Sunday, June 16, 2024

ಸತ್ಯ | ನ್ಯಾಯ |ಧರ್ಮ

ಅಮರಸುಳ್ಯದ ಸಮರ ಕಥನ

ಬ್ರಿಟೀಷರ ವಿರುದ್ದ ಹೋರಾಡಿ ಹಾಲೇರಿಯ ಧ್ವಜವನ್ನು ಹಾರಿಸಿದ ರಾಮೇಗೌಡರ ಪ್ರತಿಮೆ ಮಂಗಳೂರಿನ ಬಾವುಟಗುಡ್ಡೆಯಲ್ಲಿ ಇಂದು (ನ.೧೯)‌ ಪ್ರತಿಷ್ಠಾಪನೆ ಗೊಳ್ಳುತ್ತಿದ್ದು, ನಾಡಿನ ಚರಿತ್ರೆಯಲ್ಲಿ ತಡವಾಗಿ ಚರ್ಚೆಯಾಗಿರುವ ಕೊಡಗುಕೆನರಾ ಬಂಡಾಯವನ್ನು ಕರ್ನಾಟಕದ ಜನತೆ ಸ್ಮರಿಸಿಕೊಳ್ಳುತ್ತಿದ್ದಾರೆ. ಚರಣ್‌ ಐವರ್ನಾಡ್ ಈ ಸಂದರ್ಭದಲ್ಲಿ ಅಮರಸುಳ್ಯ ಸಮರದ ಕಥನವನ್ನು ಸಂಕ್ಷಿಪ್ತವಾಗಿ ಮೊಗೆದು ಕೊಟ್ಟಿದ್ದಾರೆ

ಅಮರಸುಳ್ಯ ದಂಗೆ ಎಂದೇ ಕರೆಯಲ್ಪಡುವ ಕೊಡಗು-ಕೆನರಾ ಬಂಡಾಯದಲ್ಲಿ ಹುತಾತ್ಮರಾದ ಕೆದಂಬಾಡಿ ರಾಮೇಗೌಡರ ಪ್ರತಿಮೆ ಮಂಗಳೂರಿನಲ್ಲಿ ಇಂದು ಲೋಕಾರ್ಪಣೆಗೊಳ್ಳುತ್ತಿದೆ. ಕೆದಂಬಾಡಿ ರಾಮೇಗೌಡರು ೧೮೩೭ರ ಅಮರಸುಳ್ಯ ಸಮರದ ನೇತೃತ್ವ ವಹಿಸಿ ಬ್ರಿಟೀಷ್‌ ಸರ್ಕಾರದ ವಿರುದ್ಧ ವ್ಯವಸ್ಥಿತ ಹೋರಾಟವನ್ನು ರೂಪಿಸಿದವರು. ಇಡೀ ಕೆನರಾ ಜಿಲ್ಲೆ ಹಾಗೂ ಕೊಡಗನ್ನು ಈ ಹೋರಾಟದಲ್ಲಿ ಸಂಘಟಿಸಿ ಮುನ್ನಡೆಸಿದವರು.

ಸ್ವಾತಂತ್ರ್ಯ ಸಂಗ್ರಾಮ 1837ರಲ್ಲೇ ನಡೆದಿತ್ತು…!!

೧೮೫೭ರ ಸಿಪಾಯಿ ದಂಗೆಯ ಮೂಲಕ ಬ್ರಿಟೀಷರ ವಿರುದ್ಧದ ಹೋರಾಟದ ಚರಿತ್ರೆಯನ್ನು ಆರಂಭಿಸಲಾಗುತ್ತಿತ್ತು. ಆದರೆ ಈಗ ೧೮೫೭ಕ್ಕೂ ಹಿಂದೆ ದೇಶದ ಅಲ್ಲಲ್ಲಿ ನಡೆದಿರುವ ಹೋರಾಟಗಳ ಕುರಿತಾದ ಅಧ್ಯಯನಗಳು, ಅರಿವು ಹೆಚ್ಚಾಗುತ್ತಿವೆ. ೧೮೩೪-೧೮೩೭ರಲ್ಲಿ ಕೊಡಗು ಹಾಗೂ ಕೆನರಾ ಜಿಲ್ಲೆಗಳಲ್ಲಿ ನಡೆದಿರುವ ಹೋರಾಟ ಈಗ ಚರಿತ್ರೆಯ ಪುಟಗಳಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ. ೧೮೫೭ರಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮವನ್ನು ʼಸಿಪಾಯಿಗಳ ದಂಗೆʼಎಂದು ಸಂಕುಚಿತಗೊಳಿಸುವ ವಸಾಹತು ಪ್ರಭುತ್ವದ ತಂತ್ರವು ಸ್ವಾತಂತ್ರ್ಯ ಸಂಗ್ರಾಮ 1837ರಲ್ಲೇ ನಡೆದಿತ್ತು….!!!! ಹೌದು…ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಇಪ್ಪತ್ತು ವರ್ಷ ಮೊದಲೇ ರಾಷ್ಟ್ರೀಯತೆಯ ಅರಿವು ಇದ್ದೋ ಇಲ್ಲದೆಯೋ ಆಂಗ್ಲರಿಗೆ ತಮ್ಮ ಸ್ವಾತಂತ್ರ್ಯದ ಹಸಿವಿನ ಬಿಸಿಯನ್ನು ಮುಟ್ಟಿಸಿದವರು ಕೊಡಗು-ಸುಳ್ಯದ ಜನರು. ಇದು ಭಾರತದ ಇತಿಹಾಸದಲ್ಲಿ ದಾಖಲಾಗದ ಮೊದಲ ಸ್ವಾತಂತ್ರ್ಯ ಸಂಗ್ರಾಮ, ಆಂಗ್ಲರು ಹೀಗಳೆದ ದರೋಡೆ. ಈ ಹೋರಾಟವನ್ನು ‘ಕಲ್ಯಾಣಪ್ಪನ ಕಾಟಕಾಯಿ’ ಎಂದು ಕರೆದು ಅದನ್ನು ದರೋಡೆ ಎಂಬಂತೆ ಬಿಂಬಿಸಲಾಯಿತು. ಇದಕ್ಕೆ ಕೆನರಾ – ಕೊಡಗಿನ ಜನರು ಬೆಂಬಲ ನೀಡದಂತೆ ಮಾಡುವ ಸರ್ವ ಪ್ರಯತ್ನಗಳನ್ನೂ ಬ್ರಿಟೀಷ್‌ ಸರ್ಕಾರ ಮಾಡಿದೆ.

