ಬೆಂಗಳೂರು : ಸಿಎಂ ಸಿದ್ದರಾಮಯ್ಯ (Cm Siddaramaiah) ಶುಕ್ರವಾರ ಮಂಡಿಸಿದ ಐತಿಹಾಸಿಕ ಬಜೆಟ್ ನಲ್ಲಿ (Karnataka Budget 2026) ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ನಿರ್ಧಾರ ಮಾಡಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ಮುಖ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ಈ ಕುರಿತು ಸರ್ಕಾರ ಸುಳಿವು ನೀಡಿತ್ತು. ವಿದ್ಯಾರ್ಥಿಗಳು, ಪೋಷಕರು, ಹಾಗೂ ಶಿಕ್ಷಣ ತಜ್ಞರ ಸಲಹೆ ಪಡೆದು ಈ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿತ್ತು.
ಸರ್ಕಾರದ ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತವಾಗುವ ನಿರೀಕ್ಷೆಯಿದೆ. ಈ ಹಿಂದೆ ಕರ್ನಾಟಕದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳಾದಾಗ ಹಲವು ಗಲಭೆಗಳು ನಡೆದಿತ್ತು. ಹೀಗಾಗಿ ದೇವರಾಜ ಅರಸು ಕಾಲದಲ್ಲಿ ಚುನಾವಣೆ ನಿಷೇಧಿಸಲಾಗಿತ್ತು. ಪ್ರತಿಯೊಂದು ಕಾಲೇಜುಗಳಲಿಯೂ ಈಗ ಎಡ ಬಲ ವಿದ್ಯಾರ್ಥಿ ಸಂಘಟನೆಗಳು ಹುಟ್ಟಿಕೊಂಡಿರುವುದೇ ತಲೆನೋವಾಗಿ ಪರಿಣಮಿಸಿದೆ. ಇದರ ಜೊತೆಗೆ ಇನ್ನು ಮುಂದೆ ಕಾಲೇಜುಗಳ ಚುನಾವಣಾ ಕಣವಾಗಿಯೂ ಹೆಸರು ಮಾಡಲಿದೆ.
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ನಾಯಕರ ಪಟ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಸ್ಥಾನದಲ್ಲಿದ್ದಾರೆ. ಇಂದು ಅವರು ಮಂಡಿಸಲಿರುವ ಬಜೆಟ್ ಸೇರಿದಂತೆ ಒಟ್ಟು 17 ಬಾರಿ ಬಜೆಟ್ ಮಂಡಿಸಿದ ದಾಖಲೆ ಅವರ ಹೆಸರಿನಲ್ಲಿ ಸೇರಲಿದೆ.
ರಾಜ್ಯದ ರಾಜಕೀಯ ಇತಿಹಾಸದ ದಾಖಲೆಗಳನ್ನು ಪರಿಶೀಲಿಸಿದಾಗ, ಬಜೆಟ್ ಮಂಡನೆ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಮುಂಚೂಣಿಯಲ್ಲಿದ್ದಾರೆ. ಹಲವು ಅವಧಿಗಳಲ್ಲಿ ಅವರು ಹಣಕಾಸು ಇಲಾಖೆಯನ್ನು ವಹಿಸಿಕೊಂಡು ರಾಜ್ಯದ ಬಜೆಟ್ ಮಂಡನೆ ಮಾಡಿರುವುದು ವಿಶೇಷ.
ಇವರ ನಂತರದ ಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಇದ್ದು, ಅವರು ತಮ್ಮ ಆಡಳಿತಾವಧಿಯಲ್ಲಿ ಒಟ್ಟು 13 ಬಾರಿ ಬಜೆಟ್ ಮಂಡಿಸಿದ್ದರು.
ಮೂರನೇ ಸ್ಥಾನದಲ್ಲಿ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇದ್ದು, ಅವರು ಒಟ್ಟು 8 ಬಾರಿ ರಾಜ್ಯ ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದಾರೆ.
ಈ ಮೂಲಕ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ನಾಯಕನಾಗಿ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಗಮನ ಸೆಳೆದಿದ್ದಾರೆ.
