ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಅವರ ಸೇವೆಯ ಅವಧಿಯನ್ನು ಮೇ 21ರವರೆಗೆ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಅಲೋಕ್ ಮೋಹನ್ ಅವರ ಸೇವಾವಧಿ ಏಪ್ರಿಲ್ 30 ಕ್ಕೆ ಮುಕ್ತಾಯ ಆಗಲಿತ್ತು. ಹೊಸ ಡಿಜಿಪಿ ಆಯ್ಕೆಯ ವರೆಗೂ ಈಗಿರುವ ಅಲೋಕ್ ಮೋಹನ್ ಅವರ ಸೇವೆಯನ್ನು ಮೂರು ವಾರಗಳ ಕಾಲ ವಿಸ್ತರಿಸಲಾಗಿದೆ.
ಇದಕ್ಕಾಗಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸಹಿತ ಪ್ರಮುಖರ ಸಮಿತಿಯು ಅಲೋಕ್ ಮೋಹನ್ ಅವರ ಸೇವಾವಧಿಯನ್ನು ಮುಂದುವರೆಸಲು ನಿರ್ಧರಿಸಿದೆ ಎನ್ನಲಾಗಿದೆ. ಅಲೋಕ್ ಮೋಹನ್ ಅವರು ಕರ್ನಾಟಕದ ಡಿಜಿಪಿಯಾಗಿ ಅಧಿಕಾರ ಸ್ವೀಕರಿಸಿ ಮೇ 22ಕ್ಕೆ ಎರಡು ವರ್ಷ ತುಂಬಲಿದೆ. ಈ ಕಾರಣದಿಂದಲೇ ಅವರ ಸೇವಾವಧಿ ವಿಸ್ತರಿಸಲಾಗಿದೆ.
ಮುಂದಿನ ಡಿಜಿಪಿ ಸ್ಥಾನಕ್ಕೆ ಇಬ್ಬರ ಹೆಸರು ಪರಿಗಣನೆಯಲ್ಲಿದೆ. ಅದರಲ್ಲಿ ಡಾ.ಎಂ.ಎ.ಸಲೀಂ ಹಾಗೂ ಡಾ.ರಾಮಚಂದ್ರರಾವ್ ಹೆಸರು ಪರಿಗಣನೆಯಲ್ಲಿದೆ. ಸಲೀಂ ಪರವಾಗಿ ಸಿಎಂ ಸಿದ್ದರಾಮಯ್ಯ ಇದ್ದಾರೆ. ಕನ್ನಡಿಗರೊಬ್ಬರಿಗೆ ಅದರಲ್ಲೂ ಮುಸ್ಮೀಂ ಸಮುದಾಯದವರೊಬ್ಬರಿಗೆ ಡಿಜಿಪಿ ಹುದ್ದೆಯ ಅವಕಾಶ ಸಿಗಲಿ ಎನ್ನುವ ಲೆಕ್ಕಾಚಾರವೂ ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದಾಗಿದೆ.
ಇತ್ತ ಡಾ.ರಾಮಚಂದ್ರರಾವ್ ಹೆಸರು ಪಟ್ಟಿಯಲ್ಲಿದ್ದರೂ ತಮ್ಮ ಮಗಳ ಅಕ್ರಮ ಚಿನ್ನ ಸಾಗಾಟ ಪ್ರಕರಣದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಇವರಿಗೆ ಅವಕಾಶ ಕೈತಪ್ಪಿ ಹೋಗುವ ಸಂಭವವೇ ಹೆಚ್ಚು ಎನ್ನಲಾಗಿದೆ.