Home ರಾಜ್ಯ ವಿದ್ಯುತ್ ಖಾಸಗೀಕರಣಕ್ಕೆ ರಾಜ್ಯ ಸರ್ಕಾರದ ಆಕ್ಷೇಪಣೆ; ಕೆಇಆರ್‌ಸಿ ಅಂತಿಮ ಆದೇಶದ ಬಳಿಕ ಮುಂದಿನ ನಿರ್ಧಾರ: ಸಚಿವ...

ವಿದ್ಯುತ್ ಖಾಸಗೀಕರಣಕ್ಕೆ ರಾಜ್ಯ ಸರ್ಕಾರದ ಆಕ್ಷೇಪಣೆ; ಕೆಇಆರ್‌ಸಿ ಅಂತಿಮ ಆದೇಶದ ಬಳಿಕ ಮುಂದಿನ ನಿರ್ಧಾರ: ಸಚಿವ ಕೆ.ಜೆ. ಜಾರ್ಜ್

0

ದಾವಣಗೆರೆ: ರಾಜ್ಯದಲ್ಲಿ ವಿದ್ಯುತ್ ವಿತರಣಾ ಕ್ಷೇತ್ರದ ಖಾಸಗೀಕರಣ ವಿಚಾರ ಮತ್ತೆ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ, ವಿದ್ಯುತ್ ಖಾಸಗೀಕರಣಕ್ಕೆ ರಾಜ್ಯ ಸರ್ಕಾರ ತನ್ನ ಆಕ್ಷೇಪಣೆಯನ್ನು ದಾಖಲಿಸಲು ಎಸ್ಕಾಂಗಳಿಗೆ ಸೂಚನೆ ನೀಡಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಮಂಗಳವಾರ ದಾವಣಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಮುಂದೆ ಖಾಸಗೀಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಕೆಯಾಗಿದ್ದು, ಈ ಕುರಿತು ರಾಜ್ಯದ ಎಲ್ಲಾ ಎಸ್ಕಾಂಗಳು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬೇಕೆಂದು ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ಸಂಬಂಧಿಸಿದ ಕಾನೂನು ಚೌಕಟ್ಟಿನ ಬಗ್ಗೆ ಉಲ್ಲೇಖಿಸಿದ ಸಚಿವರು, 2003ರಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಕೇಂದ್ರ ವಿದ್ಯುತ್ ಕಾಯ್ದೆಗೆ (Central Electricity Act) ತಿದ್ದುಪಡಿ ತಂದು ಖಾಸಗೀಕರಣಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದಾಗ್ಯೂ, ಕರ್ನಾಟಕದಲ್ಲಿ ಈ ವ್ಯವಸ್ಥೆಯನ್ನು ಇದುವರೆಗೆ ಜಾರಿಗೆ ತರಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಸ್ತುತ ಕೆಇಆರ್‌ಸಿ ಮುಂದೆ ವಿಚಾರಣೆ ನಡೆಯುತ್ತಿದ್ದು, ಆಯೋಗದ ಅಂತಿಮ ಆದೇಶ ಹೊರಬಂದ ನಂತರ ರಾಜ್ಯ ಸರ್ಕಾರ ತನ್ನ ಮುಂದಿನ ನಡೆ ನಿರ್ಧರಿಸಲಿದೆ ಎಂದು ಸಚಿವರು ತಿಳಿಸಿದರು. ಈ ಕುರಿತು ಮುಖ್ಯಮಂತ್ರಿ ಈಗಾಗಲೇ ವಿದ್ಯುತ್ ನೌಕರರ ಸಂಘಟನೆಗಳೊಂದಿಗೆ ನಡೆದ ಸಭೆಯಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದು, ಕೆಇಆರ್‌ಸಿ ಆದೇಶದ ಬಳಿಕ ವಿಷಯವನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ ಎಂದು ಜಾರ್ಜ್ ವಿವರಿಸಿದರು.

ವಿದ್ಯುತ್ ಖಾಸಗೀಕರಣದ ಪ್ರಸ್ತಾಪ ರಾಜ್ಯದಲ್ಲಿ ರಾಜಕೀಯ ಹಾಗೂ ಕಾರ್ಮಿಕ ವಲಯಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಅಂತಿಮವಾಗಿ ಕೆಇಆರ್‌ಸಿ ಆದೇಶ ಮತ್ತು ರಾಜ್ಯ ಸಚಿವ ಸಂಪುಟದ ನಿರ್ಧಾರದತ್ತ ಎಲ್ಲರ ಗಮನ ನೆಟ್ಟಿದೆ.

You cannot copy content of this page

Exit mobile version