ಚಿಕವೀರ ರಾಜೇಂದ್ರನ ಶರಣಾಗತಿ  

1834ರ ವರೆಗೆ ಅಮರಸುಳ್ಯವು ಕೊಡಗಿನ ಹಾಲೇರಿಯ ಲಿಂಗಾಯಿತ ಅರಸರ ಸುಪರ್ದಿಯಲ್ಲಿತ್ತು. ಕೊನೆಯ ಅರಸ ಚಿಕವೀರ ರಾಜೇಂದ್ರನು ಸ್ತ್ರೀ ಸುಖ ಲೋಲುಪನಾಗಿ ಕೊಡಗಿನ ಜನ ಅವನನ್ನು ದ್ವೇಷಿಸಲಾರಂಭಿಸಿದರು. ಚರಿತ್ರೆಕಾರರು ಚಿಕವೀರ ರಾಜೇಂದ್ರನ ಬಗ್ಗೆ ಇದೊಂದು ಅಪಪ್ರಚಾರ ಎಂದು ದಾಖಲಿಸಿದ್ದಾರೆ. ಟಿಪ್ಪು ಸುಲ್ತಾನನ ಮರಣದ ನಂತರ ಕೊಡಗು ಮತ್ತೆ ಹಾಲೇರಿ ರಾಜರ ಆಡಳಿತಕ್ಕೆ ಒಳಪಟ್ಟಿತು. ಆದರೆ ಕೊಡಗಿನ ಆಡಳಿತ ಹದಗೆಟ್ಟಿದೆ ಎಂಬ ಕಾರಣ ನೀಡಿ ಆಂಗ್ಲರು 1834ರ ಎಪ್ರಿಲ್ ತಿಂಗಳಲ್ಲಿ ಮೈಸೂರಿನ ಕರ್ನಲ್ ಫ್ರೇಸರ್ ನ ನೇತೃತ್ವದಲ್ಲಿ ಕೊಡಗನ್ನು ವಶಪಡಿಸಿಕೊಳ್ಳಲು ಮುಂದಾಗುತ್ತಾರೆ. ಎಪ್ರಿಲ್ 6 ರಂದು ಮಡಿಕೇರಿಯ ಕೋಟೆ ಫ್ರೇಸರ್ ನ ವಶವಾಗುತ್ತದೆ. ಅರಸ ನಾಲ್ಕುನಾಡಿನ ಅರಮನೆಗೆ ಹೆದರಿ ಪಲಾಯನ ಮಾಡುತ್ತಾನೆ. ದಿವಾನ್ ಲಕ್ಷ್ಮೀನಾರಾಯಣ, ಬೋಪು ಶರಣಾಗತರಾಗುವ ಸಲಹೆ ನೀಡುತ್ತಾರೆ. ಎಪ್ರಿಲ್‌ 10ರಂದು ಮಡಿಕೇರಿಯಲ್ಲಿ ಶರಣಾದ ಚಿಕವೀರ ರಾಜೇಂದ್ರ ಒಡೆಯರ್‌ ನನ್ನು ಫ್ರೇಸರ್ ಎಪ್ರಿಲ್‌ 24ರಂದು ಬೆಂಗಳೂರಿಗೆ ಕಳುಹಿಸಿದನು. ಮುಂದೆ ಮಗಳು ಗೌರಮ್ಮನ ಸಮೇತ ರಾಜಪರಿವಾರವನ್ನು ವಾರಣಾಸಿಗೆ ಕಳುಹಿಸಿ ಅಲ್ಲಿಂದ ಲಂಡನ್‌ ಗೆ ಸಾಗಿಸುತ್ತಾರೆ. 1859, ಸೆಪ್ಟೆಂಬರ್‌ 24ರಂದು ಒಡೆಯರ್ ಅನಾರೋಗ್ಯದಿಂದ ಬಳಲಿ ಲಂಡನ್ ನಲ್ಲೇ ಮರಣ ಹೊಂದುತ್ತಾನೆ. ಅವನ ಮಗಳನ್ನು ಕ್ರೈಸ್ತ ಮತಕ್ಕೆ ಮತಾಂತರ ಮಾಡಿ ವಿಕ್ಟೋರಿಯಾ ಗೌರಮ್ಮ ಎಂದು ಹೆಸರಿಡಲಾಗುತ್ತದೆ.

ಕೊಡಗಿನಲ್ಲಿ ಅರಸ ಲಿಂಗರಾಜೇಂದ್ರ ಜಾರಿಗೆ ತಂದ ಆಡಳಿತ ವ್ಯವಸ್ಥೆ ಚಾಲ್ತಿಯಲ್ಲಿತ್ತು. ಕೊಡಗಿನ ಆಡಳಿತ – ಕಾನೂನು ವ್ಯವಸ್ಥೆ ʼಲಿಂಗರಾಜೇಂದ್ರನ ಹುಕುಂನಾಮೆಗಳುʼ (೧೮೧೧) ಮೂಲಕ ನಡೆಯುತ್ತಿತ್ತು. ಆದರೆ ಆಂಗ್ಲರು ಕೊಡಗನ್ನು ಆಕ್ರಮಿಸಿದ ನಂತರ ಹಣದ ಮೂಲಕ ಕಂದಾಯ ಸಲ್ಲಿಸಲು ಆಜ್ಞಾಪಿಸಿದಾಗ ವಸ್ತು ರೂಪದಲ್ಲಿ ಕಂದಾಯವನ್ನು ಪಾವತಿಸುತ್ತಿದ್ದ ಕೊಡಗರಿಗೆ ಅಸಮಾಧಾನ ಉಂಟಾಗುತ್ತದೆ.

