Friday, June 14, 2024

ಸತ್ಯ | ನ್ಯಾಯ |ಧರ್ಮ

ಮುಖವಾಡಗಳನ್ನೆಲ್ಲ ಕಳಚಿ ಹಾಕುತ್ತಿರುವ ಸಾಮಾಜಿಕ ಮಾಧ್ಯಮ

‘ನಿನ್ನನ್ನು ನಿನ್ನ ಅಪ್ಪ ಹುಟ್ಟಿಸಿದ ವೀಡಿಯೋ ದಾಖಲೆ ಎಲ್ಲಿದೆ?’ ಎಂದು ಒಬ್ಬ ವಿದ್ಯಾವಂತ ಹೆಣ್ಣುಮಗಳು ಯಾರೋ ಪುರುಷನೊಬ್ಬನನ್ನು ಕೇಳುತ್ತಾಳೆಂದರೆ, ‘ನೀನು ಮೂರನೆ ದರ್ಜೆಯವಳು, ನಿನ್ನ ಮೇಕಪ್ ಹಾಗಿದೆ, ನಿನ್ನ ಲಿಪ್ ಸ್ಟಿಕ್ ಹೀಗಿದೆ’ ಎಂದು ಒಬ್ಬ ಹೆಣ್ಣುಮಗಳು ಇನ್ನೊಬ್ಬ ಪರಿಶ್ರಮಿ ಹೆಣ್ಣುಮಗಳನ್ನು ನಿಂದಿಸುತ್ತಾಳೆಂದರೆ ಮತ್ತು ಇಂತಹ ಕೊಳಕು ಹೇಳಿಕೆಗಳಿಗೆ ನಲವತ್ತು ಐವತ್ತು ಸಾವಿರ ಲೈಕುಗಳು ಬೀಳುತ್ತವೆ ಎಂದರೆ ನಮ್ಮ ಸಮಾಜವನ್ನು ಯಾವ ಕೆಳ ಮಟ್ಟಕ್ಕೆ ಮತ್ತು ಎಂತಹ ಭಯಂಕರ ಸ್ಥಿತಿಗೆ ತಲಪಿಸಲಾಗಿದೆ ಎಂಬುದನ್ನು ನೀವೇ ಯೋಚಿಸಿ – ಶ್ರೀನಿವಾಸ ಕಾರ್ಕಳ ( ಶ್ರೀನಿ ಕಾಲಂ)

ವೃತ್ತಿ ಮಾತ್ಸರ್ಯ ಮತ್ತು ಅದರಿಂದ ಹೊರಹೊಮ್ಮುವ ವೈಮನಸ್ಯ ಹಾಗೂ ಸಂಘರ್ಷ ಬಹುತೇಕ ಎಲ್ಲ ರಂಗಗಳಲ್ಲಿ ಕಾಣಸಿಗುವಂಥದ್ದು. ಇದಕ್ಕೆ ಕ್ರಿಕೆಟ್ ಕ್ರೀಡೆ ಕೂಡಾ ಹೊರತಾಗಿಲ್ಲ. ಕ್ರಿಕೆಟ್ ದಿಗ್ಗಜಗಳಾದ ಗೌತಮ್ ಗಂಭೀರ್ ಮತ್ತು ವಿರಾಟ್ ಕೋಹ್ಲಿ ನಡುವಣ ಇಂತಹ ಕೋಳಿ ಜಗಳ ಬಹಳ ಹಳೆಯದು.ಇತ್ತೀಚಿನ ಕ್ರಿಕೆಟ್ ಪಂದ್ಯಾಟವೊಂದರ ಸಮಯ, ಅಂಗಣದಿಂದ ಹೊರಬರುತ್ತಿದ್ದ ಗೌತಮ್ ಗಂಭೀರ್ ಕ್ರಿಕೆಟ್ ಪ್ರೇಕ್ಷಕರತ್ತ ತಿರುಗಿ, ಮಧ್ಯದ ಬೆರಳನ್ನು (ಮಿಡ್ಲ್ ಫಿಂಗರ್) ತೋರಿ ಅಶ್ಲೀಲ ಸನ್ನೆ ಮಾಡಿದರು. ಇದು ಕ್ಷಣ ಮಾತ್ರದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ಭಾರೀ ವಾದ ವಿವಾದಕ್ಕೆ ಕಾರಣವಾಯಿತು.

