ಬೆಂಗಳೂರು : ನೈಸ್ ರಸ್ತೆಯ (Nice Road) ಒಪ್ಪಂದ, ಟೋಲ್ ಸಂಗ್ರಹ ಹಾಗೂ ಭೂಸ್ವಾಧೀನಕ್ಕೆ (Land Encroachment) ಸಂಬಂಧಿಸಿದ ಹಲವು ವರ್ಷಗಳ ವಿವಾದಕ್ಕೆ ರಾಜ್ಯ ಸರ್ಕಾರ (State Govt) ಇದೀಗ ಮತ್ತೊಮ್ಮೆ ಕೈಹಾಕಿದೆ. ನೈಸ್ ಸಂಸ್ಥೆಯ ವಿರುದ್ಧ ಕೇಳಿಬಂದಿರುವ ಆರೋಪಗಳು ಮತ್ತು ಒಪ್ಪಂದದ ಷರತ್ತುಗಳ ಪಾಲನೆ ಕುರಿತು ಪರಿಶೀಲನೆ ನಡೆಸಲು ರಚಿಸಲಾಗಿರುವ ಆರು ಸಚಿವರ ಸಂಪುಟ ಉಪಸಮಿತಿ ತನ್ನ ಕಾರ್ಯವನ್ನು ಚುರುಕುಗೊಳಿಸಿದೆ. ಹೀಗಾಗಿ ಬೆಂಗಳೂರಿನ ಸುತ್ತಮುತ್ತ ನೈಸ್ ರಸ್ತೆಯನ್ನು ಬಳಸುವ ವಾಹನ ಸವಾರರಲ್ಲಿ ಮುಂದಿನ ದಿನಗಳಲ್ಲಿ ಟೋಲ್ ವ್ಯವಸ್ಥೆಯಲ್ಲಿ ಬದಲಾವಣೆಯಾಗಲಿದೆಯೇ ಎಂಬ ಕುತೂಹಲ ಮೂಡಿದೆ.
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚಿಸಲಾಗಿದ್ದು, ಕೆ.ಎಚ್. ಮುನಿಯಪ್ಪ, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ ಹಾಗೂ ಬೈರತಿ ಸುರೇಶ್ ಅವರು ಸದಸ್ಯರಾಗಿದ್ದಾರೆ. ನೈಸ್ ಯೋಜನೆಗೆ ಸಂಬಂಧಿಸಿದ ದಾಖಲೆಗಳು, ಒಪ್ಪಂದದ ಷರತ್ತುಗಳು ಹಾಗೂ ಇದುವರೆಗೆ ನಡೆದಿರುವ ಬೆಳವಣಿಗೆಗಳನ್ನು ಪರಿಶೀಲಿಸುವ ಜವಾಬ್ದಾರಿ ಸಮಿತಿಗೆ ನೀಡಲಾಗಿದೆ.
ನೈಸ್ ಸಂಸ್ಥೆ ಮತ್ತು ಸರ್ಕಾರದ ನಡುವಿನ ಮೂಲ ಫ್ರೇಮ್‌ವರ್ಕ್ ಒಪ್ಪಂದದ ಹಲವು ಷರತ್ತುಗಳು ಪಾಲನೆಯಾಗಿವೆಯೇ ಎಂಬುದು ಸಮಿತಿಯ ಪ್ರಮುಖ ಪರಿಶೀಲನಾ ವಿಷಯವಾಗಿದೆ. ಯೋಜನೆ ಪೂರ್ಣಗೊಳ್ಳಬೇಕಿದ್ದ ಅವಧಿ ಕಳೆದಿದ್ದರೂ ಕಾಮಗಾರಿ ಸಂಪೂರ್ಣವಾಗದಿರುವುದಕ್ಕೆ ಕಾರಣವೇನು ಎಂಬುದರ ಬಗ್ಗೆಯೂ ಸಮಿತಿ ಮಾಹಿತಿ ಸಂಗ್ರಹಿಸಲಿದೆ.