ಸ್ವಾಮಿ ಅಪರಂಪಾರ ಎಂಬ ಜಂಗಮ

1833ರಲ್ಲಿ ಮಂಜರಾಬಾದ್ ಭಾಗಗಳಲ್ಲಿ ಸ್ವಾಮಿ ಅಪರಂಪಾರ ಎಂಬ ಓರ್ವ ಜಂಗಮ ಕಾಣಿಸಿಕೊಳ್ಳುತ್ತಾನೆ. ಕೊಡಗಿನ ಜನ ಇವನನ್ನು ಹಿಂದಿನ ಅರಸ ಲಿಂಗರಾಜೇಂದ್ರನ ಅಣ್ಣ ಅಪ್ಪಾಜಿಯ ಹಿರಿಮಗ ವೀರಪ್ಪನೆಂದು ಭಾವಿಸುತ್ತಾರೆ. ಆದರೆ ಇವನು ತುಮಕೂರಿನ ಮಾಯಸಂದ್ರದ ಕಡಗನೂರಿನವ ಎನ್ನಲಾಗಿದೆ. ಸಾಹಿತಿ ನಿರಂಜನರು ಇವನ ಬಗ್ಗೆಯೇ ‘ಸ್ವಾಮಿ ಅಪರಂಪಾರ’ ಎಂಬ ಕಾದಂಬರಿ ಬರೆದಿದ್ದಾರೆ. ರಾಜ ಪರದೇಶಿಯಾದ ಮೇಲೆ ಸೂಕ್ತ ನಾಯಕತ್ವ ಇಲ್ಲದ್ದರಿಂದ ಅಪರಂಪಾರನನ್ನೇ ತಮ್ಮ ನಾಯಕನನ್ನಾಗಿ ಸ್ವೀಕರಿಸುತ್ತಾರೆ. ಇವನು ಸೋಮವಾರಪೇಟೆ, ಹಾರಂಗಿ, ಹಾಲೇರಿ, ಹೊಸಕೋಟೆ ಮೊದಲಾದೆಡೆ ಆಂಗ್ಲರ ವಿರುದ್ಧ ಜನ ಸಂಘಟನೆ ನಡೆಸಿ ಸುಬ್ರಹ್ಮಣ್ಯಕ್ಕೆ ಬರುತ್ತಾನೆ. ಇವನನ್ನು ರಾಜವಂಶಸ್ಥನೆಂದು ಪರಿಗಣಿಸಿ ಕೂಜುಗೋಡಿನ ಅಪ್ಪಯ್ಯ ಗೌಡ ಹಾಗೂ ಮಲ್ಲಪ್ಪ ಗೌಡರು ಸತ್ಕರಿಸುತ್ತಾರೆ. ಇವನೊಂದಿಗೆ ಸೇರಿ ಕೊಡಗಿನಿಂದ ಬ್ರಿಟಿಷರನ್ನು ಓಡಿಸುವ ಯೋಜನೆ ಹಾಕಿಕೊಳ್ಳುತ್ತಾರೆ. ಇವರ ಸಾವಿರಾರು ಮಂದಿ ಸೈನಿಕರಿದ್ದ ಪಟ್ಟಾಳ ಮಡಿಕೇರಿಯ ಕಡೆಗೆ ನಡೆಯುತ್ತದೆ. ಆದರೆ ಅಪರಂಪಾರ ಗೌಡಳ್ಳಿ ತಲುಪುವ ಮುನ್ನವೇ ಮೋಸದಿಂದ ಸೆರೆಯಾಗುತ್ತಾನೆ. ಕೂಜುಗೋಡು ಸಹೋದರರು ಪಾರಾಗುತ್ತಾರೆ. ಅಪರಂಪಾರನನ್ನು ತಿರುಚಿನಾಪಳ್ಳಿಯ ಜೈಲಿಗೆ ಕಳುಹಿಸಲಾಯಿತು. ಆತ 1869ರಲ್ಲಿ ಬಿಡುಗಡೆಯಾಗಿ 1870ರಲ್ಲಿ ಶ್ರೀರಂಗಪಟ್ಟಣದಲ್ಲಿ ನಿಧನ ಹೊಂದಿದ.

