ತುಂಗಭದ್ರಾ ಕ್ರಸ್ಟ್ ಗೇಟ್ ದುರಂತದ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ; ರಾಜ್ಯದ ಎಲ್ಲಾ ಡ್ಯಾಂಗಳ ಸುರಕ್ಷತೆಗೆ ಕ್ರಮ

ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ ಕೊಚ್ಚಿ ಹೋಗಿರುವ ದುರಂತದಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಜಲಾಶಯಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಬಗ್ಗೆ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಕೆ ಶಿವಕುಮಾರ್​ ಪ್ರತಿಕ್ರಿಯಿಸಿದ್ದು, ಡ್ಯಾಮ್​ ನೀರು ಉಳಿಸಿಕೊಳ್ಳುವುದು ನಮ್ಮ ಮುಂದಿರುವ ಸವಾಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಸರ್ಕಾರ ರಾಜ್ಯದ ಎಲ್ಲಾ ಜಲಾಶಯಗಳ ಗುಣಮಟ್ಟ ಪರಿಶೀಲನೆಗೆ ಸಮಿತಿ ರಚಿಸಲು ಮುಂದಾಗಿದೆ. ಡಿಸಿಎಂ ಡಿಕೆ ಶಿವಕುಮಾರ್​ ಪ್ರತಿಕ್ರಿಯಿಸಿದ್ದು,  ರಾಜ್ಯದಲ್ಲಿ ಎಲ್ಲಾ ಡ್ಯಾಮ್​ಗಳ ಸೇಫ್ಟಿಗೆ ಕಮಿಟಿ ರಚನೆ ಮಾಡಲಾಗುತ್ತಿದೆ. ಸದ್ಯಕ್ಕೆ ಜಲಾಶಯದ​ ನೀರು ಉಳಿಸಿಕೊಳ್ಳೋದು ನಮ್ಮ ಮುಂದಿರುವ ಸವಾಲಾಗಿದೆ. ಗೇಟ್ ಯಾವ ರೀತಿ ಸಿದ್ಧಪಡಿಸಲಾಗಿತ್ತು ಎಂಬ ದಾಖಲೆಗಳು ಇವೆ. ಆ ದಾಖಲೆಗಳನ್ನು ಅಧಿಕಾರಿಗಳು ಕೊಟ್ಟಿದ್ದಾರೆ ಎಂದು ತಿಳಿಸಿದರು.

ನಿರಂತರ ನೀರಿನ ಹರಿವಿನಿಂದ ಜಲಾಶಯದ ಗೋಡೆಗಳಲ್ಲಿ ಅಲ್ಲಲ್ಲಿ ಬಿರುಕು ಬಿಟ್ಟಿರುವುದು ಕೂಡ ಬಯಲಾಗಿದೆ. ಸರ್ಕಾರ ಈಗಾಗಲೇ ಹೊಸ ಗೇಟ್​ ನಿರ್ಮಾಣಕ್ಕೆ ಎಲ್ಲಾ ತಯಾರಿ ಮಾಡಿಕೊಂಡಿದೆ.

ಕೊಚ್ಚಿ ಹೋಗಿರುವ ಗೇಟಿನ ದುರಸ್ತಿಗೆ 60 ಟಿಎಂಸಿ ನೀರು ಅನಿವಾರ್ಯವಾಗಿ ಖಾಲಿ ಮಾಡಬೇಕಿರುವುದರಿಂದ ಪ್ರತಿ ನಿತ್ಯ 15 ಟಿಎಂಸಿ ನೀರನ್ನು ನಿರಂತರವಾಗಿ ನದಿಗೆ ಹರಿಬಿಡಲಾಗುತ್ತಿದೆ. ಹೀಗಾಗಿ ಜಲಾಶಯದ 2 ಕಿ.ಮೀ. ಅಂತರದಲ್ಲಿ ಇರುವ ಎಲ್ಲಾ ಹಳ್ಳಿಗಳಿಗೂ ಹೈ ಅಲರ್ಟ್ ಘೋಷಿಸಿದ್ದಾರೆ.

ಸಧ್ಯ ಈ ಎಲ್ಲಾ ದುರ್ಘಟನೆಯಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ರಾಜ್ಯದ ಪ್ರತಿಯೊಂದು ಜಲಾಶಯಗಳ ಸುರಕ್ಷತೆಗೆ ಪ್ರತೀ ಜಲಾಶಯಕ್ಕೂ ಒಂದೊಂದು ಸುರಕ್ಷತಾ ಸಮಿತಿ ರಚಿಸುವುದು ಹಾಗೂ ಸಮಿತಿಯಿಂದ ವರದಿ ಕಳಿಸುವುದು ಕಡ್ಡಾಯ ಎಂದು ಜಲಸಂಪನ್ಮೂಲ ಸಚಿವ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು