ಬೆಂಗಳೂರು: ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿರುವ ರಾಜ್ಯ ಸರ್ಕಾರ, ಖಾಸಗಿ ಹವಾನಿಯಂತ್ರಿತ ಸ್ಲೀಪರ್ ಕೋಚ್‌ಗಳು ಹಾಗೂ ಪ್ರವಾಸಿ ಬಸ್‌ಗಳು ಕಡ್ಡಾಯವಾಗಿ ಸುರಕ್ಷತಾ ಮಾನದಂಡಗಳನ್ನು ಪಾಲಿಸಿದರೆ ಮಾತ್ರ ವಾಹನ ಸಾಮರ್ಥ್ಯ (ಫಿಟ್‌ನೆಸ್) ಪ್ರಮಾಣ ಪತ್ರ ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿರುವ ಸ್ಲೀಪರ್ ಕೋಚ್ ಬಸ್‌ಗಳ ಅಗ್ನಿ ಅವಘಡಗಳನ್ನು ಗಂಭೀರವಾಗಿ ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು. ರಾಜ್ಯಾದ್ಯಂತ ಸಂಚರಿಸುವ ಎಲ್ಲಾ ಸ್ಲೀಪರ್ ಕೋಚ್ ಹಾಗೂ ಪ್ರವಾಸಿ ಬಸ್‌ಗಳು ಸರ್ಕಾರ ನಿಗದಿಪಡಿಸಿರುವ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಅವರು ಸ್ಪಷ್ಟಪಡಿಸಿದರು.
ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಎಸಿ ಸ್ಲೀಪರ್ ಕೋಚ್ ಬಸ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದ್ದು, ಇದರಿಂದ ಅನೇಕ ಪ್ರಯಾಣಿಕರ ಜೀವಕ್ಕೆ ಅಪಾಯ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ರೋಡ್ ಟ್ರಾನ್ಸ್‌ಪೋರ್ಟ್ ಸಂಸ್ಥೆಗಳ ಸಲಹೆ ಮೇರೆಗೆ ಪ್ರಯಾಣಿಕರ ರಕ್ಷಣೆಗೆ ಅಗತ್ಯವಾದ ಸುರಕ್ಷತಾ ಮಾನದಂಡಗಳನ್ನು ರೂಪಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಇದಲ್ಲದೆ, ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಸ್‌ಗಳ ವಿನ್ಯಾಸ, ನಿರ್ಮಾಣ ಕ್ರಮ ಹಾಗೂ ಅಗತ್ಯ ಸುರಕ್ಷತಾ ಸೌಲಭ್ಯಗಳ ಕುರಿತು ವಿವರವಾಗಿ ಚರ್ಚೆ ನಡೆಸಲಾಗಿದೆ. ಅದರಂತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಇಲಾಖೆಗೆ ಆದೇಶ ನೀಡಲಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
