Monday, June 17, 2024

ಸತ್ಯ | ನ್ಯಾಯ |ಧರ್ಮ

ಸೋಪಾನಪೇಟೆಯ ದೊಡ್ಡಾಸ್ಪತ್ರೆಯಲ್ಲಿ……

(ಈ ವರೆಗೆ…)

ಕೈಗೆ ತಾಯತ ಕಟ್ಟಿಸಿಕೊಂಡು ಮನೆಗೆ ಬಂದ ಲಕ್ಷ್ಮಿ ಅದನ್ನು ತೆಗೆಯುವಂತೆ ದುಂಬಾಲು ಬೀಳುತ್ತಾಳೆ. ಯಾರೂ ತೆಗೆಯದಿದ್ದಾಗ ಮುನಿಸುಗೊಂಡು ಊಟಮಾಡಲು ನಿರಾಕರಿಸಿದ ಆಕೆಯನ್ನು ಒರಟಾಗಿ ಎಬ್ಬಿಸಲು ಹೋದ ಗಿರಿಧರನ ಮುಖಕ್ಕೆ ಬಿಸಿ ಅನ್ನದ ತಟ್ಟೆಯನ್ನು ಎಸೆಯುತ್ತಾಳೆ. ಕೋಪಗೊಂಡ ಆತ ಅಕೆಯ ತಲೆಯ ಮೇಲೆ ಹೊಡೆಯುತ್ತಾನೆ. ಲಕ್ಷ್ಮಿ ಏದುಸಿರು ಬಿಡುತ್ತಾ ಬಿದ್ದುಹೋಗುತ್ತಾಳೆ. ಅಪ್ಪ ಅವ್ವ ದೊಡ್ಡ ಡಾಕ್ಟರ್‌ ಗೆ ತೋರಿಸಲು ಗಾಡಿಯನ್ನು ಸೋಪಾನಪೇಟೆಯತ್ತ ಓಡಿಸುತ್ತಾರೆ. ಆಸ್ಪತ್ರೆಯಲ್ಲಿ ವಿಚಿತ್ರವೊಂದು ನಡೆಯುತ್ತದೆ. ಏನದು? ವಾಣಿ ಸತೀಶ್‌ ಅವರ ತಂತಿ ಮೇಲಣ ಹೆಜ್ಜೆಯ ಒಂಬತ್ತನೇ ಕಂತು ಓದಿ

ಎತ್ತಿನ ಗಾಡಿ ಆಸ್ಪತ್ರೆಯ ಮುಂದೆ ಬಂದು ನಿಂತಿತು. ಅಪ್ಪ ಗಾಡಿಯಿಂದ ಹಸುವನ್ನು ಬಿಚ್ಚಿ ಅಲ್ಲೇ ಇದ್ದ ಒಂದು ಮರಕ್ಕೆ ಕಟ್ಟಿ  ಹುಲ್ಲು ಹಾಕಿದ. “ನೀವಿಬ್ರು ಗಾಡಿಲೇ ಇರಿ ಡಾಕ್ಟ್ರು ಬಂದವ್ರಾ  ನೋಡ್ಕೊಂಡು ಬತ್ತಿನಿ”. ಎಂದು ಹೇಳಿ ಸಿಂಗು ಡಾಕ್ಟರ್ ಕೊಟ್ಟ ಪತ್ರ ಹಿಡಿದು ಹೊರಟ. ಒಳಗೆ ಹೋಗುತ್ತಿದ್ದಂತೆ ಎದುರಾದ ನರ್ಸ್  ಒಬ್ಬಳಿಗೆ ಆ ಪತ್ರ ತೋರಿಸಿ “ಈ ಡಾಕ್ಟ್ರು  ಅವ್ರಾ  ತಾಯಿ” ಎಂದು ಕೇಳಿದ. ಅವಳು ತನ್ನ ಎದುರಿದ್ದ ಕೋಣೆಯ ಕಡೆ ಕೈ ತೋರಿಸಿ ” ಪೂವಯ್ಯ ಡಾಕ್ಟರ್  ಆ ರೂಮಿನಲ್ಲಿದ್ದಾರೆ  ಹೋಗಿ” ಎಂದಳು. 