ತನ್ನ ವರ್ತನೆ ಸಾರ್ವಜನಿಕ ಟೀಕೆಗೆ ಒಳಗಾದುದನ್ನು ತಿಳಿದ ತಕ್ಷಣ ಮಾಧ‍್ಯಮಗಳಿಗೆ ಹೇಳಿಕೆ ನೀಡಿದ ಗಂಭೀರ್, ‘ಅಲ್ಲಿದ್ದ ಕ್ರಿಕೆಟ್ ಪ್ರೇಕ್ಷಕರು ಭಾರತ ವಿರೋಧಿ ಘೋಷಣೆ ಕೂಗಿದರು, ಅದನ್ನು ಸಹಿಸುವುದು ಸಾಧ್ಯವೇ ಇಲ್ಲ, ಆದ್ದರಿಂದ ಕೆರಳಿ ತಾನು ಹಾಗೆ ಮಾಡಿದೆ’ ಎಂದು ಸಮಜಾಯಿಷಿ ನೀಡಿದರು.

ಆದರೆ, ಅಲ್ಲಿದ್ದ ವಿರಾಟ್ ಕೋಹ್ಲಿ ಅಭಿಮಾನಿಗಳು ಕೋಹ್ಲಿ ಪರ ಘೋಷಣೆ ಕೂಗಿದ್ದರಿಂದ ಕೆರಳಿದ ಗಂಭೀರ್ ಅಂತಹ ಆಕ್ಷೇಪಾರ್ಹ ಸನ್ನೆ ಮಾಡಿದರು ಎಂದು ಅಲ್ಲಿದ್ದ ಕ್ರಿಕೆಟ್ ಪ್ರೇಕ್ಷಕರ ಸಹಿತ ಎಲ್ಲರೂ ವಾದಿಸಿದರು. ಆಗ ತಕ್ಷಣ ಇನ್ನೊಂದು ವೀಡಿಯೋ ಹರಿದಾಡಲಾರಂಭಿಸಿತು. ವೀಡಿಯೋ ಅದೇ, ಆದರೆ ಅದರಲ್ಲಿ ಭಾರತ ವಿರೋಧಿ ಘೋಷಣೆಯ ಧ್ವನಿಗಳಿದ್ದವು!

ನೂಪುರ್ ಶರ್ಮಾ

ವಿವಾದ ಬೆಳೆಯುತ್ತಿದ್ದಂತೆ ಇದನ್ನು ಫ್ಯಾಕ್ಟ್ ಚೆಕ್ ಮಾಡಲು ಅನೇಕ ಮಾಧ್ಯಮಗಳು ಹೊರಟವು. ‘ಇಂಡಿಯಾ ಟುಡೇ’ ಮಾಧ್ಯಮವು ಇದನ್ನು ಫ್ಯಾಕ್ಟ್ ಚೆಕ್ ಮಾಡಿ, ‘ಗಂಭೀರ್ ಸುಳ್ಳು ಹೇಳುತ್ತಿದ್ದಾರೆ, ಅವರ ಪರವಾಗಿ ಬಂದ ವೀಡಿಯೋದಲ್ಲಿ ಆಡಿಯೋ ಎಡಿಟ್ ಮಾಡಿ ಹೊಸದಾಗಿ ಸೇರಿಸಲಾಗಿದೆ, ವಾಸ್ತವದಲ್ಲಿ ಅಲ್ಲಿ ಕೂಗಿದುದು ಕೋಹ್ಲಿ ಪರ ಘೋಷಣೆ’ ಎಂದು ಸ್ಪಷ್ಟಪಡಿಸಿತು.

ಇಂಡಿಯಾ ಟುಡೇಯಲ್ಲಿ ಕೆಲಸ ಮಾಡುವ ಹೆಸರಾಂತ ಪತ್ರಕರ್ತ ರಾಜದೀಪ್ ಸರದೇಸಾಯಿ ಈ ಬಗ್ಗೆ ಟ್ವೀಟ್ ಮಾಡಿ, ‘ಗಂಭೀರ್ ಅವರ ಹೇಳಿಕೆ ಸಮರ್ಥನೆ ಮಾಡುವ ವೀಡಿಯೋ ಎವಿಡೆನ್ಸ್ ಲಭ್ಯವಿಲ್ಲ (ಅಂದರೆ ಗಂಭೀರ್ ಹೇಳಿದ್ದು ಸುಳ್ಳು)’ ಎಂದು ಬರೆದರು.

