Home ಅಂಕಣ ಸೈಬರ್ ವಂಚನೆ: ನಿಮ್ಮ ಹಣ ನಿಮ್ಮದಲ್ಲ!

ಸೈಬರ್ ವಂಚನೆ: ನಿಮ್ಮ ಹಣ ನಿಮ್ಮದಲ್ಲ!

0
  • ಎಂ ನಾಗರಾಜ ಶೆಟ್ಟಿ

ಬೆಳಿಗ್ಗೆ ಹನ್ನೊಂದು ಗಂಟೆಗೆ ಸ್ಥಿರ ದೂರವಾಣಿ ರಿಂಗಿಣಿಸಿತು.
ʼ ಹಲೋʼ
ʼ ಮಿಸ್ಟರ್‌ … ಇದಾರಾ? ʼ ಹಿಂದಿಯಲ್ಲಿ ಕೇಳಿದರು. ಅವರಿಗೆ ಕನ್ನಡ ಅಥವಾ ಇಂಗ್ಲೀಷಲ್ಲಿ ಮಾತನಾಡಲು ಹೇಳಿದೆ. ಸರಿ ಎಂದು ಅದೇ ಪ್ರಶ್ನೆಯನ್ನು ಇಂಗ್ಲೀಷಲ್ಲಿ ಕೇಳಿದರು.
ʼ ಹೌದು, ನಾನೇ ಮಾತಾಡುತ್ತಿದ್ದೇನೆ. ತಾವು ಯಾರು?ʼ
ʼ ನಾವು ಡೆಲ್ಲಿಯಿಂದ ಫೈನಾನ್ಸ್‌ ಮಿನಿಸ್ಟ್ರೀ, ಪಬ್ಲಿಕ್‌ ಅಫೈರ್ಸ್‌ ನಿಂದ ಮಾತನಾಡುತ್ತಿದ್ದೇವೆʼ
ಕೊಂಚ ಗಾಬರಿಯಾಯಿತು. ʼ ಏನು ವಿಷಯ? ʼ ಕೇಳಿದೆ
ʼ ನೀವು ಬ್ಯಾಂಕ್‌ ಸೇವೆಯಿಂದ ನಿವೃತ್ತರಾಗಿದ್ದೀರಲ್ಲವೇ?ʼ
ʼ ಹೌದುʼ
ʼ ನಿಮಗೆ ನಿವೃತ್ತರಾಗುವಾಗ ಸಿಗುವ ಎಲ್ಲಾ ಸೌಲಭ್ಯಗಳು ದೊರೆತಿವೆಯೇ? ʼ
ʼ ಎಲ್ಲವೂ ಸಿಕ್ಕಿದೆ ʼ
ʼ ಇಲ್ಲ. ನಿಮ್ಮ ಪ್ರಾವಿಡೆಂಟ್‌ ಫಂಡಿನ ಕೊನೆಯ ವರ್ಷಗಳ ಬಡ್ಡಿಯನ್ನು ಕೊಟ್ಟಿಲ್ಲ. ಪ್ರಧಾನ ಮಂತ್ರಿಯವರು ಖುದ್ದು ಆಸಕ್ತಿ ವಹಿಸಿ ಎಲ್ಲಾ ನಿವೃತ್ತರಿಗೆ ಸೇರಬೇಕಾದ ಪೂರ್ಣ ಮೊತ್ತವನ್ನು ಬಿಡುಗಡೆ ಮಾಡಲು ಹೇಳಿದ್ದಾರೆʼ
ಹಿರಿಯ ನಾಗರಿಕರ ಬಗ್ಗೆ ಯಾವ ಕಾಳಜಿಯನ್ನೂ ತೋರದ ಕೇಂದ್ರ ಸರಕಾರ ಇದ್ದಕ್ಕಿದ್ದಂತೆ ಆಸಕ್ತಿ ವಹಿಸಿದ್ದಕ್ಕೆ ಬೆರಗಾದೆ. ಪ್ರಾವಿಡೆಂಟ್‌ ಫಂಡಿನ ಎಲ್ಲಾ ಹಣ ನನಗೆ ಪಾವತಿಯಾಗಿತ್ತು. ಇದೇನು ಬಡ್ಡಿಯ ವಿಚಾರ ಹೇಳುತ್ತಿದ್ದಾರೆಂದು ತಿಳಿಯಲಿಲ್ಲ.
ʼ ನನಗೆ ಬರಬೇಕಾದ್ದು ಬಂದಂತಿದೆ. ನೀವು ತಪ್ಪಾಗಿ ಕರೆ ಮಾಡಿರಬಹುದುʼ
ನನ್ನ ಪೂರ್ತಿ ಹೆಸರನ್ನು, ನಾನು ಕೆಲಸ ಮಾಡಿದ ಕೊನೆಯ ಬ್ರಾಂಚಿನ ಹೆಸರನ್ನೂ ಹೇಳಿ, ʼ ನಾವು ಖಚಿತ ಪಡಿಸಿಕೊಂಡಿದ್ದೇವೆ. ನಿಮಗೆ ಬಡ್ಡಿ ಹಣ ರೂ 78944 ಜಮಾ ಆಗಬೇಕಿದೆʼ
ನನಗೆ ಅಶ್ಚರ್ಯ, ಸಂತೋಷ ಎರಡೂ ಆಯಿತು.
ʼ ಸರಿ. ಅದಕ್ಕೆ ನಾನು ಏನು ಮಾಡಬೇಕು?ʼ
ʼ ಬಹಳ ಸುಲಭ. ನೀವೇನೂ ಮಾಡಬೇಕಿಲ್ಲ. ನೀವು ಪೆನ್ಶನ್‌ ಪಡೆಯುವ ಬ್ಯಾಂಕಿನ ಅಕೌಂಟ್‌ ಡೀಟೇಲ್ಸ್‌ ಕೊಡಿʼ
ʼ ನಿಮಗೆ ನನ್ನ ಹೆಸರು ಫೋನ್‌ ನಂಬರ್‌ ಗೊತ್ತಿದೆ. ಬ್ಯಾಂಕ್‌ ಅಕೌಂಟ್‌ ಡಿಟೇಲ್ಸ್‌ ಗೊತ್ತಿಲ್ಲವೇ?ʼ
ʼ ಇಲ್ಲ ಸಾರ್. ಐಎಫ್‌ಎಸ್ಸಿ ನಂಬರ್‌ ಸಮೇತ ಎಲ್ಲಾ ಡಿಟೇಲ್ಸ್‌ ಬೇಕುʼ
ನನಗೆ ಅನುಮಾನ ಬಂತು.
ʼ ನೋಡಿ ಹೇಳುತ್ತೇನೆʼ
ʼ ಸರಿ. ನಾವು ಕಾಯುತ್ತೇವೆʼ
ʼ ಬೇಡ. ನಿಮ್ಮ ಫೋನ್‌ ನಂಬರ್‌ ಕೊಡಿ ನಾನೇ ಮಾಡುತ್ತೇನೆʼ
ʼ ಪರವಾಗಿಲ್ಲ. ವೈಟ್‌ ಮಾಡುತ್ತೇವೆʼ
ʼ ನೀವು ಲ್ಯಾಂಡ್‌ ಫೋನಿಗೆ ಮಾಡಿದ್ದೀರಿ. ನಾನು ಒಳಗೆ ಹೋಗಿ ಪಾಸ್‌ ಬುಕ್‌ ನೋಡಿ ಹೇಳಬೇಕು. ನಿಮ್ಮ ಲ್ಯಾಂಡ್ ಫೋನ್‌ ನಂಬರ್‌ ಅಥವಾ ಮೊಬೈಲ್‌ ನಂಬರ್‌ ಕೊಡಿʼ ನಾನಂದೆ. ಕನೆಕ್ಷನ್‌ ಕಟ್ಟಾಯಿತು. ಮತ್ತೆ ಕರೆ ಮಾಡಿದರೆ ಶಬ್ದವೇ ಇಲ್ಲ! ಅನಾಯಾಸವಾಗಿ ದೊರಕುವ ಮೊತ್ತ ತಪ್ಪಿ ಹೋಯಿತಲ್ಲಾ ಎಂದು ಖೇದವಾಯಿತು!

