Friday, June 14, 2024

ಸತ್ಯ | ನ್ಯಾಯ |ಧರ್ಮ

ಮುಖ್ಯಮಂತ್ರಿಗಳಿಗೆ ಮಳೆ ಹಾನಿ ತಡೆಗಟ್ಟಲು ಆಮ್ ಆದ್ಮಿ ಪಕ್ಷದಿಂದ ಆರು ಅಂಶಗಳ ಪತ್ರ

ಪೃಥ್ವಿ ರೆಡ್ಡಿ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥರು

ಸತತವಾಗಿ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿರುವ ಹಾನಿಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ರವರಿಂದ 6 ಅಂಶಗಳ ಪತ್ರವನ್ನು ಬರೆಯಲಾಗಿದೆ. ಈ ಮೂಲಕ ಸಮರೋಪಾದಿಯಲ್ಲಿ ಮಳೆ ಹಾನಿಯನ್ನು ತಡೆಗೆಟ್ಟಲು ಕೋರಲಾಗಿದೆ.

  1. ಪರಿಹಾರ ಒದಗಿಸಲು ಸೂಕ್ತ ತಂಡಗಳನ್ನು ಸನ್ನದ್ಧವಾಗಿಟ್ಟುಕೊಂಡು, ಸಾರ್ವಜನಿಕ ಮಾಧ್ಯಮಗಳಲ್ಲಿ ಹವಾಮಾನ ವೈಪರಿತ್ಯದ ಅಗತ್ಯ ಸಂದೇಶ, ಸೂಚನೆಗಳನ್ನು ನೀಡುತ್ತಿರಬೇಕು.
  2. ನೆರೆ ಹಾನಿಗೆ ಪದೇ ಪದೇ ತುತ್ತಾಗುವ ಸ್ಥಳಗಳ ವಿಚಾರ ಮತ್ತು ಸಮಗ್ರ ಮಾಹಿತಿ ಕಲೆಹಾಕಲು ಜಿಲ್ಲಾಡಳಿತಕ್ಕೆ ಸೂಚಿಸಿ, ಈ ಬಾರಿ ಹಾನಿ ತಡೆಗಟ್ಟಲು ತೆಗೆದುಕೊಂಡಿರುವ ಸೂಕ್ತ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಬೇಕು.
  3. ಹಾನಿಗೀಡಾದ ಸ್ಥಳಗಳಲ್ಲಿ ಅಲ್ಲಿನ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರುಗಳು ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಆದ್ದರಿಂದ ಅಲ್ಲಿನ ಸಾಮಾಜಿಕ ಕಳಕಳಿ ಹೊಂದಿರುವ ಸಂಘ ಸಂಸ್ಥೆಗಳು, ಸ್ವ-ಸಹಾಯ ಸಂಘಗಳು, ರೈತಪರ ಸಂಘಗಳು ಮತ್ತು ನಾಗರಿಕ ಸಂಘಗಳನ್ನು ಸೇರಿಸಿಕೊಂಡು ಹಾನಿಗೀಡಾದ ಸ್ಥಳಗಳಲ್ಲಿ ಪರಿಹಾರ ಕಾರ್ಯಗಳನ್ನು ನಿರಂತರವಾಗಿ ನಡೆಸಬೇಕು. ನಾಗರಿಕ ಸಂಘದ ಕಚೇರಿಗಳ ಮೂಲಕ ಅಗತ್ಯ ಸಂದೇಶಗಳನ್ನು ತಕ್ಷಣದಲ್ಲಿ ರವಾನಿಸಲು ಕ್ರಮ ವಹಿಸಬೇಕು.
  4. ಕೇಂದ್ರ ಸರ್ಕಾರದ ಪರಿಹಾರ ಧನವನ್ನು ಕೂಡಲೇ ಪಡೆದು, ಹಾನಿಯಾದ ಸಂದರ್ಭದಲ್ಲಿ ತಕ್ಷಣಕ್ಕೆ ಹಣ ನೀಡುವ ಕ್ರಮ ವಹಿಸಬೇಕು. ಮಳೆಯಿಂದ ಹಾನಿಯಾದ ಅದೆಷ್ಟೋ ತಿಂಗಳುಗಳಾದ ನಂತರ ಹಣ ಬಿಡುಗಡೆಯಾಗುವ ಪರಿಪಾಠ ತಪ್ಪಿಸಿ ಅಗತ್ಯ ಆರ್ಥಿಕ ಸೌಕರ್ಯಗಳು ರಾಜ್ಯದಲ್ಲಿರುವಂತೆ ನೋಡಿಕೊಳ್ಳುಬೇಕು.
  5. ನಿರಂತರವಾಗಿ ನದಿಗಳ ಪರಿವೀಕ್ಷಣೆ ನಡೆಸಿ, ನೀರಿನ ಮಟ್ಟದ ಮೇಲೆ ಸದಾ ನಿಗಾ ವಹಿಸುವುದು ಈಗ ಬಹಳ ಮುಖ್ಯ. ನೀವು ನೀರಾವರಿ ಮಂತ್ರಿಯಾಗಿ ಕೆಲಸ ಮಾಡಿರುವುದರಿಂದ ನದಿ ಮತ್ತು ಜಲಾಶಯದ ಶೇಖರಣಾ ಮಟ್ಟ ಮತ್ತು ಅದರ ನಿರ್ವಹಣೆ ಬಗ್ಗೆ ತೋರಿರುವ ನಿಷ್ಕಾಳಜಿ ನಿಮಗೆ ತಿಳಿದ ವಿಷಯ. ಇದನ್ನು ಸರಿಯಾಗಿ ನಿರ್ವಹಿಸಿದರೆ ಆಗುವ ಹಾನಿಗಳನ್ನು ತಡೆಯಬಹುದು.
  6. ರಾಜ್ಯದ 224 ಕ್ಷೇತ್ರಗಳಲ್ಲಿ ಇರುವ ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರು ಸಹಾಯ ಮಾಡಲು ಸನ್ನದ್ಧರಾಗಿದ್ದಾರೆ. ಎಂಥದ್ದೇ ಕಠಿಣ ಸಂದರ್ಭದಲ್ಲಿ ಸರ್ಕಾರದೊಂದಿಗೆ ಕೆಲಸ ಮಾಡಲು, ಯಾವುದೇ ಸವಾಲನ್ನು ಎದುರಿಸಿ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಲು ಸಿದ್ಧರಿದ್ದಾರೆ.

ಈ ಎಲ್ಲಾ ಮುನ್ನೆಚ್ಚರಿಕಾ ಅಂಶಗಳನ್ನು ಸರ್ಕಾರವು ಕೂಡಲೇ ಜಾರಿಗೊಳಿಸಿ ಮುಂದಾಗಬಹುದಾದ ಅನಾಹುತಗಳನ್ನು ತಡೆಗಟ್ಟುವ ದಿಸೆಯಲ್ಲಿ ತುರ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಪೃಥ್ವಿ ರೆಡ್ಡಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು