ಐರೋಪ್ಯ ರಾಷ್ಟ್ರವಾದ ಸ್ಪೇನ್ ನೈಸರ್ಗಿಕ ವಿಕೋಪಗಳಿಂದ ನಲುಗಿದೆ. ಭಾರೀ ಮಳೆ ಮತ್ತು ಪ್ರವಾಹಗಳಿಂದಾಗಿ ಹಿಂದೆಂದೂ ಕಾಣದ ರೀತಿಯಲ್ಲಿ ದೇಶದ ಪೂರ್ವ ಮತ್ತು ದಕ್ಷಿಣ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿವೆ.
ಈ ಪ್ರಾಂತ್ಯದ ಅಷ್ಟೂ ಹಳ್ಳಿಗಳು ಮತ್ತು ಪಟ್ಟಣಗಳು ನೀರಿನಲ್ಲಿ ಮುಳುಗಿವೆ. ಪ್ರಮುಖ ನಗರಗಳು ನದಿಗಳ ಪ್ರವಾಹ ಉಕ್ಕಿ ಬಂದಿದೆ. ಪ್ರವಾಹದ ರಭಸಕ್ಕೆ ಕಾರುಗಳು ಮತ್ತು ದೊಡ್ಡ ಕಂಟೈನರ್‌ಗಳು ಸಹ ಕೊಚ್ಚಿ ಹೋಗಿವೆ.
ಗುರುವಾರದವರೆಗೆ ಈ ಪ್ರವಾಹದಿಂದಾಗಿ ಸತ್ತವರ ಸಂಖ್ಯೆ 158 ಕ್ಕೆ ಏರಿದೆ. ವೆಲೆನ್ಸಿಯಾ ಒಂದರಲ್ಲೇ 155 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ ಪ್ರವಾಹದಲ್ಲಿ ಹತ್ತಾರು ಮಂದಿ ಕಾಣೆಯಾಗಿದ್ದಾರೆ. ವೇಲೆನ್ಸಿಯಾ ಪ್ರದೇಶವು ವಿಶೇಷವಾಗಿ ಪ್ರವಾಹದಿಂದ ಪ್ರಭಾವಿತವಾಗಿದೆ. ಇಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಪ್ರದೇಶಗಳಲ್ಲಿ ಎಂಟು ಗಂಟೆಗಳಲ್ಲಿ ವಾರ್ಷಿಕ ಮಳೆ ಬೀಳುತ್ತಿದೆ ಎಂದು ಹೇಳಲಾಗುತ್ತಿದೆ.
ಬೃಹತ್ ಮರಗಳು, ವಿದ್ಯುತ್ ತಂತಿಗಳು ಮತ್ತು ಗೃಹೋಪಯೋಗಿ ಉಪಕರಣಗಳು ಸಹ ಕೊಚ್ಚಿಹೋಗಿವೆ. ರಸ್ತೆಗಳು ಕೂಡ ಗುರುತಿಸಲಾಗದಷ್ಟು ಬದಲಾಗಿವೆ. ಸದ್ಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ.