Home ವಿಶೇಷ ಅಡುಗೆಗೆ ಬ್ರಾಹ್ಮಣ ಮತ್ತು ಮೇಲ್ಜಾತಿಯವರು- ಕಕ್ಕಸು ತೊಳೆಯಲು ದಲಿತರು!

ಅಡುಗೆಗೆ ಬ್ರಾಹ್ಮಣ ಮತ್ತು ಮೇಲ್ಜಾತಿಯವರು- ಕಕ್ಕಸು ತೊಳೆಯಲು ದಲಿತರು!

0
ಡಿಸೆಂಬರ್ 10, 2020 ರಂದು ದಿ ವೈರ್‌ನಲ್ಲಿ ಪ್ರಕಟಿಸಲಾದ ಸುಕನ್ಯಾ ಶಾಂತರವರ ಈ  ಲೇಖನವನ್ನು 'ಬಾರ್ಡ್-ದಿ ಪ್ರಿಸನ್ಸ್ ಪ್ರಾಜೆಕ್ಟ್' ಎಂಬ ಪುಲಿಟ್ಜರ್ ಸೆಂಟರ್ ಆನ್ ಕ್ರೈಸಿಸ್ ರಿಪೋರ್ಟಿಂಗ್ ಸಹಭಾಗಿತ್ವದಲ್ಲಿ ತಯಾರಿಸಲಾದ ಸೀರಿಸ್‌ನಿಂದ ಆಯ್ದುಕೊಳ್ಳಲಾಗಿದೆ. ಇವರು ಸಲ್ಲಿಸಿದ ಅರ್ಜಿಯ ಮೇರೆಗೆ ಜೈಲು ಕೈಪಿಡಿಗಳಲ್ಲಿನ ಜಾತಿ ಆಧಾರಿತ ತಾರತಮ್ಯವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ  ದಿ ವೈರ್‌ನಿಂದ ತರ್ಜುಮೆ ಮಾಡಲಾಗಿದೆ....

ಬೆಂಗಳೂರು: ಅಲ್ವಾರ್ ಜಿಲ್ಲಾ ಕಾರಾಗೃಹದಲ್ಲಿರುವ ಅಜಯ್ ಕುಮಾರ್ ಮೊದಲ ದಿನವೇ ತನ್ನ ಸಂಕಷ್ಟಗಳನ್ನು ಎದುರಿಸಲು ಸಜ್ಜಾಗುತ್ತಿದ್ದರು. ಚಿತ್ರಹಿಂಸೆ, ಹಳಸಿದ ಆಹಾರ, ಕೊರೆಯುವ ಚಳಿ ಮತ್ತು ಕಠಿಣ ದುಡಿಮೆ – ಇವೇ ಇರುವ ಜೈಲುಗಳ ಭೀಕರ ವಾಸ್ತವಗಳ ಬಗ್ಗೆ ಬಾಲಿವುಡ್ ಸಿನೇಮಾಗಳನ್ನು ನೋಡಿ ಅವರು ತಿಳಿದುಕೊಂಡಿದ್ದರು. ಇವರನ್ನು ಜೈಲಿನ ಎತ್ತರದ ಕಬ್ಬಿಣದ ಗೇಟ್‌ವೇ ಒಳಗೆ ಕರೆದುಕೊಂಡು ಹೋದ ತಕ್ಷಣ ” ಗುನಾಹ್ ಬತಾವೋ (ನಿನ್ನ ಅಪರಾಧ ಏನು ಅಂತ ಹೇಳು),” ಎಂದು ಅಲ್ಲಿನ ಅಂಡರ್‌ಟ್ರಯಲ್ (UT) ವಿಭಾಗದ ಪೋಲೀಸ್ ಕಾನ್‌ಸ್ಟೆಬಲ್ ಕೇಳಿದ. 

“ಕೌನ್ ಜಾತಿ (ನಿನ್ನ ಜಾತಿ ಯಾವುದು)?” ಎಂದು ಕಾನ್‌ಸ್ಟೇಬಲ್ ಹಾಸ್ಯದಿಂದಲೇ ಕೇಳಿದಾಗ ಅಜಯ್ ಏನನ್ನೋ ಗೊಣಗುತ್ತಾ ಗೊಂದಲದಿಂದಲೇ ಹಿಂಜರಿಯುತ್ತಾ, “ರಜಕ್” ಎಂದು ಹೇಳಿದರು. ಪೇದೆಗೆ ಇವರು ನೀಡಿದ ಉತ್ತರದಿಂದ ತೃಪ್ತಿಯಾಗಲಿಲ್ಲ. ಮತ್ತಷ್ಟು ವಿಚಾರಿಸಿದ. “ ಬಿರಾದಾರಿ ಬತಾವೋ (ಜಾತಿ ವರ್ಗವನ್ನು ಹೇಳು)” ಎಂದು ಮತ್ತೆ ಕೇಳಿದ.  ಇದುವರೆಗೆ ಅಜಯ್‌ ಅವರ ಜೀವನದ ಅಸಂಗತ ಭಾಗವೆಂದರೆ ಅವರ ಜಾತಿ ಗುರುತು. ಇವರ “ಪರಿಶಿಷ್ಟ ಜಾತಿ” ಜೈಲಿನಲ್ಲಿ ಇವರ 97 ದಿನಗಳನ್ನು ನಿರ್ಧರಿಸಲಿದೆ. 

2016 ರಲ್ಲಿ  ಕೇವಲ 18 ವರ್ಷ ವಯಸ್ಸಿನವರಾಗಿದ್ದ ಅಜಯ್ ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು, ವಾರ್ಡ್‌ನ ವರಾಂಡಾವನ್ನು ಗುಡಿಸುವುದು ಮತ್ತು ನೀರು ತರಲು ಮತ್ತು ತೋಟದ ಕೆಲಸದಲ್ಲಿ ನೆರವಾಗುವುದು ಮೊದಲಾದ ಇತರರಿಗೆ ಕೀಳಾಗಿರುವ ಕೆಲಸಗಳನ್ನು ಮಾಡಬೇಕಿತ್ತು. ಅವರ ದಿನದ ಕೆಲಸ ಮುಂಜಾನೆ ಆರಂಭವಾದರೆ, ಮುಗಿಯುವುದು ಸಂಜೆ ಐದು ಗಂಟೆಗೆ. “ಇವೆಲ್ಲಾ ಪ್ರತಿ ಹೊಸ ಖೈದಿಯೂ ಮಾಡಬೇಕಾದ ಕೆಲಸ ಎಂದು ನಾನು ಭಾವಿಸಿದ್ದೆ. ಆದರೆ ಒಂದು ವಾರದಲ್ಲಿ ಗೊತ್ತಾಯಿತು, ಆಯ್ದ ಕೆಲವರನ್ನು ಮಾತ್ರ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಬಳಸಲಾಗುತ್ತದೆ ಎಂದು,” ಎಂದು ಅವರು ಹೇಳುತ್ತಾರೆ.

ಈ ವ್ಯವಸ್ಥೆ ಸ್ಪಷ್ಟವಾಗಿತ್ತು – ಜಾತಿ ಪಿರಮಿಡ್‌ನ ಕೆಳಭಾಗದಲ್ಲಿರುವವರು ಸ್ವಚ್ಛಗೊಳಿಸುವ ಕೆಲಸವನ್ನು ಮಾಡಬೇಕು; ಜಾತಿಯಲ್ಲಿ ಮೇಲಿನವರಿಗೆ ಅಡುಗೆಮನೆ ಅಥವಾ ಕಾನೂನು ದಾಖಲಾತಿ ವಿಭಾಗದಲ್ಲಿ ಕೆಲಸ. ಶ್ರೀಮಂತರು ಮತ್ತು ಪ್ರಭಾವಶಾಲಿಗಳಿಗೆ ಮಾಡಲು ಏನೂ ಇಲ್ಲ, ತಮ್ಮ ತೂಕ ಹೆಚ್ಚಿಸುವುದಷ್ಟೇ ಅವರ ಕೆಲಸ. ಈ ವ್ಯವಸ್ಥೆಗೂ ಒಬ್ಬ ಮನುಷ್ಯ ತಾನು ಬಂಧಿಸಲ್ಪಟ್ಟ ಅಪರಾಧಕ್ಕೂ ಅಥವಾ ಜೈಲಿನಲ್ಲಿ ಅವನ ನಡವಳಿಕೆಗೂ ಯಾವುದೇ ಸಂಬಂಧವಿರಲಿಲ್ಲ. “ಸಬ್ ಕುಚ್ ಜಾತಿ ಕೆ ಆಧಾರ್ ಪರ್ ಥಾ (ಇದೆಲ್ಲವೂ ಜಾತಿಯ ಆಧಾರದಲ್ಲಿರುತ್ತವೆ)” ಎಂದು ಅವರು ಹೇಳುತ್ತಾರೆ.

ಅವರು ಜೈಲಿಗೆ ಹೋಗಿ ಸುಮಾರು ನಾಲ್ಕು ವರ್ಷಗಳಾಗಿವೆ. ಅವರು ತಾವು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಕಳ್ಳತನ ಮಾಡಿದ್ದಾರೆ ಎಂಬ ಆರೋಪವನ್ನು ಹೊತ್ತಿದ್ದಾರೆ. “ಹೊಸದಾಗಿ ಬಂದಿದ್ದ ಸ್ವಿಚ್‌ಬೋರ್ಡ್‌ಗಳ ಬಾಕ್ಸ್‌ಗಳು ವರ್ಕ್‌ಶಾಪ್‌ನಿಂದ ಕಾಣೆಯಾಗಿದ್ದವು. ನಾನು ಬೇರೆ ಹೊಸದಾಗಿ ಬಂದಿದ್ದ ಕೆಲಸಗಾರ, ಚಿಕ್ಕವನು ಕೂಡ ಆಗಿದ್ದೆ. ಮಾಲೀಕರು ನನ್ನನ್ನು ಕಳ್ಳ ಎಂದು ಪೊಲೀಸರಿಗೆ ಕೊಟ್ಟರು,” ಎಂದು ಅವರು ನೆನಪಿಸಿಕೊಳ್ಳುತ್ತಾರೆ.

97 ದಿನಗಳನ್ನು ಜೈಲಿನಲ್ಲಿ ಕಳೆದ ನಂತರ ಮತ್ತು ಅಲ್ವಾರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಎದುರಿಸಿದ ನಂತರ, ಅಜಯ್ ಕೊನೆಗೂ ಖುಲಾಸೆಗೊಂಡರು. ಇದೆಲ್ಲಾ ಆದ ಮೇಲೆ ಅಲ್ವಾರ್ ನಗರದಲ್ಲಿ ಇರುವುದು ಸರಿಯಲ್ಲ ಎಂದು ದೆಹಲಿಗೆ ಹೋದರು. ಈಗ 22 ವರ್ಷ ವಯಸ್ಸಿನ ಅಜಯ್ ಕೇಂದ್ರ ದೆಹಲಿಯ ಮಾಲ್‌ನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ.

ಜೈಲಿನಲ್ಲಿ ಕಳೆದ ಆ ಅಲ್ಪಾವಧಿಯು ತನ್ನ ಜೀವನವನ್ನು ಒಂದಲ್ಲ ಒಂದು ರೀತಿಯಲ್ಲಿ ಬದಲಾಯಿಸಿತು ಎನ್ನುತ್ತಾರೆ ಅಜಯ್. “ರಾತ್ರೋರಾತ್ರಿ, ನನ್ನನ್ನು ಅಪರಾಧಿ ಎಂದು ಬ್ರಾಂಡ್ ಮಾಡಲಾಯಿತು. ಹೆಚ್ಚಾಗಿ, ನಾನು ಚೋಟಿ ಜಾತ್ (ಕೆಳಜಾತಿಯ ವ್ಯಕ್ತಿ) ಆಗಿಯೂ ಆಗಿದ್ದೆ,” ಎನ್ನುತ್ತಾರೆ ಅವರು. ಅಜಯ್ ಅವರ ಕುಟುಂಬವು 1980 ರ ದಶಕದ ಆರಂಭದಲ್ಲಿ ಬಿಹಾರದ ಬಂಕಾ ಜಿಲ್ಲೆಯ ಸಂಭುಗಂಜ್ ಬ್ಲಾಕ್‌ನಿಂದ ದೇಶದ ರಾಜಧಾನಿಗೆ ವಲಸೆ ಹೋಗಿತ್ತು. ಅವರ ತಂದೆ ದೆಹಲಿಯ ಕೊರಿಯರ್ ಸಂಸ್ಥೆಯಲ್ಲಿ ಮತ್ತು ಅವರ ಸಹೋದರ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. “ನಾವು ಧೋಬಿ ಅಥವಾ ಬಟ್ಟೆ ಒಗೆಯುವ ಜಾತಿಗೆ ಸೇರಿದವರು. ಆದರೆ ನನ್ನ ಕುಟುಂಬದಲ್ಲಿ ಯಾರೂ ಜಾತಿ ವೃತ್ತಿ ಮಾಡಿಕೊಂಡಿಲ್ಲ. ಹಳ್ಳಿಯ ಕಠೋರ ಜಾತಿಯ ಕ್ರೌರ್ಯದಿಂದ ತಪ್ಪಿಸಿಕೊಳ್ಳಲು ನನ್ನ ತಂದೆ ಉದ್ದೇಶಪೂರ್ವಕವಾಗಿ ನಗರದ ಜೀವನವನ್ನು ಆರಿಸಿಕೊಂಡರು,” ಎಂದು ವ್ಯಥೆಯಿಂದ ಹೇಳುತ್ತಾರೆ ಅಜಯ್.

ಜೈಲಿನೊಳಗೆ ಇದ್ದಾಗ ತಮ್ಮನ್ನು ಬಿಡಿಸಲು ತಮ್ಮ ತಂದೆ ಪಟ್ಟ ಪ್ರಯತ್ನವನ್ನು ವಿಫಲಗೊಳಿಸಲಾಯಿತು ಎಂದು ಅಜಯ್ ಹೇಳುತ್ತಾರೆ. “ನಾನು ಎಲೆಕ್ಟ್ರಿಷಿಯನ್ ಆಗಿ ತರಬೇತಿ ಪಡೆದಿದ್ದೇನೆ. ಆದರೆ ಜೈಲಿನೊಳಗೆ ಅದು ಏನೂ ಅಲ್ಲ. ನಾನು ಆ ಸೀಮಿತ ಜಾಗದಲ್ಲಿ ಕೇವಲ ಸಫಾಯಿವಾಲಾ (ಕ್ಲೀನರ್) ಆಗಿ ಕೆಲಸ ಮಾಡಿದೆ,” ಎಂದು ಅಜಯ್ ಅವರು ಉತ್ತರ ದೆಹಲಿಯ ತನ್ನ ಬಾಡಿಗೆ ಮನೆ ಬಾರ್ಸತಿಯಲ್ಲಿ ಕುಳಿತುಕೊಂಡು ಹಳೆಯದನ್ನು ನೆನಪಿಸಿಕೊಳ್ಳುತ್ತಾರೆ.