ಆದರೆ ಇದು ಅಕೌಂಟಿಗೆ ಬೀಳುವ ಹಣವಲ್ಲ ಖಾತೆ ವಿವರ ಕೊಟ್ಟಿದ್ದರೆ ನಾನು ಅಕೌಂಟಲ್ಲಿ ಇದ್ದದ್ದನ್ನು ಕಳೆದುಕೊಳ್ಳಬೇಕಾಗಿತ್ತು!

ಸೈಬರ್‌ ವಂಚನೆಯ ಹಲವು ಹತ್ತು ವಿಧಾನಗಳಲ್ಲಿ ಇದೂ ಒಂದು. ಹೊಸ ಹೊಸ ಬಗೆಯಲ್ಲಿ ಸೈಬರ್‌ ಅಪರಾಧಗಳು ನಡೆಯತ್ತಲೇ ಇವೆ. ಇದು ಭಾರತಕ್ಕೆ ಸೀಮಿತವಾದದ್ದೂ ಅಲ್ಲ. ಜಗತ್ತಿನ ಎಲ್ಲೆಡೆ ಸೈಬರ್ ವಂಚನೆಗಳು ನಡೆಯುತ್ತಿವೆ. ಅದನ್ನು ತಡೆಯಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ; ಕಾನೂನುಗಳನ್ನು ರೂಪಿಸಲಾಗುತ್ತಿದೆ. ಕೆಲವು ರಾಷ್ಟ್ರಗಳು ಸೈಬರ್ ವಂಚನೆಯಾಗದಂತೆ ಭದ್ರತೆಗಳನ್ನು ಹೆಚ್ಚಿಸಿವೆ.

