ಹಾಸನ: ಹೊಳೆನರಸೀಪುರದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಡದಿ ಭೂಸ್ವಾಧೀನ ಮತ್ತು ನೈಸ್ ಯೋಜನೆ ಸೇರಿದಂತೆ ವಿವಿಧ ಪ್ರಮುಖ ವಿಚಾರಗಳ ಕುರಿತು ಅವರು ಮಾತನಾಡಿದ್ದು, ಸರ್ಕಾರದ ಕ್ರಮಗಳನ್ನು ಕಟುವಾಗಿ ಟೀಕಿಸಿದ್ದಾರೆ.
ಬಿಡದಿ ಭೂಸ್ವಾಧೀನ ವಿಚಾರ: ರೈತರು ತಮ್ಮ ಭೂಮಿ ನೀಡುವುದಿಲ್ಲ ಎಂದು ಕಳೆದ 500 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ದಬ್ಬಾಳಿಕೆ ಮಾಡಿ, ರೌಡಿಗಳನ್ನು ಬಿಟ್ಟು ಹೆದರಿಸಿ ಭೂಮಿ ವಾಪಸ್ ಪಡೆಯಲು ಹೊರಟಿರುವ ಸರ್ಕಾರದ ಕ್ರಮವನ್ನು ಖಂಡಿಸುವುದಾಗಿ ತಿಳಿಸಿದರು.
ನೈಸ್ ಪ್ರಾಜೆಕ್ಟ್ ಟೇಕ್ ಓವರ್ ಗುಟ್ಟು: ನೈಸ್ ಯೋಜನೆಯನ್ನು ಆ ಕಂಪನಿಯಿಂದ ಈಗ ಯಾರು ಟೇಕ್ ಓವರ್ ಮಾಡಲು ಹೊರಟಿದ್ದಾರೆ? ಇದರ ಹಿಂದೆ ಯಾರ ಪಾಲು ಇದೆ ಎಂಬುದನ್ನು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಸೋನಿಯಾ ಗಾಂಧಿ ಹೇಳಿಕೆ: ವಂದೇ ಮಾತರಂ ಗೀತೆಗೆ ಅವಮಾನ ಮಾಡಿರುವ ಕಾಂಗ್ರೆಸ್ ನಾಯಕರ ಸಣ್ಣತನವನ್ನು ಪ್ರಶ್ನಿಸಿದ ಅವರು, ಸೋನಿಯಾ ಗಾಂಧಿ ಅವರ ವಿರುದ್ಧವೂ ಕಿಡಿಕಾರಿದರು.
ಹನೂರು ಶೂಟೌಟ್ ಪ್ರಕರಣ: ಹನೂರಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಜಿಂಕೆ ಬೇಟೆ ವಿಚಾರವಾಗಿ ಮೂವರನ್ನು ಸ್ಥಳದಲ್ಲೇ ಸಾಯುವಂತೆ ತಲೆ ಮತ್ತು ಎದೆಗೆ ಗುಂಡು ಹಾರಿಸಿರುವುದು ಗಂಭೀರ ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದರು.
