ದಿಲ್ಲಿ: ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯೂಇಎಫ್) 2025ರ ವಾರ್ಷಿಕ ಲಿಂಗ ಸಮಾನತೆ ಸೂಚ್ಯಂಕದಲ್ಲಿ ಭಾರತ 131ನೇ ಸ್ಥಾನ ಪಡೆದಿದೆ.
ಹಿಂದಿನ ವರ್ಷಕ್ಕೆ ಹೋಲಿಸಿದರೆ ಭಾರತ ಎರಡು ಸ್ಥಾನಗಳಷ್ಟು ಕೆಳಗಿಳಿದಿದೆ. ಕೇವಲ 64.1% ಲಿಂಗ ಸಮಾನತೆಯೊಂದಿಗೆ ದಕ್ಷಿಣ ಏಷ್ಯಾದಲ್ಲಿ ಕನಿಷ್ಠ ಶ್ರೇಯಾಂಕ ಪಡೆದ ದೇಶಗಳ ಸಾಲಿನಲ್ಲಿ ಭಾರತ ನಿಂತಿದೆ. ಕಳೆದ ವರ್ಷ ಭಾರತ 129ನೇ ಸ್ಥಾನದಲ್ಲಿತ್ತು. ಮಹಿಳೆಯರು ಮತ್ತು ಪುರುಷರ ಆರ್ಥಿಕ ಭಾಗವಹಿಸುವಿಕೆ ಮತ್ತು ಅವಕಾಶಗಳು, ಶೈಕ್ಷಣಿಕ ಸ್ಥಿತಿಗತಿಗಳು, ಆರೋಗ್ಯ ಮತ್ತು ಜೀವನ ಸ್ಥಿತಿಗತಿಗಳು, ರಾಜಕೀಯ ಸಬಲೀಕರಣ ಎಂಬ ನಾಲ್ಕು ಮಾನದಂಡಗಳ ಆಧಾರದ ಮೇಲೆ 148 ದೇಶಗಳಿಗೆ ಡಬ್ಲ್ಯೂಇಎಫ್ ಶ್ರೇಯಾಂಕವನ್ನು ನೀಡಿದೆ.
ಈ ಪಟ್ಟಿಯಲ್ಲಿ ಸತತ 16ನೇ ಬಾರಿಗೆ ಐಸ್‌ಲ್ಯಾಂಡ್ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಫಿನ್‌ಲ್ಯಾಂಡ್ ಮತ್ತು ಮೂರನೇ ಸ್ಥಾನದಲ್ಲಿ ನಾರ್ವೇ ಇದೆ. ಆದರೆ, ಈ ಬಾರಿ ಆಶ್ಚರ್ಯಕರವಾಗಿ ಬಾಂಗ್ಲಾದೇಶ ಒಮ್ಮೆಗೆ 75 ಸ್ಥಾನಗಳಷ್ಟು ಜಿಗಿದು 24ನೇ ಶ್ರೇಯಾಂಕಕ್ಕೆ ಏರಿದೆ. ಕೊನೆಯ 148ನೇ ಸ್ಥಾನದಲ್ಲಿ ಪಾಕಿಸ್ತಾನ ಇದೆ. ಮಾಲ್ಡೀವ್ಸ್ 138, ಶ್ರೀಲಂಕಾ 130, ನೇಪಾಳ 125, ಮತ್ತು ಭೂತಾನ್ 119ನೇ ಸ್ಥಾನದಲ್ಲಿದೆ.
ರಾಜಕೀಯ ಸಬಲೀಕರಣದಲ್ಲಿ ಹಿನ್ನಡೆ
ಭಾರತದ ಆರ್ಥಿಕ ವ್ಯವಸ್ಥೆಯು ಒಟ್ಟಾರೆ +0.3 ಪಾಯಿಂಟ್‌ಗಳಷ್ಟು ಸುಧಾರಣೆ ಕಂಡಿದೆ. ದೇಶದಲ್ಲಿ ಮಹಿಳೆಯರು ಮತ್ತು ಪುರುಷರ ಆರ್ಥಿಕ ಭಾಗವಹಿಸುವಿಕೆ +0.9 ಪಾಯಿಂಟ್‌ಗಳಷ್ಟು ಹೆಚ್ಚಳವಾಗಿ, ಒಟ್ಟಾರೆ 40.7% ಲಿಂಗ ಸಮಾನತೆಯನ್ನು ಸಾಧಿಸಿದೆ ಎಂದು ಡಬ್ಲ್ಯೂಇಎಫ್ ತಿಳಿಸಿದೆ.
ಭಾರತದಲ್ಲಿ ಮಹಿಳೆಯರು ಮತ್ತು ಪುರುಷರ ಆದಾಯದ ಸಮಾನತೆಯು 28.6% ರಿಂದ 29.9%ಕ್ಕೆ ಏರಿಕೆಯಾಗಿದೆ. ಆದರೆ, ವಿವಿಧ ಉದ್ಯೋಗ ಕಾರ್ಯಕಲಾಪಗಳಲ್ಲಿ ಮಹಿಳೆಯರು ಮತ್ತು ಪುರುಷರ ಭಾಗವಹಿಸುವಿಕೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಮತ್ತು ಹಿಂದಿನ ವರ್ಷದಂತೆ 45.9% ರಲ್ಲೇ ಮುಂದುವರೆದಿದೆ.
ಶಿಕ್ಷಣದ ಸಮಾನತೆಯಲ್ಲಿ ಭಾರತವು 97.1% ರಷ್ಟು ಗರಿಷ್ಠ ಮಟ್ಟವನ್ನು ತಲುಪಿದೆ. ಜನನದ ಸಮಯದಲ್ಲಿ ಲಿಂಗ ಅನುಪಾತವು ಸ್ವಲ್ಪ ಸುಧಾರಣೆ ಕಂಡಿದೆ. 2025ರಲ್ಲಿ ಭಾರತದ ಸಂಸತ್‌ನಲ್ಲಿ ಮಹಿಳೆಯರ ಪ್ರಾತಿನಿಧ್ಯವು 14.7% ರಿಂದ 13.8%ಕ್ಕೆ ಇಳಿದಿದೆ ಎಂದು ಡಬ್ಲ್ಯೂಇಎಫ್ ತಿಳಿಸಿದೆ, ಕಳೆದ ಎರಡು ವರ್ಷಗಳಿಂದ ಈ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿಲ್ಲ. ಅಲ್ಲದೆ, ಸಚಿವ ಸ್ಥಾನಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವು 6.5% ರಿಂದ 5.6%ಕ್ಕೆ ಕುಸಿದಿದೆ ಎಂದು ವರದಿಯಾಗಿದೆ.
ಲಿಂಗ ಸಮಾನತೆಗೆ ಇನ್ನೂ 123 ವರ್ಷ!
ಪ್ರಸ್ತುತ, ವಿಶ್ವಾದ್ಯಂತ ಸರಾಸರಿಯಾಗಿ 68.8% ಲಿಂಗ ಅಸಮಾನತೆ ಇದೆ ಎಂದು ಡಬ್ಲ್ಯೂಇಎಫ್ ವರದಿ ತಿಳಿಸಿದೆ. ಪ್ರಸ್ತುತ ಗಣಾಂಕಗಳ ಪ್ರಕಾರ, ವಿಶ್ವದ ದೇಶಗಳಲ್ಲಿ ಪೂರ್ಣ ಪ್ರಮಾಣದ ಲಿಂಗ ಸಮಾನತೆಯನ್ನು ಸಾಧಿಸಲು ಇನ್ನೂ 123 ವರ್ಷಗಳು ಬೇಕಾಗಬಹುದು ಎಂದು ಡಬ್ಲ್ಯೂಇಎಫ್ ಅಂದಾಜಿಸಿದೆ.