20ನೇ ಶತಮಾನದ ಕೊನೆಯ ವರ್ಷಗಳಲ್ಲಿ ಮತ್ತು 2000 ಇಸವಿಯ ನಂತರ ಇ- ವಾಣಿಜ್ಯ, ಆನ್ ಲೈನ್ ಬ್ಯಾಂಕಿಂಗ್ ಮತ್ತು ಸರಕಾರಿ ಸೇವೆಗಳ ದಿಜಿಟಲೀಕರಣವಾಯಿತು. ಜನರು ಕೂತಲ್ಲಿಯೇ ವ್ಯವಹಾರಗಳನ್ನು ನಡೆಸತೊಡಗಿದರು. ಎಟಿಎಂಗಳು, ಕ್ರೆಡಿಟ್ ಕಾರ್ಡ್ ಗಳು, ಇಂಟರ್ ನೆಟ್ ವ್ಯವಹಾರಗಳು ಕೊಡುಕೊಳುವುದನ್ನು ಸುಗಮಗೊಳಿಸಿದವು. ಇದರ ಜೊತೆಯಲ್ಲೇ ಈ ಸೌಲಭ್ಯಗಳನ್ನು ದುರುಪಯೋಗ ಮಾಡುವ ಹಂಚಿಕೆಗಳೂ ಹುಟ್ಟಿಕೊಂಡವು. ಸೈಬರ್ ಭದ್ರತೆಗಳನ್ನು ಅಳವಡಿಸುವ ಮೊದಲೇ ಸೈಬರ್ ಕಳ್ಳರು ಕನ್ನ ಹಾಕತೊಡಗಿದರು. ಸೈಬರ್ ವಂಚನೆಗಳಿಗೆ ಪ್ರತ್ಯಸ್ತ್ರಗಳನ್ನು ಸಿದ್ಧ ಪಡಿಸಿದಂತೆಲ್ಲ ಚಾಲಾಕಿಗಳು ಹೊಸ ಬಗೆಯಲ್ಲಿ ವಂಚಿಸಲು ಶುರುವಿಟ್ಟುಕೊಂಡರು.

ಸೈಬರ್ ವಂಚನೆಗಳನ್ನು ಹಲವು ಬಗೆಯಲ್ಲಿ ಗುರುತಿಸಲಾಗುತ್ತಿದೆ. ಅವುಗಳಲ್ಲಿ ಹೆಚ್ಚು ಕುಖ್ಯಾತವಾದದ್ದು ಫಿಶಿಂಗ್(Phishing). ಗ್ರಾಹಕರ ಐಡಿ, ಐಪಿನ್, ಕ್ರೆಡಿಟ್- ಡೆಬಿಟ್ ಕಾರ್ಡ್ ನಂಬರ್, ಕಾರ್ಡ್ ನ ಮುಕ್ತಾಯ ದಿನಾಂಕ ಮತ್ತು ಸಿವಿಸಿ ಇದನ್ನು ಕದಿಯುವುದಕ್ಕೆ ಫಿಶಿಂಗ್ ಅನ್ನುತ್ತಾರೆ. ಇಮೈಲ್, ಮೊಬೈಲ್ಗೆ ಬರುವ ಪಠ್ಯಗಳು, ಅನಾಮಧೇಯ ಫೋನ್ ಕರೆ ಇವುಗಳ ಮುಖಾಂತರ ಇವನ್ನು ಕದಿಯಲಾಗುತ್ತದೆ. ನಮ್ಮ ದೇಶದಲ್ಲಿ ಹೆಚ್ಚು ಜನ ಹಣ ಕಳೆದುಕೊಂಡಿರುವುದು ಇದರಿಂದಲೇ.

ವಿಶಿಂಗ್ ಇನ್ನೊಂದು ಬಗೆಯ ಸೈಬರ್ ವಂಚನೆ. ನಾನು ಲೇಖನದ ಮೊದಲಲ್ಲಿ ಉದಾಹರಿಸಿದ ಫೋನ್ ಕರೆ ವಿಶಿಂಗ್ ನ ಮಾದರಿ. ವ್ಯಕ್ತಿಗಳಿಗೆ ಫೋನ್ ಮಾಡಿ ಸಹಾಯ ಮಾಡುವವರಂತೆ, ಸಾಲ ಕೊಡುವವರಂತೆ ನಟಿಸಿ, ವಿವರಗಳನ್ನು ಪಡೆದುಕೊಂಡು ವಂಚಿಸುವುದಕ್ಕೆ ವಿಶಿಂಗ್ ಅನ್ನುತ್ತಾರೆ.

ಸ್ಮಿಶಿಂಗ್ ಎನ್ನುವ ಸೈಬರ್ ವಂಚನೆಯಲ್ಲಿ ಚಿಕ್ಕ ಮೆಸೇಜ್ ಕಳಿಸಿ ತೆರೆಯಲು ಹೇಳುತ್ತಾರೆ. ಆ ಮೂಲಕ ಗ್ರಾಹಕರ ಖಾತೆಗಳ ವಿವರ ಪಡೆದುಕೊಳ್ಳುತ್ತಾರೆ. ಇವಲ್ಲದೆ ವೈಯಕ್ತಿಕ ಸಂಬಂಧಗಳನ್ನು ಜಾಹೀರು ಪಡಿಸುವ ಸೆಕ್ಸ್ಟೋರ್ಶನ್, ಬೇಹುಗಾರಿಕೆ ನಡೆಸುವ ಸ್ಟಾಂಕಿಂಗ್ ಮುಂತಾಗಿ ಸೈಬರ್ ವಂಚನೆಗಳನ್ನು ಹೆಸರಿಸಲಾಗಿದೆ.

