ಕರ್ನಾಟಕದ ಕರಾವಳಿ ಭಾಗದಲ್ಲಿ ನಿರಂತರವಾಗಿ ನಡೆಯುತ್ತಿರುವ ಕೋಮು ಸಂಘರ್ಷ ಹತ್ತಿಕ್ಕಲು ಕರ್ನಾಟಕ ಸರ್ಕಾರ ರಚಿಸಿರುವ ವಿಶೇಷ ಕಾರ್ಯಪಡೆ ಅಧಿಕೃತವಾಗಿ ಕಾರ್ಯ ನಿರ್ವಹಿಸಲು ಇಂದಿನಿಂದ ಚಾಲನೆ ಸಿಗಲಿದೆ. ಮಂಗಳೂರಿನಲ್ಲಿ ಗೃಹ ಇಲಾಖೆ ಆಯೋಜಿಸಿರುವ ವಿಶೇಷ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಇದಕ್ಕೆ ಚಾಲನೆ ನೀಡಲಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್, ವಿಧಾನಸಭಾ ಅಧ್ಯಕ್ಷ ಯುಟಿ ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಪ್ರಮುಖ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಈ ವಿಶೇಷ ಕಾರ್ಯಪಡೆಯ ಮುಖ್ಯಸ್ಥರಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಕಾರ್ಯ ನಿರ್ವಹಿಸುವರು. ಡಿವೈಎಸ್‌ಪಿ ಸ್ಥಾನಕ್ಕೆ ಮಂಗಳೂರಿನಲ್ಲಿ ಈ ಹಿಂದಿದ್ದ ಕೆ.ಯು.ಬೆಳ್ಳಿಯಪ್ಪ ಅವರನ್ನು ನಿಯೋಜಿಸಲಾಗಿದೆ.
ಕೋಮುದ್ವೇಷದ ವಿಷಯದ ಮೇಲೆ ನಿಗಾ ವಹಿಸುವುದು, ಮೂಲಭೂತ ಚಟುವಟಿಕೆಗಳ ಬಗ್ಗೆ ನಿಗಾ ವಹಿಸುವುದು, ಜಾಲತಾಣಗಳ ಮೇಲೆ ಸೂಕ್ಷ್ಮ ನಿಗಾ ಇಡುವ ಕೆಲಸವನ್ನೂ ಗುಪ್ತಚರ ವಿಭಾಗದ ಮೂಲಕ ಈ ಕಾರ್ಯಪಡೆ ಮಾಡಲಿದೆ. ಯಾವುದೇ ಸಂದರ್ಭದಲ್ಲೂ ಎದುರಾಗಬಹುದಾದ ಕೋಮು ಸಂಘರ್ಷವನ್ನು ಸ್ಥಳೀಯ ಪೊಲೀಸರ ಸಹಕಾರದಿಂದ ಹತ್ತಿಕ್ಕುವುದು, ಅಹಿತಕರ ಘಟನೆಗಳು ನಡೆದಾಗ ತತ್‌ಕ್ಷಣ ಹಾಜರಾಗಿ ಪರಿಸ್ಥಿತಿ ಹತೋಟಿಗೆ ತರುವುದು, ಕೋಮು ಹಿಂಸಾಚಾರ ಹಾಗೂ ಗಲಭೆಗೆ ಸಂಚು ಹೂಡುವುದನ್ನು ಪ್ರಾರಂಭಿಕ ಹಂತದಲ್ಲೇ ಹತ್ತಿಕ್ಕುವುದರ ಜೊತೆಗೆ ಅಂತಹ ಮಾಸ್ಟರ್ ಮೈಂಡ್ ಗಳ ಚಲನವಲನಗಳ ಮೇಲೂ ಗಂಭೀರವಾಗಿ ನಿಗಾ ಇಡುವುದನ್ನು ಈ ವಿಶೇಷ ಕಾರ್ಯಪಡೆ ಕಾರ್ಯ ನಿರ್ವಹಿಸಲಿದೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಮತ್ತು ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಪಿಐ/ಆರ್‌ಪಿಐ-1, ಪಿಎಸ್‌ಐ/ಆರ್‌ಎಸ್‌ಐ/ಎಸ್‌ಐ-5, ಸಿಎಚ್‌ಸಿ -19, ಸಿಪಿಸಿ/ಎಪಿಸಿ-48 ಮತ್ತು ಅನುಯಾಯಿ 5 ಮಂದಿ ಸೇರಿ ಒಟ್ಟು 78 ಮಂದಿ ಕಾರ್ಯ ನಿರ್ವಹಿಸಲಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಯಪಡೆಯು ತಾತ್ಕಾಲಿಕವಾಗಿ ಮಂಗಳೂರು ನಗರ ವ್ಯಾಪ್ತಿಯ ಅಧೀನದಲ್ಲಿ ಬರಲಿದೆ ಎನ್ನಲಾಗಿದೆ.