ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್‌ಗೆ ಹಿನ್ನೆಡೆ ; ಭರ್ಜರಿ ಮುನ್ನಡೆ ಸಾಧಿಸಿದ ಶ್ರೀನಿವಾಸ ದಾಸ ಕರಿಯಪ್ಪ

ದಾವಣಗೆರೆ: ರಾಜ್ಯದಾದ್ಯಂತ ಕುತೂಹಲ ಕೆರಳಿಸಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಸೋಮವಾರ ಆರಂಭವಾಗಿದ್ದು, ಮೊದಲ ಎರಡು ಸುತ್ತುಗಳ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ ಕರಿಯಪ್ಪ ಅವರು 211 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರಿಗೆ ಹಿನ್ನೆಡೆಯಾಗಿದೆ.

ಮೊದಲ ಸುತ್ತಿನಲ್ಲೇ ಬಿಜೆಪಿ ಭರ್ಜರಿ ಆರಂಭ
ಮತ ಎಣಿಕೆಯ ಮೊದಲ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ ಕರಿಯಪ್ಪ 3,711 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಸಮರ್ಥ್ ಶಾಮನೂರು 3,134 ಮತಗಳಿಗೆ ತೃಪ್ತಿಪಟ್ಟರು. ಮೊದಲ ಸುತ್ತಿನಲ್ಲಿ ಬಿಜೆಪಿ 577 ಮತಗಳ ಮುನ್ನಡೆ ಹೊಂದಿತ್ತು. ಎರಡನೇ ಸುತ್ತಿನ ಅಂತ್ಯದ ವೇಳೆಗೆ ಈ ಅಂತರ 211ಕ್ಕೆ ಇಳಿದಿದ್ದು, ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಮೂರನೇ ಸ್ಥಾನದಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಇದ್ದಾರೆ.

25 ಅಭ್ಯರ್ಥಿಗಳ ನಡುವೆ ಸ್ಪರ್ಧೆ
ಈ ಉಪ ಚುನಾವಣೆಯಲ್ಲಿ ಒಟ್ಟು 25 ಅಭ್ಯರ್ಥಿಗಳು ಕಣದಲ್ಲಿದ್ದರು. ಕಾಂಗ್ರೆಸ್‌ನಿಂದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಸಮರ್ಥ್ ಶಾಮನೂರು ಅವರನ್ನು ಕಣಕ್ಕಿಳಿಸಲಾಗಿತ್ತು. ಬಿಜೆಪಿ ಪರವಾಗಿ ಶ್ರೀನಿವಾಸ ದಾಸ ಕರಿಯಪ್ಪ ಸ್ಪರ್ಧಿಸಿದ್ದರು. ಮತದಾನದ ದಿನ ಶೇಕಡಾ 70ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

ಎಣಿಕೆ ವ್ಯವಸ್ಥೆ ಹೇಗಿದೆ?
ಬೆಳಗ್ಗೆ 8 ಗಂಟೆಗೆ ಅಂಚೆ ಮತಪತ್ರಗಳ ಎಣಿಕೆ ಆರಂಭವಾಗಿ, 8:30ರಿಂದ ಇವಿಎಂ ಮತಗಳ ಎಣಿಕೆ ಶುರುವಾಯಿತು. ಇವಿಎಂಗೆ 14 ಟೇಬಲ್‌ಗಳು, ಅಂಚೆ ಮತಕ್ಕೆ ಒಂದು ಟೇಬಲ್ ಹಾಗೂ ಇಟಿಪಿಬಿಎಸ್ ಸ್ಕ್ಯಾನಿಂಗ್‌ಗೆ ಒಂದು ಟೇಬಲ್ ಸ್ಥಾಪಿಸಲಾಗಿದ್ದು, ಪ್ರತಿ ಟೇಬಲ್‌ಗೆ ಎಣಿಕೆ ಮೇಲ್ವಿಚಾರಕ, ಸಹಾಯಕ ಮತ್ತು ಮೈಕ್ರೋ ಅಬ್ಜರ್ವರ್ ನಿಯೋಜಿಸಲಾಗಿದೆ. ಒಟ್ಟು 21 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಪ್ರತಿ ಸುತ್ತಿಗೆ 10 ರಿಂದ 15 ನಿಮಿಷ ತೆಗೆದುಕೊಳ್ಳಲಿದೆ. 6 ರಿಂದ 7 ಗಂಟೆಗಳಲ್ಲಿ ಅಂತಿಮ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ.

Related Articles

ಇತ್ತೀಚಿನ ಸುದ್ದಿಗಳು