ಕಲ್ಯಾಣ ಸ್ವಾಮಿಯ ಪ್ರವೇಶ

ಅಪರಂಪಾರನ ಆಪ್ತರಲ್ಲಿ ಓರ್ವನಾದ ಕಲ್ಯಾಣ ಬಸವ-ಕಲ್ಯಾಣಪ್ಪ ತನ್ನನ್ನು ಅಪ್ಪಾಜಿಯ ದ್ವಿತೀಯ ಪುತ್ರನೆಂದು ಕರೆಸಿಕೊಂಡು ಕಲ್ಯಾಣಸ್ವಾಮಿ ಎಂಬ ಹೆಸರಿನಿಂದ ಹಾಲೇರಿಯ ಗದ್ದುಗೆ ಏರಲು ಜನ ಬೆಂಬಲ ಪಡೆಯುತ್ತಾನೆ. ಆದರೆ ದಿವಾನ ಚೆಪ್ಪುಡಿರ ಪೊನ್ನಪ್ಪ ಮಡಿಕೇರಿಯಲ್ಲಿ ಆಂಗ್ಲ ಅಧಿಕಾರಿ ಕ್ಯಾಪ್ಟನ್ ಲೀಹಾರ್ಡಿಯ ಮುಂದೆ ಕಲ್ಯಾಣಪ್ಪನನ್ನು ಹಾಲೇರಿ ರಾಜವಂಶಸ್ಥನಲ್ಲ ಎಂದು ಸಾಬೀತುಪಡಿಸಿದ. ಆದರೂ ಜನ ಬೆಂಬಲ ಕಲ್ಯಾಣಪ್ಪನಿಗೆ ಕಡಿಮೆಯಾಗಲಿಲ್ಲ. ಏಳು ಸಾವಿರ ಸೀಮೆಯ ಹುಲಿ ಕಡಿದ ನಂಜಯ್ಯ, ಗುಡ್ಡೆಮನೆ ಅಪ್ಪಯ್ಯ ಗೌಡ ಇವನಿಗೆ ಬೆಂಗಾವಲಾಗಿ ನಿಂತರು. ಕೆದಂಬಾಡಿ ರಾಮ ಗೌಡ, ಕೂಜುಗೋಡು ಸಹೋದರರು, ಪೆರಾಜೆ ಊಕಣ್ಣ ಬಂಟ, ಕುಂಬ್ಳೆಯ ಅರಸ ಸುಬ್ರಾಯ ಹೆಗ್ಡೆ, ಧರ್ಮಸ್ಥಳದ ಹೆಗ್ಡೆ ಮೊದಲಾದವರು ಬೆಂಬಲ ಸೂಚಿಸಿದರು.

ತನ್ನ ಕಾರ್ಯವನ್ನು ಕಲ್ಯಾಣಸ್ವಾಮಿ ದಕ್ಷಿಣ ಕನ್ನಡಕ್ಕೆ ವಿಸ್ತರಿಸಲು ತೀರ್ಮಾನಿಸಿದರೂ ಅವನನ್ನು ಸೆರೆ ಹಿಡಿಯುವ ಆಂಗ್ಲರ ಯೋಜನೆಯನ್ನು ಅರಿತು ಕೊಡ್ಲಿಪೇಟೆಯ ಮೂಲಕ ವೈನಾಡಿನ ಕಡೆ ಪ್ರಯಾಣ ಬೆಳೆಸುತ್ತಾನೆ. ಆದರೆ ಲೀಹಾರ್ಡಿ ಮಲಬಾರಿನ ಸೈನಿಕರ ನೆರವಿನಿಂದ ಇವನನ್ನು 1837ರಲ್ಲಿ ಸೆರೆ ಹಿಡಿದು ಮೈಸೂರಿನ ಸೆರೆಮನೆಗೆ ತಳ್ಳುತ್ತಾನೆ.

