Home ಬ್ರೇಕಿಂಗ್ ಸುದ್ದಿ ಅಮೆರಿಕಾ–ಇಸ್ರೇಲ್ ಸಾಮ್ರಾಜ್ಯಶಾಹಿ ಯುದ್ದ ನೀತಿ ನಿಲ್ಲಲಿ -ಪ್ರಗತಿಪರ ಸಂಘಟನೆಗಳ ಆಗ್ರಹ

ಅಮೆರಿಕಾ–ಇಸ್ರೇಲ್ ಸಾಮ್ರಾಜ್ಯಶಾಹಿ ಯುದ್ದ ನೀತಿ ನಿಲ್ಲಲಿ -ಪ್ರಗತಿಪರ ಸಂಘಟನೆಗಳ ಆಗ್ರಹ

ಹಾಸನ: ಅಮೆರಿಕಾ, ಇಸ್ರೇಲ್ ಹಾಗೂ ಇರಾನ್ ನಡುವೆ ನಡೆಯುತ್ತಿರುವ ಯುದ್ಧವನ್ನು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಸನದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಹಾಗೂ ಪ್ರಗತಿಪರ ಚಿಂತಕ ಆರ್.ಪಿ. ವೆಂಕಟೇಶ ಮೂರ್ತಿ, ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉಲ್ಬಣವಾಗುತ್ತಿರುವ ಯುದ್ಧ ಪರಿಸ್ಥಿತಿ ಜಗತ್ತನ್ನು ವಿನಾಶದ ಅಂಚಿನತ್ತ ತಳ್ಳುತ್ತಿರುವುದಾಗಿ ಆತಂಕ ವ್ಯಕ್ತಪಡಿಸಿದರು. ಅಮೆರಿಕಾ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ಕ್ಷಿಪಣಿ ದಾಳಿಗಳು, ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಮತ್ತು ಅವರ ಕುಟುಂಬದವರ ಹತ್ಯೆ ಸೇರಿದಂತೆ ನಡೆಯುತ್ತಿರುವ ಘಟನೆಗಳು ಜಾಗತಿಕವಾಗಿ ಭಾರೀ ಆತಂಕಕ್ಕೆ ಕಾರಣವಾಗಿವೆ ಎಂದು ಅವರು ಹೇಳಿದರು. ಇದಕ್ಕೆ ಪ್ರತಿಯಾಗಿ ಇರಾನ್, ಇಸ್ರೇಲ್ ಮಾತ್ರವಲ್ಲದೆ ಮಧ್ಯಪ್ರಾಚ್ಯದ ವಿವಿಧ ರಾಷ್ಟ್ರಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಪ್ರತಿ ದಾಳಿಗಳನ್ನು ನಡೆಸುತ್ತಿದೆ. ಇದರ ಪರಿಣಾಮವಾಗಿ ಅನೇಕ ನಗರಗಳ ಕಟ್ಟಡಗಳು ಧ್ವಂಸವಾಗಿದ್ದು, ತೈಲ ಸಂಗ್ರಹ ಕೇಂದ್ರಗಳು ನಾಶವಾಗುತ್ತಿವೆ. ನಿರಪರಾಧ ನಾಗರಿಕರು ಪ್ರಾಣ ಕಳೆದುಕೊಳ್ಳುತ್ತಿರುವುದು ಮಾನವೀಯತೆಗೆ ವಿರುದ್ಧವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇಂದಿನ ವಿಶ್ವದಲ್ಲಿ ಮೈಟ್ ಇಸ್ ರೈಟ್ಎಂಬ ಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ದುಃಖದ ಸಂಗತಿ. ರಾಜಕೀಯ, ಆರ್ಥಿಕ ಹಾಗೂ ಸೇನಾ ಶಕ್ತಿ ಹೊಂದಿದ ರಾಷ್ಟ್ರಗಳು ಇತರ ದೇಶಗಳ ಮೇಲೆ ಸುಲಭವಾಗಿ ದಾಳಿ ನಡೆಸುವ ಪರಿಸ್ಥಿತಿ ಉಂಟಾಗಿದೆ. ನಾಗರಿಕರ ಮೇಲೆ ಬಾಂಬ್ ದಾಳಿ ನಡೆಸಿ ಸಾವಿರಾರು ಜನರನ್ನು ಕೊಲ್ಲುವಂತಹ ಘಟನೆಗಳು ನಡೆಯುತ್ತಿದ್ದರೂ ಪ್ರಶ್ನಿಸುವವರು ಇಲ್ಲದಂತಾಗಿದೆ ಎಂದು ಅವರು ಹೇಳಿದರು. ಎರಡನೇ ಮಹಾಯುದ್ಧದ ಭೀಕರ ಪರಿಣಾಮಗಳನ್ನು ಕಂಡ ವಿಶ್ವ ನಾಯಕರು ಸೇರಿ ವಿಶ್ವಸಂಸ್ಥೆಯನ್ನು ಸ್ಥಾಪಿಸಿದರೂ, ಇಂದು ಅದರ ಮೂಲ ಆಶಯಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಟೀಕಿಸಿದರು.

ವಿಶ್ವಸಂಸ್ಥೆಯ ಕೇಂದ್ರ ಕಚೇರಿ ಇರುವ ಅಮೆರಿಕಾ ದೇಶವೇ ಅನೇಕ ರಾಷ್ಟ್ರಗಳ ಮೇಲೆ ಯುದ್ಧ ನಡೆಸುತ್ತಿರುವುದು ವಿಷಾದನೀಯ. ಇಂತಹ ಸಂದರ್ಭಗಳಲ್ಲಿ ವಿಶ್ವಸಂಸ್ಥೆಯ ಅಸಹಾಯಕ ಸ್ಥಿತಿ ಕಂಡು ವಿಶ್ವದ ಜನರು ನ್ಯಾಯಕ್ಕಾಗಿ ಯಾರ ಬಳಿ ಹೋಗಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದರು.

ಇರಾಕ್, ಲಿಬಿಯಾ, ಆಫ್ಘಾನಿಸ್ತಾನ ಸೇರಿದಂತೆ ಅನೇಕ ರಾಷ್ಟ್ರಗಳ ಮೇಲೆ ನಡೆದ ಯುದ್ಧಗಳನ್ನು ಉಲ್ಲೇಖಿಸಿದ ಅವರು, ಪ್ಯಾಲೆಸ್ತೀನ್ ಪ್ರದೇಶದಲ್ಲಿ ಇಸ್ರೇಲ್ ನಡೆಸಿದ ದಾಳಿಗಳಿಂದ ಸಾವಿರಾರು ನಾಗರಿಕರು ಬಲಿಯಾಗಿರುವುದು ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು. ಉಕ್ರೇನ್–ರಷ್ಯಾ ಯುದ್ಧದ ಸಂದರ್ಭದಲ್ಲೂ ವಿಶ್ವಸಂಸ್ಥೆ ಪರಿಣಾಮಕಾರಿ ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ಆಕ್ಷೇಪಿಸಿದರು. ಯುದ್ಧಗಳಿಂದ ಉಂಟಾಗುವ ಪ್ರಾಣಹಾನಿ ಮತ್ತು ಆಸ್ತಿ ನಷ್ಟ ಮಾತ್ರವಲ್ಲದೆ ಜಾಗತಿಕ ಆರ್ಥಿಕ ವ್ಯವಸ್ಥೆಯ ಮೇಲೂ ದುಷ್ಪರಿಣಾಮ ಬೀರುತ್ತದೆ. ಜೊತೆಗೆ ಪರಿಸರದ ಮೇಲೆ ಉಂಟಾಗುವ ಹಾನಿ ಉಹಾತೀತವಾಗಿದೆ. 2015ರಲ್ಲಿ ನಡೆದ ಪ್ಯಾರಿಸ್ ಸಮಾವೇಶದಲ್ಲಿ ಜಾಗತಿಕ ತಾಪಮಾನ ಏರಿಕೆಯನ್ನು ನಿಯಂತ್ರಿಸಲು ದೇಶಗಳು ಒಪ್ಪಂದ ಮಾಡಿಕೊಂಡಿದ್ದರೂ, ಇಂತಹ ಯುದ್ಧಗಳು ಆ ಗುರಿಗಳನ್ನು ಹಿನ್ನಡೆಯಿಸುತ್ತಿವೆ ಎಂದು ಅವರು ಹೇಳಿದರು.

ವಿಶ್ವಸಂಸ್ಥೆಯ ಮಹಾಸಚಿವರು ಯುದ್ಧ ನಿಲ್ಲಿಸಲು ದೃಢವಾದ ಕ್ರಮ ಕೈಗೊಳ್ಳಬೇಕು. ವಿಶ್ವದ ಜನರು ಕೂಡ ಯುದ್ಧಗಳ ವಿರುದ್ಧ ಒಗ್ಗಟ್ಟಾಗಿ ಧ್ವನಿ ಎತ್ತಬೇಕು ಎಂದು ಅವರು ಕರೆ ನೀಡಿದರು.

ಪ್ರತಿಭಟನೆಯಲ್ಲಿ ಕೆ.ಟಿ.ಶಿವಪ್ರಸಾದ್, ವೇದಾವತಿ, ಪೃತ್ವಿ, ಅನಂತರಾಜೇ ಅರಸ್ ಡಾ. ಸಾವಿತ್ರಿ, ಮಲ್ನಾಡ್‌ಮೆಹಬೂಬ್ ಅರವಿಂದ್, ರಾಜ್ ಶೇಖರ್, ಅಕ್ಮಲ್ ಜಾವೀದ್ ಧರ್ಮೇಶ್ ‌ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

You cannot copy content of this page

Exit mobile version