Home ಅಂಕಣ ದ್ವೇಷವನ್ನು ದ್ವೇಷಿಸೋಣ

ದ್ವೇಷವನ್ನು ದ್ವೇಷಿಸೋಣ

0

ಹಿಂದೆಲ್ಲ ಹಬ್ಬಗಳೆಂದರೆ ಊರಿಗೆಲ್ಲ ಸಂಭ್ರಮ. ಆದರೆ ಈಗ ಹಬ್ಬಗಳು ಬಂದಾಗ ಒಂದು ರೀತಿಯ ಭಯ. ಇಡೀ ಊರಿನಲ್ಲಿ ನಿಷೇಧಾಜ್ಞೆ ಜಾರಿ, ಪೊಲೀಸರ ಸರ್ಪಗಾವಲು…ಮುಂದೆ ಓದಿ ಶ್ರೀನಿ ಕಾಲಂ

ಆ ಮುಖಗಳನ್ನು ಕಂಡರೆ ಪ್ರೀತಿ ಹುಟ್ಟದು. ಕಣ್ಣುಗಳಲ್ಲಿ ದ್ವೇಷ, ರೋಷ, ನಡೆಗಳಲ್ಲಿ ಒಂದು ತೆರನ ಒರಟುತನ, ಅಹಂಕಾರ. ಸರಿಸುಮಾರು ಮುವತ್ತರ ಆಚೀಚಿನ ಹರೆಯದ ಈ ಯುವಕರನ್ನು ಅವರ ಹಣೆ, ಉಡುಗೆ ಮತ್ತು ಶಾಲಿನಿಂದಲೇ ಅವರು ಯಾವ ಸಂಘಟನೆಗೆ, ಸಿದ್ಧಾಂತಕ್ಕೆ ಸೇರಿದವರು ಎಂಬುದನ್ನು ಗುರುತಿಸಬಹುದು. ಪವಿತ್ರ ಹಬ್ಬದ ದಿನಗಳಲ್ಲಿಯೂ ತಾವು ಇಷ್ಟಪಡದ ಮತೀಯರ ವಿರುದ್ಧ ಏನೋ ಅಭಿಯಾನದ ಅಪವಿತ್ರ ಕೆಲಸಕ್ಕೆ ಹೊರಟಿದ್ದಾರೆ. ಬೀದಿಯಲ್ಲಿ ತಿರುಗಾಡುತ್ತಾ ಎದುರು ಸಿಕ್ಕವರಿಗೆ ಕರಪತ್ರ ಹಂಚುತ್ತಾ ನಿರ್ದಿಷ್ಟ ಸಮುದಾಯದಿಂದ ಇಂತಿಂಥ ವಸ್ತು ಖರೀದಿಸಬೇಡಿ ಎಂದು ಆಗ್ರಹಿಸುತ್ತಿದ್ದಾರೆ. ಅಂಗಡಿಗಳಿಗೆ ನುಗ್ಗಿ ಇಂತಿಂಥ ವಸ್ತುಗಳನ್ನು ಮಾರ ಕೂಡದು ಎಂದು ಧಮಕಿ ಹಾಕುತ್ತಿದ್ದಾರೆ.

ಇರುವುದು ಹತ್ತೋ ಹದಿನೈದೋ ಮಂದಿ. ಆದರೆ ಬೆಂಕಿ ಆರಿಸಬೇಕಾದ ಸುದ್ದಿವಾಹಿನಿಗಳು ಲಕ್ಷಾಂತರ ಮಂದಿ ಅಭಿಯಾನ ನಡೆಸುತ್ತಿದ್ದಾರೇನೋ ಎಂಬಂತೆ ವೈಭವೀಕರಿಸಿ, ಇಲ್ಲದ ಬೆಂಕಿಯನ್ನು ಹಚ್ಚಲು ಯತ್ನಿಸುತ್ತಿವೆ. ‘ಧರ್ಮ ದಂಗಲ್ ಮತ್ತೆ ಶುರುವಾಗಿಯೇ ಬಿಡುತ್ತಾ? ರಾಜ್ಯದಾದ್ಯಂತ ಕಿಚ್ಚು ಹಚ್ಚಿಯೇ ಬಿಡುತ್ತಾ?’ ಎಂದು ಇಲ್ಲದ ಬೆಂಕಿಯನ್ನು ಸೃಷ್ಟಿಸಿ ಅದಕ್ಕೆ ಗಾಳಿ ಹಾಕುತ್ತಿವೆ.

ಹಿಂದೂ ಹಬ್ಬಗಳನ್ನು ಹಾಳುಗೆಡಹುತ್ತಿರುವವರು ಯಾರು?

