Home ಬೆಂಗಳೂರು ಪಬ್, ಬಾರ್‌ಗಳಿಗೆ ಹದಿಹರಿಯದ ಮಕ್ಕಳಿಗೆ ನೋ ಎಂಟ್ರಿ –  ಪ್ರಿಯಾಂಕ್ ಖರ್ಗೆ ಕಠಿಣ ಆದೇಶ

ಪಬ್, ಬಾರ್‌ಗಳಿಗೆ ಹದಿಹರಿಯದ ಮಕ್ಕಳಿಗೆ ನೋ ಎಂಟ್ರಿ –  ಪ್ರಿಯಾಂಕ್ ಖರ್ಗೆ ಕಠಿಣ ಆದೇಶ

ಬೆಂಗಳೂರು : ಹದಿಹರೆಯದ ಯುವ ಪೀಳಿಗೆಯಲ್ಲಿ ಮದ್ಯಪಾನ ಹಾಗೂ ಮಾದಕ ದ್ರವ್ಯಗಳ ವ್ಯಸನ ಮಿತಿಮೀರುತ್ತಿರುವುದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಚಿಕ್ಕ ವಯಸ್ಸಿನಲ್ಲೇ ದುಶ್ಚಟಗಳಿಗೆ ಬಲಿಯಾಗಿ ಭವಿಷ್ಯ ಹಾಳು ಮಾಡಿಕೊಳ್ಳುತ್ತಿರುವ ಮಕ್ಕಳನ್ನು ರಕ್ಷಿಸಲು ನೂತನ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅತ್ಯಂತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ರಾಜಧಾನಿಯ ಪಬ್, ಬಾರ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಅಪ್ರಾಪ್ತ ವಯಸ್ಕರಿಗೆ ಮದ್ಯ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲು ಪೊಲೀಸ್ ಇಲಾಖೆಗೆ ಗೃಹ ಸಚಿವರು ಕಠಿಣ ಆದೇಶ ಹೊರಡಿಸಿದ್ದಾರೆ. ಇನ್ಮುಂದೆ ಅಧಿಕೃತ ಗುರುತಿನ ಚೀಟಿ (ID Card) ಇಲ್ಲದಿದ್ದರೆ ಯಾವುದೇ ಗ್ರಾಹಕರಿಗೆ ಇಂತಹ ಪಬ್‌ ಹಾಗೂ ಬಾರ್‌ ಒಳಗೆ ಪ್ರವೇಶ ಸಿಗುವುದಿಲ್ಲ.

ರಿಸರ್ಚ್ ವರದಿ ಬೆನ್ನಲ್ಲೇ ಸರ್ಕಾರದ ಆಕ್ಷನ್
ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಕ್ರೈಸ್ಟ್ ವಿಶ್ವವಿದ್ಯಾಲಯ ಹಾಗೂ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ತಜ್ಞರು ಬೆಂಗಳೂರಿನ ಸುಮಾರು 4,093 ವಿದ್ಯಾರ್ಥಿಗಳನ್ನು ಒಳಪಡಿಸಿ ಇತ್ತೀಚೆಗೆ ನಡೆಸಿದ್ದ ಜಂಟಿ ಅಧ್ಯಯನ ವರದಿ ಸರ್ಕಾರದ ಕಣ್ಣು ತೆರೆಸಿದೆ. ಈ ಸಮೀಕ್ಷೆಯ ಪ್ರಕಾರ, ಪ್ರತಿ ಮೂವರು ಹದಿಹರೆಯದವರಲ್ಲಿ ಒಬ್ಬರು ಮದ್ಯ ಅಥವಾ ತಂಬಾಕು ಸೇವನೆಯ ಗಂಭೀರ ಆರೋಗ್ಯ ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ. 33 ರಷ್ಟು ಮಂದಿ ಮದ್ಯದ ಚಟಕ್ಕೆ ಬಿದ್ದಿದ್ದರೆ, ಶೇ. 18 ರಷ್ಟು ಯುವಕರು ತಂಬಾಕು ವ್ಯಸನಿಗಳಾಗಿದ್ದಾರೆ. ಸಾಮಾನ್ಯವಾಗಿ ಮದ್ಯಪಾನ ಆರಂಭಿಸುವ ಸರಾಸರಿ ವಯಸ್ಸು 17 ವರ್ಷ ಎಂದು ವರದಿಯಾಗಿದ್ದರೂ, ಕೆಲವು ಕಡೆ ಕೇವಲ 8 ವರ್ಷದ ಮಕ್ಕಳೂ ಕುಡಿತಕ್ಕೆ ದಾಸರಾಗಿರುವುದು ಬೆಳಕಿಗೆ ಬಂದಿದೆ. ಈ ಆತಂಕಕಾರಿ ವರದಿಯ ಬೆನ್ನಲ್ಲೇ ಗೃಹ ಸಚಿವರು ಬೆಂಗಳೂರಿನ ಎಲ್ಲಾ ಪಬ್, ಬ್ರೂವರೀಸ್, ಬಾರ್, ಕ್ಲಬ್, ಲಾಂಜ್‌ಗಳಿಗೆ ಅಧಿಕೃತ ನೋಟಿಸ್ ನೀಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, “ಇದು ಕೇವಲ ಬಾರ್ ಲೈಸೆನ್ಸ್ ಒದಗಿಸುವ ವಿಚಾರವಲ್ಲ. ಇದು ನಮ್ಮ ಯುವ ಪೀಳಿಗೆಯ ಸುರಕ್ಷತೆ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಗಂಭೀರ ವಿಷಯ. ವಾಣಿಜ್ಯ ಲಾಭಕ್ಕಾಗಿ ನಮ್ಮ ಮಕ್ಕಳ ಭವಿಷ್ಯ ಮತ್ತು ಸುರಕ್ಷತೆಯನ್ನು ಬಲಿ ಕೊಡಲು ಸಾಧ್ಯವೇ ಇಲ್ಲ. ಕಾನೂನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕರ್ನಾಟಕ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಲಿದೆ” ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.

ಪಬ್ ಮತ್ತು ಬಾರ್ ಮಾಲೀಕರಿಗೆ ಜಾರಿಯಾಗಿರುವ ಹೊಸ ನಿಯಮಗಳು:

  • ವಯಸ್ಸಿನ ಪುರಾವೆ ಕಡ್ಡಾಯ: ಗ್ರಾಹಕರು ಒಳಗೆ ಬರುವಾಗ ಮತ್ತು ಮದ್ಯ ಆರ್ಡರ್ ಮಾಡುವ ಮುನ್ನ ಸರ್ಕಾರ ಮಾನ್ಯ ಮಾಡಿರುವ ವಯಸ್ಸಿನ ಪುರಾವೆಯ ಐಡಿ ಕಾರ್ಡ್ ತೋರಿಸುವುದು ಕಡ್ಡಾಯ.
  • ನೇರ ಹೊಣೆಗಾರಿಕೆ: ಯಾವುದೇ ಸಂಸ್ಥೆಯಲ್ಲಿ ಅಪ್ರಾಪ್ತ ವಯಸ್ಕರಿಗೆ ಮದ್ಯ ಪೂರೈಕೆ ಮಾಡುವುದು ಪತ್ತೆಯಾದರೆ ಆಯಾ ಸಂಸ್ಥೆಯ ಮಾಲೀಕರು, ಮ್ಯಾನೇಜರ್‌ಗಳು ಹಾಗೂ ಲೈಸೆನ್ಸ್ ಹೊಂದಿರುವವರನ್ನೇ ನೇರ ಅಪರಾಧಿಗಳನ್ನಾಗಿ ಪರಿಗಣಿಸಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.
  • ಸಿಸಿಟಿವಿ ಕಣ್ಗಾವಲು: ಎಲ್ಲಾ ಬಾರ್ ಮತ್ತು ಪಬ್‌ಗಳ ಮುಖ್ಯ ಪ್ರವೇಶ ದ್ವಾರದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳು ಕಡ್ಡಾಯವಾಗಿ ಚಾಲ್ತಿಯಲ್ಲಿರಬೇಕು ಮತ್ತು ಅದರ ದೃಶ್ಯಾವಳಿಗಳನ್ನು (Footage) ಸುರಕ್ಷಿತವಾಗಿ ಸಂರಕ್ಷಿಸಿಡಬೇಕು.
  • ಪೊಲೀಸ್ ಕಾವಲು: ಅಪ್ರಾಪ್ತರ ದುಶ್ಚಟಗಳಿಗೆ ಬ್ರೇಕ್ ಹಾಕಲು ಪೊಲೀಸರು ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (RWA) ಹಾಗೂ ನಾಗರಿಕ ಗುಂಪುಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿ ಜಂಟಿ ನಿಗಾ ಇರಿಸಲಿದ್ದಾರೆ.

You cannot copy content of this page

Exit mobile version