ಚಿತ್ರ ಮುಗಿಯಿತು. ಥಿಯೇಟರ್ ಒಳಗೆ ಒಬ್ಬರ ಉಸಿರು ಇನ್ನೊಬ್ಬರಿಗೆ ಕೇಳಿಸುವಷ್ಟು ನೀರವತೆ. ಎಲ್ಲರ ಕೊರಳನ್ನು ಯಾರೋ ಹಗ್ಗ ಹಾಕಿ ಗಟ್ಟಿಯಾಗಿ ಬಿಗಿದಂಥ ಕ್ಲೈಮಾಕ್ಸ್.
ಪ್ರೊಜೆಕ್ಷನ್ ಆಫ್ ಆದರೂ ಎಲ್ಲರಂತೆ ಮೌನವಾಗಿ ಕುಳಿತೇ ಇದ್ದೆ. ಹಿಂದಿನ ಸೀಟ್ ನಲ್ಲಿ ಕುಳಿತ ವ್ಯಕ್ತಿಯನ್ನು ಅವನ ಹೆಂಡತಿ ‘ಏಳ್ರೀ..’ ಅಂತಿದ್ರು. ಆತ.. ಇರು.. ಆಗ್ತಿಲ್ಲ.. ಅಂದ. ಅವನ ಪರಿಸ್ಥಿತಿಯೇ ಬಹುಷಃ ಥಿಯೇಟರ್ ನಲ್ಲಿದ್ದ ಎಲ್ರದ್ದು ಆಗಿತ್ತು. ಮಾರಿ ಸೇಲ್ವರಾಜ್’ನ ಹೊಸ ಚಿತ್ರ ‘vaalai’ ಕೊಟ್ಟ Haunting Bizzare mood ಇಂದ ಇನ್ನು ನನ್ನಿಂದ ಹೊರಬರಲಾಗುತಿಲ್ಲ. ಈ ಚಿತ್ರ ಕೊಟ್ಟ ಗಾಢ ಅನುಭವ ಅಂಥದ್ದು. ಚಿತ್ರದ ಬಗ್ಗೆ ಏನು ಬರೆಯಲೂ ಮಾತುಗಳು, ಪದಗಳು ಹುಟ್ಟುತ್ತಿಲ್ಲ.
ನಿರ್ದೇಶಕರ ‘ಮಾರಿ’ ಸೀದಾ ನನ್ನಂಥ ಬಡತನದ ಬಾಲ್ಯದೊಳಗೆ ಹರಡಿಕೊಂಡ ಅಷ್ಟಿಷ್ಟು ಸಂಭ್ರಮ, ಕೂಲಿ ಕೆಲಸ, ಅನ್ನದ ಹಸಿವು, ಸಾಮಾಜಿಕಥೆಯ ಅಪಮಾನಗಳನ್ನು ಸರದಂತೆ ಪೋಣಿಸಿ ನಮ್ಮ ಕೊರಳಿಗೆ ಹಾಕಿ, ಎಣಿಸಿಕೊಳ್ಳಿ ಎಂದು ನಮ್ಮೆದುರು ಕುಳಿತೆಬಿಟ್ಟಿದ್ದಾನೆ. ಮಾರಿ ಚಿತ್ರದುದ್ದಕ್ಕೂ ನನ್ನದೇ ಬಾಲ್ಯದಲ್ಲಿ ನೋಡಿದ, ಕೇಳಿದ ಅನುಭವಿಸಿದ ಎಲ್ಲವನ್ನು ಬಾಳೆ ತೋಟದ ಕಥೆಯ ಮೂಲಕ ನನಗೇ ಹೇಳಿ ಕಳಿಸಿಬಿಟ್ಟ. ಬಾಳೆತೋಟದ ಜಾಗದಲ್ಲಿ ಕೆರೆಗಳಲ್ಲಿ ಇಟ್ಟಿಗೆ ಸುಡುವ ಭಟ್ಟಿಗಳಿಟ್ಟರೆ ಇದು ನನ್ನದೇ ಬಾಲ್ಯ.
ತುಮಕೂರು ಅಮಾನಿಕೆರೆಯ ಹನುಮನರಸನಯ್ಯನ ಇಟ್ಟಿಗೆ ಭಟ್ಟಿ, ತಲೆಯ ಮೇಲಿನ ಬಟ್ಟೆ ಸಿಂಬೆಯ ಮೇಲೆ ಹೊರುತ್ತ ಇದ್ದ 12 ಇಟ್ಟಿಗೆಗಳ ಯಮಭಾರ, ಧಿಮಿ ಧಿಮಿ ಧಿಮಿ ಎನ್ನುತಿದ್ದ ನೆತ್ತಿ, ಅವ್ವನ ಬೈಗುಳಗಳು, ಕೆರೆಯ ಕೊಕ್ಕರೆ ಹೊಡೆದು ಬೇಯಿಸಿ ಕೊಡುತಿದ್ದ ಹಂದಿಜೋಗರ ಆಂಜಿನಿ, ಮಣ್ಣು ಕಲೆಸುತಿದ್ದ ನರಸಮ್ಮ, ಲೋಡ್ ಲಾರಿಯ ನರಸಿಂಹಣ್ಣ, ಜೊತೆಗೆ ಇಟ್ಟಿಗೆ ಹೊರುತಿದ್ದ ವಕ್ಕೋಡಿ ಆನಂದ, ಬುಲ್ಲ, ತಿಮ್ಮಿ, ನೇತ್ರ, ಹಸಿವು ನೀಗಿಸುತಿದ್ದ ಅಮಾನಿಕೆರೆ ಕೆರೆ ಮೀನುಗಳು, ಊಟಕ್ಕೆ ಉಪ್ಪು ಮೆಣಸು ಕಲಿಸಿದ ಮುದ್ದೆ.. ಕೈಗೆ ಸಿಗುತಿದ್ದ 10 ರೂಪಾಯಿ ದಿನಗೂಲಿ, ಅದರಲ್ಲಿ ಮನೆಗೆ ಕೊಟ್ಟು ಉಳಿಸಿದ ಕಾಸಲ್ಲಿ ತಿಂದ ಬೇಕರಿ ಕ್ರೀಮ್ ಬನ್ನು.. ಪ್ರತಿ ಮಳೆಗೂ ಬೀಳುತ್ತದೆ ಎಂದು ಭಯ ಹುಟ್ಟಿಸುತಿದ್ದ ಗಾರೆ ಕಳಚಿದ ಮನೆ..
ಮಾರಿ ಎಲ್ಲವನ್ನು ನೆನಪಿಸಿಬಿಟ್ಟ.. ಸಿನಿಮಾ ಬಗ್ಗೆ ಏನೇ ಬರೆದರೂ.. ಮಾರಿ ಕೊಟ್ಟ ದಟ್ಟ ಬಡತನದ ದಿನಗಳ ಯಾತನಾಮಯ ಅನುಭವ ಚೆಲ್ಲಿ ಹೋಗುವ ಆತಂಕ.. ಏನೂ ಬರೆಯಲು ಆಗುತ್ತಿಲ್ಲ..
ದಯಾನಂದ್ ಟಿ.ಕೆ