ಎಲ್ಲಕ್ಕಿಂತ ಹೆಚ್ಚು ನೋವಿನ ಸಂಗತಿಯೆಂದರೆ, ಒಂದು ದಿನ ಉಸಿರುಗಟ್ಟಿದ ಸೆಪ್ಟಿಕ್ ಟ್ಯಾಂಕ್ ಅನ್ನು ತೆರವುಗೊಳಿಸಲು ಜೈಲು ಸಿಬ್ಬಂದಿ ಅವರಿಗೆ ಹೇಳಿದರು. ಹಿಂದಿನ ರಾತ್ರಿಯಿಂದಲೇ ಜೈಲು ವಾರ್ಡ್‌ನಲ್ಲಿರುವ ಶೌಚಾಲಯಗಳು ತುಂಬಿ ತುಳುಕುತ್ತಿದ್ದವು. ಆದರೆ ಜೈಲು ಅಧಿಕಾರಿಗಳು ಹೊರಗಿನಿಂದ ಯಾರನ್ನೂ ಕರೆಸಿ ಸಮಸ್ಯೆ ಬಗೆಹರಿಸಲಿಲ್ಲ. “ಅವರು (ಜೈಲು ಅಧಿಕಾರಿಗಳು) ನಾನು ಈ ಕೆಲಸವನ್ನು ಮಾಡಬೇಕೆಂದು ಹೇಳಿದಾಗ ನಾನು ದಿಗ್ಭ್ರಮೆಗೊಂಡೆ. ನಾನು ಸೌಮ್ಯವಾಗಿ ಪ್ರತಿಭಟಿಸಿದೆ, ಈ ರೀತಿಯ ಕೆಲಸ ನನಗೆ ತಿಳಿದಿಲ್ಲ ಎಂದು ಸಿಬ್ಬಂದಿಗೆ ಹೇಳಿದೆ. ಆದರೆ ನನ್ನಷ್ಟು ತೆಳ್ಳಗಿರುವವರು ಬೇರೆ ಹುಡುಗರು ಯಾರೂ ಇಲ್ಲ ಎಂದು ಹೇಳಿದರು. ಅವರು ಗದರಿಸಿದರು,” ಎಂದು ಹೇಳುತ್ತಾರೆ ಅವರು. ಕೊನೆಗೆ ಅಜಯ್ ತೊಟ್ಟಿಯ ಮುಚ್ಚಳವನ್ನು ತೆರೆದು ಕೇವಲ ಚಡ್ಡಿ ಹಾಕಿಕೊಂಡು ತಮ್ಮ ದೇಹವನ್ನು ಮಾನವ ಮಲದ ಕೊಳಚೆಗೆ ಇಳಿಸಿದರು. “ನಾನು ಕೊಳೆತ ದುರ್ನಾತದಿಂದ ಸಾಯುತ್ತೇನೆ ಎಂದು ನಾನು ಭಾವಿಸಿದೆ. ನಾನು ಕಿರುಚಲು ಪ್ರಾರಂಭಿಸಿದೆ. ಗಾರ್ಡ್‌ಗೆ ಏನು ಮಾಡಬೇಕೆಂದು ತಿಳಿದಿರಲಿಲ್ಲ ಮತ್ತು ನನ್ನನ್ನು ಹೊರಗೆ ಎಳೆಯಲು ಇತರ ಖೈದಿಗಳನ್ನು ಕರೆದ,” ಎಂದು ನೆನಪಿಸಿಕೊಳ್ಳುತ್ತಾರೆ.

ಮೂರು ದಶಕಗಳ ಹಿಂದೆಯೇ ಭಾರತದಲ್ಲಿ ಮ್ಯಾನುಯಲ್ ಸ್ಕ್ಯಾವೆಂಜಿಂಗ್ (ಕೈಯಿಂದ ಮಲ ಎತ್ತುವುದು) ಕಾನೂನುಬಾಹಿರವಾಗಿದೆ. ಮ್ಯಾನುಯಲ್ ಸ್ಕ್ಯಾವೆಂಜಿಂಗ್‌ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯಿದೆಯಲ್ಲಿ 2013 ರಲ್ಲಿ ತಿದ್ದುಪಡಿ ಮಾಡಿ, ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಲು ಪುರುಷರ ಬಳಕೆಯನ್ನು “ಮ್ಯಾನುಯಲ್ ಸ್ಕ್ಯಾವೆಂಜಿಂಗ್” ಎಂದು ಪರಿಗಣಿಸಲು ಕಾನೂನು ತರಲಾಯಿತು. ಜೈಲಿನಲ್ಲಿ ಅಜಯ್ ಅವರನ್ನು ಈ ಕೆಲಸಕ್ಕೆ ಬಳಸಿದ್ದು ಅಲ್ಲಿನ ಪೇದೆಗಳು/ ಅಧಿಕಾರಿಗಳು ಮಾಡಿದ ಕ್ರಿಮಿನಲ್ ಅಪರಾಧ.

ಕೃಪೆ The Wire: Illustration- ಪರಿಪ್ಲಾಬ್ ಚಕ್ರವರ್ತಿ

“ಆ ಘಟನೆಯ ಬಗ್ಗೆ ಯೋಚಿಸಿದಾಗಲೆಲ್ಲಾ ನನಗೆ ಹಸಿವೆಯೇ ನಿಂತುಹೋಗುತ್ತದೆ,” ಎಂದು ಅವರು ಹೇಳುತ್ತಾರೆ. ರಸ್ತೆಯಲ್ಲಿ ಕ್ಲೀನರ್ ಅಥವಾ ಕಸಗುಡಿಸುವವರನ್ನು ನೋಡಿದಾಗಲೆಲ್ಲಾ ಅವರು ನುಣುಚಿಕೊಳ್ಳುತ್ತಾನೆ. “ಅವರ ನೋಟವು ನನ್ನ ಸ್ವಂತ ಅಸಹಾಯಕತೆಯನ್ನು ನೆನಪಿಸುತ್ತದೆ,” ಎಂದು ಅವರು ಹೇಳುತ್ತಾರೆ.

ಇದು ಆಘಾತಕಾರಿಯಾದ ಸಂಗತಿ. ಅಜಯ್ ಅವರದು ಸಾಮಾನ್ಯ ಪ್ರಕರಣವಲ್ಲ. ಜೈಲಿನಲ್ಲಿ ಎಲ್ಲವನ್ನೂ ವ್ಯಕ್ತಿಯ ಜಾತಿ ನಿರ್ಧರಿಸುತ್ತದೆ ಎಂದು ಅವರು ಹೇಳುತ್ತಾರೆ. ಅವರು ಜೈಲಿನಲ್ಲಿ ವಾಸಿಸುವ ಒಬ್ಬ ವ್ಯಕ್ತಿಯ ಜೀವನವನ್ನು ನೋಡಿಯೇ ಅವನ ಜಾತಿಯನ್ನು ಹೇಳಲು ಸಾಧ್ಯವಿದೆ. ಅಜಯ್ ಅವರು ಪೂರ್ವ-ವಿಚಾರಣಾ ಖೈದಿಯಾಗಿ ಬಂಧಿತರಾಗಿದ್ದರು. ಇತರ ಅಪರಾಧಿಗಳಿಗಿಂತ ಭಿನ್ನವಾಗಿ, ಪೂರ್ವ-ವಿಚಾರಣಾ ಬಂಧಿತರಿಗೆ ಜೈಲಿನಲ್ಲಿ ಕೆಲಸ ಮಾಡುವುದರಿಂದ ವಿನಾಯಿತಿ ನೀಡಲಾಗುತ್ತದೆ. ಆದರೆ ವಿಚಾರಣಾಧೀನ ಜೈಲಿನಲ್ಲಿ ಕೇವಲ ಬೆರಳೆಣಿಕೆಯಷ್ಟು ಅಪರಾಧಿ ಖೈದಿಗಳು ಮಾತ್ರ ಇರುತ್ತಾರೆ. ಅವರಲ್ಲಿ ಅಜಯ್‌ನಂತಹ ಬಂಧಿತರನ್ನು ಬಿಟ್ಟಿ ಚಾಕರಿಗೆ ಬಿಡಲಾಗುತ್ತದೆ. 

ನಿಯಮಗಳೇ ಜಾತಿಯ ಸಂಕೋಲೆಯೊಳಗೆ

ವಾಸ್ತವವಾಗಿ ಜಾತಿ ಆಧಾರಿತ ಕೆಲಸವನ್ನು ಅನೇಕ ರಾಜ್ಯಗಳ ಜೈಲು ಕೈಪಿಡಿಗಳಲ್ಲಿ ಮಂಜೂರು ಮಾಡಲಾಗಿದೆ. 19 ನೇ ಶತಮಾನದ ಉತ್ತರಾರ್ಧದ ಈ ವಸಾಹತುಶಾಹಿ ಪಠ್ಯಗಳಲ್ಲಿ ಯಾವುದೇ ತಿದ್ದುಪಡಿಗಳನ್ನು ಮಾಡಲಾಗಿಲ್ಲ. ಮತ್ತು ಜಾತಿ ಆಧಾರಿತ ಕೆಲಸವು ಈ ಕೈಪಿಡಿಗಳ ಅಸ್ಪೃಶ್ಯ ಭಾಗವಾಗಿ ಉಳಿದಿದೆ. ಪ್ರತಿಯೊಂದು ರಾಜ್ಯವು ತನ್ನದೇ ಆದ ವಿಶಿಷ್ಟವಾದ ಜೈಲು ಕೈಪಿಡಿಯನ್ನು ಹೊಂದಿದ್ದರೂ, ಅವುಗಳು ಹೆಚ್ಚಾಗಿ ದಿ ಪ್ರಿಸನ್ಸ್ ಆಕ್ಟ್, 1894 ಅನ್ನು ಆಧರಿಸಿವೆ . ಈ ಜೈಲು ಕೈಪಿಡಿಗಳು ಪ್ರತಿಯೊಂದು ಕೆಲಸವನ್ನೂ ವಿವರವಾಗಿ ಉಲ್ಲೇಖಿಸುತ್ತವೆ – ಪ್ರತಿ ಖೈದಿಗಳಿಗೆ ನೀಡುವ ಆಹಾರ ಮತ್ತು ಸ್ಥಳದ ಅಳತೆಯಿಂದ ಹಿಡಿದು “ಶಿಸ್ತುಪಾಲಿಸದವರಿಗೆ” ನೀಡುವ ಶಿಕ್ಷೆಯವರೆಗೆ.

ಅಜಯ್‌ ಅವರ ಅನುಭವವು ರಾಜಸ್ಥಾನ ಜೈಲ್ ಮ್ಯಾನ್ಯುಯಲ್‌ನಲ್ಲಿ ಏನಿದೆ ಎಂಬುದನ್ನು ತೋರಿಸುತ್ತದೆ. ಜೈಲಿನಲ್ಲಿ ಅಡುಗೆ ಮತ್ತು ವೈದ್ಯಕೀಯ ಕೆಲಸವನ್ನು ಮೇಲ್-ಜಾತಿಯವರ ಕೆಲಸವೆಂದು ಪರಿಗಣಿಸಿದರೆ, ಗುಡಿಸುವುದು ಮತ್ತು ಸ್ವಚ್ಛಗೊಳಿಸುವ ಕೆಲಸಗಳು ಕೆಳ ಜಾತಿಗಳ ಖೈದಿಗಳಿಗೆ! 

ಅಡುಗೆಗೆ ಸಂಬಂಧಿಸಿದಂತೆ, ಜೈಲು ಕೈಪಿಡಿಯು ಹೀಗೆ ಹೇಳುತ್ತದೆ: ” ಯಾವುದೇ ವರ್ಗದ ಬ್ರಾಹ್ಮಣ ಅಥವಾ ಮೇಲ್‌ ಜಾತಿಯ ಹಿಂದೂ ಖೈದಿಗಳು ಅಡುಗೆಯ ಕೆಲಸಕ್ಕೆ ಅರ್ಹರು.” 

ಕೃಪೆ The Wire: Illustration- ಪರಿಪ್ಲಾಬ್ ಚಕ್ರವರ್ತಿ

ಹಾಗೆಯೇ, ಕೈಪಿಡಿಯ ಭಾಗ 10 – “ಉದ್ಯೋಗ, ಸೂಚನೆಗಳು ಮತ್ತು ಅಪರಾಧಿಗಳ ನಿಯಂತ್ರಣ” ದಲ್ಲಿ, ಕಾರಾಗೃಹಗಳ ಕಾಯಿದೆಯ ಸೆಕ್ಷನ್ 59 (12) ರ ಅಡಿಯಲ್ಲಿ ನಿಯಮಗಳಲ್ಲಿ ಹೀಗೆ ಉಲ್ಲೇಖಿಸಲಾಗಿದೆ:

“ಕಸ ಗುಡಿಸುವವರನ್ನು ಅವರು ವಾಸಿಸುವ ಜಿಲ್ಲೆಯ ಸಂಪ್ರದಾಯದ ಪ್ರಕಾರ ಅಥವಾ ಅವರು ಅದೇ ವೃತ್ತಿಯನ್ನು ಅಳವಡಿಸಿಕೊಂಡಿರುವ ಕಾರಣ, ಬಿಡುವಿರುವಾಗ ಅರನ್ನು ಸ್ವೀಪರ್ ಕೆಲಸ ಮಾಡಲು ಆಯ್ಕೆ ಮಾಡಲಾಗುವುದು. ಬೇರೆ ಯಾರಾದರೂ ಈ ಕೆಲಸವನ್ನು ಮಾಡಲು ಸ್ವಯಂಸೇವಕರಾಗಬಹುದು. ಯಾವುದೇ ಸಂದರ್ಭದಲ್ಲಿ, ವೃತ್ತಿಪರ ಸ್ವೀಪರ್ ಅಲ್ಲದ ವ್ಯಕ್ತಿಯನ್ನು ಈ ಕೆಲಸ ಮಾಡಲು ಒತ್ತಾಯಿಸಲಾಗುವುದಿಲ್ಲ.” ಆದಾಗ್ಯೂ, “ಕಸ ಗುಡಿಸುವವರ ಸಮುದಾಯ” ದವರ ಒಪ್ಪಿಗೆಯನ್ನು ತೆಗೆದುಕೊಳ್ಳುವ ವಿಷಯದ ಬಗ್ಗೆ ಈ ನಿಯಮವು ಏನೂ ಹೇಳುವುದಿಲ್ಲ.

ಈ ನಿಯಮಗಳನ್ನು ಮೂಲಭೂತವಾಗಿ ಹೆಚ್ಚಿನ ಗಂಡಸರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಕರಡು ರಚಿಸಲಾಗಿದೆ ಮತ್ತು ಮಹಿಳೆಯರಿಗೆ ನಿರ್ದಿಷ್ಟ ನಿಯಮಗಳನ್ನು ರೂಪಿಸದ ರಾಜ್ಯಗಳಲ್ಲಿ ಮಹಿಳಾ ಜೈಲುಗಳಲ್ಲಿಯೂ ಸಹ ಇದೇ ನಿಯಮಗಳನ್ನು ಹಾಕಲಾಗುತ್ತದೆ. ರಾಜಸ್ಥಾನದ ಜೈಲು ಕೈಪಿಡಿ ಹೀಗೆ ಹೇಳುತ್ತದೆ: “ಸೂಕ್ತ” ಜಾತಿ ಗುಂಪುಗಳಿಂದ ಬಂದ ಮಹಿಳಾ ಖೈದಿಗಳು ಇಲ್ಲದೇ ಇದ್ದಲ್ಲಿ, “… ಎರಡು ಅಥವಾ ಮೂರು ವಿಶೇಷವಾಗಿ ಆಯ್ಕೆಮಾಡಿದ ಪುರುಷ ಅಪರಾಧಿ ಮೆಹ್ತಾರ್‌ಗಳನ್ನು ಷರತ್ತಿನ ಅಡಿಯಲ್ಲಿ ಪಾವತಿಸಿದ ಕೆಲಸಗಾರನು ಆವರಣಕ್ಕೆ ಕೆಲಸಕ್ಕೆ ಕರೆದುಕೊಂಡು ಹೋಗಬಹುದು…” ಮೆಹ್ತಾರ್ ಎಂಬುದು ಮಲಹೊರುವ ಕೆಲಸ ಮಾಡುವುದನ್ನು ಜಾತಿ ಉದ್ಯೋವಾಗಿ ಮಾಡಿಸಿಕೊಂಡಿರುವ ಒಂದು ಜಾತಿ. 

ವೈದ್ಯಕೀಯ ಕೆಲಸದ ಬಗ್ಗೆ ಕೈಪಿಡಿಯು ಹೀಗೆ ಹೇಳುತ್ತದೆ: “ಮೇಲು ಜಾತಿಯ ಇಬ್ಬರಿಗೆ ಅಥವಾ ಹೆಚ್ಚು ದೀರ್ಘಾವಧಿಯಿಂದ ಜೈಲಿನಲ್ಲಿರುವ ಖೈದಿಗಳಿಗೆ ತರಬೇತಿ ನೀಡಬೇಕು ಮತ್ತು ಆಸ್ಪತ್ರೆಯ ಪರಿಚಾರಕರಾಗಿ ನೇಮಿಸಿಕೊಳ್ಳಬೇಕು.”

