ಸಕಲೇಶಪುರ: ಸ್ಥಳಾಂತರಕ್ಕೆ ಕೋಪಗೊಂಡಿದ್ದ ಆನೆಯೊಂದು, ಆರು ತಿಂಗಳ ಬಳಿಕ ಅದೇ ಸ್ಥಳಕ್ಕೆ ಬಂದು ದಾಂಧಲೆ ನಡೆಸಿರುವ ಘಟನೆ ತಾಲೂಕಿನ ಕೆಸಗುಲಿ ಗ್ರಾಮದಲ್ಲಿ ನಡೆದಿದೆ.
ಕೆಸಗುಲಿ ಗ್ರಾಮದಲ್ಲಿನ ಮನೆಗಳ ಮೇಲೆ ಆನೆಯೊಂದು ಪದೇಪದೆ ಮಾಡುತ್ತಿತ್ತು. ಈ ಕಾರಣ ಬೇಸತ್ತ ಮನೆಯವರು, ಅರಣ್ಯ ಇಲಾಖೆಯವರಿಗೆ ದೂರು ನೀಡಿದ್ದರು.
ಈ ಹಿನ್ನಲೆಯಲ್ಲಿ ಆರು ತಿಂಗಳ ಹಿಂದೆ ಕೊನೆಯ ಬಾರಿಗೆ ದಾಳಿ ಮಾಡಿದ್ದ ಕಾಡಾನೆಯನ್ನು(ಮಕ್ನ ಕಾಡಾನೆ) ಸೆರೆಹಿಡಿದು ನೂರಾರು ಕಿಲೋಮೀಟರ್ ದೂರದ ಕಾಡಿನಲ್ಲಿ, ಅಂದರೆ ಮಲೆ ಮಹದೇಶ್ವರ ಬೆಟ್ಟಕ್ಕೆ ಬಿಟ್ಟು ಬರಲಾಗಿತ್ತು.
ಅದೇ ಆನೆ ಬುಧವಾರ ರಾತ್ರಿ ಕುಮಾರ್ ಎಂಬುವರ ಮನೆ ಮೇಲೆ ದಾಳಿ ನಡೆಸಿ, ಕಿಟಕಿಯ ಗಾಜುಗಳನ್ನು ಧ್ವಂಸ ಮಾಡಿದೆ. ಕಳೆದ 6 ತಿಂಗಳ ಹಿಂದೆ ಇದೇ ಮನೆ ಪಕ್ಕದಲ್ಲಿರುವ ಅವರ ಅಣ್ಣ ಗಿರೀಶ್ ಎಂಬುವರ ಮನೆಯ ಮೇಳೆ ದಾಳಿ ನಡೆಸಿತ್ತು. ಒಂಟಿ ಸಲಗದ ಆರ್ಭಟಕ್ಕೆ ಮನೆಯ ಬಾಗಿಲು ಕಿಟಕಿಗಳೆಲ್ಲಾ ಪುಡಿ ಪುಡಿಯಾಗಿವೆ. ಮುಂಜಾನೆ ಎರಡು ಗಂಟೆಯ ಹೊತ್ತಿಗೆ ಆನೆ ಏಕಾಏಕಿಯಾಗಿ ದಾಳಿ ಮಾಡಿದೆ. ಮನೆ ಮಂದಿಯೆಲ್ಲ ನಿದ್ರೆಯಲ್ಲಿದ್ದಾಗ ಬಂದಿದ್ದ ಆನೆ ದಾಳಿ ಮಾಡುತ್ತಿದ್ದಂತೆಯೇ ಮನೆಯವರು ಎಚ್ಚೆತ್ತು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಬಳಿಕ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಗೆ 6 ತಿಂಗಳ ಹಿಂದೆ ಹಿಡಿದ ಮಕ್ನ ಕಾಡಾನೆ ಎಂಬುದು ಅದಕ್ಕೆ ಹಾಕಿರುವ ರೇಡಿಯೋ ಕಾಲರ್ ನಿಂದ ಗೊತ್ತಾಗಿದೆ.
ಸಾಮಾನ್ಯವಾಗಿ ಆನೆಗಳು ಹೊಲ ಗದ್ದೆಗಳಿಗೆ ನುಗ್ಗುತ್ತವೆ. ಈ ಆನೆ ಮನೆಗಳನ್ನು ಟಾರ್ಗೆಟ್ ಮಾಡುತ್ತಿರುವುದರಿಂದ ಪರಿಸರದಲ್ಲಿ ಆತಂಕ ಸೃಷ್ಟಿಯಾಗಿದೆ.