Home ಅಂಕಣ ದೀಪಾವಳಿ ಸಿಹಿತಿಂಡಿಗಳು ವಿಷಕಾರಿಯಾಗಲು FSSAI ಕಾರಣವೇ?

ದೀಪಾವಳಿ ಸಿಹಿತಿಂಡಿಗಳು ವಿಷಕಾರಿಯಾಗಲು FSSAI ಕಾರಣವೇ?

0

ಬೆಂಗಳೂರು: ತಿರುಪತಿ ದೇವಸ್ಥಾನದ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಿರುವ ತುಪ್ಪ ಬಳಸಿರುವುದು ದೇಶದಾದ್ಯಂತ ಸುದ್ದಿಯಾಗಿತ್ತು. ಅದೊಂದು ಮತೀಯ ಚರ್ಚೆಯಾಯಿತೇ ವಿನಃ ಕಲಬೆರಕೆಯ ಬಗೆಗಿನ ಚರ್ಚೆಯಾಗಲಿಲ್ಲ. ಯಾರು ಕೂಡ ತುಪ್ಪದಲ್ಲಿ ಈ ಪ್ರಮಾಣದ ಕಲಬೆರಕೆಯಾದಾಗ ರಾಷ್ಟ್ರೀಯ ಆಹಾರ ಸುರಕ್ಷತೆ ನಿಯಂತ್ರಕ, FSSAI ಏನು ಮಾಡುತ್ತಿತ್ತು ಎಂದು ಕೇಳಲಿಲ್ಲ.

ಆಹಾರ ಕಲಬೆರಕೆಯನ್ನು ತಡೆಗಟ್ಟುವುದು ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜವಬ್ದಾರಿಯಾಗಿದೆ. ಆದರೆ ತನ್ನ ಈ ಕೆಲಸದಲ್ಲಿ FSSAI ಪದೇ ಪದೇ ವಿಫಲವಾಗಿದೆ.

ಇದು ರಾಜ್ಯ ಸರ್ಕಾರಗಳ ಗಮನದಲ್ಲೂ ಇದೆ. ಉತ್ತರ ಪ್ರದೇಶವು  ಮಾನವ ತ್ಯಾಜ್ಯ ಆಹಾರದಲ್ಲಿ ಬೆರೆಯುವುದನ್ನು ತಪ್ಪಿಸಲು ವಿಶೇಷ ಕಾನೂನನ್ನು ಜಾರಿಗೆ ತಂದಿತು. ಇಂದು ರಾಜ್ಯ 2024 ರಲ್ಲಿ ಆಹಾರ ನೈರ್ಮಲ್ಯ 101 ಅನ್ನು ಜಾರಿಗೊಳಿಸಲು ವಿಶೇಷ ಕಾನೂನನ್ನು ತಂದಿದೆ ಎಂದರೆ ಅದೇ ಕೆಲಸ ಮಾಡಬೇಕಾಗಿದ್ದ FSSAI ಏನು ಮಾಡುತ್ತಿದೆ?

ಯುಪಿಯ ಅಲಿಘರ್‌ನಲ್ಲಿ ಆಹಾರ ತಪಾಸಣೆ ತಂಡವು ಹಿಟ್ಟಿನಲ್ಲಿ 400 ಕೆಜಿ ಕಲ್ಲಿನ ಪುಡಿಯನ್ನು ಬೆರೆಸಿರುವುದನ್ನು ಪತ್ತೆಹಚ್ಚಿದ ಸುದ್ದಿ  ವರದಿಯಾಗಿತ್ತು. ಗಣಿ ಮತ್ತು ಕಲ್ಲು ಸಂಸ್ಕರಣಾ ಕಾರ್ಖಾನೆಗಳ ತ್ಯಾಜ್ಯವಾದ ಕಲ್ಲಿನ ಪುಡಿಯಲ್ಲಿ ವಿಷಕಾರಿ ಅಂಶಗಳೂ ಇರುತ್ತವೆ. ಇದು ಹೊಟ್ಟೆನೋವು, ಕ್ಯಾನ್ಸರ್‌ಗೆ ಕಾರಣವಾಗಬಹುದು.

ಆದರೆ ಇದು ಕೇವಲ ಕಲ್ಲಿನ ಪುಡಿಯ ಕಥೆ ಮಾತ್ರವಲ್ಲ, ನಮ್ಮ ಆಹಾರದಲ್ಲಿ  ಯೂರಿಯಾ  ಮತ್ತು ರಾಸಾಯನಿಕ ಬಣ್ಣಗಳನ್ನೂ ಹಲವು ವರ್ಷಗಳಿಂದ ಕಲಬೆರಕೆ ಮಾಡಲಾಗುತ್ತಿದೆ. ಸರ್ಕಾರಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹಾಗಾಗಿ ಕಲಬೆರಕೆಯ ಪ್ರಮಾಣ ದೇಶದಲ್ಲಿ ಹೆಚ್ಚುತ್ತಲೇ ಇದೆ.

ನಾವು ನಿತ್ಯ ಹಾಲನ್ನು ಬಳಸುತ್ತೇವೆ. ಸುಲಭವಾಗಿ ಕಲಬೆರಕೆಯಾಗುವ ಉತ್ಪನ್ನ ಹಾಲು. ಈ ಹಾಲಿನಿಂದ ತಯಾರಿಸಿದ ತುಪ್ಪ, ಸಿಹಿತಿಂಡಿಗಳಂತ ಉತ್ಪನ್ನಗಳು ಎಷ್ಟು ಸುರಕ್ಷಿತವಾಗಿರಬಹುದು? ದುರಾಸೆ ಮತ್ತು ಆರ್ಥಿಕ ಕಾರಣಗಳಿಗೆ ವ್ಯಾಪಾರಿಗಳು, ಹೈನುಗಾರಿಕೆ ಮಾಡುವವರು ಹಾಲಿನಲ್ಲಿ ಯೂರಿಯಾ ಬೆರೆಸುತ್ತಿದ್ದಾರೆ. ಪಂಜಾಬ್ ,  ಗುಜರಾತ್ ,  ಒಡಿಶಾ ,  ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಹಾಲು ಹೆಚ್ಚು ಕಲಬೆರಕೆಯಾಗಿದೆ. ಅಲ್ಲಿನ ಸರ್ಕಾರಗಳು ಇದನ್ನು ತಡೆಯುವಲ್ಲಿ ಸರ್ಕಾರಗಳು ವಿಫಲವಾಗಿವೆ. ಹಾಲಿನ ಉತ್ಪನ್ನಗಳಲ್ಲಿ ಆಗುತ್ತಿರುವ ಹಾರ್ಮೋನ್ ಓವರ್-ಲೋಡ್ ಭಾರತದ ಪ್ರಮುಖ ಸಮಸ್ಯೆಗಳಲ್ಲಿ ಒಂದು.

ದೀಪಾವಳಿಯ ಸಮಯದಲ್ಲಿ ಜನರು ಹೆಚ್ಚೆಚ್ಚು ಸಿಹಿತಿಂಡಿಗಳನ್ನು ಖರೀದಿಸುತ್ತಾರೆ. ಇವುಗಳಿಗಿರುವ ಬೇಡಿಕೆ ಹೆಚ್ಚಿದಂತೆ ಕಲಬೆರಕೆಯೂ ಹೆಚ್ಚಾಗಿದೆ. ಮೋದಿಯವರ ಗುಜರಾತ್‌ನಲ್ಲೇ ಕಳೆದ 15 ದಿನಗಳಲ್ಲಿ ಬರೋಬ್ಬರಿ 6.3 ಕೋಟಿ ಮೌಲ್ಯದ ಕಲುಷಿತ ಆಹಾರ ವಶಪಡಿಸಿಕೊಳ್ಳಲಾಗಿದೆ. ಇನ್ನು ಉಳಿದ ರಾಜ್ಯಗಳಲ್ಲಿ ಆಗುತ್ತಿರುವ ದೀಪಾವಳಿ ಸಿಹಿತಿಂಡಿಗಳ ಕಲಬೆರಕೆಯ ಪ್ರಮಾಣ ಎಷ್ಟಿರಬಹುದು, ಊಹಿಸಿ.

ರಸ್ತೆ ಬದಿಯ ಅಸಂಘಟಿತ ವಲಯ ಆಹಾರ ಉತ್ಪಾದನೆಯಲ್ಲಿ ನಡೆಯುತ್ತಿರುವ ಕಲಬೆರಕೆ ದೊಡ್ಡ ಕಾರ್ಪೊರೇಟ್‌ಗಳಲ್ಲೂ ನಡೆಯುತ್ತಿದೆ. ನೆಸ್ಲೆಯು ಮಿತಿಮೀರಿ ಸೀಸ ಬೆರೆಸಿದ ಮ್ಯಾಗಿಯನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ವರದಿಯಾಗಿತ್ತು. 2019 ರಲ್ಲಿ ನಡೆದ ಈ ಪ್ರಕರಣದಲ್ಲಿ ಮ್ಯಾಗಿ ಸೇವಿಸಿದ ಲಕ್ಷಾಂತರ ಭಾರತೀಯರಿಗೆ ಪರಿಹಾರ ನೀಡಲಾಗಿದೆಯೇ? ಮಕ್ಕಳ ನರ ಸಂಬಂಧಿ ಆರೋಗ್ಯದ ಮೇಲೆ ಈ ಸೀಸ ದುಷ್ಪರಿಣಾಮ ಬೀರಿದೆ. ಇವರಿಗೆ ಯಾರು ಪರಿಹಾರ ನೀಡಿದ್ದಾರೆ?

ಇತ್ತೀಚೆಗಷ್ಟೇ ಸುಮಾರು 800 ಕೆಜಿ ನಕಲಿ ಟೊಮೆಟೊ ಸಾಸ್  ವಶಪಡಿಸಿಕೊಳ್ಳಲಾಗಿತ್ತು. ಈ ನಕಲಿ ಸಾಸ್‌ನಲ್ಲಿ ಫಾರ್ಮಾಲಿನ್, ಸಿಂಥೆಟಿಕ್ ಬಣ್ಣ ಏಜೆಂಟ್‌ಗಳು, ಆರೊರೂಟ್ ಪೌಡರ್ ಇತ್ಯಾದಿಗಳು ಪತ್ತೆಯಾಗಿದ್ದವು. ಹೆಚ್ಚಿನ ಟೊಮೆಟೊ ಸಾಸ್ ಅನ್ನು ದೊಡ್ಡ ಮತ್ತು ಮಧ್ಯಮ ಪ್ರಮಾಣದ ಕಾರ್ಖಾನೆಗಳಲ್ಲಿ ತಯಾರಿಸಲಾಗುತ್ತದೆ. ಇವೆಲ್ಲವೂ ಎಫ್‌ಎಸ್‌ಎಸ್‌ಎಐ ಅಡಿಯಲ್ಲಿ ನಿಯಂತ್ರಿಸಲ್ಪಡುತ್ತವೆ. ಆದರೂ ಇವು ಕಲಬೆರಕೆ ಮಾಡಿ ಸಾಸ್‌ ಮಾಡುತ್ತಿರುವಾಗ FSSAI ಏನು ಮಾಡುತ್ತಿತ್ತು?