ರಾಜ್ಯಗಳಾದ್ಯಂತ, ಜೈಲು ಕೈಪಿಡಿಗಳು ಮತ್ತು ನಿಯಮಗಳು ದೈನಂದಿನ ಆಧಾರದ ಮೇಲೆ ಕೈಗೊಳ್ಳಬೇಕಾದ ಕೆಲಸವನ್ನು ನಿಗದಿಪಡಿಸುತ್ತವೆ. ಕಾರ್ಮಿಕರ ವಿಭಜನೆಯನ್ನು ‘ಶುದ್ಧತೆ-ಅಶುದ್ಧತೆ’ ಎಂಬ ಮಾನದಂಡದ ಮೇಲೆ ನಿರ್ಧರಿಸಲಾಗುತ್ತದೆ. ಉನ್ನತ ಜಾತಿಗಳು “ಶುದ್ಧ” ಎಂದು ಪರಿಗಣಿಸುವ ಕೆಲಸವನ್ನು ಮಾತ್ರ ಮಾಡುತ್ತವೆ ಮತ್ತು ಜಾತಿ ಗ್ರಿಡ್‌ನಲ್ಲಿ ಕೆಳಗಿರುವವರನ್ನು “ಅಶುದ್ಧ” ಕೆಲಸಗಳನ್ನು ಮಾಡಲು ಬಿಡಲಾಗುತ್ತದೆ.

ಬಿಹಾರದ ಪ್ರಕರಣವನ್ನು ಪರಿಗಣಿಸಿ. ‘ಆಹಾರ ತಯಾರಿಕೆ’ ಶೀರ್ಷಿಕೆಯ ಅಧ್ಯಾಯವು ಈ ಸಾಲಿನೊಂದಿಗೆ ಆರಂಭವಾಗುತ್ತದೆ: “Of equal importance is the quality, proper preparation, and cooking of the food and its issue in full quantity.” ಇದಲ್ಲದೆ, ಜೈಲಿನಲ್ಲಿನ ಅಳತೆಗಳು ಮತ್ತು ಅಡುಗೆಯ ತಂತ್ರಗಳನ್ನು ವಿವರಿಸುತ್ತಾ, ಕೈಪಿಡಿಯು ಹೀಗೆ ಹೇಳುತ್ತದೆ: “ಯಾವುದೇ ‘ಎ ವರ್ಗದ’ ಬ್ರಾಹ್ಮಣ ಅಥವಾ ಸಾಕಷ್ಟು ಉನ್ನತ ಜಾತಿಯ ಹಿಂದೂ ಖೈದಿಗಳು ಅಡುಗೆಯ ಕೆಲಸಕ್ಕೆ ಅರ್ಹರಾಗಿರುತ್ತಾರೆ.” ಕೈಪಿಡಿಯು ಈ ನಿಯಮವನ್ನು, “ಜೈಲಿನಲ್ಲಿರುವ ಯಾವುದೇ ಖೈದಿಯು ತುಂಬಾ ಉನ್ನತ ಜಾತಿಯವನಾಗಿದ್ದು, ಅವನು ಈಗಿರುವ ಅಡುಗೆಯವರಿಂದ ಬೇಯಿಸಿದ ಆಹಾರವನ್ನು ತಿನ್ನಲು ಸಾಧ್ಯವಿಲ್ಲದೇ ಇದ್ದಾಗ ಅವನನ್ನೂ ಅಡುಗೆಯವನಾಗಿ ನೇಮಿಸಬೇಕು ಮತ್ತು ಅವರು ಎಲ್ಲಾ ಪುರುಷರಿಗೂ ಅಡುಗೆ ಮಾಡಬೇಕು. ವೈಯಕ್ತಿಕ ಶಿಕ್ಷೆಗೊಳಗಾದ ಖೈದಿಗಳು ಯಾವುದೇ ಸಂದರ್ಭಗಳಲ್ಲಿ ತಮಗಾಗಿ ಮಾತ್ರ ಅಡುಗೆ ಮಾಡಿಕೊಳ್ಳಲು ಅನುಮತಿ ಇಲ್ಲ, ನಿಯಮದ ಅಡಿಯಲ್ಲಿ ನಿರ್ದಿಷ್ಟ ವಿಭಾಗದ ಖೈದಿಗಳಿಗೆ ಮಾತ್ರ ಹೀಗೆ ಮಾಡಲು ಸಾಧ್ಯವಿದೆ,” ಎಂದು ಮತ್ತಷ್ಟು ದೃಢಪಡಿಸುತ್ತದೆ.

ಬರೀ ಕಾಗದದಲ್ಲಿ ಮಾತ್ರ ಅಲ್ಲ….

ಇವು ಕೇವಲ ಅಧಿಕೃತ ಪುಸ್ತಕದಲ್ಲಿ ಮುದ್ರಿಸಲ್ಪಟ್ಟ ಮತ್ತು ಮರೆತುಹೋದ ಪದಗಳಲ್ಲ. ಭಾರತದಲ್ಲಿ ಸರ್ವತ್ರವಾಗಿರುವ ಜಾತಿ ಪದ್ಧತಿಯು ಬೇರೆ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ನಾವು ಮಾತನಾಡಿದ ಹಲವಾರು ಖೈದಿಗಳು ತಾವು ಹುಟ್ಟಿದ ಜಾತಿಯ ಆಧಾರದ ಮೇಲೆ ಪ್ರತ್ಯೇಕವಾಗಿ ಮತ್ತು ಕೀಳು ಕೆಲಸಗಳನ್ನು ಮಾಡಲು ತಳ್ಳಲ್ಪಟ್ಟ ತಮ್ಮ ಅನುಭವಗಳನ್ನು ಹಂಚಿಕೊಂಡರು. ಬ್ರಾಹ್ಮಣರು ಮತ್ತು ಇತರ ಉನ್ನತ ಜಾತಿಯ ಖೈದಿಗಳು ತಮಗೆ ಸಿಕ್ಕ ವಿನಾಯಿತಿಯ ಬಗ್ಗೆ ಹೆಮ್ಮೆ ಪಟ್ಟರು. ಕೆಲವರು ಇದನ್ನು ಒಂದು ಸವಲತ್ತು ಎಂದು ಪರಿಗಣಿಸಿದರೆ, ಉಳಿದವರು ತಮ್ಮ ಸ್ಥಿತಿಗೆ ಜಾತಿ ವ್ಯವಸ್ಥೆಯನ್ನು ಮಾತ್ರ ದೂಷಿಸಿದರು.

“ಜೈಲು ನಿಮ್ಮ ಸರಿಯಾದ ಔಕಾದ್ (ಸ್ಥಿತಿ) ಅನ್ನು ನಿಮಗೆ ಹೇಳುತ್ತದೆ,” ಎಂದು ಮಾಜಿ ಖೈದಿ ಪಿಂಟು ಹೇಳುತ್ತಾರೆ. ಇವರು ಸುಮಾರು ಒಂದು ದಶಕವನ್ನು ಜುಬ್ಬಾ ಸಾಹ್ನಿ ಭಾಗಲ್ಪುರ್ ಸೆಂಟ್ರಲ್ ಜೈಲಿನಲ್ಲಿ ಮತ್ತು ಕೆಲವು ತಿಂಗಳನ್ನು ಮೋತಿಹಾರಿ ಕೇಂದ್ರ ಕಾರಾಗೃಹದಲ್ಲಿ ಕಳೆದಿದ್ದರು. ಪಿಂಟು ‘ನಾಯಿ ಅಥವಾ ಕ್ಷೌರಿಕ ಸಮುದಾಯದವರು ಮತ್ತು ಜೈಲಿನಲ್ಲಿ ಅವರು ಕಳೆದ ಅವಧಿಯುದ್ದಕ್ಕೂ ಕ್ಷೌರಿಕರಾಗಿ ಕೆಲಸ ಮಾಡಿದ್ದರು. ಸಿದರು.

ಬಿಹಾರ ಜೈಲು ಕೈಪಿಡಿಯು ಕಾರ್ಮಿಕರಲ್ಲಿ ಜಾತಿ ಶ್ರೇಣಿಗಳನ್ನು ಔಪಚಾರಿಕಗೊಳಿಸುತ್ತದೆ. ಉದಾಹರಣೆಗೆ, ಕಸಗುಡಿಸುವ ಕೆಲಸವನ್ನು ಮಾಡುವವರ ಬಗ್ಗೆ ಹೀಗೆ ಹೇಳುತ್ತದೆ: “ಸ್ವೀಪರ್‌ಗಳನ್ನು ಮೆಹ್ತಾರ್ ಅಥವಾ ಹರಿ ಜಾತಿಯಿಂದ ಆಯ್ಕೆ ಮಾಡಬೇಕು. ಖೈದಿಯಾಗುವ ಮೊದಲು ಜಿಲ್ಲೆಯ ಪದ್ಧತಿಯಂತೆ ಇದೇ ಕೆಲಸವನ್ನು ಮಾಡುತ್ತಿದ್ದ ಚಂಡಾಲ್ ಅಥವಾ ಇತರ ಕೆಳ ಜಾತಿಗಳ ಖೈದಿಗಳನ್ನೂ ಈ ಕೆಲಸಕ್ಕೆ ತೆಗೆದುಕೊಳ್ಳಬಹುದು. ಸ್ವಯಂಸೇವಕರಾಗಿ ಈ ಕೆಲಸ ಮಾಡಲು ಮುಂದಾದರೆ ಬೇರೆಯವರನ್ನೂ ತೆಗೆದುಕೊಳ್ಳಬಹುದು…” ಈ ಎಲ್ಲಾ ಮೂರು ಜಾತಿಗಳು ಪರಿಶಿಷ್ಟ ಜಾತಿಗಳ ವರ್ಗಕ್ಕೆ ಸೇರುತ್ತವೆ.

ಕಾಲಕಾಲಕ್ಕೆ ಈ ಜೈಲು ಕೈಪಿಡಿಗಳ ಕಿವಿಹಿಂಡಲಾಗಿದೆ. ಕೆಲವೊಮ್ಮೆ ಇದು ಸಾರ್ವಜನಿಕ ಆಕ್ರೋಶ ಅಥವಾ ಸುಪ್ರೀಂ ಕೋರ್ಟ್ ಅಥವಾ ಉಚ್ಚ ನ್ಯಾಯಾಲಯದ ಹಸ್ತಕ್ಷೇಪಕ್ಕೂ ಕಾರಣವಾಗಿವೆ. ಕೆಲವೊಮ್ಮೆ ರಾಜ್ಯಗಳು ಇದರ ಅಗತ್ಯವನ್ನು ಎತ್ತಿಹಿಡಿದಿವೆ. ಹೆಚ್ಚಿನ ರಾಜ್ಯಗಳಲ್ಲಿ ಈ ಜಾತಿ ಆಧಾರಿತ ಕಾರ್ಮಿಕ ಪದ್ಧತಿಗಳ ಸಮಸ್ಯೆಯನ್ನು ಕಡೆಗಣಿಸಲಾಗಿದೆ.

ಕೆಲವು ರಾಜ್ಯಗಳಲ್ಲಿ, ಉದಾಹರಣೆಗೆ ಉತ್ತರ ಪ್ರದೇಶ, “ಧಾರ್ಮಿಕ ಸೂಕ್ಷ್ಮತೆ ಮತ್ತು ಜಾತಿ ಪೂರ್ವಾಗ್ರಹಗಳು” ಖೈದಿಗಳ “ಸುಧಾರಣೆಯ” ಮೇಲೆ ಪ್ರಭಾವ ಬೀರಲು ಅಗತ್ಯ ಎಂದು ಪರಿಗಣಿಸಿದೆ. ಜೈಲಿನಲ್ಲಿ ಸುಧಾರಣೆ ತರುವುದರ ಬಗ್ಗೆ ಇರುವ ಪ್ರತ್ಯೇಕ ಅಧ್ಯಾಯವು ಹೀಗೆ ಹೇಳುತ್ತದೆ: “ಶಿಸ್ತಿಗೆ ಹೊಂದಿಕೆಯಾಗುವ ಎಲ್ಲಾ ವಿಷಯಗಳಲ್ಲಿ ಖೈದಿಗಳ ಧಾರ್ಮಿಕ ನಿಷ್ಠುರತೆ ಮತ್ತು ಜಾತಿ ಪೂರ್ವಾಗ್ರಹಗಳಿಗೆ ಸಮಂಜಸವಾದ ಗೌರವವನ್ನು ನೀಡಲಾಗುತ್ತದೆ.” ಈ ಪೂರ್ವಾಗ್ರಹಗಳ “ಸಮಂಜಸತೆ ಮತ್ತು ಹೊಂದಾಣಿಕೆಯ – reasonability and compatibility” ವ್ಯಾಪ್ತಿಯ ಮೇಲೆ ಜೈಲು ಆಡಳಿತವು ಸಂಪೂರ್ಣ ಅಧಿಕಾರವನ್ನು ಹೊಂದಿದೆ. ಈ “ಸಮಂಜಸತೆ” ಕೆಲಸವನ್ನು ನಿಯೋಜಿಸುವಾಗ ಮತ್ತು ಪುರುಷ ಹಾಗೂ ಸ್ತ್ರೀ ಕಾರಾಗೃಹಗಳಲ್ಲಿ ಕೆಲವರಿಗೆ ಕಠಿಣ ದುಡಿಮೆಯಿಂದ ವಿನಾಯಿತಿ ನೀಡಲು ಜಾತಿಯನ್ನು ಪರಿಗಣಿಸುವುದನ್ನು ಸ್ಪಷ್ಟವಾಗಿ ಅರ್ಥೈಸುತ್ತದೆ.

ಕೆಲವೇ ವರ್ಷಗಳ ಹಿಂದೆ ತಿದ್ದುಪಡಿ ಮಾಡಲಾದ ಮಧ್ಯಪ್ರದೇಶ ಜೈಲು ಕೈಪಿಡಿ ಕೂಡ conservancy work  ಎಂದು ಕರೆಯುವ ಕೈಯಿಂದ ಕಕ್ಕಸು ಶುಚಿಗೊಳಿಸುವ ಕೆಲಸವನ್ನು ಮಾಡುವವರನ್ನು ಜಾತಿ ಆಧಾರದಲ್ಲಿ ನೇಮಿಸುವ ಬಗ್ಗೆ ನಿಯಮವನ್ನು ಹಾಗೆಯೇ ಉಳಿಸಿಕೊಂಡಿದೆ. “ಮಾಲ್ ವಾಹನ್” ಅಥವಾ ಕನ್ಸರ್ವೆನ್ಸಿ ಶೀರ್ಷಿಕೆಯ ಅಧ್ಯಾಯವು ಶೌಚಾಲಯಗಳಲ್ಲಿ ಮಾನವ ಮಲವನ್ನು ತೊಳೆಯುವ ಕೆಲಸವನ್ನು “ಮೆಹ್ತರ್ ಖೈದಿ”ಗಳಿಗೆ ನೀಡುತ್ತದೆ. 

ಹರಿಯಾಣ ಮತ್ತು ಪಂಜಾಬ್ ರಾಜ್ಯದ ಜೈಲು ಕೈಪಿಡಿಗಳು ಹಾಗೂ ನಿಯಮಗಳಲ್ಲಿ ಒಂದೇ ರೀತಿಯ ಆಚರಣೆಗಳನ್ನು ಉಲ್ಲೇಖಿಸಲಾಗಿದೆ. ಕಸ ಗುಡಿಸುವವರು, ಕ್ಷೌರಿಕರು, ಅಡುಗೆಯವರು, ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಇತರರ ಕೆಲಸಗಳಿಗೆ ಖೈದಿಯ ಜಾತಿ ಗುರುತಿನ ಪ್ರಕಾರ ಪೂರ್ವ ನಿರ್ಧಾರ ಮಾಡಲಾಗುತ್ತದೆ. ಯಾವುದೇ ಕಾರಾಗೃಹಕ್ಕೆ ಅಗತ್ಯವಿರುವ ಕೆಲಸಗಳನ್ನು ಮಾಡಲು ನಿರ್ದಿಷ್ಟ ಜಾತಿಯ ಖೈದಿಗಳು ಇಲ್ಲದೇ ಇದ್ದಾಗ, ಹತ್ತಿರದ ಜೈಲುಗಳಿಂದ ಖೈದಿಗಳನ್ನು ಕರೆತರಬೇಕು. ಇಷ್ಟಾದರೂ. ಯಾವುದೇ ವಿನಾಯಿತಿಗಳು ಅಥವಾ ನಿಯಮಗಳಲ್ಲಿನ ಬದಲಾವಣೆಗಳನ್ನು ಕೈಪಿಡಿಯಲ್ಲಿ ಉಲ್ಲೇಖಿಸಲಾಗಿಲ್ಲ.