ಆಗಷ್ಟೇ ದಿನದ ಕಾರ್ಯ ಆರಂಭವಾಗಿದ್ದರಿಂದ  ರೋಗಿಗಳ ಸಂಖ್ಯೆಯು ಅಷ್ಟಾಗಿ ಇರಲಿಲ್ಲವಾಗಿ ಅಪ್ಪ ಸೀದ ಒಳ ಹೋದವನೆ ಡಾಕ್ಟರ್ ಎದುರು ಸಿಂಗು ಡಾಕ್ಟರ್ ಕೊಟ್ಟ ಪತ್ರವನ್ನಿಟ್ಟು,  ಒಂದೇ ಉಸಿರಿಗೆ ತನ್ನ ಮಗಳ ಸಮಸ್ಯೆಯನ್ನೆಲ್ಲಾ ಹೇಳಿಕೊಂಡ. “ಏನಾರ ಮಾಡಿ ನನ್ನ ಮಗಳುನ್ನ ಹುಸಾರ್ ಮಾಡ್ಕೊಡಿ ಸಾ” ಎಂದು ಅಂಗಲಾಚಿದ. ಪೂವಯ್ಯ ಡಾಕ್ಟರ್ ಚೀಟಿಯನ್ನು ಓದಿ ಮುಖ ಅರಳಿಸಿ “ಓ…ಡಾಕ್ಟರ್ ಸಿಂಗ್, ಇವರಿಂದ ನಾನು ಬಹಳ ಕಲಿತಿದ್ದೇನೆ. ಒಂದು ರೀತಿ ಇವರು  ನನಗೆ  ಟೀಚರ್ ಇದ್ದ ಹಾಗೆ. ಸರಿ ಈಗ  ನಿಮ್ಮ ಮಗಳೆಲ್ಲಿ” ಎಂದು ಹೊರಗೆ ಕಣ್ಣಾಡಿಸಿದರು. “ಗಾಡಿಲೇ ಮಲಗವ್ಳೆ ಸಾ ಈಗ ಕರ್ಕೊಂಡು ಬಂದ್ಬುಡ್ತಿನಿ” ಎಂದು ಎದ್ದು ಹೊರಗೆ ಓಡಿದ.  ಲಕ್ಷ್ಮಿ ನಡೆಯುವುದಿರಲಿ ಎದ್ದು ಕೂರಲು ಆಗದಷ್ಟು  ನಿತ್ರಾಣಳಾಗಿ ಹೋಗಿದ್ದಳು. ಅಪ್ಪ ಎತ್ತಿಕೊಳ್ಳಲು ನೋಡಿದ ಆಗಲಿಲ್ಲ. ಕೊನೆಗೆ ವೀಲ್ ಚೇರ್ ತರಿಸಿ ಲಕ್ಷ್ಮಿಯನ್ನು ಒಳಗೆ ಕರೆದುಕೊಂಡು ಹೋಗಲಾಯಿತು. ತಲೆ ಎತ್ತಲು ಶಕ್ತಿ ಇಲ್ಲದಂತೆ ಕುಗ್ಗಿ ಹೋಗಿದ್ದ ಲಕ್ಷ್ಮಿಯನ್ನು  ಪರೀಕ್ಷಿಸಿದ  ಡಾಕ್ಟರ್ ಕೂಡಲೇ ನರ್ಸ್ ಒಬ್ಬಳನ್ನು ಕರೆದು  ಲಕ್ಷ್ಮಿಯನ್ನು ಅಡ್ಮಿಟ್ ಮಾಡಿಕೊಂಡು ಗ್ಲೂಕೋಸ್ ಬಾಟಲಿ ಹಾಕಲು ತಾಕೀತು ಮಾಡಿದರು. 

ಪೂವಯ್ಯ ಡಾಕ್ಟರರ ಮುತುವರ್ಜಿಯಿಂದಾಗಿ ಎರಡು ದಿನಗಳ ಕಾಲ  ತರಾತುರಿಯಿಂದಲೇ ಒಂದರ ಮೇಲೊಂದರಂತೆ ಪರೀಕ್ಷೆ ಗಳು ನಡೆದವು. ಬೇರೆ ಬೇರೆ ವೈದ್ಯರುಗಳು ಬಂದು ನೋಡಿದರು. ಆದರೂ ಲಕ್ಷ್ಮಿಯ ಕಾಯಿಲೆಯನ್ನು ಮಾತ್ರ ಪತ್ತೆ ಹಚ್ಚಲು ಸಾಧ್ಯವಾಗಲೇ ಇಲ್ಲ.  ಎಲ್ಲಾ ರಿಪೋರ್ಟ್ ಗಳಲ್ಲಿಯೂ ನಾರ್ಮಲ್ ಎನ್ನುವುದನ್ನು ಬಿಟ್ಟರೆ ಒಂದು ಸಣ್ಣ ಸಮಸ್ಯೆ ಕೂಡ ಕಂಡು ಬರಲಿಲ್ಲ.  ಆದರೆ ಅವಳ ಆರೋಗ್ಯ ಸ್ಥಿತಿ ಮಾತ್ರ ಕ್ಷಣ ಕ್ಷಣಕ್ಕೂ ಬಿಗಡಾಯಿಸುತ್ತಲೇ ಇತ್ತು. 

ಮೂರನೆಯ ದಿನ ಬಹಳ ನುರಿತ  ಸೀನಿಯರ್ ಡಾಕ್ಟರ್ ಒಬ್ಬರು ಬಂದು ಲಕ್ಷ್ಮಿಯನ್ನು ಕೂಲಂಕಷವಾಗಿ ಪರೀಕ್ಷಿಸಿದರು. ಅವರು ಕುತ್ತಿಗೆ ಬಳಿಯ ನರದಲ್ಲಿ ಏನೋ ಸಮಸ್ಯೆ ಕಾಣುತ್ತಿದೆ ಎಂದು ಹೇಳಿ, ದುಬಾರಿ ಬೆಲೆಯ ಇಂಜೆಕ್ಷನ್ ಮಾತ್ರೆಗಳನ್ನು ಬರೆದು, “ಕೂಡಲೇ ಈ ಟ್ರೀಟ್ ಮೆಂಟ್ ಆರಂಭಿಸಿ ನೋಡೋಣ” ಎಂದು ಹೇಳಿ ಹೋದರು. ಪೂವಯ್ಯ ಡಾಕ್ಟರ್ ಅಪ್ಪ ಅವ್ವನೊಂದಿಗೆ ಹಣದ ಅಂದಾಜು ವೆಚ್ಚವನ್ನು ತಿಳಿಸಿ, ಆದಷ್ಟು ಬೇಗ ಈ ಔಷಧಿಗಳನ್ನು ತೆಗೆದು ಕೊಂಡು ಬನ್ನಿ ಎಂದು ಹೇಳಿ ಔಷಧಿಯ ಚೀಟಿಯನ್ನು ಕೊಟ್ಟು ಹೋದರು. ಡಾಕ್ಟರ್ ಅತ್ತ ಮರೆಯಾದದ್ದೇ ಅವ್ವ ತನ್ನ ಕಿವಿಯಲ್ಲಿದ್ದ ಬೆಂಡೋಲೆಯನ್ನು ಬಿಚ್ಚಿ ಅಪ್ಪನ ಕೈಗಿಟ್ಟು ” ಏನೀ ತಡ ಮಾಡ್ಬ್ಯಾಡಿ ಮಗ ಹುಸಾರಾದ್ರೆ ಸಾಕು. ಇದು ಎಷ್ಟುಕ್ಕೊಯ್ತದೆ  ಕೊಟ್ಟು ಬೇಗ ಡಾಕ್ಟ್ರು ಹೇಳಿರೋ ಔಸ್ತಿ ಮಾತ್ರೆ ತನ್ನಿ” ಎಂದು ಕಳುಹಿಸಿದಳು. 

ಅಪ್ಪ ಸೋಪಾನಪೇಟೆಯ ಚಿನ್ನ ಬೆಳ್ಳಿ ಅಂಗಡಿಗಳನ್ನು ಸುತ್ತಿ, ಜಾಸ್ತಿ ಬೆಲೆ ಸಿಕ್ಕ ಅಂಗಡಿಗೆ ಆ ಓಲೆಯನ್ನು ಮಾರಿ ಡಾಕ್ಟರ್ ಹೇಳಿದ್ದ  ಔಷಧಗಳನ್ನೆಲ್ಲಾ ಕೊಂಡು ತಂದನು. ಲಕ್ಷ್ಮಿಯ ಚಿಕಿತ್ಸಾ ಕಾರ್ಯ ಆರಂಭವಾಯಿತು. ದಿನ ದಿನಕ್ಕೂ ಮಗಳು ಕುಗ್ಗುತ್ತಿರುವುದನ್ನು ನೋಡಲಾಗದ ಅವ್ವ, ಅವಳ ಚಿಂತೆಯಲ್ಲಿಯೇ ಹಸಿವು ಎಂಬುದನ್ನೇ ಮರೆತಳು. ಮೂರು ಹೊತ್ತು ಬಿಟ್ಟ ಕಣ್ಣು ಬಿಟ್ಟಂತೆ ಮಗಳನ್ನು ನೋಡುತ್ತಾ ಕೂತುಬಿಟ್ಟಳು. ಕಣ್ಣಿಗೆ ನಿದ್ರೆ ಅನ್ನುವುದೇ ಹತ್ತದಾಯಿತು. ಕಣ್ಣು ಮುಚ್ಚಿದರೆ ಮಗಳು ಎಲ್ಲಿ ಕಳೆದು ಹೋಗಿ ಬಿಡುವಳೋ ಅನ್ನುವ ಆತಂಕ ಅವಳನ್ನು ಕ್ಷಣ ಕ್ಷಣವೂ ಹೈರಾಣ ಮಾಡತೊಡಗಿತ್ತು.

