Home ಅಂಕಣ ರಾಜ್ಯಗಳಿಂದಲೇ ದೇಶ

ರಾಜ್ಯಗಳಿಂದಲೇ ದೇಶ

0

ಭಾಷೆ ಎನ್ನುವುದು ಭಾವನಾತ್ಮಕವಾಗಿ ತುಂಬಾ ಸಂವೇದನಾಶೀಲ ಸಂಗತಿ. ಭಾಷಾ ಅಸ್ಮಿತೆಗಳ ಮೇಲಿನ ದಾಳಿಯು ಸಮುದಾಯಗಳ ಅಸ್ಮಿತೆಯ ಮೇಲಿನ ದಾಳಿಯಾಗಿ, ಅಂತಿಮವಾಗಿ ಪ್ರತ್ಯೇಕತೆಯ ಭಾವನೆಗೆ ಇಂಬು ಕೊಡುತ್ತದೆ. ಇದಾಗ ಬಾರದು ಎನ್ನುವ ಶ್ರೀನಿವಾಸ ಕಾರ್ಕಳ ಅವರ ಕನ್ನಡ ರಾಜ್ಯೋತ್ಸವ ವಿಶೇಷ ಲೇಖನ ಶ್ರೀನಿ ಕಾಲಂ ನಲ್ಲಿ.

ಇಂದಿಗೆ ಸುಮಾರು ನೂರ ಎಂಟು ವರ್ಷಗಳ ಹಿಂದೆ, ಅಂದರೆ ಆಗಸ್ಟ್ 3, 1914 ರಂದು, ಪುಣೆಯ ಡೆಕ್ಕನ್ ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ಸಮ್ಮುಖದಲ್ಲಿ, ಧಾರವಾಡದಿಂದ ಬಂದ ಕನ್ನಡಿಗ ಆಲೂರು ಕೃಷ್ಣರಾಯರು ‘ಪಾಸ್ಟ್ ಗ್ಲೋರಿ ಆಫ್ ಕರ್ನಾಟಕ’ (ಗತಕಾಲದ ಕರ್ನಾಟಕದ ವೈಭವ) ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ್ದರು. ಈ ಭಾಷಣ ಇಂಗ್ಲಿಷ್ ನಲ್ಲಿದ್ದುದರಿಂದ ಕೆಲ ಮಹಾರಾಷ್ಟ್ರೀಯರೂ ಉಪನ್ಯಾಸ ಆಲಿಸಲು ಅಲ್ಲಿ ಸೇರಿದ್ದರು.

ಚಾರಿತ್ರಿಕ ಸಂಗತಿಗಳನ್ನು ಪ್ರತ್ಯಕ್ಷ ಕಂಡವರಂತೆ, ಹೃದಯಸ್ಪರ್ಶಿಯಾಗಿ ಆಡಿದ ಆಲೂರರ ಮಾತುಗಳನ್ನು ಅಲ್ಲಿನ ಮರಾಠೀ ಪ್ರಾಧ್ಯಾಪಕರು ಮೆಚ್ಚಿ, ‘ಕರ್ನಾಟಕದ ಗತಕಾಲದ ವೈಭವ ರೋಮಾಂಚಕಾರಿಯಾಗಿದೆ. ಅದು ಭಾರತದ ಚರಿತ್ರಸಾಗರದ ಒಂದು ಮುಖ್ಯ ಅಂಗ, ಅದು ಮಹಾರಾಷ್ಟ್ರದ ಇತಿಹಾಸ ಕೂಡ ಆಗಿದೆ, ಆಲೂರ ಅವರ ಇಂದಿನ ವ್ಯಾಖ್ಯಾನ ನಮ್ಮಲ್ಲಿ ನವಸ್ಫೂರ್ತಿಯನ್ನು ಉಂಟು ಮಾಡಿದೆ’ ಎಂದು ಹೇಳಿದರು.

‘ಕರ್ನಾಟಕವು ನಮ್ಮ ಹೃದಯದಲ್ಲಿ ಇದೆ’