ಖೈದಿಗಳ ಹಕ್ಕುಗಳ ಬಗ್ಗೆ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆ ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್ (ಸಿಎಚ್‌ಆರ್‌ಐ) ಯೊಂದಿಗೆ ಕೆಲಸ ಮಾಡುತ್ತಿರುವ ಸಬಿಕಾ ಅಬ್ಬಾಸ್, ಇತ್ತೀಚೆಗೆ ಪಂಜಾಬ್ ಮತ್ತು ಹರಿಯಾಣದ ಜೈಲುಗಳಿಗೆ ಭೇಟಿ ನೀಡಿದಾಗ, ಅಲ್ಲಿನ ಅಭ್ಯಾಸಗಳ ಅಬ್ಬರವು ತನಗೆ ಆಘಾತ ತಂದಿದೆ ಎಂದು ಹೇಳಿದರು. “ಪುರುಷ ಮತ್ತು ಮಹಿಳಾ ಖೈದಿಗಳು ತಮಗೆ ನಿಯೋಜಿಸಲಾದ ಜಾತಿ ಆಧಾರಿತ ಕೆಲಸದ ಅನುಭವಗಳನ್ನು ಹಂಚಿಕೊಂಡರು. ಬಡತನ ಮತ್ತು ಕುಟುಂಬದಿಂದ ಆರ್ಥಿಕ ಬೆಂಬಲದ ಸಿಗದಿರುವಬ ಕೆಲವರನ್ನು ಈ ಕೆಲಸವನ್ನು ಮಾಡಲು ಒತ್ತಾಯಿಸಲಾಗಿದೆ. ಆದರೆ ಈ ಖೈದಿಗಳು ಕೂಡ ಪ್ರಾಥಮಿಕವಾಗಿ ಹಿಂದುಳಿದ ಜಾತಿಗಳ ಗುಂಪುಗಳಿಂದ ಬಂದವರು, ” ಎಂದು ಅಬ್ಬಾಸ್ ಹೇಳುತ್ತಾರೆ.

ಹರಿಯಾಣ ಮತ್ತು ಪಂಜಾಬ್‌ನ ಕಾನೂನು ಸೇವಾ ಪ್ರಾಧಿಕಾರಗಳಿಂದ ನಿಯೋಜಿಸಲ್ಪಟ್ಟ ಸಬಿಕಾ ಅಬ್ಬಾಸ್ ಅವರ ಅಧ್ಯಯನವು ಜೈಲು ವ್ಯವಸ್ಥೆಯಲ್ಲಿರುವ ಪೀಡಿಸುವ ಮೊದಲಾದ ಹಲವಾರು ಸಮಸ್ಯೆಗಳ ಬಗ್ಗೆ ಒಳಗೊಂಡಿದೆ. ಪೂರ್ವ-ವಿಚಾರಣೆಯ ಬಂಧಿತರಿಗೆ ಜೈಲಿನಲ್ಲಿ ಕೆಲಸ ಮಾಡುವುದರಿಂದ ವಿನಾಯಿತಿ ನೀಡಲಾಗಿದ್ದರೂ, ಚಾಲ್ತಿಯಲ್ಲಿರುವ ವ್ಯವಸ್ಥೆಯು ಅವರನ್ನು ಕೆಲಸ ಮಾಡಲು ಒತ್ತಾಯಿಸುತ್ತದೆ ಎಂದು ಅಬ್ಬಾಸ್ ಕಂಡುಕೊಂಡಿದ್ದಾರೆ. “ಎರಡೂ ರಾಜ್ಯಗಳ ಹೆಚ್ಚಿನ ಕಾರಾಗೃಹಗಳಲ್ಲಿ, ಸ್ವೀಪರ್ ಮತ್ತು ಕ್ಲೀನರ್‌ಗಳ ಪೋಸ್ಟ್‌ಗಳು ವರ್ಷಗಳಿಂದ ಖಾಲಿ ಬಿದ್ದಿರುವುದನ್ನು ನಾವು ಗಮನಿಸಿದ್ದೇವೆ. ಕೆಳವರ್ಗದ ಗುಂಪುಗಳಿಗೆ ಸೇರಿದ ಖೈದಿಗಳಿಂದ ಆ ಕೀಳು ಕೆಲಸಗಳನ್ನು ನಿರ್ವಹಿಸುತ್ತಾರೆ ಎಂದು ತಿಳಿದುಬಂದಿದೆ,” ಎಂದು ಅವರು ಹೇಳುತ್ತಾರೆ. ವಸಾಹತುಶಾಹಿ ಜೈಲು ನಿಯಮಗಳನ್ನು ಇನ್ನೂ ಅನುಸರಿಸುತ್ತಿರುವ ಇತರ ರಾಜ್ಯದ ಜೈಲುಗಳಿಗಿಂತ ಭಿನ್ನವಾಗಿ, ಅಬ್ಬಾಸ್ ಪಂಜಾಬ್ ಕೈಪಿಡಿಯಲ್ಲಿನ ತಿದ್ದುಪಡಿಗಳನ್ನು ಸೂಚಿಸುತ್ತಾರೆ. “ಪಂಜಾಬ್ ತುಲನಾತ್ಮಕವಾಗಿ ಹೊಸದು. ಇದನ್ನು ಕೊನೆಯದಾಗಿ 1996 ರಲ್ಲಿ ನವೀಕರಿಸಲಾಯಿತು ಆದರೆ ಇನ್ನೂ ಜಾತಿ ಆಧಾರಿತ ನಿಬಂಧನೆಗಳನ್ನು ತೆಗೆದುಹಾಕಲಿಲ್ಲ,” ಎಂದು ಅವರು ಹೇಳುತ್ತಾರೆ.

“ರಾಜಕೀಯ ಅಥವಾ ಪ್ರಜಾಸತ್ತಾತ್ಮಕ ಚಳುವಳಿಗಳಿಗೆ” ಸಂಬಂಧಿಸಿದಂತೆ ಬಂಧನಕ್ಕೊಳಗಾದ ಖೈದಿಗಳಿಗೆ ವಿಶೇಷ ನಿಬಂಧನೆಗಳನ್ನು ಮಾಡುವ ಏಕೈಕ ರಾಜ್ಯವೆಂದರೆ ಬಹುಶಃ ಪಶ್ಚಿಮ ಬಂಗಾಳ. ಆದರೆ ಆ ರಾಜ್ಯ ಕೂಡ ಜಾತಿಗೆ ಅನುಗುಣವಾಗಿ ಕಾರ್ಮಿಕರನ್ನು ನಿಯೋಜಿಸುವ ವಿಷಯಕ್ಕೆ ಬಂದಾಗ ಇತರ ರಾಜ್ಯಗಳಂತೆ ಹಿಂಜರಿಕೆ ಮತ್ತು ಸಂವಿಧಾನ ವಿರೋಧಿಯಾಗಿದೆ ನಡೆದುಕೊಂಡಿದೆ. ಉತ್ತರ ಪ್ರದೇಶದಂತೆಯೇ, ಪಶ್ಚಿಮ ಬಂಗಾಳದ ಜೈಲು ಕೈಪಿಡಿಯು “ಧಾರ್ಮಿಕ ಆಚರಣೆಗಳು ಅಥವಾ ಜಾತಿ ಪೂರ್ವಾಗ್ರಹಗಳೊಂದಿಗೆ ಹಸ್ತಕ್ಷೇಪ ಮಾಡದಿರುವ” ಬಗ್ಗೆ ಹೇಳುತ್ತದೆ. ಕೈಪಿಡಿಯಲ್ಲಿ ಕೆಲವು ನಿರ್ದಿಷ್ಟ ಆದ್ಯತೆಗಳನ್ನು ಅಳವಡಿಸಲಾಗಿದೆ – “ಪವಿತ್ರ ದಾರ – ಜನಿವಾರ” ಧರಿಸಿರುವ ಬ್ರಾಹ್ಮಣ ಅಥವಾ ನಿರ್ದಿಷ್ಟ ಉದ್ದದ ಪ್ಯಾಂಟ್‌ಗಳನ್ನು ಧರಿಸಲು ಬಯಸುವ ಮುಸ್ಲಿಂಗೆ ಹಾಗೆ ಮಾಡಲು ಅನುಮತಿ ಇದೆ. ಆದರೆ ಅದರೊಂದಿಗೆ ಕೈಪಿಡಿ, “ಆಹಾರವನ್ನು ಬೇಯಿಸಿ ಮತ್ತು ಸೆಲ್‌ಗಳಿಗೆ ಸೂಕ್ತವಾದ ಜಾತಿಯ ಖೈದಿ-ಅಡುಗೆಯವರು ಜೈಲು ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ಒಯ್ಯುಬೇಕು,” ಎಂದೂ ಹೇಳುತ್ತದೆ. ಅಂತೆಯೇ, “ಸ್ವೀಪರ್‌ಗಳನ್ನು ಮೆಹ್ತಾರ್ ಅಥವಾ ಹರಿ ಜಾತಿಯಿಂದ ಆಯ್ಕೆ ಮಾಡಬೇಕು. ಖೈದಿಯಾಗುವ ಮೊದಲು ಜಿಲ್ಲೆಯ ಪದ್ಧತಿಯಂತೆ ಇದೇ ಕೆಲಸವನ್ನು ಮಾಡುತ್ತಿದ್ದ ಚಂಡಾಲ್ ಅಥವಾ ಇತರ ಕೆಳ ಜಾತಿಗಳ ಖೈದಿಗಳನ್ನೂ ಈ ಕೆಲಸಕ್ಕೆ ತೆಗೆದುಕೊಳ್ಳಬಹುದು. ಸ್ವಯಂಸೇವಕರಾಗಿ ಈ ಕೆಲಸ ಮಾಡಲು ಮುಂದಾದರೆ ಬೇರೆಯವರನ್ನೂ ತೆಗೆದುಕೊಳ್ಳಬಹುದು….” ಎಂದು ಹೇಳುತ್ತದೆ.

ಈ ಪದ್ಧತಿಗಳು ಜೈಲು ನಿಯಮ ಪುಸ್ತಕದಲ್ಲಿ ಉಳಿದುಕೊಂಡಿದ್ದರೂ ಅವನ್ನು ಎಂದಿಗೂ ಪ್ರಶ್ನಿಸಲಾಗಿಲ್ಲ. ಆಂಧ್ರಪ್ರದೇಶದ ಮಾಜಿ ಕಾರಾಗೃಹಗಳ ಇನ್ಸ್‌ಪೆಕ್ಟರ್ ಜನರಲ್ ಮತ್ತು ವೆಲ್ಲೂರಿನಲ್ಲಿರುವ ಸರ್ಕಾರ ನಡೆಸುತ್ತಿರುವ ಅಕಾಡೆಮಿ ಆಫ್ ಪ್ರಿಸನ್ಸ್ ಮತ್ತು ಕರೆಕ್ಷನಲ್ ಅಡ್ಮಿನಿಸ್ಟ್ರೇಷನ್‌ನ ಮಾಜಿ ನಿರ್ದೇಶಕ ಡಾ ರಿಯಾಜುದ್ದೀನ್ ಅಹ್ಮದ್, ನೀತಿ ನಿರ್ಧಾರಗಳನ್ನು ಮಾಡುವಾಗ ಜಾತಿಯ ಸಮಸ್ಯೆಯನ್ನು ಎಂದಿಗೂ ಚರ್ಚಿಸಲಾಗಿಲ್ಲ ಎಂದು ಹೇಳುತ್ತಾರೆ. “34 ವರ್ಷಗಳ ನನ್ನ ವೃತ್ತಿಜೀವನದಲ್ಲಿ, ಈ ವಿಷಯವು ಎಂದಿಗೂ ಚರ್ಚೆಗೆ ಬಂದಿಲ್ಲ” ಎಂದು ಅವರು ಹೇಳುತ್ತಾರೆ. ಕೈಪಿಡಿಯಲ್ಲಿ ಉಲ್ಲೇಖಿಸಲಾದ ಷರತ್ತುಗಳು ಹೆಚ್ಚಾಗಿ ಜೈಲಿನಲ್ಲಿರುವವರ ಬಗ್ಗೆ ಸರ್ಕಾರಕ್ಕೆ ಇರುವ ಅಭಿಪ್ರಾಯದ ಪ್ರತಿಬಿಂಬವಾಗಿದೆ ಎಂದು ಅಹ್ಮದ್ ಭಾವಿಸುತ್ತಾರೆ. “ಜೈಲು ಅಧಿಕಾರಿಗಳು ಕೂಡ, ಹೊರಗೆ ಅಸ್ತಿತ್ವದಲ್ಲಿರುವ ಅದೇ ಜಾತಿ-ಪೀಡಿತ ಸಮಾಜದ ಉತ್ಪನ್ನವಾಗಿದ್ದಾರೆ. ಕೈಪಿಡಿಯಲ್ಲಿ ಏನು ಹೇಳಿದರೂ, ಖೈದಿಗಳ ಘನತೆ ಮತ್ತು ಸಮಾನತೆಯನ್ನು ಖಾತ್ರಿಪಡಿಸುವುದು ಸಂಪೂರ್ಣವಾಗಿ ಜೈಲು ಸಿಬ್ಬಂದಿಗೆ ಬಿಟ್ಟದ್ದು,” ಎಂದು ಅಹ್ಮದ್ ಅಭಿಪ್ರಾಯಪಡುತ್ತಾರೆ.

ದಿಶಾ ವಾಡೇಕರ್, ದೆಹಲಿ ಮೂಲದ ವಕೀಲೆ ಮತ್ತು ಭಾರತೀಯ ಜಾತಿ ವ್ಯವಸ್ಥೆಯ ವಿಮರ್ಶಕಿ, ಜೈಲು ಕಾನೂನುಗಳನ್ನು ಪ್ರತಿಗಾಮಿ “ಮನು ಕಾನೂನು” ಗಳೊಂದಿಗೆ ಹೋಲಿಸುತ್ತಾರೆ. ಪೌರಾಣಿಕ ವ್ಯಕ್ತಿ ಮನು ಮನುಸ್ಮೃತಿಯ ಲೇಖಕ ಎಂದು ನಂಬಲಾಗಿದೆ. ಇದು ಪ್ರಾಚೀನ ಕಾಲದಲ್ಲಿ ಜಾತಿ ಮತ್ತು ಲಿಂಗದ ಆಧಾರದ ಮೇಲೆ ಮಾನವೀಯತೆಯ ಅವನತಿಯನ್ನು ಮಾಡಿದೆ.

