ಜೈಪುರ: ರಾಜ್ಯಸಭಾ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಸೋನಿಯಾ ಗಾಂಧಿ ಅವರು ರಾಜಸ್ಥಾನದಿಂದ ಕಣಕ್ಕೆ ನಿರ್ಧರಿಸಿದ್ದು, ನಾಮಪತ್ರ ಸಲ್ಲಿಸಲು ಸೋನಿಯಾ ಗಾಂಧಿ ಇಂದು ಮುಂಜಾನೆ ಜೈಪುರ ತಲುಪಿದ್ದಾರೆ.
ಸೋನಿಯಾಗಾಂಧಿ ಅವರೊಂದಿಗೆ ಪುತ್ರ ರಾಹುಲ್ ಗಾಂಧಿ ಹಾಗೂ ಪುತ್ರಿ ಪ್ರಿಯಾಂಕ ಗಾಂಧಿ ವಾದ್ರ ಕೂಡ ಇದ್ದರು. ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಮತ್ತಿತರ ನಾಯಕರು ಸೋನಿಯಾರನ್ನು ಸ್ವಾಗತಿಸಿದರು.
ಐದು ಅವಧಿಗೆ ಲೋಕಸಭಾ ಸಂಸದೆಯಾಗಿದ್ದ 77 ವರ್ಷದ ಸೋನಿಯಾ ಗಾಂಧಿ ಇದೇ ಮೊದಲ ಬಾರಿಗೆ ರಾಜ್ಯಸಭೆಗೆ ಸ್ಪರ್ಧಿಸುತ್ತಿದ್ದಾರೆ. ರಾಯ್ ಬರೇಲಿ ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿರುವ ಸೋನಿಯಾ ಅವರು 1999ರಲ್ಲಿ ಮೊದಲ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಿದ್ದರು.
ರಾಜಸ್ಥಾನ, ಹಿಮಾಚಲ ಪ್ರದೇಶ, ಮಧ್ಯಪ್ರದೇಶದ ಕಾಂಗ್ರೆಸ್ ಘಟಕಗಳು, ಮುಖಂಡರು ತಮ್ಮ ರಾಜ್ಯದಿಂದಲೇ ಸ್ಪರ್ಧಿಸಲು ಅವರಿಗೆ ಮನವಿ ಮಾಡಿದ್ದವು. ಈ ಪೈಕಿ ರಾಜಸ್ಥಾನ ಸುರಕ್ಷಿತ ಎಂಬ ತೀರ್ಮಾನಕ್ಕೆ ನಾಯಕರು ಬಂದಿದ್ದರಿಂದ ಕೊನೆಗೆ ಸೋನಿಯಾ ಅವರು ರಾಜಸ್ಥಾನ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. 2019ರ ಸಾರ್ವತ್ರಿಕ ಚುನಾವಣೆಯೇ ನನ್ನ ಕೊನೆಯ ಚುನಾವಣೆ ಎಂದು ಸೋನಿಯಾ ಗಾಂಧಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಫೆಬ್ರುವರಿ 27ರಂದು ಚುನಾವಣೆ ನಡೆಯಲಿದ್ದು ಫೆ.15 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ಇನ್ನೋರ್ವ ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರು ಹಿಮಾಚಲ ಪ್ರದೇಶದಿಂದ ರಾಜ್ಯಸಭಾ ಚುನಾವಣೆಯನ್ನು ಎದುರಿಸಲಿದ್ದಾರೆ.