ಇದೇ ಹೊತ್ತಿನಲ್ಲಿ ಹಿರಿಯ ಪತ್ರಕರ್ತೆ ರೋಹಿಣಿ ಸಿಂಗ್ ಅವರು ಈ ದೃಶ್ಯವನ್ನು ನೋಡಿ ಟ್ವಿಟರ್ ನಲ್ಲಿ ಮಾಡಿರುವ ಟ್ವೀಟ್ ನನ್ನ ಮುಂದಿದೆ. ಅದರಲ್ಲಿ ಆಕೆ Every Hindu Festival is ruined by hate mongers who are focused more on spewing venom than celebrating (ಈ ದ್ವೇಷಾರಾಧಕರು ಪ್ರತಿಯೊಂದು ಹಿಂದೂ ಹಬ್ಬಗಳನ್ನು ಹಾಳು ಮಾಡುತ್ತಿದ್ದಾರೆ. ಇವರಿಗೆ ಹಬ್ಬವನ್ನು ಸಂಭ್ರಮಿಸುವುದಕ್ಕಿಂತಲೂ ವಿಷ ಕಾರುವತ್ತಲೇ ಗಮನ) ಎಂದು ಹೇಳುತ್ತಾಳೆ. ನಿಜಕ್ಕೂ ಯೋಚಿಸತಕ್ಕ ಮಾತು. ಹಿಂದೂ ಹಬ್ಬಗಳನ್ನು ಹಾಳುಗೆಡಹುತ್ತಿರುವವರು ಅವಮಾನಿಸುತ್ತಿರುವವರು ಯಾರು?

ಭಾರತಕ್ಕೆ ಬಂದ ವಿಶ್ವ ಸಂಸ್ಥೆಯ ಸೆಕ್ರೆಟರಿ ಜನರಲ್ ‘ಮಾನವ ಹಕ್ಕುಗಳನ್ನು ಗೌರವಿಸಿ, ಅಲ್ಪಸಂಖ್ಯಾತರನ್ನು ಗೌರವಿಸಿ, ದ್ವೇಷ ಭಾಷಣವನ್ನು ಖಂಡಿಸಿ, ಮಾಧ್ಯಮ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಖಾತರಿಪಡಿಸಿ’ ಎಂದು ಭಾರತ ಸರಕಾರಕ್ಕೆ ಕರೆ ಕೊಡುತ್ತಿದ್ದಾರೆ.

ಇದರ ಬೆನ್ನಿಗೇ ಸುಪ್ರೀಂ ಕೋರ್ಟ್ ನಲ್ಲಿ ದ್ವೇಷ ಭಾಷಣ ಕುರಿತ ವಿಚಾರಣೆ ನಡೆಯುತ್ತಿದೆ. ದೇಶದಾದ್ಯಂತ ಕಾನೂನಿನ ಯಾವುದೇ ಭಯವಿಲ್ಲದೆ ನಡೆಯುತ್ತಿರುವ ಈ ಅಪರಾಧ ಕೃತ್ಯದ ಬಗ್ಗೆ ನ್ಯಾಯಮೂರ್ತಿಗಳು ಕೂಡಾ ಸಿಟ್ಟುಗೊಂಡಿದ್ದಾರೆ, ಆತಂಕಿತರಾಗಿದ್ದಾರೆ. ‘ಇದು 21 ನೇ ಶತಮಾನ. ಮತಧರ್ಮದ ಹೆಸರಿನಲ್ಲಿ ನಾವು ಎಲ್ಲಿಗೆ ಬಂದು ತಲಪಿದ್ದೇವೆ? ವಿಭಿನ್ನ ಮತಧರ್ಮಗಳ ಸಮುದಾಯಗಳು ಸೌಹಾರ್ದದಿಂದ ಬದುಕುವ ಅವಕಾಶ ಇಲ್ಲದೆ ಸಹೋದರ ಭಾವ ಇರುವುದು ಸಾಧ್ಯವಿಲ್ಲ, ದ್ವೇಷ ಭಾಷಣಕೋರರ ಮೇಲೆ ಮುಲಾಜಿಲ್ಲದೆ ಕಾನೂನುಕ್ರಮ ಜರುಗಿಸಿ, ದ್ವೇಷ ಭಾಷಣ ಸಂದರ್ಭದಲ್ಲಿ ಸುಮೋಟೋ ಕಾನೂನು ಕ್ರಮ ಜರುಗಿಸಿ, ಇಲ್ಲವಾದರೆ ನ್ಯಾಯಾಂಗ ನಿಂದನೆ ಎಂದು ಪರಿಗಣಿಸುತ್ತೇವೆ’ ಎಂದು ನ್ಯಾಯಾಲಯ ಎಚ್ಚರಿಸುತ್ತದೆ.

