Home ದೇಶ ನಾಗರಿಕ ವಿಮಾನಯಾನ ಜಗತ್ತಿನ ಕೆಲವು ಕರಾಳ ಅಪಘಾತಗಳು

ನಾಗರಿಕ ವಿಮಾನಯಾನ ಜಗತ್ತಿನ ಕೆಲವು ಕರಾಳ ಅಪಘಾತಗಳು

0

ದಿಲ್ಲಿ: ಗುರುವಾರ ಗುಜರಾತ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಿಂದ ಆಕಾಶಕ್ಕೆ ಏರಿದ ಕೆಲವೇ ಸೆಕೆಂಡುಗಳಲ್ಲಿ ಏರ್ ಇಂಡಿಯಾ ವಿಮಾನ ಕುಸಿದು ಬಿದ್ದ ಘಟನೆ ವಿಶ್ವವನ್ನೇ ಬೆಚ್ಚಿಬೀಳಿಸಿದೆ.

ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಸಂಭವಿಸಿದ ಪ್ರಮುಖ ವಿಮಾನ ದುರಂತಗಳಲ್ಲಿ ಇದು ಒಂದಾಗಿದೆ. ವಿಶ್ವದ ಪೌರ ವಿಮಾನಯಾನ ಇತಿಹಾಸದಲ್ಲಿ ಮರೆಯಲಾಗದ ಕಪ್ಪು ಚುಕ್ಕೆಯಾಗಿ ಉಳಿದಿರುವ ಭೀಕರ ಅಪಘಾತಗಳು ಹಲವಾರು ಸಂಭವಿಸಿವೆ. ಅವುಗಳಲ್ಲಿ ಕೆಲವು ಪ್ರಮುಖ ಘಟನೆಗಳು ಈ ಕೆಳಗಿನಂತಿವೆ:

ಕಳೆದ ವರ್ಷ ಡಿಸೆಂಬರ್ 29ರಂದು ಥಾಯ್‌ಲೆಂಡ್‌ನಿಂದ ಪ್ರಯಾಣಿಕರನ್ನು ಕರೆತಂದಿದ್ದ ವಿಮಾನವು ದಕ್ಷಿಣ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಕುಸಿದು ಬಿದ್ದಿತು. ರನ್‌ವೇಯಲ್ಲಿ ಇಳಿಯುತ್ತಿದ್ದ ವಿಮಾನಕ್ಕೆ ಪಕ್ಷಿಯೊಂದು ಡಿಕ್ಕಿಯಾದ ಕಾರಣ ಈ ದುರಂತ ಸಂಭವಿಸಿತು. ಈ ಘಟನೆಯಲ್ಲಿ 179 ಜನರು ಮೃತಪಟ್ಟರು.

2009ರ ಜೂನ್ 1ರಂದು ಬ್ರೆಜಿಲ್‌ನ ರಾಜಧಾನಿ ರಿಯೋದಿಂದ ಪ್ಯಾರಿಸ್‌ಗೆ ತೆರಳುತ್ತಿದ್ದ ಏರ್ ಫ್ರಾನ್ಸ್ 447 ವಿಮಾನವು ಮೂರು ಗಂಟೆಗಳ ಪ್ರಯಾಣದ ಬಳಿಕ 38,000 ಅಡಿ ಎತ್ತರದಿಂದ ಕುಸಿದು ಬಿದ್ದಿತು. ಈ ಭೀಕರ ದುರಂತದಲ್ಲಿ 228 ಜನರು ಪ್ರಾಣ ಕಳೆದುಕೊಂಡರು.

1998ರ ಸೆಪ್ಟೆಂಬರ್ 2ರಂದು ನ್ಯೂಯಾರ್ಕ್‌ನಿಂದ ಜಿನೀವಾಗೆ ತೆರಳುತ್ತಿದ್ದ ಸ್ವಿಸ್‌ಏರ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು ಕೆನಡಾದ ನೋವಾಸ್ಕೋಶಿಯಾ ಕರಾವಳಿಯ ಸಮೀಪದ ಅಟ್ಲಾಂಟಿಕ್ ಸಮುದ್ರದಲ್ಲಿ ಕುಸಿಯಿತು. ವಿಮಾನದಲ್ಲಿದ್ದ 229 ಪ್ರಯಾಣಿಕರೆಲ್ಲರೂ ಮೃತಪಟ್ಟರು.