ಇದ್ದುದನ್ನು ಇದ್ದಂತೆ ಹೇಳುವ ರಾಜದೀಪ್ ಸರದೇಸಾಯಿ ಎಂದರೆ ಹಿಂದಿನಿಂದಲೂ ಬಲಪಂಥೀಯರಿಗೆ ಅಷ್ಟಕ್ಕಷ್ಟೇ. ರಾಜ್ ದೀಪ್ ಮೇಲೆ ಇವರು ದೈಹಿಕ ಹಲ್ಲೆ ನಡೆಸಲು ಯತ್ನಿಸಿದ ಉದಾಹರಣೆಯೂ ಇದೆ.

ಆದ್ದರಿಂದಲೇ, ಪೂರ್ವಗ್ರಹಪೀಡಿತ ಬಲಪಂಥೀಯರು ರಾಜದೀಪ್ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದರು. ಅದರಲ್ಲೂ ಪ್ರವಾದಿಯ ನಿಂದನೆಯಿಂದ ಕುಖ್ಯಾತಿಗೊಳಗಾದ ಈ ಹಿಂದಿನ ಬಿಜೆಪಿ ವಕ್ತಾರೆ ಮತ್ತು ಓಪ್ ಇಂಡಿಯಾ ಸಂಪಾದಕಿ ನೂಪುರ್ ಶರ್ಮಾ ನೀಡಿದ ಪ್ರತಿಕ್ರಿಯೆಯಂತೂ ಅತ್ಯಂತ ಅಸಭ್ಯವಾಗಿತ್ತು. ಒಂದು ಕ್ಷಣ ನಾಗರಿಕ ಜಗತ್ತು ತಲೆ ತಗ್ಗಿಸುವಂತಿತ್ತು. ಅದರಲ್ಲಿ ಆಕೆ There is no video evidence that your father is indeed your father too. Fact check karo (ನಿನ್ನ ತಂದೆ ನಿನ್ನ ನಿಜವಾದ ತಂದೆ ಎನ್ನುವುದಕ್ಕೆ ವೀಡಿಯೋ ದಾಖಲೆ ಇಲ್ಲ. ಅದನ್ನೂ ಫ್ಯಾಕ್ಟ್ ಚೆಕ್ ಮಾಡು) ಎಂದು ಬರೆದಿದ್ದರು!!

ಪ್ರೀತಿ ಚೌಧರಿ

ಪ್ರತಿಭಾವಂತ ಪತ್ರಕರ್ತ ರಾಜದೀಪ್ ಸರ್ದೇಸಾಯಿಯವರ ಜತೆಯಲ್ಲಿ ಇಂಡಿಯಾ ಟುಡೇಯಲ್ಲಿ ಪತ್ರಕರ್ತೆ ಪ್ರೀತಿ ಚೌಧರಿಯವರೂ ಕೆಲಸ ಮಾಡುತ್ತಾರೆ. ಕೆಲವೊಂದು ಶೋಗಳನ್ನು ಅವರಿಬ್ಬರು ಜತೆಯಾಗಿ ನಿರ್ವಹಿಸುತ್ತಾರೆ. ಇತ್ತೀಚಿನ ಅಂತಹ ಒಂದು ಶೋ ಬಳಿಕ, ಅಸಭ್ಯ ಟ್ವೀಟ್ ಗಳಿಗೆ ಹೆಸರಾಗಿರುವ ಮತ್ತು ಬಲಪಂಥೀಯರ ಡಾರ್ಲಿಂಗ್ ಆಗಿರುವ ಶೆಫಾಲಿ ವೈದ್ಯ ಎಂಬಾಕೆ, ರಾಜದೀಪ್ ನ ಮೇಲಿನ ಸಿಟ್ಟಿನಲ್ಲಿ, ಆತನ ಜತೆಗಿದ್ದ ಪ್ರೀತಿ ಚೌಧರಿಯ ಬಗ್ಗೆಯೂ ತುಚ್ಛವಾಗಿ ನಿಂದನೆ ಮಾಡುತ್ತಾ ಹೀಗೆ ಬರೆದರು- This is Rajdeep Sardesai’s worth! To be a side-kick to a third rate anchor like Preeti Choudhary. Who thinks a heavily make-up face and red lips are a substitute for reseach, objectivity and intelligence in journalism (ಈ ರಾಜದೀಪ್ ನ ಯೋಗ್ಯತೆಯೇ ಇಷ್ಟು. ಮೂರನೆ ದರ್ಜೆಯ ಆಂಕರ್ ಪ್ರೀತಿ ಚೌಧರಿಯ ಸಹಾಯಕನಾಗಿ ಕೆಲಸ ಮಾಡುವುದು. ಈ ಪ್ರೀತಿ ಚೌಧರಿಯ ಪ್ರಕಾರ, ಪತ್ರಕಾರಿಕೆಯ ಸಂಶೋಧನೆ, ವಸ್ತುನಿಷ್ಠತೆ ಮತ್ತು ಬುದ್ಧಿಮತ್ತೆ ಅಂದರೆ, ಸಿಕ್ಕಾಪಟ್ಟೆ ಮೇಕ್ ಅಪ್ ಮಾಡಿಕೊಂಡ ಮುಖ ಮತ್ತು ಕೆಂಪು ತುಟಿ).