ಪುಟ್ಟ ಬಸವ ಕಲ್ಯಾಣಪ್ಪನಾದನು!

ಬಂಧನದ ವಿಚಾರ ಹುಲಿಕಡಿದ ನಂಜಯ್ಯನಿಗೆ ಮಾತ್ರ ಗೊತ್ತಿತ್ತು. ಸಂಘಟನೆ ಉಳಿಸಿಕೊಳ್ಳುವುದಕ್ಕಾಗಿ ಜನರಿಗೆ ಇದನ್ನು ಗೊತ್ತಾಗದಂತೆ ಗೌಪ್ಯವಾಗಿಡಲಾಗುತ್ತದೆ. ಕೆದಂಬಾಡಿ ರಾಮಗೌಡನೊಂದಿಗೆ ಚರ್ಚಿಸಿ ಅಪರಂಪಾರನ ಸಹಾಯಕ ಹಾಗೂ ಕಲ್ಯಾಣ ಸ್ವಾಮಿಯ ಆಪ್ತ ಪುಟ್ಟ ಬಸವನನ್ನು ಕಲ್ಯಾಣಪ್ಪನೆಂದು ಬಿಂಬಿಸಲಾಯ್ತು. ಇವನಿಗೆ ಕೊಡಗಿನ ಪಟ್ಟವನ್ನು ಕಟ್ಟಲು ಜನರು ಬೆಂಬಲ ನೀಡಿದರು. ಜನರು ಬಸವನನ್ನೇ ಕಲ್ಯಾಣಪ್ಪ ಎಂದು ನಂಬಿದ್ದರು!

ಅಟ್ಲೂರು ರಾಮಪ್ಪಯ್ಯನ ಹತ್ಯೆ

ಅಮರಸುಳ್ಯವನ್ನು ಕೊಡಗಿನಿಂದ ಬೇರ್ಪಡಿಸಿ ನಗದು ರೂಪದ ಕಂದಾಯವನ್ನು ಹೇರಿದ್ದರಿಂದ ಸುಳ್ಯ ಮಾಗಣೆಯವರಿಗೆ ಆಂಗ್ಲರ ಮೇಲೆ ಅಸಾಧ್ಯ ಕೋಪವಿತ್ತು. ಇದರಿಂದ ನಂಜಯ್ಯ ಹಾಗೂ ಕೆದಂಬಾಡಿ ರಾಮ ಗೌಡ 1837 ಎಪ್ರಿಲ್‌ 6 ರಂದು ಸುಳ್ಯದಿಂದಲೇ ಹೋರಾಟ ಆರಂಭಿಸಲು ತೀರ್ಮಾನಿಸುತ್ತಾರೆ. ಆದರೆ ಕೊಡಗಿನ ದಿವಾನ ಲಕ್ಷ್ಮೀನಾರಾಯಣನ ಸೋದರ ಅಟ್ಲೂರು ರಾಮಪ್ಪಯ್ಯನ ಕುತಂತ್ರ ಅರಿತು ಮುಂಚೆಯೇ ದಂಗೆ ಅರಂಭಿಸಲಾಯ್ತು. ಇವನು ಅಮರಸುಳ್ಯದ ಅಮಲ್ದಾರನಾಗಿದ್ದು ಆಂಗ್ಲರ ಪರವಾಗಿ ಕೆಲಸಮಾಡುತ್ತಿದ್ದ. ಒಂದು ಬಾರಿ ಅಟ್ಲೂರು ರಾಮಪ್ಪಯ್ಯ ಕೆದಂಬಾಡಿ ರಾಮಗೌಡನನ್ನು ಅವಮಾನಿಸಿದ್ದರಿಂದ ಗೌಡನ ಕಡೆಯವರು ಕಾಂತಮಂಗಲದಲ್ಲಿ ಅಡ್ಡಗಟ್ಟಿ ಕತ್ತಿಯಿಂದ ಅವನನ್ನು ಕಡಿದರು. ಆದರೆ ಅವನ ಕುದುರೆಯ ವೇಗದ ಓಟ ಅವನನ್ನು ಉಳಿಸಿತ್ತು.  ಸುಳ್ಯದ ಮದುವೆಗದ್ದೆಗೆ ಬಂದಾಗ ಅವನನ್ನು ಕೊಚ್ಚಿ ಕೊಲ್ಲುವುದರೊಂದಿಗೆ ರಣಕಹಳೆ ಊದಲಾಯಿತು.