ಮಸಾಲೆ ಪದಾರ್ಥದಲ್ಲಿ ನಡೆಯುತ್ತಿರುವ ಕಲಬೆರಕೆಯ ಪ್ರಮಾಣವನ್ನು ನೋಡುವಾ FSSAI ನಡೆಸಿದ ಎಲ್ಲಾ ಪರೀಕ್ಷೆಗಳೂ ವಿಫಲವಾಗಿವೆ ಎಂಬುದು ಸ್ಪಷ್ಟವಾಗಿ ಕಾಣುತ್ತಿವೆ. ಮನೆ ಬಳಕೆಯ  ಮೆಣಸಿನ ಪುಡಿ ,  ಅರಿಶಿನ ,  ಕೊತ್ತಂಬರಿ  ಪುಡಿ ಇತ್ಯಾದಿಗಳು ಎಥಿಲೀನ್ ಆಕ್ಸೈಡ್‌ನಂತಹ ಕ್ಯಾನ್ಸರ್ ಕಾರಕ ವಸ್ತುಗಳನ್ನು ಹೊಂದಿವೆ. ಯುರೋಪಿಯನ್‌ ಯೂನಿಯನ್ ಭಾರತದ ಮೆಣಸಿನ ಪುಡಿ ಮತ್ತು ಕಾಳುಮೆಣಸಿನ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ. MDH  ಮತ್ತು  ಎವರೆಸ್ಟ್‌ನಂತಹ ದೊಡ್ಡ ಬ್ರ್ಯಾಂಡ್‌ಗಳು ಕೂಡ ಕ್ಯಾನ್ಸರ್ ಕಾರಕ ಪದಾರ್ಥಗಳನ್ನು ಮಿಶ್ರಣ ಮಾಡಿವೆ. ಅಮೇರಿಕಾ, ಯುರೋಪಿಯನ್‌ ಯೂನಿಯನ್ ಮತ್ತು ಇತರ ಅಭಿವೃದ್ಧಿ ಹೊಂದಿದ ದೇಶಗಳು ಪ್ರತಿ ವರ್ಷ ಭಾರತೀಯ ಮಸಾಲೆಗಳನ್ನು ವಿಷಕಾರಿ ಎಂದು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸುತ್ತಿವೆ.

ಆದರೆ ಕೇಂದ್ರ ಸರ್ಕಾರವಾಗಲೀ,FSSAIಯಾಗಲೀ ತಪ್ಪಿತಸ್ಥರನ್ನು ಶಿಕ್ಷಿಸಿ, ಭಾರತೀಯರ ಆರೋಗ್ಯ ಕಾಪಾಡಲು ಹಿಂಜರಿದಿವೆ. ದಿನನಿತ್ಯ ಬಳಸುವ ಮಸಾಲೆಗಳಲ್ಲಿ ಕಲಬೆರಕೆಯಾಗುತ್ತಿದೆ ಎಂದರೆ ದಿನನಿತ್ಯ ಭಾರತೀಯರು ವಿಷ ಸೇವನೆ ಮಾಡುತ್ತಿದ್ದಾರೆ ಎಂದೇ ಅರ್ಥ.

FSSAI ಯ ವಿಜ್ಞಾನಿಗಳು ಕುಲಾಂತರಿ (GM) ಕೃಷಿ ಉತ್ಪನ್ನಗಳಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದರು. FSSAI   ನಮ್ಮ ಎಲ್ಲಾ ಆಹಾರ ಮತ್ತು ಸಸ್ಯಜನ್ಯ ಎಣ್ಣೆಗಳಲ್ಲಿ GM ಹತ್ತಿಬೀಜದ ಎಣ್ಣೆಯನ್ನು ಮಿಶ್ರಣ ಮಾಡಲು ಅನುಮತಿ ನೀಡಿದೆ. ಇವರು GM ಹತ್ತಿಬೀಜದ ಎಣ್ಣೆಯನ್ನು ನೈಸರ್ಗಿಕ ಹತ್ತಿಬೀಜದ ಎಣ್ಣೆಯಂತೆಯೇ ಪರಿಗಣಿಸುತ್ತಾರೆ.

ಭಾರತವು GM ಆಹಾರ ಬೆಳೆಗಳಿಗೆ ಅನುಮತಿ ನೀಡಿದ್ದರೂ GMO – genetically modified organism ಗಳಿಗೆ ಎಣ್ಣೆಯ ಮೂಲಕ ನಮ್ಮ ದೇಹವನ್ನು ಸುಲಭವಾಗಿ ಪ್ರವೇಶಿಸವಂತಾಗುತ್ತದೆ. ಇದಲ್ಲದೇ, FSSAI ಈ ಬಗ್ಗೆ ಉತ್ಪನ್ನದ ಮೇಲೆ ನಿಜವಾದ ಲೇಬಲ್‌ ಹಾಕಲು ಒತ್ತಾಯಿಸುವ ಬದಲು ಜನರಿಗೆ ವಂಚನೆ ಮಾಡುತ್ತಿದೆ. ಜನರಿಗೆ ತಮ್ಮ ಆಹಾರದಲ್ಲಿ GM ಅಂಶಗಳು ಇವೆಯೇ ಎಂಬ ಬಗ್ಗೆ ಮಾಹಿತಿಯೇ ಇಲ್ಲ. ಅವರಿಗೆ ಅದನ್ನು ತಿಳಿದುಕೊಳ್ಳುವ ಹಕ್ಕಿದೆ, ಆದರೆ FSSAI ಅವರ ಕಣ್ಣಿಗೆ ಮಣ್ಣೆರಚುತ್ತಿದೆ.