ಇತ್ತ ಹೊಸ ನಾರಿಪುರಕ್ಕೆ ಹೋಗಿ ಸಿಂಗು ಡಾಕ್ಟರರ ಹತ್ತಿರ ಅಪ್ಪ ಅವ್ವ ಸೋಪಾನಪೇಟೆಯ ದೊಡ್ಡ ಆಸ್ಪತ್ರೆಗೆ ಹೋಗಿರುವ ಮಾಹಿತಿ ತಿಳಿದು ಬಂದಿದ್ದ ಚಂದ್ರಹಾಸ, ಎರಡು ದಿನವಾದರೂ ಅವರು ಬಾರದನ್ನು ಕಂಡು ಆತಂಕಿತನಾದ. ಅಪ್ಪ ಅವ್ವನ ಅನುಪಸ್ಥಿತಿಯಲ್ಲಿ ಇವರ ನಿಗಾ ನೋಡಿಕೊಳ್ಳಲು ಮೇಗಳ ಬೀದಿಯ ತನ್ನ ಮನೆಯಿಂದ ಬಂದು ಹೋಗುತ್ತಿದ್ದ ಅಪ್ಪನ ಮೊದಲ ಹೆಂಡತಿ ದೇವಿರಮ್ಮ, ಚಂದ್ರಹಾಸನಿಗೆ ದುಂಬಾಲು ಬಿದ್ದು, ಲಕ್ಷ್ಮಿಯ ಸ್ಥಿತಿಗತಿಗಳನ್ನು ತಿಳಿದು ಬರಲು  ಸೋಪಾನಪೇಟೆಗೆ ಹೊರಡಿಸಿದಳು. ಸೋಪಾನ ಪೇಟೆಗೆ ಇದ್ದದ್ದು ದಿನದಲ್ಲಿ ಎರಡೇ ಬಸ್ ಆದ್ದರಿಂದ ಚಂದ್ರಹಾಸ ಬೆಳಗ್ಗಿನ ಏಳರ ಬಸ್ಸಿಗೆ ಹೋಗುವುದೆಂದು ನಿರ್ಧರಿಸಿದ. ನಿದ್ದೆ ಪೋತನಾಗಿದ್ದ ಗಿರಿಧರನಿಗೆ ತಾಸಿಗೆ ಮುಂಚೆಯೇ ಹೊರಟು ರೆಡಿಯಾಗಿರ ಬೇಕೆಂದು ತಾಕೀತು ಮಾಡಿದ. ಅವ್ವನ ಮೋರೆ ಕಾಣದೆ ಸದಾ ಬಿಕ್ಕಳಿಸುತ್ತಲೇ ಇರುತ್ತಿದ್ದ ಗಂಗೆ ಅಣ್ಣಂದಿರ ಈ ಮಾತು ಕೇಳಿಸಿ ಕೊಂಡು ನನ್ನನ್ನು ಕರೆದು ಕೊಂಡು ಹೋಗಿ ಎಂದು ಹಠ ಹಿಡಿದು ಕೂತಳು. ಅಣ್ಣಂದಿರ ಯಾವ ಹೊಡೆತ ಬಡಿತಗಳಿಗೂ ಅವಳು ಜಗ್ಗಲಿಲ್ಲ. ಕೊನೆಗೆ ದೊಡ್ಡಮ್ಮ, ಚಂದ್ರಹಾಸ ಮತ್ತು  ಗಿರಿಧರನನ್ನು ಓಲೈಸಿ ಗಂಗೆಯನ್ನು ಅವರೊಂದಿಗೆ ಕಳಿಸಲು ವ್ಯವಸ್ಥೆ ಮಾಡಿದಳು. 

ದೊಡ್ಡಮ್ಮ  ಸೂರ್ಯ ಕಣ್ಣು ಬಿಡುವುದಕ್ಕೂ  ಮುಂಚೆಯೇ, ತನ್ನ ಮನೆಯಿಂದಲೇ ಅಪ್ಪನಿಗೆ ಮತ್ತು ಲಕ್ಷ್ಮಿ ಗೆ ಇಷ್ಟವಾದ ಬಿಸಿಬಿಸಿಯಾದ ರೊಟ್ಟಿ, ಮೆಣಸಿನ ಕಾಯಿ ಗೊಡ್ಡುಗಾರ ಅರೆದು, ಅದರ ಮೇಲೊಂದಿಷ್ಟು ಬೆಣ್ಣೆಯನ್ನು ಹಾಕಿ ಬುತ್ತಿ ಕಟ್ಟಿ ಹೊಸ ನಾರಿಪುರದವರೆಗೂ ಹೋಗಿ ಮೂವರನ್ನು ಬಸ್ ಹತ್ತಿಸಿ ಬಂದಳು.

ಸಾವಿರಾರು ರೂಪಾಯಿ ಬೆಲೆಯ ಔಷಧಿ ಮಾತ್ರೆಗಳಿಗೆ ಒಡ್ಡಿ ಕೊಂಡ ಲಕ್ಷ್ಮಿಯ ದೇಹ ಒಂದು ಘಳಿಗೆ ಇದ್ದಂತೆ ಇನ್ನೊಂದು ಘಳಿಗೆ ಇರುತ್ತಿರಲಿಲ್ಲ. ಒಮ್ಮೆ ಗೆಲುವಾದಂತೆ ಕಂಡರು ಇನ್ನೊಮ್ಮೆ ಸುರುಟಿ ಕೊಂಡು ಬಿದ್ದಿರುತ್ತಿದ್ದಳು. ಅನ್ನ ನೀರು ಎಂಬುದು ದೂರವೇ ಉಳಿಯಿತು. ಮಗಳು ಏನು ತಿನ್ನದೆ ಹೀಗೆ ನಿತ್ರಾಣಳಾಗಿ ಬಿದ್ದಿರುವುದನ್ನು ನೋಡಲಾರದ ಅಪ್ಪ, ಆ ದಿನ ಮಧ್ಯಾಹ್ನ ಪಕ್ಕದಲ್ಲಿಯೇ ಇದ್ದ ಹೋಟೆಲಿನಿಂದ  ಬಿಸಿ ಬಾದಾಮಿ ಹಾಲು ತಂದು ಅವಳ  ಕೈ ಕಾಲು ಹಿಡಿದು ಕುಡಿವಂತೆ ಒತ್ತಾಯ ಮಾಡಿದ. ಅಪ್ಪನ ಹಿಂಸೆ ತಾಳಲಾರದೆ ಕಿರಿಕಿರಿ ಗೊಂಡ ಲಕ್ಷ್ಮಿ, ಕೋಪೋದ್ರಿಕ್ತಳಾಗಿ ಬಿರುಸಾಗಿ ಎದ್ದು ಅಪ್ಪನ ಕೈಯಲ್ಲಿದ್ದ ಹಾಲಿನ ಲೋಟ ಕಸಿದುಕೊಂಡು ಅವನ ಮುಖಕ್ಕೆ ರಪ್ಪೆಂದು ಎರಚಿದಳು. ಮಗಳ ಈ ಅನಿರೀಕ್ಷಿತ ನಡೆಯಿಂದ ತತ್ತರಿಸಿದ ಅಪ್ಪ ತನ್ನ ಪಂಚೆಯ ತುದಿಯಿಂದ ಉರಿಯುವ ಮುಖವನ್ನು ಒರೆಸಿಕೊಳ್ಳುತ್ತಾ, ಸಂಕೋಚದಿಂದ ತನ್ನ ಸುತ್ತಾ ಒಮ್ಮೆ ಕಣ್ಣಾಡಿಸಿದ. ಪುಣ್ಯಕ್ಕೆ ಸುತ್ತಾ ಮುತ್ತಾ ಯಾರು ಇರಲಿಲ್ಲ.  ಇಷ್ಟು ದಿನ ಲಕ್ಷ್ಮಿಯ ಪಕ್ಕದ ಹಾಸಿಗೆಯಲ್ಲಿಯೇ ಇದ್ದ ಒಬ್ಬ ರೋಗಿಯು, ಆ ದಿನ ಡಿಸ್ಚಾರ್ಜ್ ಆಗಿ ಹೋಗಿದ್ದ. ಹಾಗಾಗಿ ಆ ಕೊಣೆಯಲ್ಲಿ ಲಕ್ಷ್ಮಿ ಒಬ್ಬಳೇ ಉಳಿದಿದ್ದಳು‌.