ನೋವು ಮತ್ತು ಆಕ್ರೋಶಕ್ಕೊಳಗಾದ ಪ್ರೀತಿ ಚೌಧರಿ ಶೆಫಾಲಿ ವೈದ್ಯಳಿಗೆ ಹೀಗೆ ಒಂದು ಭಾವುಕ ಮತ್ತು ಮಾರ್ಮಿಕ ಉತ್ತರ ಕೊಟ್ಟರು –“2008 ರ ಕೋಸಿ ಪ್ರವಾಹ ಸಮಯದಲ್ಲಿ ವರದಿ ಮಾಡುತ್ತಾ ನಾನು ನೇಪಾಳದಲ್ಲಿ ಎರಡು ದಿನ ಅನ್ನಾಹಾರವಿಲ್ಲದೆ ಕಳೆದಿದ್ದೆ. 2011 ರಲ್ಲಿ ರಾಜಸ್ಥಾನದಲ್ಲಿ ಹೆಣ್ಣು ಶಿಶು ಹತ್ಯೆಯ ಮಾಫಿಯಾದ ಬೆನ್ಹತ್ತಿದಾಗ ಜೈಸಲ್ಮೇರ್ ನಲ್ಲಿ ಪುರುಷರಿಂದ ಲಾಠಿ ದಾಳಿಗೊಳಗಾಗಿದ್ದೆ. 2013 ರಲ್ಲಿ ಪಂಜಾಬ್ ನಲ್ಲಿ ಡ್ರಗ್ ಹಾವಳಿ ಬಹಿರಂಗ ಪಡಿಸುವಾಗ ಡ್ರಗ್ ವ್ಯಸನಿಯೊಬ್ಬ ಬ್ಲೇಡ್ ನಿಂದ ಮಾಡಿದ 2 ಇಂಚು ಗಾಯದ ಕಲೆ ನನ್ನ ಕಾಲಿನಲ್ಲಿ ಈಗಲೂ ಇದೆ. 2017ರಲ್ಲಿ ಮಧ್ಯಪ್ರದೇಶದ ಮಾಂಡ್ಸರ್ ನಲ್ಲಿ ರೈತರು ಮತ್ತು ಪೊಲೀಸರ ನಡುವೆ ನಡೆದ ಹೊಡೆದಾಟ ವರದಿ ಮಾಡುತ್ತಿದ್ದ ನನ್ನ ಕಾರಿನ ಮೇಲೆ ನೂರಾರು ರೈತರು ದಾಳಿ ಮಾಡಿದ್ದರು. ಕೋವಿಡ್ ಗರಿಷ್ಠ ಹಂತದಲ್ಲಿ ಇದ್ದ ಎರಡು ತಿಂಗಳ ಕಾಲ ನನ್ನ ಕುಟುಂಬವನ್ನು ಮತ್ತು ನನ್ನ ಜೀವವನ್ನು ರಿಸ್ಕ್ ಗೆ ಒಡ್ಡಿ ರುದ್ರಭೂಮಿ, ಕೋವಿಡ್ ವಾರ್ಡ್ ಮತ್ತು ಹಳ್ಳಿಗಳಲ್ಲಿ ವರದಿ ಮಾಡಿದ್ದೆ; ಅಲ್ಲಿ ಒಬ್ಬನೇ ಒಬ್ಬ ಸರಕಾರಿ ಅಧಿಕಾರಿ ಇರಲಿಲ್ಲ. ಇತ್ತೀಚೆಗೆ ಹಿಮಾಚಲದಲ್ಲಿ ಕೂದಲೆಳೆಯಲ್ಲಿ ಗುಡ್ಡ ಕುಸಿತದಿಂದ ತಪ್ಪಿಸಿಕೊಂಡಿದ್ದೆ. ಅಸಂಖ್ಯ ರಾಜಕೀಯ ಮಹಾಸಭೆಗಳಲ್ಲಿ ಸಾವಿರಾರು ಮಂದಿ ಬೆವೆತ, ಕುಡಿದು ತೂರಾಡುವ ಪುರುಷರ ನಡುವಿನಿಂದ ಹೋಗಿದ್ದೆ. ಲಾಠಿ ಚಾರ್ಜ್ , ಜಲಫಿರಂಗಿ ದಾಳಿ ಅನುಭವಿಸಿದ್ದೇನೆ. 15 ವರ್ಷಗಳ ನನ್ನ ಇಂಡಿಯಾ ಟುಡೇ ಕೆರೀರ್ ನಲ್ಲಿ ಗ್ರೌಂಡ್ ನಿಂದ ಮತ್ತು ಸ್ಟುಡಿಯೋದಿಂದ 3 ಸಾರ್ವತ್ರಿಕ ಚುನಾವಣೆ ಮತ್ತು 25 ರಾಜ್ಯ ಚುನಾವಣೆ ಕವರ್ ಮಾಡಿದ್ದೇನೆ. ಪತ್ರಕರ್ತರಿಗೆ ಇದೇನೂ ಹೊಸದಲ್ಲ. ನನ್ನ ಅನೇಕ ಸಹೋದ್ಯೋಗಿಗಳು ಅದನ್ನು ನಿತ್ಯ ಮಾಡುತ್ತಿರುತ್ತಾರೆ. 