ಸೈಬರ್ ವಂಚನೆಗಳನ್ನು ನಡೆಸುವ ವ್ಯವಸ್ಥಿತ ತಾಣಗಳಿವೆ. ಅಪರಾಧಿಗಳು ಏನೇನೂ ಸುಳಿವು ಸಿಗದಂತೆ ಅಡಗುತಾಣಗಳಲ್ಲಿದ್ದು ಅಪರಾಧಗಳನ್ನು ನಡೆಸುತ್ತಾರೆ. ಜಾರ್ಖಂಡಿನ ಜಮ್ತಾರ, ರಾಜಸ್ತಾನದ ಭರತ್ಪುರ್, ಮಧ್ಯಪ್ರದೇಶದ ಮಥುರಾ, ಹರಿಯಾಣದ ನೂಹ್ ಸೈಬರ್ ವಂಚನೆಗಳಿಗೆ ಹೆಸರಾಗಿವೆ. ಕಳೆದ ಎರಡು ಮೂರು ವರ್ಷಗಳಿಂದ ಬೆಂಗಳೂರಿನಲ್ಲೂ ಸೈಬರ್ ವಂಚನೆಗಳು ಹೆಚ್ಚುತ್ತಿವೆ. 2023 ರಲ್ಲಿ ಕರ್ನಾಟಕದಲ್ಲಿ 21868 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ ಬೆಂಗಳೂರಲ್ಲೇ 17623 ಪ್ರಕರಣಗಳಿವೆ. ಇವು ವಂಚನೆಗೊಳಗಾದವರು ದೂರು ನೀಡಿದ ಪ್ರಕರಣಗಳು. ಬೆಂಗಳೂರು ಹೊರತು ಪಡಿಸಿ ಇತರ ಕಡೆಗಳಲ್ಲಿ ಈ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲು ಜಿಲ್ಲಾ ಕೇಂದ್ರಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ದೂರು ನೀಡಲು ಸಾಧ್ಯವಾಗದಿರುವುದು, ದೂರು ನೀಡುವ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದು ಕಾರಣವಾಗಿರಬಹುದು.

ಸೈಬರ್ ವಂಚನೆಗಳ ಬಗ್ಗೆ ದೂರು ನೀಡಿದರೂ ವಂಚನೆಗೆ ಒಳಗಾದವರು ಕಳೆದುಕೊಂಡ ಹಣವನ್ನು ಮರಳಿ ಪಡೆಯುವ ಸಂದರ್ಭಗಳು ತೀರಾ ಕಡಿಮೆ ಇರುವುದು ದುರಂತ. ಇದಕ್ಕೆ ಕಾರಣಗಳು ಹಲವಾರು. ಹೆಚ್ಚಿನ ಸಂದರ್ಭಗಳಲ್ಲಿ ವಂಚಕರ ಜಾಲದ ಪತ್ತೆಯಾಗುವುದಿಲ್ಲ. ವಂಚಕರು ವಿದೇಶದಲ್ಲಿದ್ದರೆ ಮಾಹಿತಿ ಸಿಗುವುದೇ ಇಲ್ಲ. ಬೇರೆ ರಾಜ್ಯದ ವಂಚಕರನ್ನು ಹಿಡಿಯಲು ಅಲ್ಲಿಯ ಪೊಲೀಸರ ನೆರವಿನ ಅಗತ್ಯವಿರುತ್ತದೆ. ಕೆಲವೊಮ್ಮೆ ವಂಚಕರಿಗೆ ಪೊಲೀಸರ ಮಾಹಿತಿ ಮೊದಲೇ ದೊರೆತು ಪರಾರಿಯಾಗುತ್ತಾರೆ. ದೂರು ನೀಡುವಲ್ಲಿ ಗ್ರಾಹಕರು ಮಾಡುವ ವಿಳಂಬ ಕೂಡಾ ಪತ್ತೆ ಮಾಡಲು ತೊಡಕುಂಟು ಮಾಡುತ್ತದೆ.

ಭಾರತದಲ್ಲಿ ಸೈಬರ್ ಅಪರಾಧಗಳಿಗೆ ಅತಿ ಹೆಚ್ಚು ಎಫ್ಐಆರ್ ದಾಖಲಾದ ರಾಜ್ಯ ತೆಲಂಗಾಣ(ವಿವರಗಳಿಗೆ ನಕ್ಷೆ ನೋಡಿ). ಅತಿ ದೊಡ್ಡ ಸೈಬರ್ ವಂಚನೆ ನಡೆದಿದ್ದೂ ಅಲ್ಲಿಯೇ! ಹೈದರಾಬಾದಿನ 75 ವರ್ಷದ ವಯೋವೃದ್ಧರ ಖಾತೆಯಿಂದ 13 ಕೋಟಿ ರೂಪಾಯಿಗಳನ್ನು ದೋಚಲಾಯಿತು. ವ್ಯವಸ್ಥಿತ ರೀತಿಯಲ್ಲಿ ಯಾಮಾರಿಸಿದ್ದರಿಂದ ಆ ವ್ಯಕ್ತಿ ದೂರು ಕೊಡಲು ತಡ ಮಾಡಿದರು. ಪತ್ತೆ ಮಾಡಲು ಎಲ್ಲಾ ರೀತಿಯ ಪ್ರಯತ್ನಗಳು ನಡೆದರೂ ವಂಚಕ ಜಾಲದ ಪತ್ತೆ ಆಗಲಿಲ್ಲ. ರಾಜಸ್ತಾನ, ಕೇರಳ, ಮಧ್ಯಪ್ರದೇಶದಲ್ಲಿ ರವಾನಿಸಲಾಗದೆ ಉಳಿದಿದ್ದ 20 ಲಕ್ಷವಷ್ಟೇ ದಕ್ಕಿತು.

ಸೈಬರ್ ವಂಚಕರು ವಂಚಿಸಲು ಹೊಸ
ಹೊಸ ವಿಧಾನಗಳನ್ನು ಹುಡುಕುತ್ತಿರುತ್ತಾರೆ. ಕೆಲವು ತಿಂಗಳುಗಳಿಂದ ವಿಶಿಷ್ಟ ರೀತಿಯಲ್ಲಿ ವಂಚನೆಗಳು ನಡೆಯುತ್ತಿವೆ. ಕಂಪ್ಯೂಟರ್, ವಾಟ್ಸಾಪ್ ಮೂಲಕ ವಂಚಕರು ಸಂಪರ್ಕ ಬೆಳೆಸುತ್ತಾರೆ. ಪೊಲೀಸ್, ಸಿಬಿಐ, ಈಡಿ, ಇನ್ ಕಂ ಟ್ಯಾಕ್ಸ್ ಅಧಿಕಾರಿಗಳ ವೇಷ ಹಾಕಿ, ಸಂಬಂಧಪಟ್ಟ ಇಲಾಖೆಯ ಗುರುತು, ಮೊಹರುಗಳನ್ನು ತೋರಿಸಿ, ವರಮಾನ ತೆರಿಗೆ ವಂಚಿಸಿದ್ದೀರೆಂದು, ನಿಯಮ ಉಲ್ಲಂಘನೆ ಮಾಡಿದ್ದೀರೆಂದು, ಸೆಕ್ಸ್ ಸಂಬಂಧಿ ದೂರು ದಾಖಲಾಗಿದೆಯೆಂದು ಹೀಗೆ ಕಾನೂನು ಬಾಹಿರ ಕೃತ್ಯ ನಡೆಸಿರುವ ಬೆದರಿಕೆ ಒಡ್ಡುತ್ತಾರೆ. ಅಪ್ರಾಪ್ತ ವಯಸ್ಕರ ಕಾಮಕೇಳಿಯ ವಿಡಿಯೋ ನೋಡಿದ್ದೀರಿ- ಹಂಚಿಕೊಂಡಿದ್ದೀರೆಂದು ಬೆದರಿಸುವುದೂ ಉಂಟು. ಇದರಿಂದ ನಿಮಗೆ ಶಿಕ್ಷೆಯಾಗುತ್ತದೆ, ಮಾನ ಹಾನಿಯಾಗುತ್ತದೆ ಎಂದೆಲ್ಲಾ ಹೇಳಿ ಅಕೌಂಟ್ ವಿವರಗಳ ಸಮೇತ ವೈಯಕ್ತಿಕ ಮಾಹಿತಿಗಳನ್ನು ಪಡೆದುಕೊಂಡು ಕೆಲವೇ ನಿಮಿಷಗಳಲ್ಲಿ ಇರುವುದೆಲ್ಲವನ್ನೂ ದೋಚುತ್ತಾರೆ. ಈಗಾಗಲೇ ಬೆಂಗಳೂರು, ಮುಂಬಯಿ, ದೆಹಲಿಯಲ್ಲಿ ಹಲವರು ಈ ವಂಚನೆಗೆ ಗುರಿಯಾಗಿದ್ದಾರೆ.

ಈ ಲೇಖನವನ್ನು ಬರೆಯುತ್ತಿರುವಾಗಲೇ ಪ್ರಮುಖ ಕೈಗಾರಿಕೋದ್ಯಮಿ, ವರ್ಧಮಾನ್ ಗ್ರೂಪಿನ ಮಾಲೀಕರಾದ ಶ್ರೀಪಾಲ್ ಓಸ್ವಾಲ್ ಅವರನ್ನು ವಂಚಿಸಿದ ಸುದ್ದಿ ಬಂದಿದೆ. ಈ ಪ್ರಕರಣದಲ್ಲಿ ವಂಚಕರಲ್ಲಿ ಒಬ್ಬರು ಸಿಬಿಐ ಅಧಿಕಾರಿಯಂತೆ ನಟಿಸಿ, ನಕಲಿ ಬಂಧನದ ವಾರಂಟ್ ಅವರ ಮುಂದಿಟ್ಟಿದ್ದರು. ಡಿಜಿಟಲ್ ಬಂಧನಕ್ಕೆ ಹೆದರಿದ ಓಸ್ವಾಲ್ ಆನ್ಲೈನ್ ಮೂಲಕ 7 ಕೋಟಿ ಕಳೆದುಕೊಂಡಿದ್ದರು. ಅದರಲ್ಲಿ 5.25 ಕೋಟಿಯನ್ನು ವಸೂಲು ಮಾಡಲಾಗಿದ್ದು ಅಸ್ಸಾಂ ಮೂಲದ ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ.

ಬೆದರಿಕೆ ಒಡ್ಡಿ, ಸಿಬಿಐ, ಈಡಿ ಮುಂತಾದ ಸರಕಾರಿ ಇಲಾಖೆಗಳು ನಡೆಸುವ ದಾಳಿಯನ್ನು ದುರುಪಯೋಗ ಪಡಿಸಿಕೊಂಡು ಮೋಸ ಮಾಡುವ ವಿಧಾನ ಇದು. ವರಮಾನ ಇಲಾಖೆ ಸೇರಿದಂತೆ ಈ ಎಲ್ಲಾ ಸರಕಾರೀ ಇಲಾಖೆಗಳ ಅಧಿಕಾರಿಗಳು ಕಂಪ್ಯೂಟರ್ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮುಖಾಂತರ ಮುಖಾಮುಖಿಯಾಗುವುದಿಲ್ಲ. ಅಂತಹ ಸನ್ನಿವೇಶ ಎದುರಾದಾಗ ಸೈಬರ್ ಬ್ಯೂರೋಗೆ, ಪೊಲೀಸ್ ಠಾಣೆಗೆ ಕೂಡಲೇ ಕರೆ ಮಾಡಿ ತಿಳಿಸಬೇಕು.