ಅಪ್ಪ ತನ್ನ ಮುದ್ದಿನ ಮಗಳು ಹೀಗೆ ಮಾಡಿದ್ದನ್ನು ಕಂಡು ದುಃಖ ಗೊಂಡ. ಕಣ್ಣಿನಲ್ಲಿ ನೀರು ತುಳುಕಿಸುತ್ತಾ  “ಯಾಕ್ ಮಗ ಹಿಂಗ್ ಮಾಡ್ಬುಟ್ಟೆ..?  ನನ್ನ ಮಖಕ್ಕೆ ಬೆಂಕಿ ಇಟ್ಟಂಗೆ  ಉರಿತಾಯ್ತಲವ್ವ” ಎಂದ. ಕೂಡಲೇ ಎಚ್ಚರಗೊಂಡ ಲಕ್ಷ್ಮಿ ” ಅಯ್ಯೋ.. ಹಂಗ್ ಮಾಡ್ಬುಟ್ನಾ ನಂಗೆ ಗೊತ್ತೇ ಆಗ್ಲಿಲ್ವಲ್ರಪ್ಪ ನಾನೊಬ್ಳು ಹಾಳಾದೋಳು” ಎಂದು ಹೇಳಿ  ತನ್ನ ಸೆರಗಿನ ತುದಿಯಿಂದ ಅಪ್ಪನ ಮುಖವನ್ನು ವರೆಸಿದಳು. ಅಲ್ಲದೆ ಅವ್ವ ಎರಡು ದಿನದಿಂದ ಊಟ ಮಾಡದೆ ಅನ್ನವನ್ನೆಲ್ಲಾ ಕಿಟಕಿಯಿಂದ ಹೊರ ಸುರಿಯುತ್ತಿರುವ  ಗುಟ್ಟನ್ನು ಅಪ್ಪನಿಗೆ ತಿಳಿಸಿದಳು. ಅಪ್ಪ ಆಶ್ಚರ್ಯದಿಂದ ಮಗಳ ಮುಖ ನೋಡಿದ. ಲಕ್ಷ್ಮಿ ಅಪ್ಪನನ್ನು ದುರು ಗುಟ್ಟಿ ನೋಡುತ್ತಾ “ನಂಗೆ ಹೆಂಗ್ ಗೊತ್ತಾಯ್ತು ಅಂತ ನೋಡ್ತಿದ್ದೀಯ.  ನನಗೆ ಕೂತ ಜಾಗದಲ್ಲೇ ಎಲ್ಲಾ ಗೊತ್ತಾಯ್ತದೆ ಕಂತೆ  ಎಲ್ಲಾನೂ ಕೆದ್ಕಕ್ಕೋಗ್ ಬ್ಯಾಡ. ನಾನು ಹೇಳ್ದಂಗೆ ಹೋಗಿ ನಿನ್ನ ಹೆಂಡ್ತಿ ಮುಂದ್ಗಡೆನೆ ಕೂತ್ಕೊಂಡು ಏನಾರು ತಿನ್ಸು”  ಎಂದಳು. ಎಂದೂ ಏಕವಚನದಲ್ಲಿ ಮಾತಾಡದಿದ್ದ ಮಗಳ ಮಾತಿನ ವರಸೆ ಕಂಡು ಅಪ್ಪನಿಗೆ ಒಂದು ರೀತಿಯ ಆತಂಕವಾಯಿತು. ಅವನಿಗೆ ಅಲ್ಲಿ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ, ಯಾರೋ ಕುತ್ತಿಗೆ ಹಿಡಿದು ದಬ್ಬುತ್ತಿದ್ದಾರೆ ಎನ್ನುವ ಅನುಭವವಾಗ ತೊಡಗಿತು. ಕೂಡಲೇ ವಾರ್ಡಿನ ಹೊರಗಿನ ವೆರಾಂಡದಲ್ಲಿ ಮಲಗಿದ್ದ ಅವ್ವನ ಬಳಿಗೆ ಬಂದ.

ರಾತ್ರಿ ಪೂರ ಮಗಳನ್ನು ಕಾಯುವುದರಲ್ಲೇ ನಿದ್ದೆ ಗೆಟ್ಟಿದ್ದ ಅವ್ವ, ಆಗಷ್ಟೆ ಚಾಪೆಯ ಮೇಲೆ ಬಂದು ಉರುಳಿ ಕೊಂಡಿದ್ದಳು. ಹೊರ ಬಂದ ಅಪ್ಪ, ಅವ್ವನನ್ನು ಎಬ್ಬಿಸಿ,  ಒಳಗೆ ಲಕ್ಷ್ಮಿ  ನಡೆದು ಕೊಂಡ  ರೀತಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದುದಲ್ಲದೆ, ಅವಳು ಹೇಳಿದಂತೆ  ಊಟ ತಿಂಡಿ ಹೊರ ಹಾಕುತ್ತಿರುವುದು ನಿಜವೇ ಎಂದು ಕೇಳಿದ. ಯಾರಿಗೂ ಗೊತ್ತಾಗದಂತೆ ತಾನು ಊಟವನ್ನು ಕಿಟಕಿಯ ಹೊರಗೆ ಹಾಕುತ್ತಿರುವುದನ್ನು  ಮಿಸುಕಾಟವೇ ಇಲ್ಲದ ಮಗಳು, ನೋಡಿದವಳಂತೆ ವರ್ಣಿಸಿರುವುದು, ಅಪ್ಪನ ಮೇಲೆ  ಹಾಲು ಎರಚಿ ಏಕವಚನದಲ್ಲಿ ಮಾತನಾಡಿರುವುದು, ಈ ಎಲ್ಲವೂ ಅವ್ವನ ಒಳಗೆ ಹೊಗೆ ಆಡುತ್ತಿದ್ದ ಅನುಮಾನವನ್ನು ಇನ್ನಷ್ಟು ಗಟ್ಟಿ ಗೊಳಿಸಿತು.

 ರಾತ್ರಿ ಡಾಕ್ಟರ್ ಮನೆಗೆ ಹಿಂದಿರುಗುವ ಮುನ್ನ ಲಕ್ಷ್ಮಿಯನ್ನು ಮಾತಾಡಿಸಿ ಕೊಂಡು ಹೋಗಲು ಅವಳಿದ್ದ ಕೊಠಡಿಗೆ ಬಂದರು. ಮಗಳ ತಲೆಯ ಬಳಿ ಒಬ್ಬರು ಕಾಲಿನ ಬುಡದಲ್ಲಿ ಒಬ್ಬರು ಕುಳಿತಿದ್ದ ಅಪ್ಪ, ಅವ್ವನಲ್ಲಿ  “ನಾನು ಅವಳಲ್ಲಿ ಕೆಲವು ಪ್ರಶ್ನೆಗಳನ್ನು ಕೇಳುವುದಿದೆ ನೀವು ಸ್ವಲ್ಪ ಹೊತ್ತು ಹೊರಗಿರಿ” ಎಂದು ಕಳುಹಿಸಿದರು. ಬೆಳಗ್ಗಿನಿಂದ ಒಂದೇ ಸಮನೆ ಉರಿದ ಬಿಸಿಲಿನಿಂದಾಗಿ ವಾರ್ಡ್ ಕಾದು ಧಗೆ ತುಂಬಿತ್ತು.  ಡಾಕ್ಟರ್‌ ಗೆ ವಿಪರೀತ ಸೆಕೆ ಎನ್ನಿಸಿ ಫ್ಯಾನ್ ಹಾಕಲು  ಸ್ವಿಚ್ ಕಡೆ ನೋಡಿದರು. ಗೋಡೆಯ ಕಡೆ ಮುಖ ತಿರುಗಿಸಿ ಮಲಗಿದ್ದ ಲಕ್ಷ್ಮಿ, ಅವರ ಮನಸ್ಸನ್ನು ಓದಿದವಳಂತೆ “ಡೋಂಟ್ ಪುಟ್ ಫ್ಯಾನ್ ಡಾಕ್ಟರ್. ನನಗೆ ಗಾಳಿ ಆಗಲ್ಲ ಅಂತ ನಿಮಗೆ ಗೊತ್ತಿಲ್ವ” ಎಂದು  ಗಡುಸಾಗಿ ಹೇಳಿದಳು. ಡಾಕ್ಟರ್ ಆಶ್ಚರ್ಯದಿಂದ  ಬೆನ್ನು ತಿರುಗಿಸಿ ಮಲಗಿದ್ದ ಲಕ್ಷ್ಮಿಯನ್ನೇ ದಿಟ್ಟಿಸಿದರು. “ಏನ್ ಸರ್ ನನ್ನ ಮನಸ್ಸಿನಲ್ಲಿರೋದು ಇವಳಿಗೆ ಹೇಗೆ ಗೊತ್ತಾಯ್ತು ಅಂತ ಯೋಚಿಸ್ತಿದ್ದೀರ ಅಲ್ವ” ಎಂದು ಜೋರಾಗಿಯೇ ನಕ್ಕಳು. ಡಾಕ್ಟರ್ ತುಸು ಸಾವರಿಸಿ ಕೊಂಡು ಪ್ರಯತ್ನ ಪೂರ್ವಕವಾಗಿ  ಮುಖದ ಮೇಲೆ ನಗು ತಂದು ಕೊಂಡು  “ಯೆಸ್ ಯೆಸ್….  ಹೌ ಆರ್ ಯು ಲಕ್ಷ್ಮಿ . ಕೆನ್ ಯು ವೇಕ್ ಅಪ್ ” ಎಂದು ಕೇಳಿದರು. ” ಓ.. ಶೂರ್ ಡಾಕ್ಟರ್” ಎಂದು ತನಗೆ ಏನು ಆಗೇ ಇಲ್ಲ ಎಂಬಂತೆ  ಆರಾಮವಾಗಿ ಎದ್ದು ಡಾಕ್ಟರಿನ ಸರಿ ಸಮಕ್ಕೆ ಕಾಲು ಮೇಲೆ ಕಾಲು ಹಾಕಿ ಕೂತಳು. ಡಾಕ್ಟರ್ ಮಾತು‌ ಎತ್ತಿಕೊಳ್ಳಲು ಪೀಠಿಗೆ ಎಂಬಂತೆ ” ನಿನಗೆ ಇಂಗ್ಲೀಷ್ ಮಾತಾಡೋಕು ಬರುತ್ತಾ. ವೆರಿ ಗುಡ್” ಎಂದರು. ” ನಂದು ಎಲೆಕ್ಟ್ರಿಕ್ ಆಫೀಸ್ನಲ್ಲಿ ಮೂವತ್ತು ವರ್ಷದ ಸರ್ವಿಸ್‌ ಸರ್. ಎಂತೆಂತ ಜನ್ರು ಜೊತೆ ಇಂಟ್ರ್ಯಕ್ಟ ಮಾಡಿರ್ತಿವಿ ಅಷ್ಟು ಇಂಗ್ಲೀಷ್ ಬರ್ಲಿಲ್ಲ ಅಂದ್ರೆ ಹೇಗೆ ಹೇಳಿ” ಎಂದಳು. ಡಾಕ್ಟರ್ ಗೆ ಅವಳ ಮಾತಿನ ತಳ ಬುಡ ಅರ್ಥವಾಗಲಿಲ್ಲ. ಗಲಿಬಿಲಿ ಗೊಂಡ ಡಾಕ್ಟರ್ “ಲಕ್ಷ್ಮಿ ಆರ್ ಯು ಓಕೆ” ಎಂದು ಕೇಳಿದರು. “ಓ..