ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಲವಂತವಾಗಿ ಅಧಿಕಾರದಿಂದ ಕೆಳಗಿಳಿಸುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಜೇನುಗೂಡಿಗೆ ಕೈಹಾಕಿದೆ ಎಂದು ವಿಧಾನ ಪರಿಷತ್ ಸದಸ್ಯ (ಎಮ್‌ಎಲ್‌ಸಿ) ಲಖನ್ ಜಾರಕಿಹೊಳಿ ಗುರುವಾರ ಹೇಳಿದ್ದಾರೆ.
ಹೈಕಮಾಂಡ್‌ನ ಈ ನಿರ್ಧಾರವು 2028 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಧೂಳೀಪಟ ಮಾಡಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ ಮಾತನಾಡಿರುವ ಲಖನ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಗಮನವು ಕಾಂಗ್ರೆಸ್‌ನ ಪತನಕ್ಕೆ ನಾಂದಿ ಹಾಡಲಿದೆ. ಈ ದುರದೃಷ್ಟಕರ ಬೆಳವಣಿಗೆಯು ರಾಜ್ಯದಲ್ಲಿ ‘ಅಹಿಂದ’ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ಚಳವಳಿಯನ್ನು ಹತ್ತಿಕ್ಕಿದಂತಾಗಿದೆ ಎಂದು ಪ್ರತಿಪಾದಿಸಿದ್ದಾರೆ.
“ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುವ ಜೊತೆಯಲ್ಲೇ ರಾಜ್ಯದ ಹಣಕಾಸು ಶಿಸ್ತನ್ನು ಅತ್ಯಂತ ಸಮರ್ಥವಾಗಿ ಕಾಪಾಡಿಕೊಂಡಿದ್ದರು. ಆದರೆ ಅವರ ನಿರ್ಗಮನದ ನಂತರ ಈ ಗ್ಯಾರಂಟಿ ಕಾರ್ಯಕ್ರಮಗಳು ದೀರ್ಘಕಾಲ ಮುಂದುವರಿಯುವುದಿಲ್ಲ. ಕಾಂಗ್ರೆಸ್ ನಾಯಕರಾದ ಕೆ. ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಕರ್ನಾಟಕದ ವಾಸ್ತವ ಸಮಸ್ಯೆಗಳ ಅರಿವೇ ಇಲ್ಲ. ಅವರೇ ಶ್ರಮಿಸಿ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದಿದ್ದೇವೆ ಎಂದು ಅವರು ಭ್ರಮೆಯಲ್ಲಿದ್ದಾರೆ,” ಎಂದು ಲಖನ್ ಜಾರಕಿಹೊಳಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
“ಮುಂದಿನ 2028 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ 40 ಸೀಟುಗಳನ್ನು ಗೆಲ್ಲಲು ಸಹ ಪರದಾಡಬೇಕಾಗುತ್ತದೆ. ಹಿಂದೆ ಬಿಎಸ್‌ವೈ ಅವರನ್ನು ಬಲವಂತವಾಗಿ ರಾಜೀನಾಮೆ ಕೊಡಿಸಿ ಬಿಜೆಪಿ ಹೇಗೆ ಭಾರಿ ಬೆಲೆ ತೆತ್ತಿತ್ತೋ, ಈಗ ಕಾಂಗ್ರೆಸ್ ಕೂಡ ಅದೇ ರೀತಿಯ ಪರಿಸ್ಥಿತಿಯನ್ನು ಎದುರಿಸಲಿದೆ. ಒಬ್ಬ ಜನಪ್ರಿಯ ಸಮೂಹ ನಾಯಕನನ್ನು (ಮಾಸ್ ಲೀಡರ್) ಅಧಿಕಾರದಿಂದ ತೆಗೆದುಹಾಕುವುದನ್ನು ರಾಜ್ಯದ ಜನತೆ ಎಂದಿಗೂ ಸಹಿಸುವುದಿಲ್ಲ,” ಎಂದು ಅವರು ಹೇಳಿದ್ದಾರೆ.