ಹಬ್ಬ ಎಂದರೆ..?

ಮತ್ತೆ ಮೊದಲಿನ ವಿಷಯಕ್ಕೆ ಬರೋಣ. ಹಬ್ಬ ಎಂದರೆ ಏನು? ಹಬ್ಬ ಎಂದರೆ ಸಂತಸ, ಸಂಭ್ರಮ, ಸಡಗರ. ‘ಹಬ್ಬ ಮಾಡೋಣ’, ‘ಕಣ್ಣಿಗೆ ಹಬ್ಬ’ ಎಂಬ ನುಡಿಗಟ್ಟುಗಳೇ ನಮ್ಮಲ್ಲಿ ಚಾಲ್ತಿಯಲ್ಲಿ ಇವೆಯಲ್ಲ? ಹಬ್ಬದಲ್ಲಿ ದ್ವೇಷಕ್ಕೆ, ಹಿಂಸೆಗೆ ಜಾಗ ಇಲ್ಲ.

ನಾವು ನಿಜಕ್ಕೂ ಭಾಗ್ಯಶಾಲಿಗಳು. ಬಹು ಸಂಸ್ಕೃತಿಯ ನಮ್ಮ ದೇಶದಲ್ಲಿ ಹಬ್ಬಗಳೂ ಬಹು ಸಂಖ್ಯೆಯಲ್ಲಿವೆ. ದೇಶ ಒಂದಿಲ್ಲೊಂದು ಹಬ್ಬದ ಸಡಗರದಲ್ಲಿಯೇ ಇರುತ್ತದೆ. ಇಲ್ಲಿ ಹಿಂದೂಗಳ ದೀಪಾವಳಿ, ಕ್ರೈಸ್ತರ ಕ್ರಿಸ್ ಮಸ್, ಮುಸ್ಲಿಮರ ರಮ್ಜಾನ್, ಮೊಹರಂ ಹಬ್ಬವನ್ನು ಎಲ್ಲರೂ ಒಟ್ಟಾಗಿಯೇ ಆಚರಿಸುತ್ತಾರೆ. ಹಬ್ಬದ ಅಡುಗೆಯೊಂದಿಗೆ ಎಲ್ಲರೂ ಸಂತಸ ಹಂಚಿಕೊಳ್ಳುತ್ತಾರೆ. ನೀನೂ ಬದುಕು ಇತರರನ್ನೂ ಬದುಕಬಿಡು ಎಂಬ ತತ್ತ್ವದ ಮೇಲೆ ಹೀಗೆ ಶತ ಶತಮಾನಗಳಿಂದ ನಾವು ಬದುಕಿದ್ದೇವೆ.

ನನ್ನ ಬಾಲ್ಯದ ದಿನಗಳಲ್ಲಿ, ನಮ್ಮ ಊರಿನ ಬಹುದೊಡ್ಡ ಸಾರ್ವಜನಿಕ ಹಬ್ಬ ಅಂದರೆ ಊರ ದೇವರ ತೇರಿನ ಜಾತ್ರೆ. ಹಿಂದೂಗಳ ದೇವರ ಜಾತ್ರೆಯಾದರೂ ಅಲ್ಲಿ ಎಲ್ಲ ಧರ್ಮದವರೂ ಸೇರುತ್ತಿದ್ದರು. ಜಾತ್ರೆಯೆಂದ ಮೇಲೆ ಅಂಗಡಿಗಳೂ ಇರಲೇಬೇಕಲ್ಲ? ಅಲ್ಲಿ ಯಾವ ಧರ್ಮದವರಿಗೂ ನಿಷೇಧ ಇರಲಿಲ್ಲ. ಆದ ಸಂಪಾದನೆಯಲ್ಲಿ ಎಲ್ಲರೂ ತಪ್ಪದೆ ದೇವರ ಹುಂಡಿಗೂ ಒಂದಿಷ್ಟು ಹಣ ಹಾಕುತ್ತಿದ್ದರು. ಅಲ್ಲಿ ಸಾಮಾನು ಖರೀದಿಸಲು ಬಂದವರೂ ನೀನು ಯಾವ ಧರ್ಮದವ ಎಂದು ಅಂಗಡಿಯವನನ್ನು ಕೇಳಿದ ಉದಾಹರಣೆಯೇ ಇಲ್ಲ. ಹಿಂದೂ ದೇವರ ಜಾತ್ರೆಯಲ್ಲಿ ಮುಸ್ಲಿಮರಿಗೆ ಪಾತ್ರ ಇದ್ದೇ ಇರುತ್ತಿತ್ತು. ಜಾತ್ರೆಯ ಸಮಯ ಕದೋಣಿ ಎಂಬ ಸಿಡಿಮದ್ದು ಸಿಡಿಸಿ ಜಾತ್ರೆ ಶುರುವಾದುದನ್ನು ಸುತ್ತಲ ಗ್ರಾಮಗಳಿಗೆ ಸಾರುತ್ತಿದ್ದುದು ಇದೇ ಸಾಬರು.

