ಜೈಪುರ: ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ 32 ವರ್ಷದ ಮಹೇಂದ್ರ ಪ್ರಸಾದ್ ಎಂಬ ವ್ಯಕ್ತಿಯನ್ನು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಬಂಧಿಸಲಾಗಿದೆ. ಈತನನ್ನು ಸಿಐಡಿ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ಚಂದನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿರುವ ಡಿಆರ್‌ಡಿಒ ಅತಿಥಿಗೃಹದ ಮ್ಯಾನೇಜರ್ ಆಗಿ ಮಹೇಂದ್ರ ಪ್ರಸಾದ್ ಕೆಲಸ ಮಾಡುತ್ತಿದ್ದನು. ಪಾಕಿಸ್ತಾನದ ಗುಪ್ತಚರ ಸಂಸ್ಥೆಯೊಂದಿಗೆ ಈತ ನಿರಂತರ ಸಂಪರ್ಕದಲ್ಲಿದ್ದ ಆರೋಪ ಎದುರಿಸುತ್ತಿದ್ದಾನೆ. ಭಾರತೀಯ ರಕ್ಷಣಾ ವಲಯದ ಚಟುವಟಿಕೆಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಈತ ಪಾಕ್‌ಗೆ ರವಾನಿಸುತ್ತಿದ್ದ ಎನ್ನಲಾಗಿದೆ.
ಉತ್ತರಾಖಂಡದ ಅಲ್ಮೋರಾ ಇತನ ಸ್ವಂತ ಸ್ಥಳ. ಸೋಷಿಯಲ್ ಮೀಡಿಯಾ ಮೂಲಕ ಪಾಕಿಸ್ತಾನಿ ಗುಪ್ತಚರ ಸಂಸ್ಥೆಯೊಂದಿಗೆ ಈತನಿಗೆ ಸಂಪರ್ಕ ಇತ್ತು. ಡಿಆರ್‌ಡಿಒ ವಿಜ್ಞಾನಿಗಳ ಓಡಾಟ, ಹಾಗೂ ಚಂದನ್ ಫೀಲ್ಡ್ ಫೈರಿಂಗ್ ರೇಂಜ್‌ಗೆ ಬರುವ ಭಾರತೀಯ ಸೇನಾ ಅಧಿಕಾರಿಗಳ ವಿವರಗಳನ್ನು ಈತ ಪಾಕ್ ಗುಪ್ತಚರ ಸಂಸ್ಥೆಯೊಂದಿಗೆ ಹಂಚಿಕೊಂಡಿದ್ದ ಎಂದು ತಿಳಿದುಬಂದಿದೆ.
ಜೈಸಲ್ಮೇರ್‌ನಲ್ಲಿರುವ ಈ ಕೇಂದ್ರದಲ್ಲಿ ರಕ್ಷಣಾ ವಲಯದ ಉಪಕರಣಗಳನ್ನು ಪರೀಕ್ಷಿಸಲಾಗುತ್ತದೆ. ಭದ್ರತಾ ಸಂಸ್ಥೆಗಳು ಪ್ರಸಾದ್‌ನನ್ನು ವಿಚಾರಣೆ ನಡೆಸುತ್ತಿವೆ ಮತ್ತು ತಾಂತ್ರಿಕ ವಿಶ್ಲೇಷಣೆಗಾಗಿ ಅವನ ಮೊಬೈಲ್ ಫೋನ್‌ನ್ನು ಬಳಸಿಕೊಳ್ಳುತ್ತಿವೆ.
ಡಿಆರ್‌ಡಿಒ ಕಾರ್ಯಾಚರಣೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಈತ ಹಂಚಿಕೊಂಡಿರುವುದು ಖಚಿತಪಟ್ಟಿದೆ. ಬೇಹುಗಾರಿಕೆ ಪ್ರಕರಣದ ಅಡಿಯಲ್ಲಿ ಪ್ರಸಾದ್‌ನನ್ನು ಸಿಐಡಿ ಗುಪ್ತಚರ ವಿಭಾಗ ಬಂಧಿಸಿದೆ.