1985ರ ಆಗಸ್ಟ್ 12ರಂದು ಜಪಾನ್ ಏರ್‌ಲೈನ್ಸ್‌ಗೆ ಸೇರಿದ ವಿಮಾನವು ಟೋಕಿಯೋದಿಂದ ಒಸಾಕಾಗೆ ತೆರಳುವಾಗ ಕುಸಿದು ಬಿದ್ದಿತು. ವಿಮಾನದಲ್ಲಿ 524 ಜನರು ಪ್ರಯಾಣಿಸುತ್ತಿದ್ದರೆ, ಅದರಲ್ಲಿ 520 ಜನರು ಮೃತಪಟ್ಟರು. ಇದು ಪೌರ ವಿಮಾನಯಾನ ಇತಿಹಾಸದ ಅತ್ಯಂತ ದಾರುಣ ದುರಂತವಾಗಿದೆ.

1979ರ ಮೇ 25ರಂದು ಅಮೆರಿಕಾದ ಶಿಕಾಗೋದಿಂದ ಲಾಸ್ ಏಂಜಲೀಸ್‌ಗೆ ತೆರಳುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ವಿಮಾನವು ರನ್‌ವೇಯಿಂದ ಆಕಾಶಕ್ಕೆ ಏರಿದ ಕೆಲವೇ ಕ್ಷಣಗಳಲ್ಲಿ ಕುಸಿದು 272 ಜನರು ಮೃತಪಟ್ಟರು.

1978ರ ಜನವರಿ 1ರಂದು ಮುಂಬೈನ ಬಾಂದ್ರಾ ಕರಾವಳಿಯಲ್ಲಿ ಏರ್ ಇಂಡಿಯಾ ವಿಮಾನ ಕುಸಿದು 213 ಜನರು ಮೃತಪಟ್ಟರು.

1988ರ ಅಕ್ಟೋಬರ್ 19ರಂದು ಗುಜರಾತ್‌ನ ಅಹಮದಾಬಾದ್ ಸಮೀಪ ಇಂಡಿಯನ್ ಏರ್‌ಲೈನ್ಸ್ ವಿಮಾನ ಕುಸಿದು 133 ಜನರು ಮೃತಪಟ್ಟರು.

1990ರ ಫೆಬ್ರವರಿಯಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನ ಕುಸಿದ ಘಟನೆಯಲ್ಲಿ 146 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಮೃತಪಟ್ಟರು.

1993ರ ಏಪ್ರಿಲ್‌ನಲ್ಲಿ ಮಹಾರಾಷ್ಟ್ರದ ಔರಂಗಾಬಾದ್ ವಿಮಾನ ನಿಲ್ದಾಣದಿಂದ ಟೇಕ್‌ಆಫ್ ಆಗುವ ವೇಳೆ ಇಂಡಿಯನ್ ಏರ್‌ಲೈನ್ಸ್ ವಿಮಾನವು ರನ್‌ವೇಗೆ ಬಂದ ಟ್ರಕ್‌ಗೆ ಡಿಕ್ಕಿಯಾಗಿ 118 ಪ್ರಯಾಣಿಕರು ಮತ್ತು 55 ಜನರು (ನೆಲದ ಸಿಬ್ಬಂದಿ ಸೇರಿದಂತೆ) ಮೃತಪಟ್ಟರು.

1996ರ ನವೆಂಬರ್ 12ರಂದು ದಿಲ್ಲಿಯಿಂದ ಸೌದಿ ಅರೇಬಿಯಾದ ಧಹ್ರಾನ್‌ಗೆ ತೆರಳುತ್ತಿದ್ದ ಸೌದಿ ವಿಮಾನ ಬೋಯಿಂಗ್ 747 ಮತ್ತು ಕಝಕ್‌ಸ್ತಾನ್‌ನ ಛಿಮ್‌ಕೆಂಟ್‌ನಿಂದ ದಿಲ್ಲಿಗೆ ಬರುತ್ತಿದ್ದ ಕಝಕ್‌ಸ್ತಾನ್ ಏರ್‌ಲೈನ್ಸ್ ಇಲ್ಯೂಷಿನ್ ಖಿಖಿ-76 ವಿಮಾನಗಳು ಹರಿಯಾಣದ ಚರ್ಖಿ ದಾದ್ರಿಯಲ್ಲಿ ಡಿಕ್ಕಿಯಾಗಿ 349 ಜನರು ಮೃತಪಟ್ಟರು. ಇದು ಭಾರತದ ಅತಿದೊಡ್ಡ ವಿಮಾನ ದುರಂತವಾಗಿ ದಾಖಲಾಗಿದೆ.

1998ರ ಜುಲೈನಲ್ಲಿ ಅಲಯನ್ಸ್ ಏರ್ ಫ್ಲೈಟ್ ಬೋಯಿಂಗ್ 737-28ಏ ವಿಮಾನವು ಲ್ಯಾಂಡಿಂಗ್ ಸಮಯದಲ್ಲಿ ನಿಯಂತ್ರಣ ತಪ್ಪಿ ಬಿಹಾರದ ಪಾಟ್ನಾ ವಿಮಾನ ನಿಲ್ದಾಣದ ಸಮೀಪದ ಜನವಸತಿ ಪ್ರದೇಶಕ್ಕೆ ಡಿಕ್ಕಿಯಾಯಿತು. ಈ ಘಟನೆಯಲ್ಲಿ 55 ಪ್ರಯಾಣಿಕರು ಮತ್ತು ಐವರು ಸ್ಥಳೀಯರು ಮೃತಪಟ್ಟರು.

2010ರ ಮೇ ತಿಂಗಳಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ IX-812 ಕುಸಿದು ದೇಶದ ಅತ್ಯಂತ ಭೀಕರ ದುರಂತಗಳಲ್ಲಿ ಒಂದಾಯಿತು. 166 ಪ್ರವಾಸಿ ಭಾರತೀಯರಿದ್ದ ಈ ವಿಮಾನವು ರನ್‌ವೇಯಲ್ಲಿ ಸಕಾಲಕ್ಕೆ ನಿಲ್ಲದೆ ಕಣಿವೆಗೆ ಧುಮುಕಿತು. ಬೆಂಕಿ ಕಾಣಿಸಿಕೊಂಡು 158 ಜನರು ಮೃತಪಟ್ಟರು. ಕೇವಲ 8 ಜನರು ಪ್ರಾಣದೊಂದಿಗೆ ಬದುಕುಳಿದರು.

2020ರ ಆಗಸ್ಟ್‌ನಲ್ಲಿ ಕೊರೊನಾ ಸಾಂಕ್ರಾಮಿಕ ರುದ್ರನರ್ತನವಾಡುತ್ತಿದ್ದ ಸಮಯದಲ್ಲಿ ವಿದೇಶಗಳಲ್ಲಿ ಸಿಲುಕಿದ್ದ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ನಡೆದ ಕಾರ್ಯಾಚರಣೆಯ ಭಾಗವಾಗಿ ಬೋಯಿಂಗ್ 737-800 ವಿಮಾನವು ದುಬೈನಿಂದ ಕೇರಳದ ಕೋಝಿಕೋಡ್‌ಗೆ ತೆರಳಿತು. ಭಾರೀ ಮಳೆಯ ಸಂದರ್ಭದಲ್ಲಿ ವಿಮಾನವು 30 ಅಡಿ ಕಣಿವೆಗೆ ಬಿದ್ದು ಎರಡು ತುಂಡಾಯಿತು. ಈ ದುರಂತದಲ್ಲಿ ಇಬ್ಬರು ಪೈಲಟ್‌ಗಳು ಸೇರಿದಂತೆ 21 ಜನರು ಮೃತಪಟ್ಟರು, 100ಕ್ಕೂ ಅಧಿಕ ಜನರು ಗಾಯಗೊಂಡರು.

AviationAccidents #India #AirIndia #PlaneCrash

You cannot copy content of this page

Exit mobile version