ಮಡಿಕೇರಿ ಕೋಟೆ
ಬಾವುಟ ಗುಡ್ಡೆ ಲೈಟ್‌ ಹೌಸ್

ಮಂಗಳೂರು ಕೈವಶವಾಯಿತು!

ಕಲ್ಯಾಣಸ್ವಾಮಿಯೊಂದಿಗೆ ನಂಜಯ್ಯ, ಕೆದಂಬಾಡಿ ರಾಮ ಗೌಡ, ಚೆಟ್ಟಿ-ಕುರ್ತು ಕುಡಿಯರು, ಕರಡಿಮಲೆ ಅಣ್ಣಿಗೌಡ, ಪೆರಾಜೆ ಊಕಣ್ಣ ಬಂಟ, ಕರಣಿಕ ಕೃಷ್ಣಯ್ಯ, ಕರಣಿಕ ಸುಬ್ಬಯ್ಯ, ಕೋಲ್ಚಾರು ಕೂಸಪ್ಪ ಗೌಡ ಮೊದಲಾದವರ ಪಡೆ 1837ರ ಮಾರ್ಚ್ ನಲ್ಲಿ ಬೆಳ್ಳಾರೆಗೆ ಲಗ್ಗೆ ಇಟ್ಟಿತು. ಇಲ್ಲಿಂದ ಕಲ್ಯಾಣಪ್ಪ (ಪುಟ್ಟ ಬಸವ) ಮಾರ್ಚ್ 30ರಂದು ಕೊಡಗಿಗೆ ನಿರೂಪವೊಂದನ್ನು ಕಳುಹಿಸುತ್ತಾನೆ.. ಅಮರ ಸುಳ್ಯವನ್ನು ಪುನಃ ಕೊಡಗಿನ ಸಂಸ್ಥಾನಕ್ಕೆ ಸೇರಿಸುವುದು; ಕಂದಾಯ ಮನ್ನಾ; ತಂಬಾಕು, ಉಪ್ಪಿನ ಮೇಲಿನ ತೆರಿಗೆ ರದ್ದು ಸೇರಿದಂತೆ ಪ್ರಸಿದ್ಧ ಇಸ್ತಿಹಾರ್ ಪ್ರಕಟಿಸಿದ. ಇದರಿಂದ ಪಂಜ, ಪುತ್ತೂರು, ಕಡಬ, ವಿಟ್ಲ ಸುಲಭದಲ್ಲಿ ಕೈವಶವಾಯಿತು. ವಿಟ್ಲದ ಅರಸು, ನಂದಾವರದ ಲಕ್ಷ್ಮಪ್ಪ ಬಂಗರಸ ಮೊದಲಾದವರು ಕಲ್ಯಾಣಪ್ಪನ ಪಡೆಯನ್ನು ಸೇರಿಕೊಂಡರು. ಧರ್ಮಸ್ಥಳದ ಹೆಗ್ಡೆ ಫಿರಂಗಿಗಳನ್ನು ಕಳುಹಿಸಿದರು. ಪಡೆ ಯಾವುದೇ ಸಮಸ್ಯೆ ಇಲ್ಲದೆ ಮಂಗಳೂರು ಸೇರಿ ಬಾವುಟಗುಡ್ಡೆಯನ್ನು, ಖಜಾನೆ, ಜೈಲು, ಶಸ್ತ್ರಗಳನ್ನು ವಶಮಾಡಿಕೊಂಡು ಹಾಲೇರಿಯ ಕೊಡಿಯನ್ನು ಹಾರಿಸಿದರು. ಹೆದರಿ ಪಲಾಯನ ಮಾಡುತ್ತಿದ್ದ ಬ್ರಿಟೀಷರ ಕೈಗೆ ದುರ್ದೈವದಿಂದ ಸಿಕ್ಕಿದ ಕುಂಬಳೆ ಸುಬ್ರಾಯ ಹೆಗ್ಗಡೆ ಹಾಗೂ ಪಡೆಯನ್ನು ನೇತ್ರಾವತಿ ನದಿಯಲ್ಲಿ ಫಿರಂಗಿ ಹಾರಿಸಿ ಸಾಯಿಸಲಾಯಿತು.