ಸೈಬರ್ ವಂಚನೆಗಳನ್ನು ಪತ್ತೆ ಮಾಡಲು ಪ್ರತ್ಯೇಕ ವ್ಯವಸ್ಥೆ ಇರುವುದಾದರೂ ಅವನ್ನು ನೆಚ್ಚಿಕೊಳ್ಳಲಾಗುವುದಿಲ್ಲ. ಪ್ರತಿಯೊಬ್ಬನೂ/ಳೂ ವಂಚನೆಗೆ ಒಳಗಾಗದಂತೆ ಜಾಗರೂಕರಾಗುವುದು ವಂಚನೆ ತಡೆಯುವ ಪ್ರಾಥಮಿಕ ಮಾರ್ಗ. ಕ್ರೆಡಿಟ್ ಡೆಬಿಟ್ ಕಾರ್ಡ್ ಗಳು, ಸಿವಿಸಿ ಸಂಖ್ಯೆ , ಪಾಸ್ ವರ್ಡ್, ಐಪಿನ್ ಗಳನ್ನು ಹಂಚಿಕೊಳ್ಳಲೇ ಬಾರದು. ಇಂಟರ್ನೆಟ್ ಬ್ಯಾಂಕಿಂಗ್ ನಲ್ಲಿ ಪಾಸ್ ವರ್ಡ್ ಆಗಾಗ್ಗೆ ಬದಲಿಸುತ್ತಿರಬೇಕು. ಬ್ಯಾಂಕು, ಸರಕಾರದ ಇಲಾಖೆಗಳು ನೀವಾಗಿ ವ್ಯವಹರಿಸದೆ (ಉದಾ: ಹಣ ವರ್ಗಾವಣೆ, ಇನ್ಕಂಟ್ಯಾಕ್ಸ್ ಫೈಲಿಂಗ್) ಒಟಿಪಿ ಕೇಳುವುದಿಲ್ಲ. ನಿಮ್ಮ ವ್ಯವಹಾರ, ಪಾವತಿ, ವರ್ಗಾವಣೆಗಳನ್ನು ಹೊರತು ಪಡಿಸಿ ಬೇರೆ ರೀತಿಯಲ್ಲಿ
ಯಾವುದೇ ಕ್ರೆಡಿಟ್, ಡೆಬಿಟ್ ಕಾರ್ಡ್, ಒಟಿಪಿ, ಐಪಿನ್ ಗಳನ್ನು ಹಂಚಿಕೊಳ್ಳಬಾರದು. ಶಂಕಾಸ್ಪದ ಕಿರು ಪಠ್ಯ, ಎಸ್ ಎಂ ಎಸ್, ಇಮೈಲ್ ಗಳನ್ನು ತೆರೆಯಬಾರದು. ಈ ಎಚ್ಚರಿಕೆಗಳು ಅಂತಿಮವಲ್ಲ. ವಂಚಕರು ಯಾವ ರೀತಿಯಲ್ಲಿ ಕಾರಸ್ತಾನ ನಡೆಸುತ್ತಾರೆಂದು ಹೇಳಲಾಗದು. ಡಿಜಿಟಲ್ ವ್ಯವಹಾರದಲ್ಲಿ ಜಾಗರೂಕರಾಗಿರುವುದು ಅತಿ ಅಗತ್ಯ.

ಸಾಮಾನ್ಯ ಖರ್ಚು- ವೆಚ್ಚಗಳಿಗೆ, ಹಣ ವರ್ಗಾವಣೆಗೆ ಬ್ಯಾಂಕ್ ಆಪ್ ಗಳನ್ನು ಅವಲಂಬಿಸುವುದು ವಂಚನೆ ತಡೆಯುವ ಇನ್ನೊಂದು ವಿಧಾನ. ಈಗ ಎಲ್ಲಾ ಬ್ಯಾಂಕುಗಳು ಆಪ್ ಗಳನ್ನು ಹೊಂದಿದ್ದು ಅವನ್ನು ಮೊಬೈಲ್ ಗೆ ಡೌನ್ ಲೋಡ್ ಮಾಡಿ, ಆಕ್ಟಿವೇಟ್ ಮಾಡಿಕೊಂಡರೆ ಇಂಟರ್ನೆಂಟ್ ಗಿಂತ ಸುಲಭದಲ್ಲಿ ಮತ್ತು ತೊಂದರೆ ಇಲ್ಲದೆ ಹಣದ ವರ್ಗಾವಣೆ ಮಾಡಬಹುದು. ಇವುಗಳು ಸಾಕಷ್ಟು ಸುರಕ್ಷಿತವಾಗಿವೆ. ಡಿಜಿಟಲ್ ಪೇಮೆಂಟ್ ಆಪ್ ಆದ ಗೂಗಲ್ ಪೇ ಮುಂತಾದ ಯುಪಿಐ ಪೇಮೆಂಟ್ ವಿಧಾನ ಜನಪ್ರಿಯವಾಗುತ್ತಿದೆ. ಇದು ಸುರಕ್ಷಿತವಾದರೂ ಎಚ್ಚರಿಕೆ ಇರಬೇಕು. ಅಮಾಯಕರನ್ನು ಯುಪಿಐ ಪಾವತಿಯಲ್ಲಿಯೂ ವಂಚಿಸಲಾಗುತ್ತಿದೆ ಎನ್ನುವುದು ಗಮನದಲ್ಲಿರಲಿ.

ಡಿಜಿಟಲ್ ವ್ಯವಹಾರಗಳಿಂದ ಬಹಳ ಅನುಕೂಲತೆಗಳಿವೆ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ವಂಚನೆಗಳಾಗುತ್ತಿವೆ ಎನ್ನುವ ಕಾರಣದಿಂದ ಡಿಜಿಟಲ್ ವ್ಯವಹಾರಗಳನ್ನು ನಿರಾಕರಿಸಲಾಗದು. ಒಂದಿಲ್ಲೊಂದು ರೀತಿಯಲ್ಲಿ ನಾವೆಲ್ಲಾ ಡಿಜಿಟಲ್ ವ್ಯವಹಾರ ನಡೆಸುತ್ತಿರುತ್ತೇವೆ. ಹೊಳೆ, ಸಮುದ್ರದ ಬದಿಯಲ್ಲಿ ವಾಸಿಸುವವರು ಈಜು ಕಲಿಯುವಂತೆ ಡಿಜಿಟಲ್ ಯುಗದಲ್ಲಿ ಅದಕ್ಕೆ ಸಂಬಂಧ ಪಟ್ಟ ಕುಶಲತೆಯನ್ನು ರೂಢಿಸಿಕೊಳ್ಳುವುದು ಅವಶ್ಯ. ವಂಚನೆಗೊಳಗಾಗಿರುವ ಅನುಮಾನ ಬಂದರೆ ಕೂಡಲೇ ಬ್ಯಾಂಕ್, ಪೊಲೀಸ್, ಸೈಬರ್ ಬ್ಯೂರೋ ಸಂಪರ್ಕಿಸಬೇಕು.

ಇತ್ತೀಚೆಗೆ ನನ್ನ ಗೆಳೆಯನೊಬ್ಬ ತಕ್ಷಣ ಕಾರ್ಯ ಪ್ರವೃತ್ತನಾದ್ದರಿಂದ ಸೈಬರ್ ವಂಚನೆಗೊಳಗಾಗುವುದು ತಪ್ಪಿತು. ಅವನ ಹೆಂಡತಿ ಅಸ್ವಸ್ಥಳಾಗಿದ್ದು ಮೂರ್ನಾಲ್ಕು ವರ್ಷಗಳಿಂದ ಬ್ಯಾಂಕ್ ವ್ಯವಹಾರ ನಡೆಸಿರಲಿಲ್ಲ. ಹೆಂಡತಿಯ ಎಟಿಎಂ ಕಾರ್ಡ್ ಮೂಲಕ ಸಾವಿರ ರೂಪಾಯಿ ಅವನೇ ಪಡೆದ. ಸ್ವಲ್ಪ ಹೊತ್ತಲ್ಲೇ ಹೆಂಡತಿಗೆ ಕರೆ ಬಂತು. ನೀವು ಬಹಳ ವರ್ಷಗಳಿಂದ ಬ್ಯಾಂಕ್ ವ್ಯವಹಾರ ನಡೆಸಿಲ್ಲ; ನಿಮ್ಮ ಖಾತೆಯನ್ನು ಆಕ್ಟಿವೇಟ್ ಮಾಡಬೇಕಾದರೆ ಕೆವೈಸಿ ಕೊಡಬೇಕು ಎಂದರು. ಆಕೆ ನನಗೆ ಹುಷಾರಿಲ್ಲ, ಬ್ಯಾಂಕಿಗೆ ಬರಲಾಗುತ್ತಿಲ್ಲ ಎಂದರು. ಆ ಬಗ್ಗೆ ಯೋಚಿಸಬೇಡಿ, ನಾವು ಬ್ಯಾಂಕಿನವರು ಎಂದು ಹೇಳಿ ಖಾತೆಯ ವಿವರಗಳನ್ನು ಪಡೆದರು. ಆಕೆ ಸಲೀಸಾಗಿ ಆಗುತ್ತಲ್ಲಾ ಎಂದು ಅಕೌಂಟ್ ನಂಬರ್ ಕೊಟ್ಟರು.
ತಕ್ಷಣವೇ ಮೊಬೈಲ್ಗೆ ಓಟಿಪಿ ಬಂತು.

ʼ ನಿಮ್ಮ ಮೊಬೈಲಿಗೆ ಓಟಿಪಿ ಬಂದಿದೆ. ಹೇಳಿʼ ಎಂದರು. ಅಮಾಯಕಳಾದ ಆಕೆ ಓಟಿಪಿ ಕೊಟ್ಟರು. ಹೆಂಡತಿ ಮಾತನಾಡುವುದನ್ನು ಕೇಳಿಸಿದ ಗೆಳೆಯ ʼ ಏನು ʼ ಎಂದು ಕೇಳಿದ. ಆಕೆ ಬ್ಯಾಂಕಿನವರ ಫೋನ್ ಎಂದು ಗಂಡನಿಗೆ ಕೊಟ್ಟರು. ಅಷ್ಟೊತ್ತಿಗೆ ಇನ್ನೊಂದು ಒಟಿಪಿ ಬಂತು. ಗಂಡ ಫೋನ್ ಕೈಗೆತ್ತಿಕೊಳ್ಳುತ್ತಿದ್ದಂತೆ ಒಟಿಪಿ ಕೇಳಿದರು. ಗಂಡನಿಗೆ ಅನುಮಾನ ಬಂತು. ʼ ನಾನೇ ಬ್ಯಾಂಕಿಗೆ ಬರುತ್ತೇನೆʼ ಎಂದ. ʼ ಬೇಡ, ಬೇಡ, ನಾವು ಎಲ್ಲಾ ಮಾಡಿದ್ದೇವೆ. ಓಟಿಪಿ ಕೊಡಿ ಸಾಕು. ಅಕೌಂಟ್ ಆಕ್ಟಿವೇಟ್ ಆಗುತ್ತೆʼ ಎಂದರು. ಗಂಡ ಫೋನ್ ಕಟ್ ಮಾಡಿ ನೋಡಿದಾಗ ಅಕೌಂಟಲ್ಲಿದ್ದ ಅರವತ್ತು ಸಾವಿರ ಖಾಲಿಯಾಗಿತ್ತು.

ಗೆಳೆಯ ಗಾಬರಿಯಲ್ಲಿ ಬ್ಯಾಂಕಿಗೆ ದೌಡಾಯಿಸಿದ. ಫೋನ್ ರಿಂಗಿಣಿಸುತ್ತಲೇ ಇತ್ತು. ಹೆಂಡತಿಯ ಪಾಸ್ ಬುಕ್ ತೋರಿಸಿ ನಡೆದುದನ್ನು ವಿವರಿಸಿದ. ಅಕೌಂಟಲ್ಲಿದ್ದ ದುಡ್ಡೆಲ್ಲವೂ ಖಾಲಿಯಾಗಿತ್ತು. ಬ್ಯಾಂಕಿನವರು ಓಟಿಪಿ ಕೊಟ್ಟಿದ್ದೇಕೆ? ಎಂದು ಆಕ್ಷೇಪಿಸಿದರು. ಮೊಬೈಲ್ ತೆಗೆದು ನೋಡಿದರೆ ಗೆಳೆಯನ ಹೆಂಡತಿಯ ಹೆಸರಲ್ಲಿ ಅದೇ ಮೊತ್ತಕ್ಕೆ ಆರ್ ಡಿ ಓಪನ್ ಆಗಿತ್ತು. ಓಟಿಪಿಯೂ ಬಂದಿತ್ತು. ಮತ್ತೆ ವಂಚಕರಿಂದ ಫೋನ್ ಬಂತು! ಗೆಳೆಯ ಬ್ಯಾಂಕಿನವರಿಗೆ ಮೊಬೈಲ್ ಕೊಟ್ಟ. ಅವರು ವಿಚಾರಿಸುತ್ತಿದ್ದಂತೆ ಫೋನ್ ಕಟ್ಟಾಯಿತು.

ಅಕೌಂಟಿನಿಂದ ಹಣ ತೆಗೆದಾಗಿತ್ತು. ಅದರ ವರ್ಗಾವಣೆಗೆ ಇನ್ನೊಂದು ಓಟಿಪಿಯ ಅಗತ್ಯವಿತ್ತು. ಗೆಳೆಯನ ಹೆಂಡತಿ ಎರಡನೇ ಸಲ ಓಟಿಪಿ ಕೊಡದಿದ್ದುದರಿಂದ ಹಣ ಉಳಿಯಿತು. ಸ್ವಂತ ಖಾತೆ ತೆರೆಯಲು ಓಟಿಪಿಯ ಅಗತ್ಯವಿಲ್ಲ. ವಂಚಕರು ತೆಗೆದ ಹಣವನ್ನು ವರ್ಗಾಯಿಸಲಾರದೆ ಆಕೆಯ ಹೆಸರಲ್ಲೇ ಆರ್ ಡಿ ಅಕೌಂಟ್ ಮಾಡಿದ್ದರು. ಬ್ಯಾಂಕಿನವರು ಆರ್ ಡಿ ಕ್ಲೋಸ್ ಮಾಡಿ, ಹಣವನ್ನು ಕೊಟ್ಟು, ಅಕೌಂಟ್ ಬ್ಲಾಕ್ ಮಾಡಿದರು.

ತಕ್ಷಣ ಜಾಗೃತರಾದರೆ ಹಣ ಕಳೆದುಕೊಳ್ಳುವುದನ್ನು ತಪ್ಪಿಸಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆ. ದೂರು ಕೊಡಲು ಉದಾಸೀನ ಮಾಡಬೇಡಿ. ತಡಮಾಡಿದರೆ ನಿಮ್ಮ ಹಣ ನಿಮ್ಮದಾಗಿರುವುದಿಲ್ಲ!

ಸೈಬರ್ ಅಪರಾಧಗಳ ಸಹಾಯವಾಣಿ ಸಂಖ್ಯೆ 1930

You cannot copy content of this page

Exit mobile version