ದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್’ (NEET) ಸೇರಿದಂತೆ ದೇಶದ ಪ್ರಮುಖ ಪರೀಕ್ಷೆಗಳ ನಿರ್ವಹಣೆಯಲ್ಲಿ ನಡೆದಿರುವ ಸರಣಿ ಅಕ್ರಮ ಹಾಗೂ ವೈಫಲ್ಯಗಳಿಗೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ತಮ್ಮ ಪದವಿಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ, ಖ್ಯಾತ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಭಾನುವಾರ ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಜೂನ್ 20 ರಿಂದ ಜಂತರ್ ಮಂತರ್‌ನಲ್ಲಿ ನಿರಂತರ ಪ್ರತಿಭಟನೆ ನಡೆಸುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನೇತೃತ್ವದಲ್ಲಿ ಅವರು ಈ ಉಪವಾಸ ದೀಕ್ಷೆಯನ್ನು ಕೈಗೊಂಡಿದ್ದಾರೆ. ಪ್ರತಿಭಟನೆಗೆ ಕೂರುವ ಮುನ್ನ ಸೋನಮ್ ವಾಂಗ್ಚುಕ್ ಅವರು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರೊಂದಿಗೆ ರಾಜ್‌ಘಾಟ್‌ಗೆ ಭೇಟಿ ನೀಡಿ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ಈ ಆಂದೋಲನದಲ್ಲಿ ದೇಶದ ನಾನಾ ಭಾಗಗಳಿಂದ ಬಂದ ನೂರಾರು ಯುವಕರು, ವಿದ್ಯಾರ್ಥಿಗಳು ಮತ್ತು ರೈತರು ಭಾಗವಹಿಸಿ ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ, ಪ್ರತಿಭಟನೆಗೆ ಬೆಂಬಲ ಸೂಚಿಸಲು ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್ ರಾಜ್ಯಗಳಿಂದ ದೆಹಲಿಯತ್ತ ಬರುತ್ತಿದ್ದ ರೈತರನ್ನು ಪೊಲೀಸರು ಗಡಿಯಲ್ಲೇ ತಡೆದು ಅಡ್ಡಿಪಡಿಸಿದ್ದಾರೆ ಎಂದು ಅಭಿಜೀತ್ ದೀಪ್ಕೆ ಅವರು ‘ಎಕ್ಸ್’ (ಟ್ವಿಟ್ಟರ್) ಜಾಲತಾಣದಲ್ಲಿ ಆರೋಪಿಸಿದ್ದಾರೆ. ದೇಶದ ಇಡೀ ಶಿಕ್ಷಣ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ಜವಾಬ್ದಾರಿತನವನ್ನು ತರಬೇಕಿರುವುದು ಇಂದಿನ ಅಗತ್ಯವಾಗಿದ್ದು, ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