ಯುರೋಪಿನಂತಹ ಅಭಿವೃದ್ಧಿ ಹೊಂದಿದ ದೇಶಗಳು GM ಹತ್ತಿಬೀಜದ ಎಣ್ಣೆ ತಮ್ಮ ಆಹಾರದಲ್ಲಿ ಸೇರುವುದನ್ನು ನಿಷೇಧಿಸಿವೆ. ಯುರೋಪಿಯನ್‌ ಯೂನಿಯನ್‌ GM ಉತ್ಪನ್ನಗಳ ವಿರುದ್ಧ ಕಾನೂನುಗಳನ್ನು ತಂದಿದೆ. ಒಂದು ವೇಳೆ GM ಹತ್ತಿಬೀಜದ ಎಣ್ಣೆ ಬಳಸಿದರೆ ಅದನ್ನು ಉತ್ಪನ್ನದ ಕವರ್‌ನಲ್ಲಿ ಕಡ್ಡಾಯವಾಗಿ ಉಲ್ಲೇಖಿಸಬೇಕು.

ಆದರೆ ಭಾರತದಲ್ಲಿ FSSAI ಕುಲಾಂತರಿ ಉತ್ಪನ್ನಗಳ ಕಂಪನಿಗಳ ತಾಳಕ್ಕೆ ಕುಣಿಯುತ್ತಿದೆ. ಕಲಾಂತರಿ ಉತ್ಪನ್ನಗಳಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಘಂಟಾಘೋಷವಾಗಿ ಹೇಳುತ್ತಿದೆ. ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಬಿಟಿ ಹತ್ತಿಯ ಜೈವಿಕ ಸುರಕ್ಷತೆ ದಾಖಲೆಗಳನ್ನು ವಿಶ್ಲೇಷಿಸಿದರೆ, ಅವು ಅಮೇರಿಕಾದ ಕೃಷಿ ರಾಸಾಯನಿಕ ಮತ್ತು ಕೃಷಿ ಜೈವಿಕ ತಂತ್ರಜ್ಞಾನ ನಿಗಮವಾದ ಮೊನ್ಸಾಂಟೊದ ಡೇಟಾವನ್ನು ಆಧರಿಸಿವೆ ಮತ್ತು ಈ ಸುರಕ್ಷತೆಯ ಡೇಟಾವನ್ನು ಮೊನ್ಸಾಂಟೊ ಒದಗಿಸಿದೆ. ಆದರೆ FSSAI ಸ್ವತಂತ್ರವಾಗಿ ಬಿಟಿ ಉತ್ಪನ್ನಗಳ ಜೈವಿಕ ಸುರಕ್ಷತೆಯನ್ನು ಪರಿಶೀಲಿಸಲು ಯಾವುದೇ ಪರೀಕ್ಷೆಗಳನ್ನು ನಡೆಸಿಲ್ಲ.

ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಪ್ರಾಣಿಜನ್ಯ ಕೊಬ್ಬು ಬಳಸಿದ್ದಾರೆ ಎಂಬುದು ಈ ದೇಶದಲ್ಲಿ ಮತೀಯ ರಾಜಕಾರಣದ ಸಮಸ್ಯೆಯಾಗಿ ಚರ್ಚೆಯಾಗಿದೆಯೇ ವಿನಃ ಇದನ್ನು ದೇಶವಾಸಿಗಳಾಗಲೀ, ಕೇಂದ್ರ-ರಾಜ್ಯ ಸರ್ಕಾರಗಳಾಗಲೀ, FSSAI ಯಾಗಲೀ ಆರೋಗ್ಯ ಬಿಕ್ಕಟ್ಟು ಎಂದು ಪರಿಗಣಿಸದೇ ಇರುವುದು ದುರಂತ.

You cannot copy content of this page

Exit mobile version