ಸಭೆ ಮುಗಿಯಿತು. ವೆಂಕಟರಾಯರು ಕನ್ನಡದಲ್ಲಿ ಕೆಲವು ಮಾತು ಆಡಬೇಕೆಂಬುದು ವಿದ್ಯಾರ್ಥಿಗಳ ಆಶಯವಾಗಿತ್ತು. ವೆಂಕಟರಾಯರು ಸಮ್ಮತಿಸಿ, ಹೀಗೆ ಮಾತನಾಡಿದರು- “ಕರ್ನಾಟಕವು ಎಲ್ಲಿದೆ, ಎಂದು ಕೇಳುವ ಜನ ನಮ್ಮಲ್ಲಿ ಸಾಕಷ್ಟಿದ್ದಾರೆ. ಇದಕ್ಕೆ ನನ್ನ ಉತ್ತರ: ನಿಮ್ಮ ಹೃದಯದಲ್ಲಿ. ಇಂದಿನ ಕರ್ನಾಟಕ ಭೌಗೋಲಿಕವಾಗಿ ಮುಂಬಯಿ ಪ್ರಾಂತದ ನಾಲ್ಕು ಜಿಲ್ಲೆಗಳಲ್ಲಿ ಮತ್ತು ಬೇರೆ ಬೇರೆ ಸಂಸ್ಥಾನಗಳಲ್ಲಿ ಹರಿದು ಹಂಚಿಹೋಗಿರಬಹುದು. ಆದರೆ ಕೇವಲ ಭೂಪ್ರದೇಶ ಅಥವಾ ಜನಸಂಖ್ಯೆಯ ಮೊತ್ತದಿಂದ ಮಾತ್ರ ಕರ್ನಾಟಕವನ್ನು ನಾವು ಅರಿಯಲಾರೆವು. ಜನತೆಯ ಶಕ್ತಿ-ಸಾಹಸ, ಸಾಧನೆ-ಸಿದ್ಧಿಗಳಲ್ಲಿ ಒಂದು ದೇಶದ ಘನತೆ ಇದೆ, ಬೆಲೆ ಇದೆ. ಈ ದೃಷ್ಟಿಯಿಂದಲೇ ನಾನು ಹೇಳುವುದು ‘ಕರ್ನಾಟಕವು ನಮ್ಮ ಹೃದಯದಲ್ಲಿ ಇದೆ’ ಎಂದು; ನಾವು ಬೆಳೆದರೆ ಕರ್ನಾಟಕವು ಬೆಳೆಯುತ್ತದೆ ಎಂದು ಅರ್ಥ. ಇಂದು ಒಂದು ಘಟಕವಾಗಿ ನಮ್ಮ ಕಣ್ಣಿಗೆ ಕಾಣದಿದ್ದರೂ, ಕರ್ನಾಟಕವೂ ಒಂದು ಜೀವಂತ ರಾಷ್ಟ್ರ ಎಂಬ ನನ್ನ ಮಾತಿನಲ್ಲಿ ನೀವು ವಿಶ್ವಾಸವಿಡಿ.

ಕರ್ನಾಟಕವೇ ಒಂದು ರಾಷ್ಟ್ರ..

ಹೌದು- ಇದು ನನ್ನ ಉತ್ತರ. ರಾಷ್ಟ್ರೀಯತ್ವವು ಒಂದು ಕಲ್ಪನೆ. ಯಾವ ಕಲ್ಪನೆಯು ನಮ್ಮನ್ನು ಸಂಪೂರ್ಣವಾಗಿ ಆಕರ್ಷಿಸಿ, ದೇಶಸೇವೆಗೆ ಪ್ರೇರಕ ಶಕ್ತಿಯಾಗುತ್ತದೆಯೋ ಅದು ರಾಷ್ಟ್ರೀಯತ್ವ. ಈ ಕಲ್ಪನೆಯು ಇಂದು ಬಂಗಾಲ ಮತ್ತು ಮಹಾರಾಷ್ಟ್ರದಲ್ಲಿ ತೀವ್ರ ಸ್ವರೂಪದಲ್ಲಿದೆ. ಆ ಪ್ರಾಂತಗಳು ಎಚ್ಚೆತ್ತು ತಮ್ಮ ರಾಷ್ಟ್ರೀಯತೆಯ ಬಲವನ್ನು ಪ್ರಸ್ತಾಪಿಸಿವೆ. ಸ್ವಾತಂತ್ರ್ಯ ಸಮರದಲ್ಲಿ ಧೈರ್ಯದಿಂದ ಮುನ್ನಡಿ ಇಡುತ್ತಿವೆ. ಅದೇ ರೀತಿಯಲ್ಲಿ ಕರ್ನಾಟಕವು ಎಚ್ಚರಾಗಬೇಕು. ತಾನು ಶಕ್ತಿವಂತವಾಗಿ ಬೆಳೆದು, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನ ಕಾಣಿಕೆಯನ್ನು ಸಲ್ಲಿಸುವಂತಾದಾಗ ಮಾತ್ರ ಕರ್ನಾಟಕದ ರಾಷ್ಟ್ರೀಯತ್ವ ಆವಾಹನವಾಗುತ್ತದೆ.