ಮಿಸ್ ವೈದ್ಯ, ಓರ್ವ ಸ್ತ್ರೀವಿರೋಧಿ, ಮತಾಂಧ, ನಿರುದ್ಯೋಗಿ ಮಹಿಳೆಯಾದ ನಿನಗೆ ಇದನ್ನು ಹೇಳುವ ಅಗತ್ಯ ಇಲ್ಲ. ಆದರೆ, ಅದನ್ನು ಹೇಳುವುದು ನನ್ನ ಕರ್ತವ್ಯ ಅಂದುಕೊಂಡಿದ್ದೇನೆ. ಯಾಕೆಂದರೆ ಅಲ್ಲಿ ತುಂಬಾ ಎಳೆಯ ಭಾರತೀಯ ಮಹಿಳೆಯರಿದ್ದಾರೆ, ದುರ್ಬಲರು, ದನಿಯಿಲ್ಲದವರು. ಅಲ್ಲಿ ನಿನ್ನಂತಹ ಪಿತೃಪ್ರಧಾನ ಮನಸಿನ ಮಹಿಳೆಯರು ಅವರ ಚರ್ಮದ ಬಣ್ಣ, ಲಿಪ್ ಸ್ಟಿಕ್ ಬಣ್ಣ, ಬ್ರಾ ಸ್ಟ್ರಾಪ್ ಬಣ್ಣ ಇತ್ಯಾದಿ ಹಿಡಿದುಕೊಂಡು ಅವರನ್ನು ಎಳೆದುಹಾಕಲು ಯಾವಾಗಲೂ ಯತ್ನಿಸುತ್ತಿರುತ್ತಾರೆ. ಅಲ್ಲಿ ನಿನ್ನಂಥವರು ಅವರ ಸ್ಕರ್ಟ್ ನ ಉದ್ದ, ಅವರ ಮುಖದ ಮೇಕಪ್ ನ ಮೂಲಕ ಅವರ ಬುದ್ಧಿಮತ್ತೆಯನ್ನು ಅಳೆಯುತ್ತಿರುತ್ತಾರೆ. ಅವರಿಗಾಗಿ ಇದನ್ನು ಬರೆಯುತ್ತಿದ್ದೇನೆ.