ಕ್ರಿಸ್ಮಸ್ ಬಂತೆಂದರೆ ಕ್ರೈಸ್ತರ ಮನೆಗಳಿಗೆ ಹಿಂದೂಗಳಿಗೆ ಆಹ್ವಾನವಿರುತ್ತಿತ್ತು. ಪೋರ್ಕ್, ಇಡ್ಲಿ, ಒಂದಿಷ್ಟು ಮದ್ಯ ಹೀಗೆ ಅಲ್ಲಿನ ಸಂತಸ ನಮ್ಮದೂ ಆಗಿರುತ್ತಿತ್ತು. ರಮ್ಜಾನ್ ಕೂಡಾ ಹಾಗೆಯೇ. ನಮಗೆ ಅಲ್ಲಿ ಬಿರಿಯಾನಿ ಸಹಿತವಾದ ಪ್ರೀತಿಯ ಆತಿಥ್ಯ ಇದ್ದೇ ಇರುತ್ತಿತ್ತು. ದರ್ಗಾಗಳ ಉರೂಸ್ ಎಂದರೆ ಊರಿಗೇ ಸಂಭ್ರಮ. ಇನ್ನು ಕ್ರೈಸ್ತರ ಸಾಂತ್ ಮಾರಿಗೆ ನಾವು ಹೋಗುತ್ತಿದ್ದುದು ಮಾತ್ರವಲ್ಲ, ನಾವೇ ಅಲ್ಲಿ ಅಂಗಡಿ ಹಾಕುವುದೂ ಇತ್ತು. ಇಲ್ಲಿ ಯಾರೂ ಇನ್ನೊಬ್ಬರನ್ನು ದ್ವೇಷಿಸಿ, ತಿರಸ್ಕರಿಸಿ, ದೂರ ಇರಿಸಿ ಬದುಕಿದ ಉದಾಹರಣೆಯಿಲ್ಲ.

ಹಬ್ಬಗಳ ಸ್ಥಿತಿ ಈಗ ಹೀಗಾಗಿದೆ…

ಅಂತಹ ಹಬ್ಬಗಳ ಸ್ಥಿತಿ ಈಗ ಏನಾಗಿದೆ? ಇಂತಿಂತಹ ಧರ್ಮದವರಿಗೆ ಇಲ್ಲಿ ಪ್ರವೇಶ ಇಲ್ಲ, ಇಲ್ಲಿ ಅಂಗಡಿ ಹಾಕುವಂತಿಲ್ಲ ಎಂದು ಬಹಿರಂಗವಾಗಿಯೇ ಬ್ಯಾನರ್ ಹಾಕಲಾಗುತ್ತಿದೆ! ಹಬ್ಬಗಳಲ್ಲಿ ಬಾಹ್ಯ ಆಡಂಬರಗಳು, ಪ್ರದರ್ಶನಪ್ರಿಯತೆಯ ಪೈಪೊಟಿ ಹೆಚ್ಚಿದೆ. ಶಾಂತ, ಪವಿತ್ರ ಸ್ಥಳದಲ್ಲಿ ಇರಬೇಕಾದ ದೇವರನ್ನು ಜನಜಂಗುಳಿಯ ಬೀದಿಗೆ ತಂದು ಗಲಾಟೆ ಮಾಡಲಾಗುತ್ತಿದೆ. ಹಬ್ಬ ಎಂದರೆ ಸಂತಸ, ನಿರಾತಂಕದ ಸ್ಥಿತಿ ಇರಬೇಕಿತ್ತು. ಆದರೆ ಈಗ ಹಬ್ಬಗಳು ಬಂದಾಗ ಒಂದು ರೀತಿಯ ಭಯ. ಇಡೀ ಊರಿನಲ್ಲಿ ನಿಷೇಧಾಜ್ಞೆ ಜಾರಿ, ಪೊಲೀಸರ ಸರ್ಪಗಾವಲು. ಮೆರವಣಿಗೆ ನಡೆಯಲೇಬೇಕು ಮತ್ತು ಆ ಮೆರವಣಿಗೆ ಇನ್ನೊಂದು ಮತೀಯರ ಪ್ರಾರ್ಥನಾ ಮಂದಿರ ಮುಂದೆಯೇ ಸಾಗಬೇಕು. ಅಲ್ಲಿ ಹೋಗುವಾಗ ಪ್ರಚೋದಕ ಘೋಷಣೆಗಳನ್ನು ಕೂಗಲೇ ಬೇಕು, ಅದು ಸಂಘರ್ಷಕ್ಕೆ ಕಾರಣವಾಗಲೇ ಬೇಕು. ಪೊಲೀಸರಿಂದ ಲಾಠಿ ಪ್ರಹಾರ, ಗೋಲೀಬಾರು ನಡೆಯಲೇಬೇಕು, ಒಂದಷ್ಟು ಕೇಸು ಇನ್ನೊಂದಷ್ಟು ಬಂಧನ, ಏನಿದು?!

