Saturday, April 26, 2025

ಸತ್ಯ | ನ್ಯಾಯ |ಧರ್ಮ

ರಾಜ್ಯದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ವಾಪಸ್ಸು ಕಳಿಸಲು ಕ್ರಮ ಕೈಗೊಳ್ಳಲಾಗುವುದು- ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು, ಏಪ್ರಿಲ್ 26: ಕೇಂದ್ರ ಸರ್ಕಾರದ ಸೂಚನೆಯಂತೆ, ಕರ್ನಾಟಕ ರಾಜ್ಯದಲ್ಲಿರಬಹುದಾದ ಪಾಕಿಸ್ತಾನಿ ಪ್ರಜೆಗಳ ಬಗ್ಗೆ ಮಾಹಿತಿ ಕಲೆಹಾಕಿ, ಅವರನ್ನು ವಾಪಸ್ಸು ಕಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ರಾಜ್ಯದ ವಿವಿಧ ನಗರಗಳಲ್ಲಿ ಪಾಕಿಸ್ತಾನಿಗಳ ಸಂಖ್ಯೆ  ಬಗ್ಗೆ ಹಾಗೂ ಬೆಂಗಳೂರಿನಲ್ಲಿ ಪಾಕಿಸ್ತಾನಿಗಳ ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಬಗ್ಗೆ ಮಾಹಿತಿ ಪಡೆಯಲಾಗವುದು ಎಂದರು.

ಕಾಶ್ಮೀರದಲ್ಲಿ ಭದ್ರತೆ ಹೆಚ್ಚಿಸಬೇಕಿತ್ತು
ಕಾಶ್ಮೀರದ ಉಗ್ರರ ದಾಳಿ ಘಟನೆಯಲ್ಲಿ ಭದ್ರತಾ ವೈಫಲ್ಯವನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ,  ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸ್ಥಳಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಬೇಕಿತ್ತು.ಹಿಂದೆ ಪುಲ್ವಾಮಾದಲ್ಲಿಯೂ 40 ಜನ ಯೋಧರು ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯಲ್ಲಿ ಭದ್ರತಾ ವೈಫಲ್ಯವಾಗಿದೆ. ಕೇಂದ್ರ ಸರ್ಕಾರದವರನ್ನು ನಂಬಿ ಪ್ರವಾಸಿಗರು ಹೋಗಿದ್ದರು ಹಾಗೂ ಈಗ ಯಾವುದೇ ಕ್ರಮಗಳನ್ನು ಕೇಂದ್ರ ಕೈಗೊಂಡರೂ, ಪ್ರಾಣ ಕಳೆದುಕೊಂಡ 26 ಜನ ಮತ್ತೆ ಬದುಕಿ ಬರಲು ಸಾಧ್ಯವೇ ? ಕಾಶ್ಮೀರದಲ್ಲಿ ಸಿಲುಕಿದ್ದ ಕನ್ನಡಿಗರ ರಕ್ಷಣೆಗೆ ಸಚಿವ ಸಂತೋಷ್ ಲಾಡ್ ಅವರನ್ನು ನಿಯೋಜಿಸಿದ್ದು, ಅವರು ಎಲ್ಲ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತಂದಿದ್ದಾರೆ ಎಂದರು.

ನಾವು ಯುದ್ಧದ ಪರ ಇಲ್ಲ
ಉಗ್ರರ ದಾಳಿಗೆ ಸಂಬಂಧಿಸಿದಂತೆ, ಪಾಕಿಸ್ತಾನದ ಮೇಲೆ ಯುದ್ಧ ಸಾರುವ ಅನಿವಾರ್ಯತೆ ಇದೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ, ಪಾಕಿಸ್ತಾನದ ಮೇಲೆ ಯುದ್ಧ ಸಾರುವ ಅಗತ್ಯವಿಲ್ಲ. ಕಾಶ್ಮೀರದ ಪ್ರದೇಶದಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲು ಕ್ರಮ ಕೈಗೊಳ್ಳಬೇಕು. ನಾವು ಯುದ್ಧದ ಪರ ಇಲ್ಲ. ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಕೇಂದ್ರಸರ್ಕಾರ ಭದ್ರತೆಯನ್ನು ಹೆಚ್ಚಿಸಬೇಕು ಎಂದರು.

ಪ್ರಧಾನಿಯವರು ಜನರಿಗೆ ಟೋಪಿ ಹಾಕುವ ಕೆಲಸ
ಕಾಶ್ಮೀರದ ಉಗ್ರರ ದಾಳಿಗೆ ಸಂಭಂಧಿಸಿದಂತೆ ಕರೆಯಲಾಗಿದ್ದ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿಯವರು ಭಾಗವಹಿಸದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಇದು ಮಹತ್ವಯುತ ಸಭೆಯಾಗಿದ್ದು, ಪ್ರಧಾನಿಯವರು ಈ ಸಭೆಯಲ್ಲಿ ಹಾಜರಿರಬೇಕಿತ್ತು. ಆದರೆ ಅವರಿಗೆ ಈ ಸಭೆಗಿಂತ ಬಿಹಾರದ ಚುನಾವಣಾ ಪ್ರಚಾರವೇ ಮುಖ್ಯವೆಂದು ಕಾಣುತ್ತದೆ. ಪ್ರಧಾನಿಯವರು ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದರು.

ಚಾಮರಾಜನಗರಕ್ಕೆ 20 ಬಾರಿ ಮುಖ್ಯಮಂತ್ರಿಯಾಗಿ ಭೇಟಿ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು,ಚಾಮರಾಜನಗರಕ್ಕೆ ಮೊದಲ ಬಾರಿ ಭೇಟಿ ನೀಡಿದಾಗಲೇ, ಅಲ್ಲಿಗೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆಂಬ ಕಳಂಕ ತೊಡೆದುಹೋಯಿತು ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page