Tuesday, June 25, 2024

ಸತ್ಯ | ನ್ಯಾಯ |ಧರ್ಮ

ಉದ್ಯೋಗ ಸೃಷ್ಟಿಯಿಲ್ಲದ್ದರಿಂದ ಕೋಮವಾದ ಹೆಚ್ಚಳ: ನ್ಯಾ.ನಾಗಮೋಹನದಾಸ್ ಕಳವಳ

ಮಂಗಳೂರು: ದೇಶದಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಮೌಲ್ಯಯುತ ಶಿಕ್ಷಣ ಸಿಗುತ್ತಿಲ್ಲ. ಯುವಜನರಿಗೆ ಮಾಡಲು ಉದ್ಯೋಗಗಳು ಸಿಗುತ್ತಿಲ್ಲ. ಹೀಗಾಗಿ ಖಾಲಿ ಇರುವ ಯುವಜನರು ಕೋಮುವಾದಿ ಸಂಘಟನೆಗಳಿಗೆ ಬಲಿಯಾಗುತ್ತಿದ್ದಾರೆ ಎಂದು ರಾಜ್ಯ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಚ್.ನಾಗಮೋಹನದಾಸ್‌ ಕಳವಳ ವ್ಯಕ್ತಪಡಿಸಿದರು.


ನಗರದಲ್ಲಿ ರವಿವಾರ ಸಾಮರಸ್ಯ, ಉದ್ಯೋಗ, ಘನತೆಯ ಬದುಕಿಗಾಗಿ ಎಂಬ ಘೋಷ ವಾಕ್ಯದೊಂದಿಗೆ ಹಮ್ಮಿಕೊಳ್ಳಲಾದ ಡಿವೈಎಫ್ಐ 12ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಐವತ್ತು ವರ್ಷಗಳಲ್ಲಿ ದೇಶ ಕಾಣದ ನಿರುದ್ಯೋಗ ಪ್ರಮಾಣ ಪ್ರಸ್ತುತ ದೇಶದಲ್ಲಿದೆ. ಐವತ್ತು ವರ್ಷಗಳಲ್ಲಿ ದೇಶ ಕಾಣದ ನಿರುದ್ಯೋಗ ಪ್ರಮಾಣ ಪ್ರಸ್ತುತ ದೇಶದಲ್ಲಿದೆ. ನಮ್ಮಲ್ಲಿ ವಿದ್ಯೆ ಇದೆ, ಪದವಿ ಇದೆ ಆದರೆ ಉದ್ಯೋಗವಿಲ್ಲ. ನಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗವು ಸಿಗುತ್ತಿಲ್ಲ. ಪದವಿ ಇದ್ದರೂ ಏನು ಪ್ರಯೋಜನವಿಲ್ಲದಂತಾಗಿದೆ ಎಂದರು.


ಸ್ವಾತಂತ್ರ್ಯ ಸಿಕ್ಕ ಮೇಲೆ ಭಾರತ ಒಂದಿಷ್ಟು ಸಾಧನೆ ಮಾಡಿರುವುದು ನಿಜ. ಸ್ವಾಂತಂತ್ರ್ಯ ಪೂರ್ವದಲ್ಲಿ ಭಾರತ ಭಾರತವಾಗಿ ಉಳಿದಿರಲಿಲ್ಲ. ಸಣ್ಣಪುಟ್ಟ ಸಂಸ್ಥಾನಗಳಲ್ಲಿ ಹರಿದು ಹಂಚಿಹೋಗಿತ್ತು. ಸಂವಿಧಾನದ ಶಕ್ತಿಯ ಮೂಲಕ ಭಾರತವನ್ನು ಒಗ್ಗೂಡಿಸಲಾಯಿತು. ಈ ದೇಶದ ದಲಿತರಿಗೆ, ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ ಒಂದಿಷ್ಟು ಅವಕಾಶಗಳನ್ನು ಕೊಟ್ಟು ಸರಿ ಸಮಾನರಾಗಲು ಅವಕಾಶ ಮಾಡಿಕೊಟ್ಟಿದ್ದೇವೆ. ಇದಕ್ಕೆ ಕಾರಣ ಭಾರತದ ಸಂವಿಧಾನ ಎನ್ನುವುದನ್ನು ನಾವು ಮರೆಯಬಾರದು ಎಂದರು.


ಶಿಕ್ಷಣ, ಆರೋಗ್ಯ, ಉದ್ಯೋಗ, ಸಾರಿಗೆ ವಸತಿ, ಬೀದಿದೀಪ, ಕುಡಿಯುವ ನೀರು, ಇತ್ಯಾದಿ ಮೂಲ ಸೌಕರ್ಯಗಳನ್ನು ಒದಗಿಸಿ ಜನಜೀವನ ಸುಧಾರಿಸುವಂತೆ ಮಾಡಿದ್ದೇವೆ. ಇದಕ್ಕೆ ಕಾರಣ ಭಾರತದ ಸಂವಿಧಾನ. ಹತ್ತು ಹಲವು ಕ್ಷೇತ್ರಗಳಲ್ಲಿ ಜಗತ್ತಿನ ಟಾಪ್‌ ಟೆನ್ ದೇಶಗಳಲ್ಲಿ ಇಷ್ಟು ಬೇಗ ಭಾರತಕ್ಕೂ ಒಂದು ಸ್ಥಾನ ಸಿಗುವುದಕ್ಕೆ ಕಾರಣ ನಮ್ಮ ದೇಶದ ಸಂವಿಧಾನ. ಈ ದೇಶದಲ್ಲಿನ ಎಲ್ಲ ಧರ್ಮಿಯರಿಗೆ ಅವರದೇ ಆದ ಧರ್ಮಗ್ರಂಥಗಳಿವೆ. ಆದರೆ, ಎಲ್ಲ ಭಾರತಿಯರಿಗೂ ಸಂವಿಧಾನವೇ ಒಂದು ಧರ್ಮಗ್ರಂಥ ಎಂದು ಅವರು ಪ್ರತಿಪಾದಿಸಿದರು.


ಅಬ್ಬಕ್ಕ ರಾಣಿಯಂತಹ ಕಿಚ್ಚಿನ ನಾಯಕಿಯ ಜಾಗದಲ್ಲಿ ಈ ಸಮ್ಮೇಳನ ನಡೆಯುತ್ತಿರುವುದು ಸಂತಸದ ಸಂಗತಿ. ಯುವಕರೆಂದರೆ ಬದಲಾವಣೆ, ಪ್ರಗತಿ, ಅನ್ಯಾಯ, ಶೋಷಣೆ, ದಬ್ಬಾಳಿಕೆ ವಿರುದ್ಧ ಹೋರಾಡುವ ಶಕ್ತಿಯಾಗಿದೆ. ಯಾವುದೇ ಅನ್ಯಾಯದ ವಿರುದ್ಧ ತಿರುಗಿ ಬಿಳುವ ಬಂಡಾಯ ಮನೋಭಾವ ಇರುವಂಥದ್ದು. ಯುವ ಶಕ್ತಿಗೆ ಮಾತ್ರ. ಅಂಥ ಯುವಜನರ ಸಂಘಟನೆ ಡಿವೈಎಫ್‌ಐನ 12ನೇ ಈ ಸಮ್ಮೇಳವನ್ನು ಉದ್ಘಾಟಿಸಲು ನನಗೆ ಬಹಳ ಹೆಮ್ಮೆ ಎನಿಸುತ್ತದೆ ಎಂದರು.


ಯುವ ಸಂಪನ್ಮೂಲ ಎಲ್ಲ ವಯೋಮಾನದ ಮಾನವ ಸಂಪನ್ಮೂಲದಲ್ಲೇ ಅತ್ಯಂತ ಶಕ್ತಿಯುತ ಸಂಪನ್ಮೂಲ. ಯುವ ಶಕ್ತಿ ಎಂದರೆ ಬದಲಾವಣೆಯ ಸಂಕೇತ. 1939ರಿಂದ 1945ರವರೆಗೆ ನಡೆದ 2ನೇ ಮಹಾ ಯುದ್ಧದಲ್ಲಿ 2 ಕೋಟಿ ಸೈನಿಕರು ಮತ್ತು 4 ಕೋಟಿ ನಾಗರಿಕರು ಸತ್ತು ಹೋದರು. ಆಸ್ತಿಪಾಸ್ತಿ ಎಲ್ಲವೂ ನಾಶವಾಯಿತು. ಅಂದೇ ಜಗತ್ತಿನ ಜನ ತೀರ್ಮಾನ ಮಾಡಿದರು. ಇನ್ನು ಮುಂದೆ ಯುದ್ಧ ಮಾಡುವುದು ಬೇಡ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದು ವಿಶ್ವಸಂಸ್ಥೆ ಸ್ಥಾಪಿಸಿಕೊಂಡರು. ಆದರೂ ಯುದ್ದಗಳು ನಿಂತಿಲ್ಲ. ಪ್ರತಿವರ್ಷ ಸರಾಸರಿ ಒಂದು ಲಕ್ಷದಷ್ಟು ಜನ ಯುದ್ದಗಳಿಂದಲೇ ಸಾಯುತ್ತಿದ್ದಾರೆ. ರಷ್ಯಾ ಮತ್ತು ಉಕ್ರೇನ್‌ ಯುದ್ದ ಈಗಲೂ ನಡೆಯುತ್ತಿದೆ. ವಿಶ್ವಸಂಸ್ಥೆಗೆ ಯುದ್ದಗಳನ್ನು ತಡೆಯಲು ಆಗುತ್ತಿಲ್ಲ.