ಇದರ ಜತೆಗೆ ನೈಸ್ ರಸ್ತೆಯಲ್ಲಿ ನಡೆಯುತ್ತಿರುವ ಟೋಲ್ ಸಂಗ್ರಹದ ಬಗ್ಗೆಯೂ ಸರ್ಕಾರ ಗಮನಹರಿಸಿದೆ. ಒಪ್ಪಂದದಲ್ಲಿ ನಿಗದಿಪಡಿಸಿರುವ ನಿಯಮಗಳು ಹಾಗೂ ಅವಧಿಯನ್ನು ಮೀರಿ ಟೋಲ್ ವಸೂಲಿ ಮಾಡಲಾಗುತ್ತಿದೆಯೇ ಎಂಬ ಆರೋಪದ ಬಗ್ಗೆ ದಾಖಲೆಗಳ ಆಧಾರದ ಮೇಲೆ ಪರಿಶೀಲನೆ ನಡೆಯಲಿದೆ. ಈ ವಿಚಾರದಲ್ಲಿ ಸಮಿತಿಯ ಅಂತಿಮ ವರದಿ ಮಹತ್ವ ಪಡೆದುಕೊಳ್ಳಲಿದೆ.
ನೈಸ್ ಯೋಜನೆಗಾಗಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂಬ ಆರೋಪವೂ ಇದೆ. ಸ್ವಾಧೀನಪಡಿಸಿಕೊಂಡ ಭೂಮಿಯ ಬಳಕೆ ರಸ್ತೆ ಯೋಜನೆಗಷ್ಟೇ ಸೀಮಿತವಾಗಿದೆಯೇ ಅಥವಾ ವಾಣಿಜ್ಯ ಹಾಗೂ ರಿಯಲ್ ಎಸ್ಟೇಟ್ ಚಟುವಟಿಕೆಗಳಿಗೆ ಬಳಸಲಾಗಿದೆಯೇ ಎಂಬುದನ್ನೂ ಸಮಿತಿ ಪರಿಶೀಲಿಸಲಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ನೈಸ್ ರಸ್ತೆಯ ನಿರ್ವಹಣೆಯನ್ನು ಸರ್ಕಾರವೇ ವಹಿಸಿಕೊಳ್ಳುವ ಸಾಧ್ಯತೆಯ ಬಗ್ಗೆಯೂ ಚರ್ಚೆ ನಡೆದಿದೆ. ರಸ್ತೆ ಮತ್ತು ಟೋಲ್ ವ್ಯವಸ್ಥೆಯನ್ನು ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕೇ, ಟೋಲ್ ಸಂಗ್ರಹ ಮುಂದುವರಿಸಬೇಕೇ ಅಥವಾ ಸಾರ್ವಜನಿಕರಿಗೆ ಯಾವುದೇ ಟೋಲ್ ಇಲ್ಲದೆ ರಸ್ತೆ ಬಳಕೆಗೆ ಅವಕಾಶ ನೀಡಬೇಕೇ ಎಂಬ ವಿಚಾರವೂ ಪರಿಶೀಲನೆಯ ವ್ಯಾಪ್ತಿಯಲ್ಲಿದೆ.
ನೈಸ್ ರಸ್ತೆಯ ದುಬಾರಿ ಟೋಲ್ ದರದ ಬಗ್ಗೆ ವಾಹನ ಸವಾರರು ಹಲವು ವರ್ಷಗಳಿಂದ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರಿನ ಹೊರವಲಯದ ಪ್ರಮುಖ ಸಂಪರ್ಕ ಮಾರ್ಗವಾಗಿ ನೈಸ್ ರಸ್ತೆ ಬಳಕೆಯಾಗುತ್ತಿರುವುದರಿಂದ, ಟೋಲ್ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯಾದರೂ ಸಾವಿರಾರು ವಾಹನ ಸವಾರರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯಿದೆ.
ಸದ್ಯ ಸಂಪುಟ ಉಪಸಮಿತಿಯ ಪರಿಶೀಲನೆ ಯಾವ ನಿರ್ಧಾರಕ್ಕೆ ಕಾರಣವಾಗಲಿದೆ ಎಂಬುದೇ ಪ್ರಮುಖ ಪ್ರಶ್ನೆಯಾಗಿದೆ. ಒಪ್ಪಂದ ಉಲ್ಲಂಘನೆ, ಟೋಲ್ ಸಂಗ್ರಹ, ಭೂಸ್ವಾಧೀನ ಮತ್ತು ಯೋಜನೆಯ ನಿರ್ವಹಣೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಸಮಿತಿ ನೀಡುವ ವರದಿ ಆಧರಿಸಿ ರಾಜ್ಯ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ. ಹೀಗಾಗಿ ನೈಸ್ ರಸ್ತೆಯ ಭವಿಷ್ಯ ಮತ್ತು ಟೋಲ್ ವ್ಯವಸ್ಥೆ ಕುರಿತು ಸರ್ಕಾರದ ಅಂತಿಮ ನಿರ್ಧಾರದತ್ತ ಇದೀಗ ಎಲ್ಲರ ಗಮನ ನೆಟ್ಟಿದೆ.