ಎಳೆಯ ಹುಡುಗಿಯಾದಂದಿನಿಂದ, 20 ವರ್ಷಗಳಿಂದ ನಾನಲ್ಲಿದ್ದೇನೆ. ನಿನ್ನಂತಹ ಬಹಳ ಮಂದಿಯನ್ನು ನಾನು ನೋಡಿದ್ದೇನೆ. ನನ್ನ ಸಾಧನೆಗಳನ್ನು ನನ್ನಿಂದ ಕಿತ್ತುಕೊಳ್ಳುವುದು ನಿನಗೆ ಸಾಧ್ಯವಿಲ್ಲ. ನಾನು ಮಾತ್ರವಲ್ಲ, ನಾವು ಮಹಿಳೆಯರೆಲ್ಲ ನಿನ್ನಂಥವರ ವಿರುದ್ಧ ಇದ್ದೇವೆ. ನೀನೀಗ ನಿನ್ನ ಗುಹೆಗೆ ತೆವಳಿ ನಿನ್ನ ಮುಂದಿನ ಟ್ವೀಟ್ ರಚಿಸಬಹುದು.. ಮೇಡಂ, ನನ್ನ ಟೈಮ್ ಲೈನ್ ನಿಂದ ಆಚೆ ನಡೀರಿ.. ಅಂದ ಹಾಗೆ ನನ್ನ ಕೆಂಪು ಲಿಪ್ ಸ್ಟಿಕ್ ಇದೆಯಲ್ಲ, ಅದರ ಬಗ್ಗೆ ನನಗೆ ಹೆಮ್ಮೆ ಇದೆ. ಅದರಲ್ಲಿ ನಾನು ಚಂದ ಕಾಣುತ್ತೇನೆ”.

ನಾವೀಗ ಯಾವ ಮಟ್ಟಕ್ಕೂ ಇಳಿಯಲು ಸಿದ್ಧ!

ಇದು ಈವತ್ತಿನ ಕಾಲಘಟ್ಟದ ಸಾರ್ವಜನಿಕ ಸಂವಾದದ ಸ್ಥಿತಿಗತಿ. ದೇಶದ ಅಧಿಕಾರ ಹಿಡಿದ ಬಲಪಂಥೀಯ ರಾಜಕಾರಣ ಉಂಟು ಮಾಡಿದ ವಿಷಾದಕರ ಪರಿಸ್ಥಿತಿ. ಸಾಮಾಜಿಕ ಮಾಧ್ಯಮಗಳಲ್ಲಿ ಮುಖ ತೋರಿಸುವ, ದೈಹಿಕವಾಗಿ ಎದುರು ಬಂದು ನಿಲ್ಲುವ ಅಗತ್ಯವಿಲ್ಲ. ಹಾಗಾಗಿ ಯಾವುದೋ ಮುಲಾಜಿನ ಕಾರಣಕ್ಕೆ ಮುಚ್ಚಿಟ್ಟದ್ದ ಕೊಳಕುಗಳೆಲ್ಲ ಅಲ್ಲಿ ಹೊರಬರುತ್ತಿವೆ. ಮುಖವಾಡಗಳು ಕಳಚಿ ಬೀಳುತ್ತಿವೆ. ಪಶುತ್ವ ವಿಜೃಂಭಿಸುತ್ತಿದೆ. ರಾಜಕೀಯ ಒಲವುಗಳು ನಮ್ಮೊಳಗಿನ ಮನುಷ್ಯತ್ವವನ್ನು ಹಂತ ಹಂತವಾಗಿ ಸಂಪೂರ್ಣವಾಗಿ ಕೊಲ್ಲುತ್ತಿವೆ. ಎದುರಾಳಿಗಳನ್ನು ನಿಂದಿಸಲು, ನಿವಾರಿಸಲು ಯಾವ ಮಟ್ಟಕ್ಕೂ ಇಳಿಯಲು ನಾವೀಗ ಸಿದ್ಧ.