ಚರಿತ್ರೆಯ ಅಭ್ಯಾಸ ನಮ್ಮಲ್ಲಿ ಅಭಿಮಾನ ಹುಟ್ಟಿಸುತ್ತದೆ. ಅಭಿಮಾನವೆಂದರೆ ಸಾತ್ವಿಕ ಅಹಂಕಾರ. ‘ನಾನು ನನ್ನದು’ ಎಂಬ ಭಾವ ಇಲ್ಲದ ಬದುಕು ಬದುಕಲ್ಲ. ವ್ಯಕ್ತಿ, ಸಂಸಾರ, ಸಮಾಜ – ಇವುಗಳ ಬಗ್ಗೆ ಈ ಭಾವನೆ ಬೆಳೆದು ವಿಶಾಲವಾಗುತ್ತ ಹೋಗುತ್ತದೆ. ಈ ವಿಕಾಸವು ವ್ಯಕ್ತಿಯ ಸಂಸ್ಕಾರವನ್ನವಲಂಬಿಸಿರುತ್ತದೆ. ‘ನಮ್ಮದೀ ನಮ್ಮದೀ ಕನ್ನಡನಾಡು’ ಎಂಬ ಭಾವ ಕರ್ನಾಟಕತ್ವವನ್ನು ಸೂಚಿಸಿದರೆ, ‘ನಮ್ಮದೀ ನಮ್ಮದೀ ಭರತ ಭೂಮಿ’ ಎಂಬ ಭಾವ ರಾಷ್ಟ್ರೀಯತ್ವವನ್ನು ವ್ಯಕ್ತಪಡಿಸುತ್ತದೆ. ಅವೆರಡರಲ್ಲಿ, ನನ್ನ ದೃಷ್ಟಿಯಲ್ಲಿ ಯಾವ ಅಂತರವೂ ಇಲ್ಲ.

ಕರ್ನಾಟಕತ್ವವನ್ನು ಪ್ರಾದೇಶಿಕ ರಾಷ್ಟ್ರೀಯತೆಯೆಂದು ಕರೆಯಬಹುದು. ಅದು ರಾಜಕೀಯವೂ ಅಲ್ಲ, ಶುದ್ಧ ಧಾರ್ಮಿಕವೂ ಅಲ್ಲ. ಅದು ಸಂಸ್ಕೃತಿ ನಿಷ್ಠವಾದುದು. ಭಾಷೆ ಅದರ ಆಧಾರ. ಭಾರತದ ಸಮಸ್ತ ಪ್ರಾದೇಶಿಕ ಸಂಸ್ಕೃತಿಗಳ ಒಟ್ಟಂದವೇ ಭಾರತದ ರಾಷ್ಟ್ರೀಯತೆ ಇದನ್ನು ಗ್ರಹಿಸಲು ನಮಗೆ ವಿಶೇಷ ಸಾಧನೆ ಬೇಕು.

ಕರ್ನಾಟಕತ್ವದ ಅಭಿಮಾನವಿಲ್ಲದೆ ನಾವು ರಾಷ್ಟ್ರಕಾರ್ಯ ಮಾಡಲಾರೆವೆ? – ಇನ್ನೊಂದು ಪ್ರಶ್ನೆ. ನನ್ನ ದೃಷ್ಟಿಯಲ್ಲಿ, ಅದು ಸಾಧ್ಯವಿಲ್ಲ. ಮಾತ್ರವಲ್ಲ, ಕರ್ನಾಟಕವನ್ನು ಅಲಕ್ಷಿಸುವವರು ಭಾರತದ ರಾಷ್ಟ್ರೀಯತೆಯನ್ನು ಅರ್ಥ ಮಾಡಿಕೊಳ್ಳಲಾರರು ಎಂಬುದು ನನ್ನ ಅಭಿಪ್ರಾಯ. ಅಭಿಮಾನದಿಂದ ಕಾರ್ಯಪ್ರೇರಣೆ. ಕರ್ನಾಟಕತ್ವದ ಅಭಿಮಾನ ಎಂದರೆ ಕರ್ನಾಟಕದ ಉನ್ನತಿಗಾಗಿ ಶ್ರಮಿಸುವ ಹಂಬಲ. ದೇಶಕಾರ್ಯವು ಸುತ್ತಲಿನ ಜನತೆಯೊಂದಿಗೆ ಹೆಣೆದುಕೊಂಡಿರುತ್ತದೆ – ಇವು ಆಲೂರು ಅವರ ಮಾತುಗಳು.

ಕನ್ನಡ ಪ್ರದೇಶಗಳ ಏಕೀಕರಣಕ್ಕೆ ದುಡಿದ ಬಹಳ ಮುಖ್ಯ ವ್ಯಕ್ತಿಗಳಲ್ಲಿ ಒಬ್ಬರಾದ ಮತ್ತು ಕನ್ನಡದ ಮೇಲಿನ ಪ್ರೀತಿ, ಬದ್ಧತೆ ಹಾಗೂ ಕನ್ನಡಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಕಾರಣಕ್ಕೆ ‘ಕನ್ನಡ ಕುಲ ಪುರೋಹಿತ’ ಎಂಬ ಹೆಸರು ಗಳಿಸಿದ ಆಲೂರು ವೆಂಕಟರಾಯರು ‘ಕರ್ನಾಟಕವೇ ಒಂದು ರಾಷ್ಟ್ರ, ಕರ್ನಾಟಕವೇ ಒಂದು ಪ್ರಾದೇಶಿಕ ರಾಷ್ಟ್ರೀಯತೆ, ಭಾರತದ ಸಮಸ್ತ ಪ್ರಾದೇಶಿಕ ಸಂಸ್ಕೃತಿಗಳ ಒಟ್ಟಂದವೇ ಭಾರತದ ರಾಷ್ಟ್ರೀಯತೆ’ ಎಂದು ಆಡಿದ ಮಾತುಗಳನ್ನು ಗಮನಿಸಿ. ಆಲೂರರು ನೂರ ಎಂಟು ವರ್ಷಗಳ ಹಿಂದೆ ಆಡಿದ ಮಾತುಗಳನ್ನು ಈಗ ನಾವು ಮತ್ತೆ ನೆನಪಿಸಿಕೊಳ್ಳುವಂತಹ ಮತ್ತು ನಮ್ಮನ್ನು ಆಳುವವರಿಗೆ ನೆನಪಿಸಿಕೊಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ದೌರ್ಭಾಗ್ಯವೇ ಸರಿ.

ಚೆಲುವ ಕನ್ನಡ ನಾಡು ಉದಯವಾಗಿದೆಯೇ?

ಕನ್ನಡದ ಅನೇಕ ಕಟ್ಟಾಳುಗಳ ತ್ಯಾಗ ಬಲಿದಾನ, ಅವಿರತ ಹೋರಾಟದಿಂದ ಬೇರೆ ಬೇರೆ ಪ್ರದೇಶಗಳಲ್ಲಿ ಹರಿದು ಹಂಚಾಗಿದ್ದ ಹೆಚ್ಚಿನ ಕನ್ನಡ ಪ್ರದೇಶಗಳು ಒಂದಾಗಿವೆ ನಿಜ. ಮಾತ್ರವಲ್ಲ, ಮೈಸೂರು ರಾಜ್ಯ ಎಂಬ ಹೆಸರು ಹೋಗಿ ಕರ್ನಾಟಕ ರಾಜ್ಯವಾಗಿದೆ, ಹುಯಿಲಗೋಳರ ‘ಉದಯವಾಗಲಿ ಚೆಲುವ ಕನ್ನಡ ನಾಡು’ ಎಂಬ ಹಾಡನ್ನು ‘ಉದಯವಾಯಿತು ಚೆಲುವ ನಾಡು’ ಎಂದು ಹಾಡಿದ್ದೂ ಇದೆ. ಆದರೆ ನಿಜವಾಗಿಯೂ ಚೆಲುವ ಕನ್ನಡ ನಾಡು ಉದಯವಾಗಿದೆಯೇ? ಕನ್ನಡ ನಾಡಿನ ಆತ್ಮ ಮತ್ತು ಅಸ್ಮಿತೆಯಾದ ಕನ್ನಡ ಸುರಕ್ಷಿತವಾಗಿದೆಯೇ?

ಒಂದು ಉಪಖಂಡದಂತಹ ದೇಶವಾದ ಭಾರತದ ಬುನಾದಿಯೇ ಬಹುತ್ವ. ವೈವಿಧ್ಯವೇ ಭಾರತದ ವೈಶಿಷ್ಟ್ಯ. ಇಲ್ಲಿರುವುದು ಅನೇಕತೆಯಲ್ಲಿ ಏಕತೆಯಲ್ಲ; ಅನೇಕತೆಯ ಮೂಲಕ ಏಕತೆ. ಇಲ್ಲಿ ಅನೇಕ ಮತಧರ್ಮ, ಸಂಸ್ಕೃತಿಗಳಿವೆ. ಇಲ್ಲಿರುವಷ್ಟು ಭಾಷೆಯಾದರೋ ಜಗತ್ತಿನ ಎಲ್ಲಿಯೂ ಕಾಣಸಿಗದು. ಭಾರತದಲ್ಲಿ 19,569 ಭಾಷೆಗಳಿವೆ. ಇದರಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನರು ಮಾತನಾಡುವ ಭಾಷೆಗಳ ಸಂಖ್ಯೆಯೇ 40. ಕರ್ನಾಟಕ ರಾಜ್ಯವೊಂದರಲ್ಲಿಯೇ 62 ಭಾಷೆಗಳಿವೆ!

ಒಂದು ರಾಷ್ಟ್ರವಾಗಿ ಭಾರತ ಹೇಗಿರಬೇಕು, ಅದರ ಸಂವಿಧಾನ ಹೇಗಿರಬೇಕು ಎಂಬುದನ್ನು ಪರಿಕಲ್ಪಿಸಿದ ನಮ್ಮ ಹಿರಿಯರಿಗೆ ಭಾರತದ ಬಹುತ್ವ ಸ್ವರೂಪ ಮತ್ತು ಅದರ ಧರ್ಮನಿರಪೇಕ್ಷತೆಯ ಅನಿವಾರ್ಯತೆಯ ಬಗ್ಗೆ ಸ್ಪಷ್ಟತೆ ಇತ್ತು. ಇದು ಎಲ್ಲರ ಭಾರತ ಎಂಬ ಅರಿವಿತ್ತು. ಹಾಗಾಗಿಯೇ ಭಾರತ ಸಂವಿಧಾನ ಗ್ರಂಥದಲ್ಲಿ ಅವರು ‘ವಿ ದ ಪೀಪಲ್ ಆಫ್ ಹಿಂದೂಸ್ ಅಥವಾ ಮುಸ್ಲಿಂಸ್’ ಎಂದೆಲ್ಲ ಹೇಳದೆ, ‘ವಿ ದ ಪೀಪಲ್ ಆಫ್ ಇಂಡಿಯಾ’ ಎಂದರು. ಭಾರತವನ್ನು ರಾಷ್ಟ್ರ ಎಂದು ಕರೆಯದೆ ‘ಯೂನಿಯನ್ ಆಫ್ ಸ್ಟೇಟ್ಸ್’, (ರಾಜ್ಯಗಳ ಒಕ್ಕೂಟ) ಎಂದು ಕರೆದರು. ಅದಕ್ಕೆ ಅನುಗುಣವಾಗಿ ರಾಜ್ಯಗಳಿಗೆ ಮಾನ್ಯತೆ ನೀಡಲಾಯಿತು; ಅನೇಕ ಅಧಿಕಾರಗಳೊಂದಿಗೆ ಒಂದು ರೀತಿಯ ಸ್ವಾಯತ್ತೆಯನ್ನು ನೀಡಲಾಯಿತು. ಅವರು ಯಾವ ಭಾಷೆಯನ್ನೂ ರಾಷ್ಟ್ರಭಾಷೆ ಎಂದು ಘೋಷಿಸಲಿಲ್ಲ. ದೇಶದ 22 ಮುಖ್ಯ ಭಾಷೆಗಳನ್ನು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರಿಸಿದರು.

ಆರಂಭದಲ್ಲಿ ದೇಶದ ಆಡಳಿತದ ಚುಕ್ಕಾಣಿ ಹಿಡಿದ ಪಂಡಿತ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಎಲ್ಲರೂ ದೇಶದ ಒಕ್ಕೂಟ ಸ್ವರೂಪಕ್ಕೆ ಮನ್ನಣೆ ನೀಡುತ್ತಾ, ಹೆಚ್ಚಿನ ಎಲ್ಲ ಭಾಷೆಗಳನ್ನು ಸಮಾನವಾಗಿ ಗೌರವಿಸುತ್ತ, ಸುಸೂತ್ರ ಆಡಳಿತ ನಡೆಸಿದರು. ದಕ್ಷಿಣದ ರಾಜ್ಯಗಳು, ಅದರಲ್ಲೂ ಮುಖ್ಯವಾಗಿ ತಮಿಳುನಾಡು ಹಿಂದಿ ಹೇರಿಕೆಯನ್ನು ಪ್ರಬಲವಾಗಿ ವಿರೋಧಿಸಿದಾಗ ಆ ವಿರೋಧವನ್ನು ಮಾನ್ಯ ಮಾಡಿ ಸಂಘರ್ಷ ರಹಿತವಾಗಿ ಆಡಳಿತ ನಡೆಸಿದರು.