ಇಂದು ಎಲ್ಲ ದೇಶಗಳು ಅತಿ ಹೆಚ್ಚು ವರಮಾನವನ್ನು ರಕ್ಷಣಾ ಇಲಾಖೆಗೆ ಖರ್ಚು ಮಾಡುತ್ತಿವೆ. ಯುದ್ದದ ಆಯುಧಗಳನ್ನು ತಯಾರಿಸುವ ಕಾರ್ಖಾನೆಗಳು ಅತಿ ಹೆಚ್ಚು ಲಾಭ ಮಾಡಿಕೊಳ್ಳುತ್ತಿವೆ. ಯುದ್ದಭೂಮಿಯಲ್ಲಿ ಅತಿ ಹೆಚ್ಚು ಪ್ರಾಣ ಕಳೆದುಕೊಳ್ಳುತ್ತಿರುವವರು ಯುವಜನರೇ ಆಗಿದ್ದಾರೆ. ಹಾಗಾಗಿ ಯುವಜನರು ಯುದ್ಧ ವಿರೋಧಿ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಮತ್ತು ಯುದ್ದಗಳನ್ನು ನಡೆಸದಂತೆ ಆಯಾ ದೇಶಗಳ ಯುವಜನರ ಸರ್ಕಾರಗಳ ಮೇಲೆ ಒತ್ತಡ ಹೇರಬೇಕಿದೆ ಎಂದು ಅಭಿಪ್ರಾಯಪಟ್ಟರು.


ಯುದ್ದಕ್ಕಾಗಿ ಖರ್ಚು ಮಾಡುತ್ತಾ ಹೋದರೆ, ಶಿಕ್ಷಣ, ಉದ್ಯೋಗ, ವಸತಿ, ಆರೋಗ್ಯದಂತಹ ಜನಕಲ್ಯಾಣಗಳು ಹಿನ್ನಡೆ ಅನುಭವಿಸುತ್ತವೆ.ಹಾಗಾಗಿ ಸಂವಿಧಾನದ ಮೂಲಕ ಪ್ರಜಾಪ್ರಭುತ್ವದಲ್ಲಿ ಬದಲಾವಣೆ ತರಲಾಗಿದೆ. ದಲಿತರು, ಮಹಿಳೆಯರು ಈ ದೇಶದ ಅಭಿವೃದ್ದಿಯಲ್ಲಿ ದುಡಿಯಲು ಸಾಧ್ಯವಾಗಿದೆ. ಭಾರತೀಯರಿಗೆ ಮಹಾನ್ ಗ್ರಂಥ ಸಂವಿಧಾನ. ಇದನ್ನು ಓದಬೇಕು, ಅರ್ಥೈಸಿಕೊಳ್ಳಬೇಕು, ಅದರಂತೆ ನಡೆದುಕೊಳ್ಳಬೇಕು” ಎಂದು ಕರೆ ನೀಡಿದರು.