ಐ ಯಮ್ ಫೈನ್ ಸರ್. ನೋಡಿ ಹೇಗ್ ಗುಂಡ್ರು ಗೂಳಿ ಇದ್ದಂಗಿದ್ದೀನಿ” ಎಂದು ಲಕ್ಷ್ಮಿ ತನ್ನ ಮೈ ಕುಣಿಸಿದಳು. ಹೀಗೆ ಸುಮಾರು ಇಪ್ಪತ್ತು ನಿಮಿಷಗಳ ಕಾಲ ಡಾಕ್ಟರ್  ಕೇಳಿದ ಪ್ರಶ್ನೆಗಳಿಗೆಲ್ಲಾ ಕೆಲವೊಮ್ಮೆ ಅಸಂಬದ್ಧವಾಗಿ ಕೆಲವೊಮ್ಮೆ ತಾರ್ಕಿಕವಾಗಿ ಇಂಗ್ಲಿಷ್ ಕನ್ನಡ ಎಂಬುದರ ಹಂಗು ತೊರೆದು ಪ್ರತಿಕ್ರಿಯಿಸಿದಳು. ಹೀಗೆ ಅರಳು ಹುರಿದಂತೆ ಮಾತಾಡುತ್ತಲೇ ಇದ್ದವಳು ಇದ್ದಕ್ಕಿದ್ದಂತೆ ನಿಶಕ್ತಳಾದಳು. ದೇಹದ ತ್ರಾಣವೆಲ್ಲ ಬಸಿದು ಹೋದಂತೆ ಡಾಕ್ಟರರ ಕೈ ಹಿಡಿದು, “ಡಾಕ್ಟ್ರೇ ನಮ್ಮಪ್ಪ ಅವ್ವುಂತವ ಸುಮ್ನೆ ದುಡ್ಡು ಯಾಕ್ ಖರ್ಚು ಮಾಡುಸ್ತೀರಾ? ಇದು ಆಸ್ಪತ್ರೆ ಕಾಯಿಲೆನೂ ಅಲ್ಲ, ಹುಸಾರಾಗೋ ಕಾಯಿಲೆನೂ ಅಲ್ಲ. ಮೊದ್ಲು ನಮ್ಮುನ್ನ ಮನೆಗೆ ಕಳ್ಸ್ಬುಡಿ” ಎಂದು ಹೇಳಿ ನರಳುತ್ತಾ ಹಾಸಿಗೆ ಮೇಲೆ ಮುದುಡಿ ಮಲಗಿದಳು. ಯಾಕೋ ಅವಳು ಹೇಳಿದ “ಇದು ಆಸ್ಪತ್ರೆ ಕಾಯಿಲೆ ಅಲ್ಲ”, ಎನ್ನುವ ಮಾತು ಡಾಕ್ಟರರ ಮನಸ್ಸನ್ನು ನಾಟಿ ಕ್ಷಣ ಎದೆಯನ್ನು ನಡುಗಿಸಿತು. ಮುದುಡಿ ಮಲಗಿದ್ದವಳನ್ನು ನೆಟ್ಟ ನೋಟದಿಂದ  ಸೂಕ್ಷ್ಮವಾಗಿ ಗಮನಿಸಿದರು. ಮನಸ್ಸಿನಲ್ಲೇ, ಎಷ್ಟು ಮುದ್ದಾದ ಹುಡುಗಿ ಎಂದು ಕೊಳ್ಳುತ್ತಿದ್ದಂತೆ ಅವಳ ರವಿಕೆಯ ತೋಳ ಮರೆಯಲ್ಲಿ ಕಟ್ಟಿದ್ದ ಹಸಿರು ತಾಯತ ಕಣ್ಣಿಗೆ ಬಿತ್ತು…ಒಮ್ಮೆ ಅವಳ ತಲೆ ಸವರಿ ಏನೋ ನಿರ್ಧರಿಸಿದವರಂತೆ ನಿಟ್ಟುಸಿರು ಬಿಟ್ಟು ಎದ್ದು ಹೊರ ಬಂದರು.

(ಮುಂದುವರಿಯುವುದು…)

ವಾಣಿ ಸತೀಶ್‌

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Previous article
Next article
‘ಡ್ರೈವ್ ಮೈ ಕಾರ್’ – ಒಂದು  ಸಿನಿಮಾ ಪಯಣ

Related Articles

ಇತ್ತೀಚಿನ ಸುದ್ದಿಗಳು