“ಜೈಲು ವ್ಯವಸ್ಥೆಯು ಮನುವಿನ ದಂಡನೀತಿಯನ್ನು (ಕಾನೂನುಗಳು) ಸರಳವಾಗಿ ಪುನರಾವರ್ತಿಸುತ್ತದೆ. ಕಾರಾಗೃಹ ವ್ಯವಸ್ಥೆಯು ‘ಕಾನೂನಿನ ಮುಂದೆ ಸಮಾನತೆ’ ಮತ್ತು ‘ಕಾನೂನಿನ ರಕ್ಷಣೆ’ ತತ್ವಗಳ ಮೇಲೆ ಕಟ್ಟಲಾಗಿರುವ ರೂಢಿಗತ ದಂಡನಾ ವ್ಯವಸ್ಥೆಯಲ್ಲಿ ಕೆಲಸ ಮಾಡಲು ವಿಫಲವಾಗಿದೆ. ಇದಕ್ಕೆ ತದ್ವಿರುದ್ಧವಾಗಿ, ಇದು ಅನ್ಯಾಯದ ತತ್ವಗಳ ಮೇಲೆ ಸ್ಥಾಪಿತವಾದ ಮನುವಿನ ಕಾನೂನಿನಿಂದ ಪ್ರಭಾವಿತವಾಗಿದೆ. ಮನುವಿನದ್ದು ಕೆಲವು ಜೀವಗಳು ಇತರರಿಗಿಂತ ಹೆಚ್ಚು ಶಿಕ್ಷಿಸಲ್ಪಡುತ್ತವೆ ಮತ್ತು ಕೆಲವು ಜೀವಗಳು ಇತರರಿಗಿಂತ ಹೆಚ್ಚು ಬೆಲೆಯನ್ನು ಹೊಂದಿವೆ ಎಂದು ನಂಬಿದ ವ್ಯವಸ್ಥೆ. ಸರ್ಕಾರಗಳು ʼನ್ಯಾಯʼದ ಜಾತಿ ಆಧಾರಿತ ತಿಳುವಳಿಕೆಗೆ ಅಂಟಿಕೊಂಡಿವೆ ಮತ್ತು ಜಾತಿ ಗ್ರಿಡ್‌ನಲ್ಲಿ ವ್ಯಕ್ತಿಯ ನಿಲುವಿಗೆ ಅನುಗುಣವಾಗಿ ಶಿಕ್ಷೆ ಮತ್ತು ಕಾರ್ಮಿಕರನ್ನು ನಿರ್ಧರಿಸುತ್ತವೆ” ಎಂದು ವಾಡೇಕರ್ ವಿವರಿಸುತ್ತಾರೆ.

ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ, ಭಾರತದ ಇತರ ರಾಜ್ಯಗಳು, ಜೈಲು ಕಾಯಿದೆ- 1894 ರಿಂದ (ಬ್ರಿಟೀಷ್‌ ಕಾಲದ) ಎರವಲು ಪಡೆದಿವೆ. “ಕೇವಲ ಎರವಲು ಪಡೆದಿಲ್ಲ, ಅವು ಅಲ್ಲಿಯೇ ಇವೆ,” ಎಂದು ಅಹ್ಮದ್ ಹೇಳುತ್ತಾರೆ. 2016 ರಲ್ಲಿ, ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ (BPRD) ವಿಸ್ತಾರವಾದ ಮಾದರಿ ಜೈಲು ಕೈಪಿಡಿಯನ್ನು ತಂದಿತು. ಈ ಮಾದರಿ ಜೈಲು ಕೈಪಿಡಿಯನ್ನು ಮಹಿಳಾ ಖೈದಿಗಳ ಚಿಕಿತ್ಸೆಗಾಗಿ ವಿಶ್ವಸಂಸ್ಥೆಯ ನಿಯಮಗಳು ( UN ಬ್ಯಾಂಕಾಕ್ ನಿಯಮಗಳು ) ಮತ್ತು ಖೈದಿಗಳ ಚಿಕಿತ್ಸೆಗಾಗಿ ಯುಎನ್ ಕನಿಷ್ಠ ಮಾನದಂಡಗಳು ( ಮಂಡೇಲಾ ನಿಯಮಗಳು ) ನಂತಹ ಅಂತರರಾಷ್ಟ್ರೀಯ ಮಾನದಂಡಗಳ ಆಧಾರಗಳಲ್ಲಿ ತಯಾರಿಸಲಾಗಿತ್ತು. ಜನಾಂಗ, ಬಣ್ಣ, ಲಿಂಗ, ಭಾಷೆ, ಧರ್ಮ, ರಾಜಕೀಯ ಅಥವಾ ಇತರ ಅಭಿಪ್ರಾಯಗಳು, ರಾಷ್ಟ್ರೀಯ ಅಥವಾ ಸಾಮಾಜಿಕ ಮೂಲ, ಆಸ್ತಿ, ಜನ್ಮ ಅಥವಾ ಇತರ ಯಾವುದೇ ಸ್ಥಾನಮಾನದ ಆಧಾರದ ಮೇಲೆ ತಾರತಮ್ಯವನ್ನುಂಟುಮಾಡುವ ಆಚರಣೆಗಳನ್ನು ರದ್ದುಗೊಳಿಸಬೇಕೆಂದು ಈ ಎರಡೂ ಅಂತರಾಷ್ಟ್ರೀಯ ನಿಯಮಗಳು ಒತ್ತಾಯಿಸುತ್ತವೆ. 1977 ರಲ್ಲಿ ವಿಶ್ವಸಂಸ್ಥೆಯು ಪ್ರತಿಪಾದಿಸಿದ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಅಂತರರಾಷ್ಟ್ರೀಯ ಒಪ್ಪಂದದಲ್ಲಿ ಭಾರತವು ಒಂದು ಭಾಗವಾಗಿತ್ತು. ಈ ಒಪ್ಪಂದ ಇದು ಸ್ಪಷ್ಟವಾಗಿ ಹೇಳುತ್ತದೆ: “ಯಾರೂ ಬಲವಂತದ ಅಥವಾ ಕಡ್ಡಾಯವಾಗಿ ಕೆಲಸ ಮಾಡುವ ಅಗತ್ಯವಿಲ್ಲ,” ಎಂದು. 

ಬದಲಾವಣೆ ಬೇಡವೇ?

ಜೈಲು “ರಾಜ್ಯದ ವಿಷಯ” ಆಗಿರುವುದರಿಂದ, ಮಾದರಿ ಜೈಲು ಕೈಪಿಡಿಯಲ್ಲಿ ಸೂಚಿಸಲಾದ ಈ ಬದಲಾವಣೆಗಳನ್ನು ಕಾರ್ಯಗತಗೊಳಿಸುವುದು ಸಂಪೂರ್ಣವಾಗಿ ರಾಜ್ಯಗಳ ಮೇಲಿದೆ. ವಿವಿಧ ರಾಜ್ಯಗಳ ಅಸ್ತಿತ್ವದಲ್ಲಿರುವ ಜೈಲು ಕೈಪಿಡಿಯಲ್ಲಿನ ಸಮಸ್ಯೆಗಳನ್ನು ಅಂಗೀಕರಿಸಿ, ಮಾದರಿ ಜೈಲು ಕೈಪಿಡಿಯು ಹೇಳುತ್ತದೆ: “ಜಾತಿ ಅಥವಾ ಧಾರ್ಮಿಕ ಆಧಾರದ ಮೇಲೆ ಅಡುಗೆಮನೆ ನಿರ್ವಹಣೆ ಅಥವಾ ಅಡುಗೆಯನ್ನು ಮಾಡುವುದು ಜೈಲುಗಳಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗುವುದು.” ಅಂತೆಯೇ, ಮಾದರಿ ಕೈಪಿಡಿಯು ಖೈದಿಗಳಿಗೆ ಅವಳ/ಅವನ ಜಾತಿ ಅಥವಾ ಧರ್ಮದ ಆಧಾರದ ಮೇಲೆ ಯಾವುದೇ ರೀತಿಯ “ವಿಶೇಷ ಉಪಚಾರ” ವನ್ನು ನಿಷೇಧಿಸುತ್ತದೆ. ವಾಸ್ತವವಾಗಿ, ಮಾದರಿ ಜೈಲು ಕೈಪಿಡಿಯು “ಜಾತಿ ಅಥವಾ ಧಾರ್ಮಿಕ ಆಧಾರದ ಮೇಲೆ ಗಲಾಟೆ ಮಾಡುವುದು ಅಥವಾ ವರ್ತಿಸುವುದು” ಶಿಕ್ಷಾರ್ಹ ಅಪರಾಧ ಎಂದು ಪಟ್ಟಿಮಾಡುತ್ತದೆ. ಆದರೆ ಈ ಮಾದರಿ ಜೈಲು ಕೈಪಿಡಿಯ ಅನುಷ್ಠಾನವನ್ನು ನಿರ್ಲಕ್ಷಿಸಲಾಗಿದೆ.

ರಾಜ್ಯ ಕಾರಾಗೃಹ ಇಲಾಖೆಗಳು ಪುಸ್ತಕಗಳಲ್ಲಿ ಇರುವ ಅಮಾನವೀಯ ಮತ್ತು ಸಂವಿಧಾನ ವಿರೋಧಿ ಆಚರಣೆಗಳನ್ನು ತೆಗೆದುಹಾಕಿಲ್ಲ ಎಂದೇನೂ ಇಲ್ಲ. ಗೋವಾ ಮಾಡಿದೆ, ದೆಹಲಿ, ಮಹಾರಾಷ್ಟ್ರ ಮತ್ತು ಒಡಿಶಾ ಕೂಡ ಮಾಡಿದೆ. ಜೈಲುಗಳಲ್ಲಿ ಜಾತಿಗೆ ಯಾವುದೇ ಪ್ರಸ್ತುತತೆ ಇರುವುದಿಲ್ಲ ಎಂದು ಆ ರಾಜ್ಯ ನಿರ್ದಿಷ್ಟವಾಗಿ ಹೇಳಿವೆ. ಸಂಕೋಲೆಗಳನ್ನು ಬಳಸುವುದು ಮತ್ತು ಶಿಕ್ಷೆಯ ವಿಧಾನವಾಗಿ ಚಾಟಿ ಬಳಸುವುದು ಮುಂತಾದ ಹಲವಾರು ಅಮಾನವೀಯ ಆಚರಣೆಗಳನ್ನು ತೆಗೆದುಹಾಕಲಾಯಿತು, ಆದ್ದರಿಂದ ಕೆಲವು ರಾಜ್ಯ ಕಾರಾಗೃಹಗಳಲ್ಲಿ ಜಾತಿ ಆಧಾರಿತ ಉದ್ಯೋಗಗಳನ್ನು ತೆಗೆದುಹಾಕಲಾಯಿತು.

ಆದರೆ ಅದು ಜಾತಿ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇದಿಸಿತೇ? “ಇಲ್ಲ,” ಎಂದು ಮಾಜಿ ಖೈದಿ ಲಲಿತಾ ಹೇಳುತ್ತಾರೆ. 2010 ಮತ್ತು 2017 ರ ನಡುವೆ, ಲಲಿತಾ ಮುಂಬೈ ಮತ್ತು ಮಹಾರಾಷ್ಟ್ರದ ಇತರ ಭಾಗಗಳಲ್ಲಿ ಅನೇಕ ಪ್ರಕರಣಗಳನ್ನು ಎದುರಿಸಿದ್ದರು. ಆಕೆಯ ಸೆರೆವಾಸದ ಅವಧಿಯ ಬಹುಪಾಲು ಬೈಕುಲ್ಲಾ ಮಹಿಳಾ ಜೈಲಿನಲ್ಲಿ ಕಳೆದಿದ್ದರು. ಆಕೆಯನ್ನು ಕಾಲಕಾಲಕ್ಕೆ ಇತರ ಜೈಲುಗಳಿಗೆ ಕರೆದೊಯ್ಯಲಾಯಿತು. ಇತರ ಖೈದಿಗಳು ಮತ್ತು ಜೈಲು ಅಧಿಕಾರಿಗಳೊಂದಿಗೆ ನಡೆಸಿದ ಪ್ರಯಾಣ ಮತ್ತು ಮಾತುಕತೆಯು ಕಾರ್ಸೆರಲ್ ವ್ಯವಸ್ಥೆಯನ್ನು ಮತ್ತು ಅದರ ಎಲ್ಲಾ ಸಂಕೀರ್ಣತೆಗಳನ್ನು ಅರ್ಥಮಾಡಿಕೊಳ್ಳಲು ಅವರಿಗೆ ಅವಕಾಶ ನೀಡಿತು.

ಪುರುಷ ಖೈದಿಗಳಿಗಿಂತ ಭಿನ್ನವಾಗಿ, ಮಹಿಳೆಯರು ಕಡಿಮೆ ಸಂಖ್ಯೆಯಲ್ಲಿದ್ದಾರೆ ಮತ್ತು ಅವರಿಗೆ ನಿಬಂಧನೆಗಳನ್ನು ಒದಗಿಸಲಾಗಿದೆ. ಲಲಿತಾ ಜೈಲಿನಲ್ಲಿದ್ದಾಗ ಉಗ್ರ ಹೋರಾಟಗಾರ್ತಿಯಾಗಿದ್ದು, ತಮ್ಮ ಮತ್ತು ಸಹ-ಖೈದಿಗಳ ಮೂಲಭೂತ ಹಕ್ಕುಗಳು ಮತ್ತು ಘನತೆಗಾಗಿ ಹೋರಾಡುತ್ತಿದ್ದರು. ಹಾಗಾಗಿ, ಉತ್ತಮ ಗುಣಮಟ್ಟದ ಆಹಾರ ಮತ್ತು ಕೋಳಿ ಮತ್ತು ಮಾಂಸದೂಡ ನೀಡಲು ಒತ್ತಾಯಿಸಿ ಮಹಿಳಾ ಖೈದಿಗಳು ಜೈಲು ಅಧಿಕಾರಿಗಳ ವಿರುದ್ಧ ಬಂಡಾಯವೆದ್ದಾಗ ಲಲಿತಾ ಮುಂಚೂಣಿಯಲ್ಲಿದ್ದರು.

ಜೈಲು ನಿಯಮಗಳು ಸಾಕಷ್ಟಿವೆ ಮತ್ತು ಖೈದಿಗಳು ಹಾಗೂ ಅವರ ಕಾನೂನು ಪ್ರತಿನಿಧಿಗಳ ಯಾವುದೇ ಹಸ್ತಕ್ಷೇಪವನ್ನು ಮಾಡದಂತೆ ತಡೆಯಲು ಜೈಲು ಅಧಿಕಾರಿಗಳು ಪ್ರತಿ ಬಾರಿ ಅವುಗಳನ್ನು ಉಲ್ಲೇಖಿಸುತ್ತಾರೆ. ಆದರೆ ಈ ಅಧಿಕೃತ ದಾಖಲೆಗಳು  ಜೈಲಿನಲ್ಲಿರುವ ವ್ಯಕ್ತಿಯನ್ನು ಬಿಡಿ, ಸಾಮಾನ್ಯ ಜನರಿಗೂ ಅಪರೂಪಕ್ಕೆ ಸಿಗುತ್ತವೆ.”ತಿಳುವಳಿಕೆಯುಳ್ಳ ಖೈದಿ ತನ್ನ ಹಕ್ಕುಗಳನ್ನು ಪ್ರತಿಪಾದಿಸುವುದಕ್ಕಿಂತ ಹೆಚ್ಚು ಅಪಾಯಕಾರಿ ಕೆಲಸ ಬೇರೆ ಏನೂ ಇಲ್ಲ,” ಎಂದು ಲಲಿತಾ ಹೇಳುತ್ತಾರೆ.

ಅಹಮದ್ ಅವರು ಲಲಿತಾ ಅವರ ಮಾತನ್ನು ಒಪ್ಪುತ್ತಾರೆ. ನವೀಕರಿಸಿದ ಕೈಪಿಡಿಯ ಅಲಭ್ಯತೆಯನ್ನು ವಿವರಿಸಲು, ವೆಲ್ಲೂರಿನ ಅಕಾಡೆಮಿ ಆಫ್ ಪ್ರಿಸನ್ಸ್ ಮತ್ತು ಕರೆಕ್ಷನಲ್ ಅಡ್ಮಿನಿಸ್ಟ್ರೇಷನ್‌ನ ಪ್ರಾಧ್ಯಾಪಕ ಮತ್ತು ಹಿರಿಯ ಅಧ್ಯಾಪಕರಾದ ಬೆಲುವಾ ಇಮ್ಯಾನುಯೆಲ್, ಕೈಪಿಡಿಯಲ್ಲಿನ ಬದಲಾವಣೆಗಳನ್ನು ಜಾರಿಗೆ ತರಲು ಸರಾಸರಿ 15 ವರ್ಷಗಳು ಬೇಕಾಗುತ್ತದೆ ಎಂದು ಹೇಳುತ್ತಾರೆ. “ಪ್ರತಿ ಬಾರಿ ರಾಜ್ಯಗಳು ಕೈಪಿಡಿಗೆ ಯಾವುದೇ ಬದಲಾವಣೆಯನ್ನು ತಂದಾಗ, ಅದನ್ನು ಕೇವಲ ಅಧಿಕೃತ ಮಟ್ಟದಲ್ಲಿ ಗುರುತಿಸಲಾಗುತ್ತದೆ. ಜೈಲು ಕೈಪಿಡಿಯ ಪರಿಷ್ಕರಣೆಯು 15 ವರ್ಷಗಳಿಗೊಮ್ಮೆ ಮರುಮುದ್ರಣಗೊಂಡಾಗ ಮಾತ್ರ ಕಾಣಿಸುತ್ತವೆ. ಎಲ್ಲಾ ತಿದ್ದುಪಡಿಗಳನ್ನು ಒಂದೇ ಸ್ಥಳದಲ್ಲಿ ಕಂಡುಹಿಡಿಯುವುದು ಪ್ರಾಯೋಗಿಕವಾಗಿ ಅಸಾಧ್ಯ,” ಎಂದು ಇಮ್ಯಾನುಯೆಲ್ ಹೇಳುತ್ತಾರೆ. ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್ (CHRI), ಹಲವಾರು ದಶಕಗಳಿಂದ ಖೈದಿಗಳ ಹಕ್ಕುಗಳ ಮೇಲೆ ಕೆಲಸ ಮಾಡುತ್ತಿದೆ. ಅದಕ್ಕೂ ದೀರ್ಘಕಾಲದವರೆಗೆ ನವೀಕರಿಸಿದ ಜೈಲು ಕೈಪಿಡಿಗಳನ್ನು ಪಡೆಯಲು ಸಾದ್ಯವಾಗಿಲ್ಲ. “ರಾಜ್ಯ ಜೈಲು ವೆಬ್‌ಸೈಟ್‌ಗಳಲ್ಲಿ ಕೇವಲ 10 ರಾಜ್ಯಗಳು ಜೈಲು ನಿಯಮಗಳು/ಕೈಪಿಡಿಯನ್ನು ಹಾಕಿವೆ. ಇತರ ರಾಜ್ಯಗಳ ನವೀಕರಿಸಿದ ನಿಯಮಗಳನ್ನು ಪಡೆಯಲು ತುಂಬಾ ಕಷ್ಟಕರವಾಗಿದೆ. ನಮ್ಮ ಅನುಭವದಲ್ಲಿ, ಜೈಲು ಕೈಪಿಡಿಗಳನ್ನು ಪಡೆಯುವುದು ಖೈದಿಗಳಿಗೂ ಒಂದು ಸವಾಲಾಗಿದೆ. ಎಲ್ಲಾ ಜೈಲು ಗ್ರಂಥಾಲಯಗಳು ಜೈಲು ನಿಯಮಗಳ ಪ್ರತಿಯನ್ನು ಹೊಂದಿರಬೇಕು, ”ಎಂದು CHRI ಯ ಹಿರಿಯ ಕಾರ್ಯಕ್ರಮ ಅಧಿಕಾರಿ ಸುಗಂಧ ಶಂಕರ್ ಹೇಳುತ್ತಾರೆ.

ಸಾಧ್ವಿಯೊಬ್ಬಳ ಕಥೆ…

ಮಹಾರಾಷ್ಟ್ರದಲ್ಲಿ ಅಲಿಖಿತ ಜಾತಿ ಪದ್ಧತಿ ವಿಪರೀತವಾಗಿದೆ ಎನ್ನುತ್ತಾರೆ ಲಲಿತಾ. ಬೈಕುಲ್ಲಾ ಜೈಲಿನಲ್ಲಿ ಆಕೆಯ ವಾಸ್ತವ್ಯವು ಉತ್ತರ ಮಹಾರಾಷ್ಟ್ರದ ಪಟ್ಟಣವಾದ ಮಾಲೆಗಾಂವ್‌ನಲ್ಲಿ 2008 ರ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್‌ರೊಂದಿಗೆ ಆಯಿತು. ಠಾಕೂರ್, 2017 ರಲ್ಲಿ ಬಿಡುಗಡೆಯಾದ ನಂತರ, ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಗೊಂಡರು ಮತ್ತು ನಂತರ 2019 ರಲ್ಲಿ ಅವರ ತವರು ಭೋಪಾಲ್‌ನಿಂದ ಸಂಸತ್ತಿನ ಚುನಾಯಿತ ಸದಸ್ಯರಾದರು.

ಆಕೆಯ ಬಂಧನದ ಸಮಯದಲ್ಲಿ, ಅವರು ಕೇವಲ ಸ್ವಯಂ-ಘೋಷಿತ ದಾರ್ಶನಿಕಳಾಗಿದ್ದರು. ಅದು ಜೈಲಿನಲ್ಲಿ ತನ್ನ ಪ್ರಭಾವವನ್ನು ಬೆಳೆಸಲು ಸಹಾಯವಾಯಿತು. ಜೈಲು ಅಧಿಕಾರಿಗಳ ಮೇಲೆ ಪ್ರಭಾವ ಬೀರಿತು. ಠಾಕೂರ್ ಅವರನ್ನು ಮೂರು “ಪ್ರತ್ಯೇಕ ಸೆಲ್”ಗಳಲ್ಲಿ ಒಂದರಲ್ಲಿ ಇರಿಸಲಾಗಿತ್ತು, ಇದು ಶ್ರೀಮಂತ ಮತ್ತು ಪ್ರಭಾವಿಗಳ ಖಾಸಗಿತನಕ್ಕಾಗಿ ಇದ್ದ “ವಿಐಪಿ ಸೆಲ್”ನ ಎರಡು ಪಟ್ಟು ಇತ್ತು. ತಪ್ಪಿತಸ್ಥ ಖೈದಿಗಳ ಪ್ರಕರಣದಲ್ಲಿ ಚಿತ್ರಹಿಂಸೆ ಅಥವಾ ಒಂಟಿ ಸೆಲ್.

ಕೃಪೆ The Wire: Illustration- ಪರಿಪ್ಲಾಬ್ ಚಕ್ರವರ್ತಿ

ಪ್ರತ್ಯೇಕ ಸೆಲ್‌ನ ಹೊರಗೆ ಸಾದ್ವಿಗಾಗಿ ‘ಸೇವಕರು ‘ ಅಥವಾ ಅಟೆಂಡರ್‌ಗಳಾಗಿ ನೇಮಕಗೊಂಡ ಇತರ ಮೂವರು ವಿಚಾರಣಾಧೀನ ಖೈದಿಗಳನ್ನು ಠಾಕೂರ್‌ನ ಆಜ್ಞೆಯ ಮೇರೆಗೆ ಪ್ರತ್ಯೇಕವಾಗಿ ಇರಿಸಲಾಗುತ್ತದೆ. ಅದೇ ಠಾಕೂರ್ ಅಥವಾ “ಯೋಧ ಜಾತಿ” ಯಿಂದ ಇನ್ನೊಬ್ಬ ವಿಚಾರಣಾಧೀನ ಮಹಿಳೆಯನ್ನು ಸಾದ್ವಿಯ ಊಟದ ವ್ಯವಸ್ಥೆಗಾಗಿ ನಿಯೋಜಿಸಲಾಯಿತು. ಜೈಲು ಅಧಿಕಾರಿಗಳು ತನಗೆ ಕೊಡುವ ಊಟದಲ್ಲಿ “ಹುಳುಗಳು” ಇರುವ ಮತ್ತು “ಮೊಟ್ಟೆಯ ತುಂಡುಗಳು” ಇವೆ ಎಂದು ಆರೋಪಿಸಿದ ನಂತರ ವಿಚಾರಣಾ ನ್ಯಾಯಾಲಯವು ಪ್ರಜ್ಞಾ ಅವರಿಗೆ ಮನೆಯಲ್ಲಿ ತಯಾರಿಸಿದ ಊಟ ಮಾಡಲು ಅನುಮತಿ ನೀಡಿತ್ತು . ಆಕೆಯ ಸೋದರ ಮಾವ ಭಗವಾನ್ ಝಾ, ಮಲ್ಟಿ ಡೆಕ್ಕರ್ ಫುಡ್ ಬಾಕ್ಸ್‌ನೊಂದಿಗೆ ಗುಜರಾತ್‌ನ ಸೂರತ್‌ನಿಂದ ಬೈಕುಲ್ಲಾ ಜೈಲಿಗೆ ಪ್ರತಿದಿನ 280 ಕಿಮೀ ಪ್ರಯಾಣಿಸುತ್ತಿದ್ದರು. ಆಗತಾನೆ ಬೇಯಿಸಿದ ಮನೆಯ ಆಹಾರವು ಬೆಳಗಾಗುವ ಮೊದಲು ಜೈಲಿಗೆ ತಲುಪುತ್ತದೆ ಮತ್ತು ಠಾಕೂರ್ ಸೇವಕಿ ಅದನ್ನು ಜೈಲು ಕಚೇರಿಯಿಂದ ತೆಗೆದುಕೊಳ್ಳಲು ಓಡುತ್ತಿದ್ದಳು. ದಿನಕ್ಕೆ ಮೂರು ಬಾರಿ ಪ್ರಜ್ಞಾಗೆ ಊಟ ಬಡಿಸುವುದೇ ಆಕೆಯ ಏಕೈಕ ಕೆಲಸವಾಗಿತ್ತು. ಅದೇ ರೀತಿ, ಪ್ರಬಲ ಜಾಟ್ ಸಮುದಾಯಕ್ಕೆ ಸೇರಿದ ಮಾದಕ ದ್ರವ್ಯ ದೊರೆ ಎಂದು ಆರೋಪಿಸಲ್ಪಟ್ಟ ಇನ್ನೊಬ್ಬ ಮಹಿಳೆಯನ್ನು ಸಾದ್ವಿಯ “ಅಂಗರಕ್ಷಕಿ”ಯಾಗಿ ನೇಮಿಸಲಾಯಿತು. ಸ್ಥಳೀಯ ದಲಿತ ಮಹಿಳೆ ಒಬ್ಬರು ಆಕೆಯ ಶೌಚಾಲಯವನ್ನು ಸ್ವಚ್ಛಗೊಳಿಸಬೇಕಾಗಿತ್ತು.

ಪ್ರಜ್ಞಾಳ ಧರ್ಮ, ಆಕೆಯ ಜಾತಿಯ ಸ್ಥಾನ ಮತ್ತು ರಾಜಕೀಯ ಪ್ರಭಾವವು ಜೈಲಿನಲ್ಲಿ ಆಕೆಯ ಸ್ಥಾನವನ್ನು ಹಾಗೂ ಆಕೆಯ ಅನುಯಾಯಿಗಳ ಸ್ಥಾನವನ್ನು ನಿರ್ಧರಿಸಿತು. ಪ್ರಜ್ಞಾ ಅವರು ಇದನ್ನು ತಮ್ಮ ನ್ಯಾಯಸಮ್ಮತ ಹಕ್ಕು ಎಂಬಂತೆ ಈ ಸೇವೆಗಳ ಬೇಡಿಕೆ ಇಟ್ಟಾಗ ಸರ್ಕಾರವೂ ಒಪ್ಪಿಗೆ ತೋರಿತು. “ಜೈಲು ಪಠ್ಯದಲ್ಲಿ ಅಂತಹ ನಿಬಂಧನೆಗಳನ್ನು ಅನುಮತಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದು ಮುಖ್ಯವಲ್ಲ. ಜೈಲು ಸಿಬ್ಬಂದಿಯ ಸಂಪೂರ್ಣ ತಿಳುವಳಿಕೆಯೊಂದಿಗೆ ಇದು ಸಂಭವಿಸಿದೆ ಎಂಬುದು ಮುಖ್ಯವಾದುದು,” ಎಂದು ಲಲಿತಾ ಹೇಳುತ್ತಾರೆ. ಇದೇ ಅವಧಿಯಲ್ಲಿ ಜೈಲಿನಲ್ಲಿ ಕಾಲ ಕಳೆದ ಹಲವಾರು ಇತರ ಮಾಜಿ ಖೈದಿಗಳು ಕೂಡ ಸಾದ್ವಿಯ ಈ ಪರಿಪಾಠವನ್ನು ದೃಢಪಡಿಸಿದ್ದಾರೆ.

ಮಹಾರಾಷ್ಟ್ರದ 60 ಜಿಲ್ಲಾ ಮತ್ತು ಕೇಂದ್ರ ಕಾರಾಗೃಹಗಳಲ್ಲಿ, ಬೈಕುಲ್ಲಾ ಜೈಲು 262 ಖೈದಿಗಳಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿರುವ ಮಹಿಳಾ ವಿಚಾರಣಾಧೀನ ಖೈದಿಗಳಿಗೆ ಇರುವ ಏಕೈಕ ವಿಶೇಷ ಜೈಲು. ಆದರೆ ಯಾವುದೇ ನಿರ್ದಿಷ್ಟ ಸಮಯದಲ್ಲಿ, ಸಂಖ್ಯೆಗಳು ಅಧಿಕೃತ ಸಾಮರ್ಥ್ಯವನ್ನು ಮೀರುತ್ತವೆ. ದಿನನಿತ್ಯದ ಕೆಲಸಗಳನ್ನು ನೋಡಿಕೊಳ್ಳಲು ಇಲ್ಲಿ ಪ್ರತ್ಯೇಕವಾಗಿ ಇರಿಸಲಾಗಿರುವ ಕೆಲವು ಶಿಕ್ಷೆಗೊಳಗಾದ ಖೈದಿಗಳನ್ನು ಹೊರತುಪಡಿಸಿ, ಹೆಚ್ಚಿನ ಕಾರ್ಮಿಕ ಕೆಲಸವನ್ನು ವಿಚಾರಣಾಧೀನ ಬಂಧಿತರು ಮಾಡುತ್ತಾರೆ. ಅವರಲ್ಲಿ ನೆರೆಯ ಬಾಂಗ್ಲಾದೇಶದಿಂದ ಬಂದಿರುವ ದಾಖಲೆರಹಿತ ವಲಸಿಗರು ಎಂಬ ಆರೋಪದ ಮೇಲೆ ಜೈಲಿನಲ್ಲಿ ಇರುವ ಅತ್ಯಂತ ದುರ್ಬಲರಾದ ಬಂಗಾಳಿ ಮಾತನಾಡುವ ಮುಸ್ಲಿಂ ಮಹಿಳೆಯರು ಜೈಲಿನಲ್ಲಿಯೇ ಬದುಕಿ ಸಾಯುತ್ತಾರೆ. 

ಕೃಪೆ The Wire: Illustration- ಪರಿಪ್ಲಾಬ್ ಚಕ್ರವರ್ತಿ

ಒಬ್ಬ ವ್ಯಕ್ತಿಯನ್ನು ಬಂಧಿಸಿದಾಗ, ಹೊರಗಿನ ಪ್ರಪಂಚವು ಪೊಲೀಸ್ ಕ್ರಮಕ್ಕೆ ಹೆದರಿ ಆತನೊಂದಿಗೆ ಸಂಬಂಧವನ್ನು ಕಡಿದುಕೊಳ್ಳುತ್ತದೆ. ಬೈಕುಲ್ಲಾ ಜೈಲಿನಲ್ಲಿರುವ ಮುಂಬೈನ ರೇ ರೋಡ್ ಪ್ರದೇಶದ 33 ವರ್ಷದ ಮನೆಕೆಲಸಗಾರ್ತಿ ನೂರ್ಜಹಾನ್ ಮಂಡಲ್ ಅವರನ್ನು ನೋಡಲು ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಯಾರೊಬ್ಬರೂ ಬಂದಿಲ್ಲ. “ನನ್ನ ಕುಟುಂಬದವರು ನನ್ನನ್ನು ಸಂಪರ್ಕಿಸಲು ಅಥವಾ ಮನಿ ಆರ್ಡರ್ ಕಳುಹಿಸಲು ತುಂಬಾ ಹೆದರುತ್ತಿದ್ದರು. ಹಸಿವಾದಾಗ ಸಣ್ಣ ತಿಂಡಿ ಕೊಳ್ಳಲೂ ನನ್ನ ಬಳಿ ಹಣವಿರಲಿಲ್ಲ. ನನ್ನನ್ನು ನಾನು ಸಾಕಿಕೊಳ್ಲಲು ನಾನು ಜೈಲಿನಲ್ಲಿನ ಕೀಳು ಕೆಲಸಗಳನ್ನು ನಾನೇ ಮಾಡುತ್ತೇನೆ,” ಎಂದು ಬಾಂಗ್ಲಾದೇಶದ ಗಡಿಯಲ್ಲಿರುವ ಪಶ್ಚಿಮ ಬಂಗಾಳದ ಪಟ್ಟಣವೊಂದರ ದಲಿತ ಮುಸ್ಲಿಂ ಮಹಿಳೆ ಮಂಡಲ್ ಹೇಳುತ್ತಾರೆ. ಅವರು ನೆಲ ಗುಡಿಸಿ, ಒರೆಸುತ್ತಾರೆ ಮತ್ತು ವಯಸ್ಸಾದ ಮಹಿಳಾ ಖೈದಿಗಳಿಗೆ ಸ್ನಾನ ಮಾಡಲು ಸಹಾಯ ಮಾಡುತ್ತಿದ್ದಳು. ಅದಕ್ಕೆ ಬದಲಾಗಿ ಅವರಿಗೆ ಕೆಲವು ಕ್ಯಾಂಟೀನ್ ಕೂಪನ್‌ಗಳು ಸಿಗುತ್ತವೆ. 

ಅವಳಂತೆ, ಮುಂಬೈ ಮೆಟ್ರೋಪಾಲಿಟನ್ ರೀಜನ್ (MMR) ನಲ್ಲಿರುವ ಐದು ಜೈಲುಗಳಲ್ಲಿ, ಹಲವಾರು ಬಂಗಾಳಿ ಮಾತನಾಡುವ ಮುಸ್ಲಿಂ ಖೈದಿಗಳು ಕೇವಲ ಹಣ ಅಥವಾ ಆಹಾರಕ್ಕಾಗಿ ಇಂತಹ ಕೆಲಸವನ್ನು ಮಾಡುತ್ತಾರೆ. “ಜಾತಿ ಮತ್ತು ಬಡತನ ಎರಡೂ ಇಲ್ಲಿ ಮುಖ್ಯ ಅಂಶವಾಗಿದೆ,” ಎಂದು ಲಲಿತಾ ಭಾವಿಸುತ್ತಾರೆ. “ಯಾವುದೇ ಬಡ ಬ್ರಾಹ್ಮಣ ಮಹಿಳೆಯನ್ನು ಜೈಲಿನಲ್ಲಿ ಇಂತಹ ಹತಾಶ ಪರಿಸ್ಥಿತಿಗೆ ತಳ್ಳಿರುವುದನ್ನು ನೀವು ನೋಡಲು ಸಾಧ್ಯವಿಲ್ಲ. ಅವಳನ್ನು ಬೆಂಬಲಿಸುವ ರೀತಿಯಲ್ಲಿ ಭಾರತದ ಆಡಳಿತ ವ್ಯವಸ್ಥೆ ಮತ್ತು ಸಮಾಜವನ್ನು ಕಟ್ಟಲಾಗಿದೆ. ಈ ವ್ಯವಸ್ಥೆಯು ಇತರರಿಗೆ ಇಲ್ಲ.

ಜಾತಿಯಿಂದ ಮ್ಯಾಪ್ ಮಾಡಿದ ಜೈಲು

1994 ರ ಬೇಸಿಗೆಯಲ್ಲಿ, ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಒಂದು ಹಳ್ಳಿಯ ದೇವಸ್ಥಾನದಲ್ಲಿ ಕೌಟುಂಬಿಕ ಕಲಹವು ಪ್ರಾರಂಭವಾಯಿತು.ಸಣ್ಣಮಟ್ಟದ ವಾದವು ಹಿಂಸಾತ್ಮಕವಾಗಿ ತಿರುಗಿ ಯುವಕನ ಸಾವಿಗೆ ಕಾರಣವಾಯಿತು. ಸೆಲ್ವಂ ಎಂಬ 20ರ ಹರೆಯದ ವ್ಯಕ್ತಿ ಒಂಬತ್ತು ಮಂದಿ ಕೊಲೆಗಾರರಲ್ಲಿ ಒಬ್ಬ. ಕೂಡಲೇ ಇವರೆಲ್ಲರೂ ಸ್ಥಳೀಯ ಪೊಲೀಸರ ಮುಂದೆ ಶರಣಾದರು. ಸೆಲ್ವಂ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದು ಇದೇ ಮೊದಲು. ಸ್ಥಳೀಯ ಉಪ-ಜೈಲಿನಲ್ಲಿ ಕೆಲವು ದಿನಗಳನ್ನು ಕಳೆದ ನಂತರ, ಅವರನ್ನು ತಿರುನಲ್ವೇಲಿಯ ದೊಡ್ಡ ಪಳಯಂಕೊಟ್ಟೈ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು. “ನಾನು ಸುಮಾರು 75 ದಿನಗಳ ಕಾಲ ಅಲ್ಲಿದ್ದೆ” ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಜೈಲು, ಇತರ ಯಾವುದೇ ಕಾರ್ಸೆರಲ್ ರಚನೆಯಂತೆ, ಹಲವಾರು ವಾರ್ಡ್‌ಗಳು ಮತ್ತು ಘಟಕಗಳನ್ನು ಹೊಂದಿತ್ತು. “ನನ್ನನ್ನು ‘ಕ್ವಾರಂಟೈನ್ ವಾರ್ಡ್ 2’ ನಲ್ಲಿ ಇರಿಸಲಾಗಿತ್ತು” ಎಂದು ಸೆಲ್ವಂ ಹೇಳುತ್ತಾರೆ. ‘ಕ್ವಾರಂಟೈನ್’ ಎಂಬುದು ತಮಿಳುನಾಡಿನ ಅಂಡರ್ ಟ್ರಯಲ್ ಸೆಲ್‌ಗಳಿಗೆ ಇರುವ  ಸ್ಥಳೀಯ ಪದ. 

ನಾಲ್ಕು ವರ್ಷಗಳ ನಂತರ, ಸೆಲ್ವಂಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಅವರನ್ನು 1998 ರ ಮಧ್ಯದಲ್ಲಿ ಮತ್ತೊಮ್ಮೆ ಜೈಲಿಗೆ ಕಳುಹಿಸಲಾಯಿತು. “ಆಗ ಜೈಲು ಬೇರೆ ಸ್ಥಳವಾಗಿತ್ತು. ವಾರ್ಡ್‌ಗಳಿಗೆ ಜಾತಿವಾರು ಹೊಸದಾಗಿ ನಾಮಕರಣ ಮಾಡಲಾಗಿತ್ತು. ತೇವರು, ನಾಡರು, ಪಲ್ಲರ್‌ಗಳು, ಪ್ರತಿಯೊಬ್ಬರಿಗಾಗಿ ಅಂಡರ್‌ಟ್ರಯಲ್ ವಿಭಾಗದಲ್ಲಿ ಪ್ರತ್ಯೇಕ ವ್ಯವಸ್ಥೆ ನೀಡಲಾಗಿದೆ,” ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಸೆಲ್ವಂ ಕೊಲ್ಲರ್ ಅಥವಾ ಕಮ್ಮಾರ ಜಾತಿಗೆ ಸೇರಿದವರು. ಇದು ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿರುವ ಒಂದು ಸಣ್ಣ ಸಮುದಾಯ. “ಜೈಲು ಅಧಿಕಾರಿಗಳು ಕೆಲವು ಜಾತಿಗಳನ್ನು ‘ಯೋಧ ಜಾತಿಗಳು” ಎಂದು ಗುರುತಿಸಿ, ಅವರನ್ನು ಪ್ರತ್ಯೇಕವಾಗಿ ಇರಿಸಲು ನಿರ್ಧರಿಸಿದರು. ಉಳಿದವುಗಳನ್ನು ಅವರ ಜಾತಿಗೆ ಅನುಗುಣವಾಗಿ ಇರಿಸಲಾಗಿದೆ,” ಎಂದು ಅವರು ವಿವರಿಸುತ್ತಾರೆ.

ಈ ಬ್ಯಾರಕ್‌ಗಳನ್ನು ಜಾತಿ ಪ್ರಾಬಲ್ಯಕ್ಕೆ ಅನುಗುಣವಾಗಿ ಮಾಡಲಾಗಿದೆ. ತೇವರ್‌ಗಳು ಇತರೆ ಹಿಂದುಳಿದ ವರ್ಗಕ್ಕೆ ಸೇರಿದವರು. ಆದರೆ ದಕ್ಷಿಣ ತಮಿಳುನಾಡು ಪ್ರದೇಶದಲ್ಲಿ ಪ್ರಬಲ ಸಮುದಾಯ. ಜೈಲು ಕ್ಯಾಂಟೀನ್, ಗ್ರಂಥಾಲಯ ಮತ್ತು ಆಸ್ಪತ್ರೆ ಹತ್ತಿರ ಇವರನ್ನು ಇರಿಸಲಾಗುತ್ತದೆ; ಮುಂದಿನದು ನಾಡಾರ್ (ಒಬಿಸಿ ಜಾತಿ) ಬ್ಲಾಕ್. ಅತ್ಯಂತ ದೂರದಲ್ಲಿರುವ ಪಲ್ಲಾರ್ ಬ್ಲಾಕ್‌ನಲ್ಲಿ ದಲಿತ ಸಮುದಾಯದ ಖೈದಿಗಳನ್ನು ಇರಿಸಲಾಗಿದೆ.

ಇದು ಪ್ರಾಥಮಿಕವಾಗಿ ಅಂಡರ್‌ಟ್ರಯಲ್ ವಿಭಾಗಕ್ಕೆ ಮಾತ್ರ ಸೀಮಿತವಾಗಿದೆ ಮತ್ತು ಶಿಕ್ಷೆಗೊಳಗಾದ ಖೈದಿಗಳ ವಿಭಾಗದಲ್ಲಿ ಪ್ರತ್ಯೇಕತೆಯು ನಿರ್ಬಂಧಿತವಾಗಿಲ್ಲ. ಅಪರಾಧಿಗಳಿಗೆ ಹೋಲಿಸಿದರೆ ವಿಚಾರಣಾಧೀನ ಖೈದಿಗಳಿಗೆ ನ್ಯಾಯ ವ್ಯವಸ್ಥೆಗೆ ಸುಲಭವಾಗಿ ಪ್ರವೇಶ ಪಡೆಯಬಹುದು. “ಜೈಲುಗಳಲ್ಲಿ ಜೈಲು ಅಧಿಕಾರಿಗಳು ಖೈದಿಗಳಿಗೆ ತೀವ್ರ ಹಿಂಸೆ ನೀಡುತ್ತಾರೆ. ಆದರೆ ಜೈಲು ಅಧಿಕಾರಿಗಳು ವಿಚಾರಣಾಧೀನ ಖೈದಿಗಳ ಮೇಲೆ ಹೆಚ್ಚಿನ ಬಲವನ್ನು ಬಳಸುವುದರ ಬಗ್ಗೆ ಜಾಗರೂಕರಾಗಿರುತ್ತಾರೆ, ಏಕೆಂದರೆ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಅವಕಾಶ ಹೆಚ್ಚು. ಮತ್ತೊಂದೆಡೆ, ಅಪರಾಧಿಗಳಿಗೆ ನ್ಯಾಯಾಲಯಗಳು ಅಥವಾ ಹೊರ ಪ್ರಪಂಚದ ಜೊತೆಗೆ ಯಾವುದೇ ಸಂಪರ್ಕ ಹೊಂದಿರುವುದಿಲ್ಲ. ಮತ್ತು ಜೈಲು ಅಧಿಕಾರಿಗಳು ಕೂಡ ಅವರನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಯಂತ್ರಣಕ್ಕೆ ತರಬಹುದು ಎಂದು ಭಾವಿಸುತ್ತಾರೆ. ಪ್ರತ್ಯೇಕತೆಯ ನಿಯಮಗಳಲ್ಲಿನ ವ್ಯತ್ಯಾಸ ಹೀಗಿದೆ,” ಎಂದು ವಕೀಲರು ಮತ್ತು ಗ್ಲೋಬಲ್ ನೆಟ್‌ವರ್ಕ್ ಫಾರ್ ಈಕ್ವಾಲಿಟಿ ಸಂಸ್ಥಾಪಕ ಕೆಆರ್ ರಾಜಾ ಹೇಳುತ್ತಾರೆ. ಇದು ಖೈದಿಗಳ ಮಕ್ಕಳೊಂದಿಗೆ ಕೆಲಸ ಮಾಡುವ ಎನ್‌ಜಿಒ. ರಾಜಾ ಅವರು ತರಬೇತಿ ಪಡೆದ ಸಲಹೆಗಾರರು, ಆರು ವರ್ಷಗಳ ಕಾಲ ಪಾಲಯಂಕೊಟ್ಟೈ ಜೈಲಿನಲ್ಲಿ ಕೆಲಸ ಮಾಡಿದ್ದಾರೆ, ಬ್ಯಾರಕ್‌ಗಳಾದ್ಯಂತದ ಖೈದಿಗಳನ್ನು ಭೇಟಿಯಾಗುತ್ತಾರೆ ಮತ್ತು ಜೈಲಿನಲ್ಲಿ ಅವರ ಆತಂಕಗಳನ್ನು ನಿಭಾಯಿಸಲು ಸಹಾಯ ಮಾಡುತ್ತಾರೆ.

ಪಳಯಂಕೊಟ್ಟೈ ಜೈಲಿನ ನಕ್ಷೆ. Illustration: Pariplab Chakraborty

ರಾಜಾ ಪಳಯಂಕೊಟ್ಟೈ ಜೈಲು ರಚನೆಯನ್ನು ಬಹಳ ಹತ್ತಿರದಿಂದ ಅಧ್ಯಯನ ಮಾಡಿದ್ದಾರೆ. ಅವರು ಜೈಲಿನಲ್ಲಿನ ಪರಿವರ್ತನೆಯನ್ನು ಆ ಸಮಯದಲ್ಲಿ ಹೊರಗೆ ನಡೆದ ಸಾಮಾಜಿಕ-ರಾಜಕೀಯ ಬದಲಾವಣೆಗಳೊಂದಿಗೆ ಸಂಬಂಧ ಕಲ್ಪಿಸುತ್ತಾರೆ. “ಜೈಲುಗಳು ಹೊರಗಿನ ಸಮಾಜದ ಪ್ರತಿಬಿಂಬವಾಗಿದೆ” ಎಂದು ಅವರು ವಿವರಿಸುತ್ತಾರೆ. 1990 ರ ದಶಕದ ಮಧ್ಯಭಾಗದಲ್ಲಿ, ತಮಿಳುನಾಡು, ಅದರಲ್ಲೂ ವಿಶೇಷವಾಗಿ ರಾಜ್ಯದ ದಕ್ಷಿಣ ಜಿಲ್ಲೆಗಳು, ದಲಿತ ಸಮುದಾಯಗಳ ವಿರುದ್ಧ ಅತ್ಯಂತ ಭೀಕರವಾದ ಜಾತಿ ಹಿಂಸಾಚಾರಕ್ಕೆ ಸಾಕ್ಷಿಯಾಯಿತು. ಜೂನ್ 1997 ರಲ್ಲಿ ಮಧುರೈ ಜಿಲ್ಲೆಯ ಮೆಲವಲವು ಗ್ರಾಮದಲ್ಲಿ ಗ್ರಾಮ ಕೌನ್ಸಿಲ್ ಅಧ್ಯಕ್ಷ ಸ್ಥಾನದ ಚುನಾವಣೆ ಮುಗಿದ ಮೇಲೆ ದಲಿತ ಸಮುದಾಯದ ಆರು ನಾಯಕರನ್ನು ಹಿಂದೂ ತೇವರ್ ಎಂಬ ಜಾತಿಗೆ ಸೇರಿದ OBC ಸಮುದಾಯದವರು ಕಡಿದು ಕೊಂದರು. “ತೂತುಕುಡಿ, ತಿರುನಲ್ವೇಲಿ, ಮಧುರೈ ಮತ್ತು ಧರ್ಮಪುರಿ ಪ್ರದೇಶದಲ್ಲಿ ಸರಣಿ ಹಿಂಸಾತ್ಮಕ ದಾಳಿಗಳು ನಡೆದವು. ರಾಜ್ಯ ಸರ್ಕಾರವು ಪ್ರಬಲ ಜಾತಿ ಗುಂಪುಗಳನ್ನು ನಿಯಂತ್ರಿಸಲು ಕಷ್ಟವಾಗುತ್ತಿದೆ ಮತ್ತು ಜೈಲಿನಲ್ಲಿರುವವರನ್ನು ಅವರ ಜಾತಿಗೆ ಅನುಗುಣವಾಗಿ ಪ್ರತ್ಯೇಕಿಸುವುದಾಗಿ ಉಡಾಫೆಯ ಹೇಳಿಕೆ ನೀಡಿತು,” ಎಂದು ರಾಜಾ ವಿವರಿಸುತ್ತಾರೆ.

ಯಾವುದೇ ಸಾರ್ವಜನಿಕ ಆಕ್ರೋಶವಿಲ್ಲದೆ ಒಂದು ದಶಕದಿಂದ ಪದ್ದತಿ ನಡೆದುಕೊಂಡು ಬಂದಿದೆ. 2011 ರಲ್ಲಿ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದಲ್ಲಿ ವಕೀಲರಾದ ಆರ್.ಅಲಗುಮಣಿ ಅವರು ಅರ್ಜಿಯನ್ನು ಸಲ್ಲಿಸಿದರು. “ನನ್ನ ಕ್ಲೈಂಟ್‌ಗಳೊಂದಿಗೆ ನೇರವಾಗಿ ಸಂವಹನ ನಡೆಸಲು ನಾನು ಆದ್ಯತೆ ನೀಡಿದ್ದರಿಂದ ನಾನು ಆಗಾಗ್ಗೆ ಜೈಲುಗಳಿಗೆ ಭೇಟಿ ನೀಡುತ್ತೇನೆ. ಮುರುಗನ್ ಎಂಬ ಖೈದಿಯನ್ನು ಭೇಟಿಯಾಗಲು ನಾನು ಮೊದಲ ಬಾರಿಗೆ ಪಾಳಯಂಕೊಟ್ಟೈಗೆ ಭೇಟಿ ನೀಡಿದ್ದು ನನಗೆ ಇನ್ನೂ ನೆನಪಿದೆ. ನನಗೆ ಬಹಳ ಕಡಿಮೆ ಮಾಹಿತಿ ಇತ್ತು ಮತ್ತು ಜೈಲು ಸಿಬ್ಬಂದಿ ಸರಿಯಾದ ವ್ಯಕ್ತಿಯನ್ನೇ ನನಗೆ ತೋರಿಸುತ್ತಾರೆ ಎಂದು ಆಶಿಸುತ್ತಿದ್ದೆ. ನಾನು ಮುರುಗನ್ ಬಗ್ಗೆ ಹೇಳಿದಾಗ, ಸಿಬ್ಬಂದಿ ನನ್ನ ಜಾತಿಯನ್ನು ಕೇಳಿದರು. ನಾನು ಬೆಚ್ಚಿಬಿದ್ದೆ. ಮುರುಗನ್‌ನ ಜಾತಿ ನನಗೆ ತಿಳಿದಿರಲಿಲ್ಲ. ಆದ್ದರಿಂದ ಗಾರ್ಡ್‌ಗೆ ಅವನನ್ನು ಹುಡುಕಲು ನನಗೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ಪಳಯಂಕೊಟ್ಟೈನಲ್ಲಿ ಒಬ್ಬ ಖೈದಿಯನ್ನು ಭೇಟಿಯಾಗಲು ಅವನ ಹೆಸರು ಮತ್ತು ಕೇಸ್ ಹಿಸ್ಟರಿ ಸಾಕಾಗುವುದಿಲ್ಲ ಎಂದು ನನಗೆ ಅರ್ಥವಾಯಿತು. ಅವನ ಜಾತಿಯನ್ನೂ ತಿಳಿದುಕೊಳ್ಳಬೇಕಾಗಿದೆ,” ಎಂದು ಅಲಗುಮಣಿ ಹೇಳುತ್ತಾರೆ.

ಈ ಪದ್ಧತಿ ಅಸಂವಿಧಾನಿಕ, ಆದರೆ ಅನೇಕ ವರ್ಷಗಳಿಂದ ಹಾಗೆಯೇ ಇದೆ. ಅಲಗುಮಣಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ನಿರ್ಧರಿಸಿದ್ದಾರೆ. ನ್ಯಾಯಾಲಯವು ಇದನ್ನು ಗಮನದಲ್ಲಿಟ್ಟುಕೊಂಡು ತಕ್ಷಣ ಮಧ್ಯಪ್ರವೇಶಿಸುತ್ತದೆ ಎಂಬ ಭರವಸೆ ಅವರಿಗಿದೆ. “ಬದಲಿಗೆ, ನ್ಯಾಯಲಯದಲ್ಲಿ ಜೈಲು ಅಧಿಕಾರಿಗಳು ತಾವು ಅಸಹಾಯಕರು ಹಾಗೂ ಜೈಲಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಪ್ರತ್ಯೇಕತೆಯ ಏಕೈಕ ಮಾರ್ಗವೆಂದು ಹೇಳಿಕೊಂಡರು. ನ್ಯಾಯಾಲಯವು ಅಫಿಡವಿಟ್ ಅನ್ನು ಅಂಗೀಕರಿಸಿತು ಮತ್ತು ಪ್ರಕರಣವನ್ನು ವಿಲೇವಾರಿ ಮಾಡಲಾಯಿತು,” ಎಂದು ಅಲಗುಮಣಿ ಹೇಳುತ್ತಾರೆ. ಅದರೊಂದಿಗೆ, ಸಮಾಜದಲ್ಲಿ ಶಾಂತಿಯನ್ನು ಕಾಪಾಡಲು ಇರುವ ಏಕೈಕ “ಉತ್ತಮ ಮಾರ್ಗ” ಎಂದು ತಾರತಮ್ಯದ ಕಾಯ್ದೆಯನ್ನು ಅಂಗೀಕರಿಸಲಾಯಿತು.

ಇದು ಅನುಕೂಲದ ವಿಷಯವಾಗಿದೆ ಎಂದು ಅಲಗುಮಣಿ ವಾದಿಸುತ್ತಾರೆ. “ಜೈಲಿನ ಹೊರಗೆ ಪ್ರತ್ಯೇಕತೆ ಮತ್ತು ತಾರತಮ್ಯವನ್ನು ಸರ್ಕಾರ ಸಮರ್ಥಿಸುತ್ತದೆಯೇ? ಹಾಗಾದರೆ, ಜೈಲುಗಳಲ್ಲಿ ಇದು ಹೇಗೆ ಸಮರ್ಥನೀಯ?” ಎಂದು ಪ್ರಶ್ನಿಸುತ್ತಾರೆ.

ಪಳಯಂಕೊಟ್ಟೈ ಜೈಲಿನಲ್ಲಿನ ಈ ಪದ್ಧತಿ ಹೆಚ್ಚು ವ್ಯಾಪಕವಾಗಿ ತಿಳಿದಿದ್ದರೂ, ಇದೇ ರೀತಿಯ ಜಾತಿ ಆಧಾರಿತ ಪ್ರತ್ಯೇಕತೆಯು ಇತರ ಜಿಲ್ಲಾ ಮತ್ತು ಕೇಂದ್ರ ಕಾರಾಗೃಹಗಳಲ್ಲಿಯೂ ಕಂಡುಬರುತ್ತದೆ. ಅದರಲ್ಲೂ ಮುಖ್ಯವಾಗಿ ತಮಿಳುನಾಡಿನ ದಕ್ಷಿಣ ಪ್ರದೇಶದಲ್ಲಿ. ಉದಾಹರಣೆಗೆ, ಮಧುರೈ ಕೇಂದ್ರ ಕಾರಾಗೃಹವು ಪ್ರತ್ಯೇಕತೆಯ ವ್ಯವಸ್ಥೆಯನ್ನು ಇಟ್ಟುಕೊಂಡಿರುವುದು ಮಾತ್ರವಲ್ಲ, ಜೈಲಿನಲ್ಲಿ ಜಾತಿ ಆಧಾರಿತ ಕಾರ್ಮಿಕ ಪದ್ಧತಿಗಳನ್ನು ಮುಂದುವರೆಸಿದ ಆರೋಪವನ್ನೂ ಹೊತ್ತಿದೆ. ಕಾರಾಗೃಹದ ಅಧಿಕಾರಿಗಳು ದಲಿತ ಸಮುದಾಯದ ಖೈದಿಗಳಿಗೆ ಮಾತ್ರ ಸ್ವಚ್ಛತಾ ಕೆಲಸವನ್ನು ಕೊಡುತ್ತಾರೆ. ಈ ಪದ್ಧತಿಯನ್ನು ಪ್ರಶ್ನಿಸಿ ಅಲಗುಮಣಿ ಅವರು ಮತ್ತೆ ಸಲ್ಲಿಸಿರುವ ಅರ್ಜಿ ಮಧುರೈ ಪೀಠದ ಮುಂದೆ ಬಾಕಿ ಇದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಅಂಕಿಅಂಶಗಳು ಭಾರತೀಯ ಜೈಲುಗಳಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು OBC ಗಳ ಹೆಚ್ಚಿನ ಪ್ರಾತಿನಿಧ್ಯವನ್ನು ಸತತವಾಗಿ ಸೂಚಿಸುತ್ತವೆ . ಹಾಗಿದ್ದೂ ಕೆಲವು ಜಾತಿ-ವಿರೋಧಿ ಸಂಘಟನೆಗಳು ಮತ್ತು ಅಲಗುಮಣಿ ಹಾಗೂ ರಾಜಾ ಅವರಂತಹ ವಕೀಲರನ್ನು ಹೊರತುಪಡಿಸಿ, ಹೆಚ್ಚಿನ ಹಕ್ಕುಗಳ ಗುಂಪುಗಳು ಭಾರತದಲ್ಲಿನ ಕಾರ್ಸೆರಲ್ ವ್ಯವಸ್ಥೆಯ ಜಾತಿ ವಾಸ್ತವಗಳನ್ನು ಕಡೆಗಣಿಸಿವೆ. ಸಂಶೋಧನೆ ಮತ್ತು ವಕಾಲತ್ತು ಪ್ರಚಾರಗಳು ಹೆಚ್ಚಾಗಿ ಸ್ಪಷ್ಟವಾದ ಉಲ್ಲಂಘನೆಗಳ ಮೇಲೆ ಕೇಂದ್ರೀಕರಿಸುತ್ತವೆ. ಜಾತಿ ತಾರತಮ್ಯದಂತಹ ಉಲ್ಲಂಘನೆಯ ಆಚರಣೆಗಳು ಚರ್ಚೆಗೆ ಬರುವುದಿಲ್ಲ .

ಇದು ಪ್ರಭಾವದ ಸ್ಥಾನಗಳಲ್ಲಿ ಅಂಚಿನಲ್ಲಿರುವ ಸಮುದಾಯಗಳ ಪ್ರಾತಿನಿಧ್ಯತೆ ಇಲ್ಲದಿರುವುದರ ಗಂಭೀರ ಸಮಸ್ಯೆಯ ಲಕ್ಷಣವಾಗಿದೆ ಎಂದು ವಕೀಲ ವಾಡೇಕರ್ ಹೇಳುತ್ತಾರೆ. “ಖೈದಿಗಳ ಹಕ್ಕುಗಳ ಬಗ್ಗೆ ಮಾತನಾಡುವ ಭಾರತದ ಬಹುತೇಕ ಎಲ್ಲಾ ಸಂಘಟನೆಗಳು ಮತ್ತು ಶಿಕ್ಷಣ ತಜ್ಞರು ಜಾತಿಯ ವಿಷಯದಿಂದ ದೂರ ಇರುತ್ತಾರೆ. ಅವರು ಹಾಗೆ ಮಾಡಿದರೆ ಅದನ್ನು ಅನುಬಂಧದಂತೆ ಪರಿಗಣಿಸಿ, ಸಮಸ್ಯೆಯ ಅವಿಭಾಜ್ಯ ಅಂಗವಲ್ಲ ಎಂಬಂತೆ ನೋಡುತ್ತಾರೆ. ಖೈದಿಗಳ ಹಕ್ಕುಗಳ ಕುರಿತು ಮಾತನಾಡುವಾಗ ಜಾತಿ ವಿಚಾರವನ್ನು ಬಲವಂತವಾಗಿ ಮರೆಮಾಚುವುದು ಅನೈತಿಕ ನಡೆ,” ಎಂದು ವಾಡೇಕರ್ ಹೇಳುತ್ತಾರೆ. ಭಾರತದಲ್ಲಿನ ಜೈಲುಗಳು ಮತ್ತು ಕಾರ್ಸೆರಲ್ ವ್ಯವಸ್ಥೆಯ ಬಗೆಗಿನ ಚರ್ಚೆಯಲ್ಲಿ ಜಾತಿಯನ್ನು ಕಡೆಗಣಿಸುವುದನ್ನು ಯಾರೇ ಆದರೂ ಹೇಗೆ ವಿವರಿಸಬಹುದು ಎಂದು ಅವರು ಕೇಳುತ್ತಾರೆ.

ಇಲ್ಲಿರುವ ಕೆಲವು ಖೈದಿಗಳ ಹೆಸರುಗಳನ್ನು ಅನಾಮಧೇಯತೆಗಾಗಿ ಬೇರೆ ಹೆಸರುಗಳಿಂದ ಕರೆಯಲಾಗಿದೆ. 

ಲೈಬ್ರರಿ ಮತ್ತು ಅವರ ಜೈಲು ಕೈಪಿಡಿಗಳ ಸಂಗ್ರಹವನ್ನು ಬಳಸಲು ಅವಕಾಶ ನೀಡಿದ CHRI ಗೆ ಧನ್ಯವಾದಗಳು. ತಮಿಳುನಾಡಿನಲ್ಲಿ ಮಾಜಿ ಖೈದಿಗಳ ಸಂದರ್ಶನಗಳನ್ನು ಆಯೋಜಿಸಿದ್ದಕ್ಕಾಗಿ ಮತ್ತು ಅವುಗಳನ್ನು ತಮಿಳಿನಿಂದ ಇಂಗ್ಲಿಷ್‌ಗೆ ಭಾಷಾಂತರಿಸಿದ್ದಕ್ಕಾಗಿ ವಕೀಲ ಕೆ.ಆರ್.ರಾಜಾ ಅವರಿಗೆ ನಾವು ಕೃತಜ್ಞರಾಗಿರುತ್ತೇವೆ.

ಸುಕನ್ಯಾ ಶಾಂತ, ದಿ ವೈರ್‌

ಸುಕನ್ಯಾ ಶಾಂತಾ ಅವರು ಕಾನೂನು ಮತ್ತು ಸಾಮಾಜಿಕ ನ್ಯಾಯ, ಜಾತಿ ಸಮಸ್ಯೆಗಳ ಕುರಿತು ಬರೆಯುವ ಮುಂಬೈ ಮೂಲದ ಸ್ವತಂತ್ರ ಪತ್ರಕರ್ತೆ

ಕನ್ನಡ ಅನುವಾದ: ಚರಣ್‌ ಐವರ್ನಾಡು

You cannot copy content of this page

Exit mobile version