ದ್ವೇಷದ ಮನಸ್ಥಿತಿ ಈಗಿನದೋ? ಹಿಂದಿನದೋ?

ಅಲ್ಲ, ಜನರಲ್ಲಿ ಈ ಜನಾಂಗ ದ್ವೇಷದ ಮನಸ್ಥಿತಿ ಈಗ ಬಂದಿರುವುದೋ ಅಥವಾ ಹಿಂದೆಯೂ ಇತ್ತೋ ಎಂದು ಕೆಲವರು ಕೇಳುವುದಿದೆ. ಮತಧರ್ಮಗಳ ನಡುವೆ ತಿಕ್ಕಾಟಗಳು, ನಾನು ಮೇಲು ಎಂಬ ಭಾವನೆಗಳಿಂದ ಹೊರಟ ವರ್ತನೆಗಳು ಹೊಸದೇನಲ್ಲ. ನನ್ನ ಬಾಲ್ಯ ಕಾಲದಲ್ಲಿ ಕೂಡಾ ಇನ್ನೊಂದು ಮತೀಯರ ಬಗ್ಗೆ ಅಪಹಾಸ್ಯದ ಮಾತುಗಳನ್ನು ಆಡುವುದನ್ನು ಕೇಳಿದ್ದೆ. ಶಾಲಾ ಶಿಕ್ಷಕರು, ಪೊಲೀಸರು, ಅಧಿಕಾರಿಗಳು, ರಾಜಕಾರಣಿಗಳು ಎಲ್ಲರೂ ಈ ಸಮಾಜಕ್ಕೆ ಸೇರಿದವರೇ ಆಗಿರುವುದರಿಂದ ಅವರಲ್ಲೂ ಈ ಕೋಮುವಾದಿ ಮನಸ್ಥಿತಿ ಇದ್ದಿರಬಹುದು. ಆದರೆ ಅವೆಲ್ಲ ಈಗಿನಂತೆ ಬಹಿರಂಗ ಅಭಿವ್ಯಕ್ತಿ ಕಾಣದೆ ಇರುವುದಕ್ಕೆ ಮುಖ್ಯ ಕಾರಣ ಆಗಿನ ಪ್ರಭುತ್ವ ಇದರ ಬಹಿರಂಗ ಅಭಿವ್ಯಕ್ತಿಗೆ ಅವಕಾಶ, ಬೆಂಬಲ, ಪ್ರೋತ್ಸಾಹ ನೀಡುತ್ತಿರಲಿಲ್ಲ. ಮತೀಯ ದ್ವೇಷದ ಮಾತು ಮತ್ತು ಕ್ರಿಯೆ ಶಿಕ್ಷಾರ್ಹ ಅಪರಾಧ ಎಂಬ ಭಯ ತಕ್ಕ ಮಟ್ಟಿಗಾದರೂ ಜನರಲ್ಲಿ ಇತ್ತು. ಆದರೆ ಯಾವಾಗ ಈ ಮತೀಯ ದ್ವೇಷದ ಚಟುವಟಿಕೆಗಳಿಗೆ ಪ್ರಭುತ್ವದ ಆಶೀರ್ವಾದ, ರಕ್ಷಣೆ ಇದೆ ಎಂಬುದು ತಿಳಿಯಿತೋ, ಆಗ ಇವೆಲ್ಲ ನಿರ್ಭೀತಿಯಿಂದ ಬಹಿರಂಗವಾಗಿಯೇ ಅಭಿವ್ಯಕ್ತ ಗೊಳ್ಳಲು ಆರಂಭವಾದವು.

ಎಲ್ಲರಿಗೂ ರಕ್ಷಣೆ ಕೊಡಲು ಸಾಧ್ಯವೇ?

ಭಾರತ ಸಂವಿಧಾನದ ಪರಿಚ್ಛೇದ 15, ತಾರತಮ್ಯದ ವಿರುದ್ಧ ಮಾತನಾಡುತ್ತದೆ. ಅದರ ಪ್ರಕಾರ ಮತಧರ್ಮ, ಕುಲ, ಲಿಂಗ, ಜನನ ಸ್ಥಳ ಇತ್ಯಾದಿ ಯಾವುದೇ ನೆಲೆಯಲ್ಲಿ ಪ್ರಜೆಗಳ ವಿರುದ್ಧ ತಾರತಮ್ಯ ಮಾಡುವಂತಿಲ್ಲ. ಇದು ಎಲ್ಲರ ದೇಶ. ‘ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರ ಭಾವದ ಆಶಯದೊಂದಿಗೆ ಜನ ಬದುಕ ಬೇಕು ಎಂದು ಸಂವಿಧಾನವೇ ಹೇಳಿರುವಾಗ ಸಂವಿಧಾನದ ಆಶಯಗಳಿಗೆ ಮಾರಕ ಆಗುವ ಹಾಗೆ ನಡೆದು ಕೊಳ್ಳುವುದನ್ನು ತಡೆಯುವುದು ಪ್ರಭುತ್ವದ ಸಂವಿಧಾನ ಬದ್ಧ ಕರ್ತವ್ಯವಲ್ಲವೇ?’ ಎಂದು ಅನೇಕರು ಕೇಳುತ್ತಿರುತ್ತಾರೆ. ಆದರೆ ‘ಇಷ್ಟು ದೊಡ್ಡ ದೇಶ, ಇಷ್ಟು ದೊಡ್ಡ ಜನಸಂಖ್ಯೆ, ಎಲ್ಲರಿಗೂ ರಕ್ಷಣೆ ಕೊಡಲು ಸಾಧ್ಯವೇ, ಅಪರಾಧ ಕೃತ್ಯ ತಡೆಯುವುದು ಸಾಧ‍್ಯವೇ?’ ಎಂದು ಮಂತ್ರಿಗಳ ಸಹಿತ ಅನೇಕರು ವಾದಿಸುವುದಿದೆ. ಆದರೆ ಇಲ್ಲಿ ಒಂದು ಬಹುಮುಖ್ಯ ವಿಷಯ ಗಮನಿಸಬೇಕು. ನೇರವಾಗಿ ತಡೆಯುವುದು ಸಾಧ್ಯವಿಲ್ಲವಾದರೂ ತಪ್ಪು ಮಾಡಿದವರನ್ನು ಅವರು ನಮ್ಮವರು, ನಮ್ಮ ವಿರೋಧಿಗಳು ಎಂದು ಭೇದ ಮಾಡದೆ ಕಾನೂನು ಪ್ರಕಾರ ಶಿಕ್ಷಿಸುವ ಕೆಲಸವನ್ನು ಸರಕಾರ ಪ್ರಾಮಾಣಿಕವಾಗಿ ಮಾಡಿದಾಗ ಅಪರಾಧ ಕೃತ್ಯಗಳು ಸಂಪೂರ್ಣ ನಿಲ್ಲದಿದ್ದರೂ ಬಹುಮಟ್ಟಿಗೆ ಕಡಿಮೆಯಾಗಲಾರವೇ? ಇದರ ಬದಲಿಗೆ ಅಪರಾಧ ನಡೆಸಿದವರು ನಮ್ಮವರು ಎಂದು ಗ್ಯಾಂಗ್ ರೇಪ್ ಮಾಡಿದವರನ್ನೂ ಜೈಲಿನಿಂದ ಹೊರ ಬಿಟ್ಟರೆ? ಟಿವಿ ಕಾರ್ಯಕ್ರಮದಲ್ಲಿಯೇ ಇನ್ನೊಂದು ಧರ್ಮದ ಪ್ರವಾದಿಯನ್ನು ಅವಾಚ್ಯ ಪದಗಳಿಂದ ನಿಂದನೆ ಮಾಡಿದವರ ಮೇಲೆ ಯಾವ ಕ್ರಮವನ್ನೂ ಜರುಗಿಸದಿದ್ದರೆ? ಇನ್ನೊಂದು ಮತೀಯರಿಗೆ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರ ಹಾಕಿ ಎಂದು ಕರೆಕೊಟ್ಟವರನ್ನೂ ಶಿಕ್ಷೆಯ ಭಯವುಂಟಾಗದಂತೆ ಮಾಡಿದರೆ? ಆಗ ಅಪರಾಧಿಗಳಿಗೆ ಇನ್ನಷ್ಟು ಧೈರ್ಯ ಬಂದು ಅವರು ಮತ್ತಷ್ಟು ಅಪರಾಧ ಕೃತ್ಯ ನಡೆಸುವುದಿಲ್ಲವೇ?

ಇವರೆಲ್ಲ ನಮ್ಮ ಸಂಸ್ಕೃತಿಯನ್ನು ಕಟ್ಟಿದವರು…

ಈಗಾಗಲೇ ಉಲ್ಲೇಖಿಸಿದ ಹಾಗೆ, ಬಹುತ್ವವೇ ಭಾರತದ ಮಹತ್ತ್ವ ಮತ್ತು ಬುನಾದಿ. ಬಹುಸಂಸ್ಕೃತಿಯ, ಬಹುಧರ್ಮದ, ಬಹುಭಾಷೆಯ ಜನರು ಈ ದೇಶದಲ್ಲಿ ಶತ ಶತಮಾನಗಳಿಂದ ಅನ್ಯೋನ್ಯವಾಗಿ ಬದುಕಿದ್ದಾರೆ. ಈ ದೇಶಕ್ಕೆ ಒಂದಿಲ್ಲೊಂದು ಕಾಲಘಟ್ಟದಲ್ಲಿ ಎಲ್ಲರೂ ವಲಸೆ ಬಂದವರು. ಹೀಗೆ ಬಂದ ಎಲ್ಲರೂ ಕೂಡಿ ಬಾಳಿ ಭಾರತ ಸಂಸ್ಕೃತಿಯನ್ನು ಕಟ್ಟಿದ್ದಾರೆ, ಎಲ್ಲ ರೀತಿಯಲ್ಲಿಯೂ ಈ ದೇಶವನ್ನು ಸಮೃದ್ಧ ಗೊಳಿಸಿದ್ದಾರೆ.

ಕರ್ನಾಟಕದ ವಿಷಯಕ್ಕೆ ಬಂದರೆ, ಕರ್ನಾಟಕ ಸಂಸ್ಕೃತಿಯನ್ನು ಅದರ ಆರಂಭಿಕ ಹಂತದಲ್ಲಿ ಕಟ್ಟಿದವರು ಬೌದ್ಧರು. ಸನ್ನತಿ, ಕೊಪ್ಪಳ, ಮಸ್ಕಿ, ಚಿತ್ರದುರ್ಗ, ಕದ್ರಿ ಇವೆಲ್ಲ ಬೌದ್ಧ ಕೇಂದ್ರಗಳಾಗಿ ಕರ್ನಾಟಕ ಸಂಸ್ಕೃತಿಯ ರೂಪುಗೊಳ್ಳುವಿಕೆಗೆ ತಳಹದಿ ಹಾಕಿದವು. ಆಮೇಲೆ ಉತ್ತರ ಭಾರತದಿಂದ ಪ್ರವೇಶಿಸಿದ ಜೈನ ಧರ್ಮವು ಕನ್ನಡಕ್ಕೆ ಪಂಪ, ರನ್ನ, ನಾಗಚಂದ್ರ, ಜನ್ನ, ಮತ್ತು ರತ್ನಾಕರ ವರ್ಣಿ ಮೊದಲಾದ ಅತ್ಯುತ್ತಮ ಸಾಹಿತಿಗಳನ್ನು ಕೊಟ್ಟಿತು. ಜೈನರು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಚಾರಿತ್ರಿಕವಾದುದು. ಶೃಂಗೇರಿಯಲ್ಲಿ ಅದ್ವೈತ, ಮೇಲುಕೋಟೆಯಲ್ಲಿ ವಿಶಿಷ್ಟಾದ್ವೈತ, ಉಡುಪಿಯಲ್ಲಿ ದ್ವೈತ ಹೀಗೆ ವೈದಿಕ ಧರ್ಮದ ಮೂರು ಮುಖ್ಯ ಪ್ರಭೇದಗಳು ಅರಳಿದ್ದು ಇದೇ ಕನ್ನಡ ನೆಲದಲ್ಲಿ. ಕ್ರಿ.ಶ. 7 ನೇ ಶತಮಾನದಿಂದಲೇ ಕರ್ನಾಟಕಕ್ಕೆ ಕರಾವಳಿಯಲ್ಲಿ ವಾಸಿಸುತ್ತಿದ್ದ ಮುಸ್ಲಿಮರು ಕರ್ನಾಟಕದ ವ್ಯವಹಾರಗಳನ್ನು ಮಧ್ಯಪ್ರಾಚ್ಯವಲ್ಲದೆ ಗ್ರೀಕ್, ರೋಮ್ ವರೆಗೂ ವಿಸ್ತರಿಸಿದರು. ಬಿಜಾಪುರವನ್ನು ಕೇಂದ್ರವಾಗಿರಿಸಿಕೊಂಡು ಆಳಿದ ಮುಸಲ್ಮಾನರು ಕರ್ನಾಟಕ ಸಂಸ್ಕೃತಿಗೆ ಕೊಟ್ಟ ಕೊಡುಗೆ ಅನನ್ಯವಾದುದು. 12 ನೇ ಶತಮಾನದ ಮಹಾ ಕ್ರಾಂತಿಯ ನಂತರ ಲಿಂಗಾಯತ ಧರ್ಮವು ಜಾತಿ, ಮತ, ಲಿಂಗ ವ್ಯತ್ಯಾಸಗಳಿಂದ ಆಚೆಗೆ ಯೋಚಿಸಿ ಒಂದು ಹೊಸ ಧರ್ಮವನ್ನೇ ಮನುಕುಲಕ್ಕೆ ಕೊಟ್ಟಿತು. ಬ್ರಿಟಿಷರ ಆಗಮನದೊಂದಿಗೆ ಕರ್ನಾಟಕಕ್ಕೆ ಕ್ರೈಸ್ತ ಧರ್ಮದ ಪ್ರವೇಶ ಆಯಿತು. ಕ್ರೈಸ್ತರು ಕರ್ನಾಟಕಕ್ಕೆ ಆಧುನಿಕತೆಯನ್ನು ತಂದರು, ಶಾಲೆಗಳ ನಿರ್ಮಾಣ, ಹಳೆಯ ಪುಸ್ತಕಗಳ ಸಂಪಾದನೆ, ಇತ್ಯಾದಿಗಳ ಮೂಲಕ ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಭಾಷೆಗೆ ಹೊಸ ಚೈತನ್ಯವನ್ನು ಕೊಟ್ಟರು. ಕರ್ನಾಟಕದಲ್ಲಿ ಸುಮಾರು 76 ಭಾಷೆಗಳು ಇವೆ. ಅವು ಯಾವುವೂ ಕೂಡಾ ಒಂದು ಇನ್ನೊಂದನ್ನು ಕೊಲ್ಲದೆ ಎಲ್ಲವೂ ಪರಸ್ಪರ ಪೋಷಿಸಿಕೊಂಡೇ ಬದುಕಿವೆ.

ಸಾಮರಸ್ಯ ಮತ್ತು ಸಹಬಾಳ್ವೆ

ಕರಾವಳಿಯಲ್ಲಿ ಜನಪ್ರಿಯವಾಗಿರುವ ಭೂತಾರಾಧನೆಯಲ್ಲಿ ಭೂತಕ್ಕೆ ಕೈ ಮುಗಿದು ಕೇಳಿಕೊಳ್ಳುವಾಗ ‘ಪತ್ ಕೂಡ್ದಿ ತಲೊಟು ಮುತ್ತುಂಡುಂದು ಹಿರಿಯೆರ್ ಮಲ್ತಿ ಕಟ್ಟ್..’ (ಹತ್ತು ಜನ ಸೇರಿದಲ್ಲಿ ಮುತ್ತುಂಟು ಎಂದು ಹಿರಿಯರು ಹೇಳಿದ ಮಾತು) ಎಂದು ಹೇಳಲಾಗುತ್ತದೆ. ಹತ್ತು ಜನ ಕೂಡಿದಾಗಲೇ ಏಳಿಗೆ, ಎಲ್ಲರೂ ಕೂಡಿ ಬಾಳಬೇಕು ಎಂಬುದು ಈ ನಾಡಿನ ದೈವಗಳ ಆಶಯ ಕೂಡಾ. ಸಾಮರಸ್ಯ ಮತ್ತು ಸಹಬಾಳ್ವೆ ಎಂಬುದು ಕರ್ನಾಟಕ ಸಂಸ್ಕೃತಿಯ ಬಹಳ ಮುಖ್ಯವಾದ ಭಾಗವಾದುದರಿಂದಲೇ ಮಹಾಕವಿ ಕುವೆಂಪು ಅವರು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಮಾತನ್ನು ಬಹಳ ಅರ್ಥಪೂರ್ಣವಾಗಿ ಹೇಳಿದರು. ಈ ಶಾಂತಿಯ ತೋಟವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ.

ದೀಪಾವಳಿ ಎಂದಿನಂತೆ ಮತ್ತೆ ಬಂದಿದೆ. ಜಾತಿ ಮತ ಧರ್ಮದ ಭೇದವಿಲ್ಲದೆ ಸಹೋದರತ್ವ ಸಾರುವ ಮಾನವೀಯತೆಯ ಪ್ರತೀಕವಾಗಿ ಪ್ರತಿಯೊಬ್ಬರ ಮನೆ ಮನಗಳು ಬೆಳಗಲಿ.

ಶ್ರೀನಿವಾಸ ಕಾರ್ಕಳ
ಚಿಂತಕರು, ಸಾಮಾಜಿಕ ಕಾರ್ಯಕರ್ತರಾಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

You cannot copy content of this page

Exit mobile version