ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಕೊಚ್ಚಿ ಹೋಗಿರುವ ದುರಂತದಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಜಲಾಶಯಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಬಗ್ಗೆ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಡ್ಯಾಮ್ ನೀರು ಉಳಿಸಿಕೊಳ್ಳುವುದು ನಮ್ಮ ಮುಂದಿರುವ ಸವಾಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಸರ್ಕಾರ ರಾಜ್ಯದ ಎಲ್ಲಾ ಜಲಾಶಯಗಳ ಗುಣಮಟ್ಟ ಪರಿಶೀಲನೆಗೆ ಸಮಿತಿ ರಚಿಸಲು ಮುಂದಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಎಲ್ಲಾ ಡ್ಯಾಮ್ಗಳ ಸೇಫ್ಟಿಗೆ ಕಮಿಟಿ ರಚನೆ ಮಾಡಲಾಗುತ್ತಿದೆ. ಸದ್ಯಕ್ಕೆ ಜಲಾಶಯದ ನೀರು ಉಳಿಸಿಕೊಳ್ಳೋದು ನಮ್ಮ ಮುಂದಿರುವ ಸವಾಲಾಗಿದೆ. ಗೇಟ್ ಯಾವ ರೀತಿ ಸಿದ್ಧಪಡಿಸಲಾಗಿತ್ತು ಎಂಬ ದಾಖಲೆಗಳು ಇವೆ. ಆ ದಾಖಲೆಗಳನ್ನು ಅಧಿಕಾರಿಗಳು ಕೊಟ್ಟಿದ್ದಾರೆ ಎಂದು ತಿಳಿಸಿದರು.
ನಿರಂತರ ನೀರಿನ ಹರಿವಿನಿಂದ ಜಲಾಶಯದ ಗೋಡೆಗಳಲ್ಲಿ ಅಲ್ಲಲ್ಲಿ ಬಿರುಕು ಬಿಟ್ಟಿರುವುದು ಕೂಡ ಬಯಲಾಗಿದೆ. ಸರ್ಕಾರ ಈಗಾಗಲೇ ಹೊಸ ಗೇಟ್ ನಿರ್ಮಾಣಕ್ಕೆ ಎಲ್ಲಾ ತಯಾರಿ ಮಾಡಿಕೊಂಡಿದೆ.
ಕೊಚ್ಚಿ ಹೋಗಿರುವ ಗೇಟಿನ ದುರಸ್ತಿಗೆ 60 ಟಿಎಂಸಿ ನೀರು ಅನಿವಾರ್ಯವಾಗಿ ಖಾಲಿ ಮಾಡಬೇಕಿರುವುದರಿಂದ ಪ್ರತಿ ನಿತ್ಯ 15 ಟಿಎಂಸಿ ನೀರನ್ನು ನಿರಂತರವಾಗಿ ನದಿಗೆ ಹರಿಬಿಡಲಾಗುತ್ತಿದೆ. ಹೀಗಾಗಿ ಜಲಾಶಯದ 2 ಕಿ.ಮೀ. ಅಂತರದಲ್ಲಿ ಇರುವ ಎಲ್ಲಾ ಹಳ್ಳಿಗಳಿಗೂ ಹೈ ಅಲರ್ಟ್ ಘೋಷಿಸಿದ್ದಾರೆ.
ಸಧ್ಯ ಈ ಎಲ್ಲಾ ದುರ್ಘಟನೆಯಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ರಾಜ್ಯದ ಪ್ರತಿಯೊಂದು ಜಲಾಶಯಗಳ ಸುರಕ್ಷತೆಗೆ ಪ್ರತೀ ಜಲಾಶಯಕ್ಕೂ ಒಂದೊಂದು ಸುರಕ್ಷತಾ ಸಮಿತಿ ರಚಿಸುವುದು ಹಾಗೂ ಸಮಿತಿಯಿಂದ ವರದಿ ಕಳಿಸುವುದು ಕಡ್ಡಾಯ ಎಂದು ಜಲಸಂಪನ್ಮೂಲ ಸಚಿವ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.