ಆಸ್ಟ್ರೇಲಿಯಾದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ಮೂವರು ಮಾತ್ರ ಹತ್ತು ಸಾವಿರ ರನ್ ಗಳಿಸಿದ್ದಾರೆ. ಒಟ್ಟಾರೆಯಾಗಿ, 14 ಜನರು ಈ ಗೌರವವನ್ನು ಪಡೆದಿದ್ದಾರೆ.
ಆದರೆ, ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಆ ಪಟ್ಟಿಗೆ ಸೇರಲು ಕೇವಲ ಒಂದು ರನ್ ದೂರದಲ್ಲಿ ನಿಂತಿದ್ದಾರೆ. ಇತ್ತೀಚೆಗೆ ಸಿಡ್ನಿಯಲ್ಲಿ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ಕೇವಲ 4 ರನ್‌ಗಳಿಗೆ ಔಟಾದರು. ಸ್ಮಿತ್ ಅವರನ್ನು ಭಾರತದ ವೇಗಿ ಪ್ರಸಿದ್ಧ್ ಕೃಷ್ಣ ಔಟ್ ಮಾಡಿದರು.
ತವರಿನಲ್ಲಿ ಮೈಲಿಗಲ್ಲು ಸಾಧಿಸಲು ಸೋತಿದ್ದರಿಂದ ಬೇಸರಗೊಂಡಿದ್ದರೂ, ಪಂದ್ಯ ಗೆದ್ದಿದ್ದಕ್ಕೆ ಸಂತೋಷವಾಗಿದೆ ಎಂದು ಸ್ಮಿತ್ ಹೇಳಿದರು. ಸ್ಮಿತ್ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಸಿಕ್ಸರ್ಸ್ ಪರ ಆಡಲಿದ್ದಾರೆ. ಅವರು ಶನಿವಾರ ಪರ್ತ್ ಸ್ಕಾರ್ಚರ್ಸ್ ತಂಡವನ್ನು ಎದುರಿಸಲಿದ್ದಾರೆ. ಈ ಬಗ್ಗೆ ಸ್ಟೀವ್ ಸ್ಮಿತ್ ಫಾಕ್ಸ್ ಸ್ಪೋರ್ಟ್ಸ್ ಜೊತೆ ಮಾತನಾಡಿದರು.
“ಟೆಸ್ಟ್‌ನಲ್ಲಿ 10,000 ಮೈಲಿಗಲ್ಲು ತಪ್ಪಿಸಿಕೊಂಡಿರುವುದು ಸ್ವಲ್ಪ ನೋವುಂಟು ಮಾಡಿದೆ.” ಆದರೆ, ಕೊನೆಯಲ್ಲಿ ತಂಡ ಜಯಶಾಲಿಯಾಗಿ ಹೊರಹೊಮ್ಮಿದ್ದು ಸಂತೋಷ ತಂದಿತು. ನಾವು ಸರಣಿಯನ್ನು ಗೆಲ್ಲಲು ಸಾಧ್ಯವಾಯಿತು ಅದೇ ಮುಖ್ಯ ವಿಷಯ. ವೈಯಕ್ತಿಕವಾಗಿ ಒಂದು ಅವಕಾಶ ತಪ್ಪಿ ಹೋಗಿದೆ. ಮನೆಗೆ ಹಿಂತಿರುಗಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆಚರಿಸುವ ಅವಕಾಶ ತಪ್ಪಿಹೋಗಿದೆ. ಅದು ಆಗಿದ್ದರೆ ನನಗೆ ತುಂಬಾ ಸಂತೋಷವಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
“ಅದೇನೇ ಇದ್ದರೂ, ಗ್ಯಾಲೆಯಲ್ಲಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ನಾನು ಈ ಗಡಿ ದಾಟುವ ನಿರೀಕ್ಷೆಯಿದೆ” ಎಂದು ಅವರು ಹೇಳಿದರು. ಶ್ರೀಲಂಕಾ ವಿರುದ್ಧದ ಸರಣಿಗೆ ಸ್ಮಿತ್ ನಾಯಕನಾಗಿ ಆಸೀಸ್ ತಂಡವನ್ನು ಮುನ್ನಡೆಸಲಿದ್ದಾರೆ.