ಗಮನಿಸಿ, ಮೇಲಿನ ಎರಡೂ ಪ್ರಕರಣಗಳಲ್ಲಿ ಸಾರ್ವಜನಿಕ ಸಂವಾದವನ್ನು ಅತ್ಯಂತ ಕೆಳಮಟ್ಟಕ್ಕೆ ಇಳಿಸಿದವರು ಇಬ್ಬರು ಹೆಣ್ಣುಮಕ್ಕಳು. ಇಬ್ಬರೂ ಸಾಕಷ್ಟು ಓದಿಕೊಂಡವರು. ಒಬ್ಬಾಕೆಯಂತೂ ತಾನು ಒಂದು ಮಾಧ್ಯಮದ ಸಂಪಾದಕಿ ಎಂದುಕೊಂಡವಳು. ಇಬ್ಬರೂ ತಥಾಕಥಿತ ಅತ್ಯಂತ ಮೇಲುಜಾತಿಗೆ ಸೇರಿದವರು. ಪುರುಷರು ಮಾತನಾಡಲು ಹೇಸುವ ಪದಗಳನ್ನೂ ಈ ಹೆಣ್ಣುಮಕ್ಕಳು ಬಳಸಬಲ್ಲರು. ಈ ಬಗ್ಗೆ ಅವರಿಗೆ ಕಿಂಚಿತ್ತೂ ವಿಷಾದವಿಲ್ಲ.

‘ನಿನ್ನನ್ನು ನಿನ್ನ ಅಪ್ಪ ಹುಟ್ಟಿಸಿದ ವೀಡಿಯೋ ದಾಖಲೆ ಎಲ್ಲಿದೆ?’ ಎಂದು ಒಬ್ಬ ವಿದ್ಯಾವಂತ ಹೆಣ್ಣುಮಗಳು ಯಾರೋ ಪುರುಷನೊಬ್ಬನನ್ನು ಕೇಳುತ್ತಾಳೆಂದರೆ, ‘ನೀನು ಮೂರನೆ ದರ್ಜೆಯವಳು, ನಿನ್ನ ಮೇಕಪ್ ಹಾಗಿದೆ, ನಿನ್ನ ಲಿಪ್ ಸ್ಟಿಕ್ ಹೀಗಿದೆ’ ಎಂದು ಒಬ್ಬ ಹೆಣ್ಣುಮಗಳು ಇನ್ನೊಬ್ಬ ಪರಿಶ್ರಮಿ ಹೆಣ್ಣುಮಗಳನ್ನು ನಿಂದಿಸುತ್ತಾಳೆಂದರೆ ಮತ್ತು ಇಂತಹ ಕೊಳಕು ಹೇಳಿಕೆಗಳಿಗೆ ನಲವತ್ತು ಐವತ್ತು ಸಾವಿರ ಲೈಕುಗಳು ಬೀಳುತ್ತವೆ ಎಂದರೆ ನಮ್ಮ ಸಮಾಜವನ್ನು ಯಾವ ಕೆಳ ಮಟ್ಟಕ್ಕೆ ಮತ್ತು ಎಂತಹ ಭಯಂಕರ ಸ್ಥಿತಿಗೆ ತಲಪಿಸಲಾಗಿದೆ ಎಂಬುದನ್ನು ನೀವೇ ಯೋಚಿಸಿ. ಈಗ ‘ಇಂಡಿಯಾ’ವನ್ನು ತೆಗೆದುಹಾಕಿ, ನಮ್ಮ ದೇಶವನ್ನು ‘ಭಾರತ’ ಎಂದು ಹೆಸರಿಸುವ ಯತ್ನ ನಡೆದಿದೆಯಂತೆ. ಮನಸ್ಥಿತಿ ಹೀಗಿದ್ದ ಮೇಲೆ ದೇಶದ ಹೆಸರು ಯಾವುದಾದರೇನು, ಪರಿಸ್ಥಿತಿ ಬದಲಾಗುವುದೇ?

ಶ್ರೀನಿವಾಸ ಕಾರ್ಕಳ

ಚಿಂತಕರು

ಇದನ್ನೂ ಓದಿದೈತ್ಯರೊಂದಿಗೆ ಮೈತ್ರಿ; ಪ್ರಾದೇಶಿಕ ಪಕ್ಷದ ವಿನಾಶ ಖಾತ್ರಿ

Related Articles

ಇತ್ತೀಚಿನ ಸುದ್ದಿಗಳು