ಬೆಳಗಾವಿ : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದ ವರುಣ ಅಬ್ಬರಿಸಿದ್ದಾನೆ. ಬೆಳಗಾವಿಯಲ್ಲಿ (Belagavi) ಸಹ ಮಳೆ ಆರ್ಭಟಿಸಿದ್ದು, ಬೈಲಹೊಂಗಲ (Rain) ತಾಲೂಕಿನಲ್ಲಿ ರಸ್ತೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ.
ನೀರಿನಲ್ಲಿ ಮುಳುಗಿದ ಬೈಕ್
ತಾಲೂಕಿನಲ್ಲಿ ಸುರಿದ ಮಳೆಯಿಂದ ಅನೇಕ ಅನಾಹುತಗಳಾಗಿದೆ. ಅಂಗಡಿ-ಮುಂಗಟ್ಟುಗಳಿಗೆ ನೀರು ನುಗ್ಗಿದ್ದು ವ್ಯಾಪಾರಸ್ಥರು ನಷ್ಟ ಅನುಭವಿಸಿದ್ದಾರೆ. ಈ ನಡುವೆ ರಸ್ತೆಯಲ್ಲಿ ನೀರು ತುಂಬಿದ ಕಾರಣದಿಂದ ಬದಿಯಲ್ಲಿ ನಿಲ್ಲಿಸಿದ್ದ ಬೈಕ್‌ಗಳು ಸಂಪೂರ್ಣವಾಗಿ ಮುಳುಗಿ ಹೋಗಿದೆ. ಅಲ್ಲದೇ, ಕೆಲ ಬೈಕ್‌ಗಳು ನೀರಿನಲ್ಲಿ ತೇಲುತ್ತಿದ್ದವು. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ತಮ್ಮ ಬೈಕ್‌ಗಳನ್ನ ನೀರಿನಿಂದ ಹೊರಗೆ ತೆಗೆಯಲು ಜನ ಹರಸಾಹಸ ಪಡುತ್ತಿರುವುದನ್ನ ನೋಡಬಹುದಾಗಿದೆ.
ಕರ್ನಾಟಕದಲ್ಲಿ ಮುಂಗಾರು ಆರ್ಭಟ; ಕರಾವಳಿ ಮಲೆನಾಡಿಗೆ ರೆಡ್ ಅಲರ್ಟ್
ರಾಜ್ಯಾದ್ಯಂತ ಮುಂಗಾರು (Rain Alert) ಮಾರುತಗಳು ಚುರುಕುಗೊಂಡಿದ್ದು, ಇಂದಿನಿಂದ ಅಂದರೆ ಜೂನ್ 8 ರಿಂದ ಜೂನ್ 13 ರವರೆಗೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಕರಾವಳಿ ತೀರ ಹಾಗೂ ಒಳನಾಡಿನ ಹಲವು ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿದ್ದು, ಕಡಲ ತೀರದ ನಿವಾಸಿಗಳು ಹಾಗೂ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಾಗರೂಕತೆ ವಹಿಸಲು ಸೂಚಿಸಲಾಗಿದೆ.
ಕರಾವಳಿ ಮತ್ತು ಮಲೆನಾಡಿಗೆ ವರುಣನ ಆಪತ್ತು
ಹವಾಮಾನ ಇಲಾಖೆಯ ವರದಿಯ ಪ್ರಕಾರ, ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೂನ್ 8 ಮತ್ತು 9 ರಂದು ಅತ್ಯಂತ ಭಾರಿ ಮಳೆಯಾಗುವ (204.5mm ಗಿಂತ ಹೆಚ್ಚು) ಸಾಧ್ಯತೆ ಇರುವುದರಿಂದ ‘ರೆಡ್ ಅಲರ್ಟ್’ ಘೋಷಿಸಲಾಗಿದೆ. ತದನಂತರ ಜೂನ್ 10 ಮತ್ತು 11 ರಂದು ಕೂಡ ಭಾರಿ ಮಳೆ ಮುಂದುವರಿಯಲಿದ್ದು, ‘ಆರೆಂಜ್ ಅಲರ್ಟ್’ ನೀಡಲಾಗಿದೆ. ಈ ಅವಧಿಯಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ.
ಅದೇ ರೀತಿ, ದಕ್ಷಿಣ ಒಳನಾಡಿನ ಮಲೆನಾಡು ಭಾಗದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜೂನ್ 9 ರಂದು ಅತಿ ಭಾರಿ ಮಳೆಯಾಗಲಿದ್ದು, ಇಲ್ಲೂ ಕೂಡ ರೆಡ್ ಅಲರ್ಟ್ ಇರಲಿದೆ. ಇದರೊಂದಿಗೆ ಹಾಸನ, ಕೊಡಗು, ಮೈಸೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲೂ ಜೂನ್ 14 ರವರೆಗೆ ಉತ್ತಮ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ.
ಉತ್ತರ ಒಳನಾಡಿನಲ್ಲೂ ಮಳೆ ಅಬ್ಬರ
ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ಜೂನ್ 8 ಮತ್ತು 9 ರಂದು ಜೋರಾದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಇನ್ನುಳಿದಂತೆ ಹಾವೇರಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಸರಣಿಯಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂನ್ 11ರ ತನಕ ಉತ್ತರ ಒಳನಾಡಿನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಅನ್ವಯವಾಗಲಿದೆ.