ಎಲ್ಲಾ ಮಕ್ಕಳು ಒಂದೇ ಎನ್ನುತ್ತೇವೆ. ಆದರೆ ಶಿಕ್ಷಣದಲ್ಲಿ ಯಾಕೆ ತಾರತಮ್ಯ?. ಸಮಾನ ಶಿಕ್ಷಣದ ನೀತಿ ಜಾರಿಯಾಗಬೇಕಿದೆ. ಗುಣಾತ್ಮಕ ಶಿಕ್ಷಣ ನೀಡುವ ವ್ಯವಸ್ಥೆ ಜಾರಿ ಬರಬೇಕಾಗಿದೆ. ಹೊಸ ಶಿಕ್ಷಣ ನೀತಿಯ ಬಗ್ಗೆ ಚರ್ಚೆಯಾಗಬೇಕು. ಉದ್ಯೋಗ ಸೃಷ್ಟಿ ಕಡಿಮೆಯಾದಂತೆ ಅಪರಾಧೀಕರಣ, ಕೋಮುವಾದ, ಭಯೋತ್ಪಾದನೆ, ವೇಶ್ಯಾವಾಟಿಕೆ ಮೊದಲಾದವು ಹೆಚ್ಚಾಗುತ್ತದೆ. ನಿರುದ್ಯೋಗ ಸಮಸ್ಯೆಗೂ, ಕೋಮುವಾದ, ಅಪರಾಧಕ್ಕೂ ನಂಟಿದೆ. ಶಿಕ್ಷಣದಲ್ಲಿ ತಾರತಮ್ಯ ಹೆಚ್ಚಾಗುತ್ತಿದೆ. ಶ್ರೀಮಂತರಿಗೆ ಒಂದು, ಬಡವರಿಗೆ ಇನ್ನೊಂದು ಎಂಬ ಆಯ್ಕೆಯ ಮೂಲಕ ಮಕ್ಕಳಲ್ಲಿ ಅಸಮಾನತೆ, ಅಸೂಯೆ ಸೃಷ್ಟಿಯಗುತ್ತಿದೆ. ಈ ತಾರತಮ್ಯ ನಿಲ್ಲಬೇಕದರೆ, ಸಮಾನ ಗುಣಮಟ್ಟದ ಶಿಕ್ಷಣ ಸಿಗಬೇಕು, ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ ಸೃಷ್ಟಿಯಾಬೇಕು” ಎಂದರು.


ಡಿವೈಎಫ್‌ಐನಂಥ ಸಂಘಟನೆಗಳಿಗೆ ಮಾತ್ರ ಇಂದು ಮೌಲ್ಯಯುತ ಯುವಜನರನ್ನು ತಯಾರು ಮಾಡಲು ಸಾಧ್ಯವಾಗುತ್ತದೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ನಾನೇ. ನಾನು ಕೂಡ ಯುವಕನಾಗಿದ್ದಾಗ ಇಂಥ ಸಂಘಟನೆಗಳ ಸಂಗಾತಿಯಾಗಿದ್ದೆ ಎಂದು ಅವರು ತಮ್ಮ ಕಾಲೇಜು ದಿನಗಳನ್ನು ಸ್ಮರಿಸಿಕೊಂಡರು.


ವಿಶ್ರಾಂತ ಜಿಲ್ಲಾಧಿಕಾರಿ (ಐಎಎಸ್), ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಎ.ಬಿ. ಇಬ್ರಾಹಿಂ ಮಾತನಾಡಿ, “ಜನರು ಭ್ರಮಾಲೋಕದಲ್ಲಿದ್ದು ಮತ ಚಲಾಯಿಸುತ್ತಿದ್ದಾರೆ. ಕರಾವಳಿಯನ್ನು ಬುದ್ಧಿವಂತರ ಜಿಲ್ಲೆ ಎಂದು ಕರೆಯಲಾಗುತ್ತದೆ. ಆದರೆ ಪ್ರಸಕ್ತ ಸ್ಥಿತಿಯಲ್ಲಿ ನಾವು ಬುದ್ಧಿವಂತರು ಮತ್ತು ಅಕ್ಷರಸ್ಥರ ನಡುವೆ ಬೇರೆಯೇ ವ್ಯಾಖ್ಯಾನವನ್ನು ನೀಡಬೇಕಾಗಿದೆ” ಎಂದರು. “ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿದ ನೆಲವಿದು, ರಾಣಿ ಅಬ್ಬಕ್ಕರ ಮಾತೃ ಪ್ರಧಾನ ಸಮಾಜವಿದು. ಇದು ನಮಗೆ ಮಾದರಿಯಾಗಬೇಕಾದ ನೆಲ. ಆದರೆ ಕಳೆದ ಮೂರು ದಶಕಗಳಲ್ಲಿ ನಮ್ಮ ಜಿಲ್ಲೆ, ನಗರ ಕುಖ್ಯಾತಿ ಪಡೆಯುತ್ತಾ ಬಂದಿರುವ ನೆಲವಾಗಿದೆ. ಹೊರ ಜಿಲ್ಲೆಯವರು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಜನರನ್ನು ಪ್ರಶ್ನಿಸುವಂತಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು