ಜೂನ್ 3ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಐಪಿಎಲ್ ಪ್ರಶಸ್ತಿ ಗೆದ್ದ ವಿಜಯೋತ್ಸವ ಮತ್ತು ಕಾಲ್ತುಳಿತದ ದುರಂತದ ಬೆನ್ನಲ್ಲೇ ನಾಳೆ ಬಿಸಿಸಿಐ ವಿಶೇಷ ಸಭೆ ನಡೆಸಲಿದೆ. ಭಾರತದ ಯಾವುದೇ ಭಾಗದಲ್ಲಿ ಕ್ರಿಕೆಟ್ ವಿಜಯೋತ್ಸವಕ್ಕೆ ಪ್ರತ್ಯೇಕ ಮಾರ್ಗಸೂಚಿ ರಚಿಸುವ ಬಗ್ಗೆ ಈ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೆಂಗಳೂರಿನ ಕಾಲ್ತುಳಿತ ದುರಂತದಲ್ಲಿ 11 ಮಂದಿಯ ಜೀವಹಾನಿ ಮತ್ತು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆಯ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈ ಬಗ್ಗೆ ಗಂಭೀರವಾಗಿ ತಲೆ ಕೆಡಿಸಿಕೊಂಡಿದೆ. ಘಟನೆ ನಂತರ ಭದ್ರತೆ ಮತ್ತು ಗಲಭೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ರೂಪಿಸುವ ತುರ್ತು ಅಗತ್ಯವನ್ನು ಕಾಲ್ತುಳಿತ ಪ್ರಕರಣ ಎತ್ತಿ ತೋರಿದೆ.
ಘಟನೆ ನಂತರ ಬಿಸಿಸಿಐ ತನ್ನ ಪರವಾಗಿ ಈ ಕಾರ್ಯಕ್ರಮದ ಆಯೋಜನೆಗೆ ಯಾವುದೇ ನೇರ ಜವಾಬ್ದಾರಿ ಇಲ್ಲ ಎಂದು ಹೇಳಿದ್ದರೂ, ಘಟನೆಯ ನಿರ್ವಹಣೆಯಲ್ಲಿ ವೈಫಲ್ಯವಿದೆ ಎಂದು ಒಪ್ಪಿಕೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಆರ್ಸಿಬಿ ತಂಡದ ಮಾರ್ಕೆಟಿಂಗ್ ಮುಖ್ಯಸ್ಥರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇದೇ ವೇಳೆ ಆರ್ಸಿಬಿ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದೆ.
ಈ ದುರಂತದ ಹಿನ್ನೆಲೆಯಲ್ಲಿ ಜೂನ್ 14ರಂದು ನಡೆಯಲಿರುವ ಬಿಸಿಸಿಐನ 28ನೇ ಎಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಐಪಿಎಲ್ ವಿಜೇತ ತಂಡಗಳ ವಿಜಯೋತ್ಸವಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ರೂಪಿಸುವ ಬಗ್ಗೆ ಪ್ರಮುಖ ಚರ್ಚೆ ನಡೆಯಲಿದೆ.