ಬೆಂಗಳೂರು: ಚಾಮರಾಜನಗರ ಎನ್‌ಕೌಂಟರ್ ಪ್ರಕರಣದಲ್ಲಿ ಮೂವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಈ ಘಟನೆಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕರು ನಿಜವಾಗಿಯೂ ಭಾವಿಸಿದರೆ ತಾವು ರಾಜೀನಾಮೆ ನೀಡಲು ಸಿದ್ಧ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಸೋಮವಾರ ಹೇಳಿದರು.ಪ್ರಕರಣದ ಕುರಿತು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ನ್ಯಾಯಾಂಗ ತನಿಖೆ ನಡೆಸಬೇಕು, ಮೃತರ ಕುಟುಂಬಗಳಿಗೆ ತಲಾ ರೂ.1 ಕೋಟಿ ಪರಿಹಾರ ನೀಡಬೇಕು ಹಾಗೂ ರಾಮಲಿಂಗಾರೆಡ್ಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ ಅವರು, ಮೃತಪಟ್ಟವರು ರೈತರಲ್ಲ, ಬೇಟೆಗಾರರು ಎಂದು ತನಿಖೆಯಲ್ಲಿ ದೃಢಪಟ್ಟರೆ ಪರಿಹಾರ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಸದ್ಯ ಪ್ರಕರಣದ ಕುರಿತು ಮ್ಯಾಜಿಸ್ಟೀರಿಯಲ್ ತನಿಖೆ ನಡೆಯುತ್ತಿದೆ. ಇನ್ನೂ ಮೂರು ದಿನಗಳಲ್ಲಿ ವರದಿ ಬರುವ ನಿರೀಕ್ಷೆಯಿದೆ. ಈ ಅಧಿವೇಶನ ಇನ್ನೂ ಎರಡು ವಾರಗಳ ಕಾಲ ನಡೆಯಲಿದೆ. ವರದಿಯನ್ನು ಸದನದಲ್ಲಿ ಮಂಡಿಸುತ್ತೇವೆ. ಅದರಿಂದ ತೃಪ್ತಿಯಾಗದಿದ್ದರೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇವೆ” ಎಂದು ತಿಳಿಸಿದರು.ಅರಣ್ಯ ಇಲಾಖೆ ಅಧಿಕಾರಿಗಳು ತಪ್ಪು ಮಾಡಿದ್ದಾರೆ ಎಂಬುದು ತನಿಖೆಯಲ್ಲಿ ಕಂಡುಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.ಆದರೆ, ಪ್ರತಿಪಕ್ಷ ಸದಸ್ಯರು ನ್ಯಾಯಾಂಗ ತನಿಖೆಗೆ ಪಟ್ಟು ಹಿಡಿದರು. ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇದೇ ವೇಳೆ ಎನ್‌ಕೌಂಟರ್ ಬಗ್ಗೆ ಚರ್ಚೆಗೆ ಆಗ್ರಹಿಸಿದ ಅವರು, ಹೊಸ ಸ್ಪೀಕರ್ ಜಿ.ಎಸ್. ಪಾಟೀಲ್ ಅವರು ಪ್ರಶ್ನೋತ್ತರ ಅವಧಿ ಆರಂಭಿಸಲೂ ಅವಕಾಶ ನೀಡದೆ ಸದನದಲ್ಲಿ ಗದ್ದಲ ಎಬ್ಬಿಸಿದರು.