ಒಕ್ಕೂಟ ವ್ಯವಸ್ಥೆಯ ಮೇಲೆ ದಾಳಿ…

2014ನೇ ಇಸವಿಯಿಂದ ದೇಶದ ಒಕ್ಕೂಟ ವ್ಯವಸ್ಥೆಯ ಮೇಲೆ ಕೇಂದ್ರದಲ್ಲಿರುವ ಸರಕಾರದಿಂದ ನಡೆಯುವ ದಾಳಿಯ ತೀವ್ರತೆ ಹೆಚ್ಚಾಗಿದೆ. ಇದು ಬಹುಮುಖ್ಯವಾಗಿ ಎರಡು ರೀತಿಯಲ್ಲಿ ನಡೆಯುತ್ತಿದೆ. ಸಂವಿಧಾನದ ಪ್ರಕಾರ ಇಲ್ಲಿನ ಕೆಲವು ಅಧಿಕಾರಗಳು ಕೇಂದ್ರದ ಬಳಿಯೂ, ಇನ್ನು ಕೆಲವು ಅಧಿಕಾರಗಳು ರಾಜ್ಯಗಳ ಪಟ್ಟಿಯಲ್ಲಿ ಬಂದರೆ, ಮತ್ತೆ ಕೆಲವು ಅಧಿಕಾರಗಳು ಜಂಟಿ ಪಟ್ಟಿಯಲ್ಲಿ ಬರುತ್ತದೆ. ಆದರೆ ಈಗೀಗ ಹಣಕಾಸು, ಕೃಷಿ, ಶಿಕ್ಷಣ, ಪೊಲೀಸ್ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಕೇಂದ್ರ ಕೈಯಾಡಿಸುತ್ತಾ ರಾಜ್ಯಗಳಿಗೆ ಬಹುತೇಕ ಯಾವ ಅಧಿಕಾರವೂ ಇಲ್ಲದಂತೆ ಮಾಡಲಾಗುತ್ತಿದೆ. ತೆರಿಗೆ ವಿಧಿಸುವ ಅಧಿಕಾರವೆಲ್ಲವೂ ಒಕ್ಕೂಟ ಸರಕಾರದ ಬಳಿ ಇರುವುದರಿಂದ ಹಣಕಾಸಿಗಾಗಿ ರಾಜ್ಯಗಳು ಅದರ ಮುಂದೆ ಕೈಚಾಚಿ ನಿಲ್ಲುವಂತಾಗಿದೆ.

ಭಾಷೆಗಳ ಮೇಲೆ ದಾಳಿ..

ಇನ್ನೊಂದೆಡೆ, ದೇಶದ ಬಹುತ್ವವನ್ನು ನಾಶಪಡಿಸುವ ಏಕರೂಪೀಕರಣ ಕಾರ್ಯತಂತ್ರದ ಭಾಗವಾಗಿ ಭಾಷೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಇಡೀ ದೇಶದ ಮೇಲೆ ಹಿಂದಿಯನ್ನು ಹೇರಲಾಗುತ್ತಿದೆ. ಬ್ಯಾಂಕ್, ಅಂಚೆ ಕಚೇರಿ, ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣ, ರಕ್ಷಣಾ ಇಲಾಖೆ.. ಹೀಗೆ ಕೇಂದ್ರ ಸರಕಾರದ ಅಡಿಯಲ್ಲಿ ಬರುವ ಎಲ್ಲ ಕಡೆಯೂ ಹಿಂದಿಯು ವ್ಯಾಪಕವಾಗಿ ಬೇರು ಬಿಟ್ಟಿದೆ. 2015 ರಿಂದ ಕೇಂದ್ರ ಸರಕಾರ ಜಾರಿಗೆ ತಂದ ಎಲ್ಲ ಯೋಜನೆಗಳ ಹೆಸರು ಹಿಂದಿಯಲ್ಲಿ ಇವೆ. ಸಂಸತ್ ಕಲಾಪ, ಮಂತ್ರಿಗಳ ಭಾಷಣ. ಅಧಿಕಾರಿಗಳ ಪತ್ರಿಕಾಗೋಷ್ಠಿ ಎಲ್ಲವೂ ಹಿಂದಿಯಲ್ಲಿ. ಹಿಂದಿ ಅನುಷ್ಠಾನಕ್ಕೆ ಕೋಟಿ ಕೋಟಿ ವ್ಯಯಿಸಲಾಗುತ್ತಿದೆ. ಹಿಂದಿ ವೈಭವೀಕರಣದ ನಡುವೆ ಇತರ ಭಾಷೆಗಳಿಗೆ ಪ್ರೋತ್ಸಾಹ ಇಲ್ಲವಾಗಿ ಈವತ್ತು ನಮ್ಮ ದೇಶದಲ್ಲಿ ಸುಮಾರು ಮೂರೂವರೆ ಕೋಟಿ ಜನಗಳ ತಾಯಿ ನುಡಿಗಳು ಪತನಮುಖಿಯಾಗಿವೆ.

