Home ಬೆಂಗಳೂರು ಕನ್ನಡದಲ್ಲಿಲ್ಲ ಎಸ್‌ಎಸ್‌ಸಿ ಪರೀಕ್ಷೆ: ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ವಿರೋಧ

ಕನ್ನಡದಲ್ಲಿಲ್ಲ ಎಸ್‌ಎಸ್‌ಸಿ ಪರೀಕ್ಷೆ: ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ವಿರೋಧ

0

ಬೆಂಗಳೂರು: ಕೇಂದ್ರ ಸರ್ಕಾರದ ಸಿಬ್ಬಂದಿ ಆಯ್ಕೆ ಆಯೋಗವು (ಎಸ್‌ಎಸ್‌ಸಿ) ಪದವಿ ಮಟ್ಟದ ಪರೀಕ್ಷೆಯನ್ನು ಕೇವಲ ಇಂಗ್ಲಿಷ್‌ ಹಾಗೂ ಹಿಂದಿಯಲ್ಲಿ ನಡೆಸಲು ಆದೇಶ ಹೊರಡಿಸಿರುವುದಕ್ಕೆ ಆಮ್‌ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ವಿರೋಧ ವ್ಯಕ್ತಪಡಿಸಿದರು.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಪೃಥ್ವಿ ರೆಡ್ಡಿ ಅವರು, ʼಭಾರತವು ಹಲವು ರಾಜ್ಯಗಳ ಒಕ್ಕೂಟ. ಕರ್ನಾಟಕ ಸೇರಿದಂತೆ ದೇಶದ ಬಹುತೇಕ ರಾಜ್ಯಗಳು ತಮ್ಮದೇ ಆದ ಭಾಷೆಯನ್ನು ಹೊಂದಿವೆ. ಈ ಪ್ರಾದೇಶಿಕ ಭಾಷೆಗಳಿಗೆ ಗೌರವ ನೀಡಬೇಕಾಗಿರುವುದು ಕೇಂದ್ರ ಸರ್ಕಾರದ ಕರ್ತವ್ಯ. ಕೇವಲ ಇಂಗ್ಲಿಷ್‌ ಹಾಗೂ ಹಿಂದಿಯಲ್ಲಿ ಮಾತ್ರ ಕೇಂದ್ರ ಸರ್ಕಾರದ ಪರೀಕ್ಷೆಗಳನ್ನು ನಡೆಸುವುದು ಬೇರೆ ಭಾಷೆಗಳ ಜನರಿಗೆ ಮಾಡುವ ದ್ರೋಹʼ ಎಂದು ಹೇಳಿದರು.

ʼಪರೀಕ್ಷೆ ನಡೆಸುವುದಕ್ಕೆ ಸಂಬಂಧಿಸಿ ಎಸ್‌ಎಸ್‌ಸಿ ಹೊರಡಿಸಿರುವ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು. ಕನ್ನಡ ಸೇರಿದಂತೆ ಎಲ್ಲ ರಾಜ್ಯಗಳ ಭಾಷೆಗಳಲ್ಲೂ ಪರೀಕ್ಷೆ ನಡೆಸಬೇಕು. ಹಿಂದಿಗೆ ಸಿಗುವ ಆದ್ಯತೆಯು ಕನ್ನಡ ಹಾಗೂ ಇತರೆ ಭಾಷೆಗಳಿಗೂ ಸಿಗಬೇಕು. ಕೇವಲ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪರೀಕ್ಷೆ ನಡೆಸುವುದರ ಹಿಂದೆ, ಕನ್ನಡಿಗರಿಗೆ ಸಿಗಬೇಕಾದ ಉದ್ಯೋಗಗಳನ್ನು ಕಿತ್ತುಕೊಂಡು ಹಿಂದಿ ರಾಜ್ಯಗಳ ಜನರಿಗೆ ನೀಡುವ ಹುನ್ನಾರವಿದೆ. ಆಮ್‌ ಆದ್ಮಿ ಪಾರ್ಟಿಯು ಇದನ್ನು ಖಂಡಿಸುತ್ತದೆ. ಎಲ್ಲ ಭಾಷೆಗಳನ್ನು ಸಮಾನವಾಗಿ ಗೌರವಿಸುವುದರಲ್ಲಿ ಆಮ್‌ ಆದ್ಮಿ ಪಾರ್ಟಿ ನಂಬಿಕೆ ಹೊಂದಿದೆʼ ಎಂದು ಪೃಥ್ವಿ ರೆಡ್ಡಿ ಹೇಳಿದರು.

ʼಕೇಂದ್ರ ಸರ್ಕಾರವು ಕನ್ನಡ ಅನ್ಯಾಯ ಮಾಡುತ್ತಿದ್ದರೂ ಕರ್ನಾಟಕದ ಸರ್ಕಾರ, ಶಾಸಕರು, ಸಂಸದರು ದನಿ ಎತ್ತದಿರುವುದು ಆಶ್ಚರ್ಯ ತಂದಿದೆ. ಕನ್ನಡಿಗ ಉದ್ಯೋಗಾಕಾಂಕ್ಷಿಗಳ ಹಿತ ಕಾಪಾಡುವುದಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ನಿಲ್ಲಬೇಕಾದ ಸಮಯ ಬಂದಿದೆ. ಈ ವಿಚಾರದಲ್ಲಿ ರಾಜಕೀಯಕ್ಕಿಂತ ಕನ್ನಡಿಗ ಯುವಜನತೆಯ ಹಿತವೇ ನಾಡಿನ ಎಲ್ಲ ಜನಪ್ರತಿನಿಧಿಗಳಿಗೆ ಮುಖ್ಯವಾಗಬೇಕುʼ ಎಂದು ಪೃಥ್ವಿ ರೆಡ್ಡಿ ಹೇಳಿದರು.

You cannot copy content of this page

Exit mobile version