ಧಾರ್ಮಿಕ ಸೌಹಾರ್ದಕ್ಕೆ ಧಕ್ಕೆ ತರುವ ಉದ್ದೇಶದಿಂದ ಪ್ರಚೋದನಕಾರಿ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಕೊಪ್ಪಳದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಎರಡು ಪ್ರತ್ಯೇಕ ದೂರಿನ ಪ್ರಕರಣ ದಾಖಲಾಗಿದೆ. ಧಾರ್ಮಿಕ ಸಂಘರ್ಷವನ್ನು ಹುಟ್ಟು ಹಾಕುವ ಉದ್ದೇಶದಿಂದ ಯತ್ನಾಳ್ ಈ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕೊಪ್ಪಳದ ಕುವೆಂಪು ನಗರ ನಿವಾಸಿ ಅಬ್ದುಲ್ ಕಲಾಂ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದೂರು ನೀಡಿದ್ದಾರೆ. ಸಧ್ಯ ಈ ಹಿನ್ನೆಲೆಯಲ್ಲಿ ಕೊಪ್ಪಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಪ್ಪಳದಲ್ಲಿ ಅನ್ಯ ಕೋಮಿನ ನಡುವಿನ ಸಂಘರ್ಷದಲ್ಲಿ ಮೃತರಾದವರ ಮನೆಗೆ ಯೋಗಕ್ಷೇಮ ಮಾತನಾಡಿಸಲು ಬಂದಿದ್ದ ಯತ್ನಾಳ್, ಹಿಂದೂ ಯುವಕರು ಮುಸ್ಲಿಂ ಯುವತಿಯನ್ನು ಮದುವೆಯಾದರೆ 5 ಲಕ್ಷ ರೂ. ಕೊಡುತ್ತೇನೆ, ಕೊಲೆ ಮಾಡುವ ಮುಸ್ಲಿಮರಿಗೆ ಉತ್ತರ ನೀಡಬೇಕಿದೆ. ಸದ್ಯ ರಾಜ್ಯದಲ್ಲಿ ಸಾಬರ ಸರಕಾರವಿದೆ ಎಂದು ಹೇಳಿಕೆ ನೀಡಿದ್ದರು. ಸಧ್ಯ ಈ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿತ್ತು.
ಮುಸ್ಲಿಂ ಮಹಿಳೆಯರನ್ನು ಕೀಳಾಗಿ ಕೆಟ್ಟ ಮನಸ್ಥಿತಿಯಿಂದ ನೋಡುವುದಲ್ಲದೇ ಅವರನ್ನು ಅವಮಾನ ಮಾಡಿದ್ದಾರೆ ಎಂದು ದೂರು ನೀಡಿರುವುದರಿಂದ ಪ್ರಕರಣ ದಾಖಲಾಗಿದೆ.
ಮತ್ತೊಂದು ದೂರಿನಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕ್ರಮ ಜರುಗಿಸಬೇಕೆಂದು ಬೆಂಗಳೂರಿನ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಒತ್ತಾಯಿಸಿದರು. ಕೊಪ್ಪಳ ನಗರ ಠಾಣೆಗೆ ಬುಧವಾರ ಭೇಟಿ ನೀಡಿದ ನಂತರ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ವಿರುದ್ಧ ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಮುಸ್ಲಿಂ ಯುವತಿಯನ್ನು ಮದುವೆಯಾದರೇ ಐದು ಲಕ್ಷ ಕೊಡುತ್ತೇನೆ ಎಂದು ಹೇಳಿದ್ದರೂ ಯಾಕೆ ಈವರೆಗೂ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.