು ಪದ್ಮಲತಾಳ ಮೃತ ದೇಹ ಎಂದು ಪತ್ತೆ ಹಚ್ಚಲಾಯಿತು. ಪದ್ಮಲತಾ ಕೊಲೆ ಮತ್ತು ಅಪಹರಣದ ದೂರು ನೀಡುವಾಗ ಚಿಕ್ಕಧಣಿಗಳ ಹೆಸರನ್ನೂ ಸೇರಿಸಿ ನೀಡಲಾಗಿತ್ತು. ಇನ್ನೇನು ಪೊಲೀಸರು ಅರೆಸ್ಟ್ ಮಾಡುತ್ತಾರೆ ಎಂದು ಅಂದುಕೊಳ್ಳುತ್ತಿರುವಾಗಲೇ ಅಧಿಕಾರಿಗಳನ್ನು ಬದಲಾವಣೆ ಮಾಡಿ ಆರೋಪಿಗಳು ಬಚಾವ್ ಆದರು’ ಎಂದು ಪದ್ಮಲತಾ ಸಹೋದರಿ ಇಂದ್ರವತಿ ಹೇಳಿದರು.
ಪದ್ಮಲತಾ ಕೊಲೆಯಾದ ಬಳಿಕ ದೇವಾನಂದರ ಕುಟುಂಬವನ್ನು ಊರಿನಿಂದ ಓಡಿಸುವ ಪ್ರಯತ್ನ ನಡೆಸಿತು. ಆಗ ಎಸ್ ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ ನಡೆಯಿತು. ಡಿವೈಎಫ್ಐ ನೇತೃತ್ವದಲ್ಲಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಯಿತು. ಜನರು ಸ್ವಯಂಪ್ರೇರಿತವಾಗಿ ಬೀದಿಗಿಳಿದು ದೇವಾನಂದರ ಜತೆ ನಿಂತುಕೊಂಡರು. ದೇವಾನಂದರ ಸಿಪಿಐಎಂ ಪಕ್ಷ ಹೋರಾಟವನ್ನು ಸಂಘಟಿಸಿ ಹೋರಾಟಗಾರ ದೇವಾನಂದರಿಗೆ ಆಸರೆಯಾಯಿತು. ಜನಸಾಮಾನ್ಯರು ದೇವಾನಂದರಂತೆ ಎದುರಿಸಿ ಬದುಕುವುದು ಕಷ್ಟ ಎಂದು ಜನರು ನಿಯೋಗಕ್ಕೆ ಮಾಹಿತಿ ನೀಡಿದರು.
ಈಗಾಗಲೇ ರಚನೆಯಾಗಿರುವ ಎಸ್ ಐಟಿ ಕೆಲಸ ಶ್ಲಾಘನೀಯವಾಗಿದೆ. ಎಸ್ಐಟಿಯು ಅಸ್ತಿಪಂಜರ ಪತ್ತೆ ಪ್ರಕರಣವನ್ನು ಭೂ ಹಗರಣಗಳ ಹಿನ್ನಲೆಯಲ್ಲೂ ತನಿಖೆ ನಡೆಸಬೇಕು. ಭೂ ಮಾಫೀಯಾದ ದೌರ್ಜನ್ಯಗಳನ್ನೂ ಎಸ್ ಐಟಿ ವರದಿಯಲ್ಲಿ ಸೇರಿಸಿಕೊಳ್ಳಬೇಕು. ಒಂದು ವೇಳೆ ಈಗಿರುವ ಎಸ್ ಐಟಿಯಲ್ಲಿ ಧರ್ಮಸ್ಥಳ ಭೂ ಹಗರಣ ತನಿಖೆ ಮಾಡುವುದಕ್ಕೆ ಕಾನೂನಿನ ತೊಡಕಿದ್ದರೆ ಪ್ರತ್ಯೇಕ ಎಸ್ ಐಟಿ ರಚಿಸಬೇಕು. ಈ ನಿಟ್ಟಿನಲ್ಲಿ ನಾವು ಮುಖ್ಯಮಂತ್ರಿಯನ್ನು ಆಗ್ರಹಿಸುತ್ತೇವೆ ಎಂದು ಚಿಂತಕ, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಡಾ ಕೆ ಪ್ರಕಾಶ್ ಹೇಳಿದರು.
ನವೀನ್ ಸೂರಿಂಜೆ