ಕನ್ನಡ ಭಾಷೆಯ ದುಸ್ಥಿತಿ…

ಒಂದೆಡೆಯಲ್ಲಿ ಜಾಗತಿಕ ಭಾಷೆ ಇಂಗ್ಲಿಷ್, ಇನ್ನೊಂದೆಡೆಯಲ್ಲಿ ಹಿಂದಿ, ಇವುಗಳ ದಾಳಿಯಿಂದಾಗಿ ಕನ್ನಡದ ಪರಿಸ್ಥಿತಿ ಹೇಗಿದೆ? ಕರ್ನಾಟಕದ ಒಟ್ಟು ಜನಸಂಖ್ಯೆ 6,10,95,297 ಆಗಿದ್ದು, ಇದರಲ್ಲಿ 4,37,06,512 ಮಂದಿ ತಮ್ಮ ಮಾತೃಭಾಷೆಯನ್ನು ಕನ್ನಡವೆಂದು ಅಂಗೀಕರಿಸಿಕೊಂಡಿದ್ದಾರೆ. ಇದು ಒಟ್ಟು ಭಾರತೀಯ ಭಾಷೆಗಳ ಶೇಕಡಾ 3.61 ಆಗಿದ್ದು ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಉಳಿದಂತೆ, ಬಂಗಾಳಿ (ಶೇಕಡಾ 8.3), ಮರಾಠಿ (ಶೇಕಡಾ 6.86), ತೆಲುಗು (ಶೇಕಡಾ 6.70), ತಮಿಳು (ಶೇಕಡಾ 5.70), ಗುಜರಾತಿ (ಶೇಕಡಾ 4.58) ಮತ್ತು ಉರ್ದು (ಶೇಕಡಾ 4.19) ಭಾಷೆಗಳು ಸಂಖ್ಯೆಯ ದೃಷ್ಟಿಯಿಂದ ಕನ್ನಡಕ್ಕಿಂತ ಮೇಲೆ ಇವೆ. ಹಿಂದಿ ಭಾಷೆಯು ಶೇಕಡಾ 56 ರ ಬೆಳವಣಿಗೆ ತೋರಿಸುತ್ತಿರುವಾಗ ಈ ಭಾಷೆಗಳು ಕಡಿಮೆ ಬೆಳವಣಿಗೆ ತೋರಿಸುತ್ತಿರುವುದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿದೆ.

ಯೂನೆಸ್ಕೋವು ಸಿದ್ಧಪಡಿಸಿದ ‘ಭಾಷೆಗಳ ಜಾಗತಿಕ ಭೂಪಟ’ವು ಭಾರತದಲ್ಲಿನ 172 ಭಾಷೆಗಳನ್ನು ಅಪಾಯದ ಅಂಚಿನಲ್ಲಿರುವ ಭಾಷೆಗಳೆಂದೂ, ಅದರಲ್ಲಿ 101 ಭಾಷೆಗಳನ್ನು ಅತೀವ ಅಪಾಯದಲ್ಲಿರುವ ಭಾಷೆಗಳೆಂದೂ, 71 ಭಾಷೆಗಳನ್ನು ಎಲ್ಲ ಬಗೆಯ ಅಪಾಯಗಳಿಗೆ ಬಲಿಯಾಗುತ್ತಿರುವ ಭಾಷೆಗಳೆಂದೂ ಗುರುತಿಸಿದೆ. ದೇಶದ ಭಾಷೆಗಳಿಗೆ ಸಂಬಂಧಿಸಿದಂತೆ ಒಕ್ಕೂಟ ಸರಕಾರದ ತಾರತಮ್ಯ ನೀತಿಯಿಂದ ಮತ್ತು ಭಾರತಕ್ಕೊಂದು ಸ್ಪಷ್ಟ ಭಾಷಾ ನೀತಿಯೇ ಇಲ್ಲದ ಕಾರಣ ದೇಶದ ಅಮೂಲ್ಯ ಸಂಪತ್ತಾದ ನೂರಾರು ಭಾಷೆಗಳು ಅಪಾಯದಲ್ಲಿವೆ.

ಅಭಿಮಾನ ಹರಿಯ ಬೇಕಾದುದೇ ಹೀಗೆ..

ದೇಶದಲ್ಲಿ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿವೆ. ಇವು ದೇಶ ಎಂಬ ಸೌಧದ ಆಧಾರ ಕಂಬಗಳಿದ್ದಂತೆ. ಯಾವ ಒಂದು ಕಂಬ ದುರ್ಬಲಗೊಂಡರೂ ಸೌಧ ಕುಸಿದು ಬೀಳುತ್ತದೆ. ಹಾಗಾಗಿ ಆ ಎಲ್ಲ ಕಂಬಗಳು ಬಲಿಷ್ಠ ಇರುವಂತೆ ನೋಡಿಕೊಳ್ಳುವುದು ಬಹಳ ಅಗತ್ಯ. ಆಲೂರು ಕೃಷ್ಣರಾಯರು ಅಂದಂತೆ “ಅಭಿಮಾನವೆಂದರೆ ಸಾತ್ವಿಕ ಅಹಂಕಾರ. ‘ನಾನು ನನ್ನದು’ ಎಂಬ ಭಾವ ಇಲ್ಲದ ಬದುಕು, ಬದುಕಲ್ಲ. ವ್ಯಕ್ತಿ, ಸಂಸಾರ, ಸಮಾಜ – ಇವುಗಳ ಬಗ್ಗೆ ಈ ಭಾವನೆyou ಬೆಳೆದು ವಿಶಾಲವಾಗುತ್ತ ಹೋಗುತ್ತದೆ”. ನಮ್ಮನ್ನು ಪ್ರೀತಿಸದೆ ನಾವು ಬೇರೆಯವರನ್ನು ಪ್ರೀತಿಸಲಾರೆವು. ಸಹಜವಾಗಿಯೇ ನಮಗೆ ನಮ್ಮ ಮನೆ ಮೊದಲು, ಆಮೇಲೆ ಊರು, ತಾಲೂಕು, ಜಿಲ್ಲೆ, ರಾಜ್ಯ, ದೇಶ ಹೀಗೆ ನಮ್ಮ ಅಭಿಮಾನ ಹರಿಯುವುದೇ ಹೀಗೆ.

ಪ್ರಜ್ಞಾವಂತ ಪ್ರಜೆಗಳ ಜವಾಬ್ದಾರಿ…

ಕನ್ನಡಿಗರಿಗೆ ಕರ್ನಾಟಕವೇ ಒಂದು ರಾಷ್ಟ್ರವಿದ್ದಂತೆ. ಕನ್ನಡವೇ ರಾಷ್ಟ್ರಭಾಷೆ ಇದ್ದಂತೆ. ಇಂತಹ ಅಭಿಮಾನದ ಭಾವನೆಯಿಂದ ದೇಶದ ಏಕತೆಗೇನೂ ತೊಂದರೆ ಇಲ್ಲ. ತದ್ವಿರುದ್ಧವಾಗಿ ಒಂದು ದೇಶ, ಒಂದು ಧರ್ಮ, ಒಂದು ಸಂಸ್ಕೃತಿ, ಒಂದು ಭಾಷೆ ಎಂದು ದೇಶಭಕ್ತಿ ಮತ್ತು ರಾಷ್ಟ್ರವಾದದ ಹೆಸರಿನಲ್ಲಿ ಏಕರೂಪೀಕರಣಕ್ಕೆ ಹೊರಟರೆ, ಅದು ಭಾರತ ಎಂಬ ಪರಿಕಲ್ಪನೆಗೆ ಹಾನಿ ಮಾಡುವುದಲ್ಲದೆ, ಪ್ರಾದೇಶಿಕ ಅಸಮಾಧಾನಕ್ಕೆ ಕಾರಣವಾಗುತ್ತದೆ. ಭಾಷೆ ಎನ್ನುವುದು ಭಾವನಾತ್ಮಕವಾಗಿ ತುಂಬಾ ಸಂವೇದನಾಶೀಲ ಸಂಗತಿ. ಭಾಷಾ ಅಸ್ಮಿತೆಗಳ ಮೇಲಿನ ದಾಳಿಯು ಸಮುದಾಯಗಳ ಅಸ್ಮಿತೆಯ ಮೇಲಿನ ದಾಳಿಯಾಗಿ, ಅಂತಿಮವಾಗಿ ಪ್ರತ್ಯೇಕತೆಯ ಭಾವನೆಗೆ ಇಂಬು ಕೊಡುತ್ತದೆ. ಇದಾಗಬಾರದು; ಇದಾಗದಂತೆ ನೋಡಿಕೊಳ್ಳುವುದು ನಮ್ಮನ್ನು ಆಳುವವರ ಜವಾಬ್ದಾರಿ. ನಮ್ಮನ್ನು ಆಳುವವರು ಈ ಜವಾಬ್ದಾರಿಯಿಂದ ವಿಮುಖರಾಗದಂತೆ ನೋಡಿಕೊಳ್ಳುವುದು ಪ್ರಜ್ಞಾವಂತ ಪ್ರಜೆಗಳಾದ ನಮ್ಮ ಜವಾಬ್ದಾರಿ.

ಶ್ರೀನಿವಾಸ ಕಾರ್ಕಳ
ಚಿಂತಕರು, ಸಾಮಾಜಿಕ ಕಾರ್ಯಕರ್ತರಾಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

You cannot copy content of this page

Exit mobile version