ಬ್ರಿಟಿಷ್ ಖಜಾನೆ – ಬಂಗ್ಲೆಗುಡ್ಡೆ ಬೆಳ್ಳಾರೆ
ವಿಕ್ಟೋರಿಯಾ ಗೌರಮ್ಮ

ಹೋರಾಟಗಾರರನ್ನು ಗಲ್ಲಿಗೇರಿಸಿದರು!

ಮಂಗಳೂರು ಹೋರಾಟಗಾರರ ವಶವಾಗುತ್ತಿದ್ದಂತೆ ಕಣ್ಣಾನೂರಿನಿಂದ ಆಂಗ್ಲರ ಫಿರಂಗಿ – ಶಸ್ತ್ರ ಸಜ್ಜಿತ ಪಡೆ ಮಂಗಳೂರಿಗೆ ಮೂರು ಹಡಗುಗಳಲ್ಲಿ ಬಂದು ರಾತ್ರೋರಾತ್ರೆ ಧಾಳಿ ಇಟ್ಟಿತು. ಕೆಲವರು ಸೆರೆ ಸಿಕ್ಕರೆ ಅಪ್ಪಯ್ಯ ಗೌಡ, ಬಂಗರಸ, ರಾಮಗೌಡ, ಕುಕ್ಕನೂರು ಚೆನ್ನಯ್ಯ, ಕಲ್ಯಾಣಪ್ಪ, ಕುಡಿಯರು, ನಾಲ್ಕುನಾಡಿನ ಉತ್ತ ಇತರರು ತಪ್ಪಿಸಿಕೊಂಡರು. ಕಲ್ಯಾಣಪ್ಪನೆಂದು ಕರೆಯುತ್ತಿದ್ದ ಪುಟ್ಟ ಬಸವನ ತಲೆಗೆ ಆಗಲೇ ಹತ್ತು ಸಾವಿರ ರುಪಾಯಿಗಳ ಬೆಲೆ ಕಟ್ಟಲಾಗಿತ್ತು. ಕೊಡ್ಲಿಪೇಟೆಗೆ ಬಂದಾಗ ಇವನ ಮಾವನೇ ಕರಿ ಬಸವಯ್ಯ ದುಡ್ಡಿನ ಆಸೆಗೆ ಸುಬೇದಾರ ಮಾದಯ್ಯನಿಗೆ ಹಿಡಿದುಕೊಟ್ಟ. 1837 ಮೇ 15ರಂದು ಕ್ಯಾ. ಲೀಹಾರ್ಡಿ ಮಡಿಕೇರಿಯ ಕೋಟೆಯಲ್ಲಿ ಬಸವನನ್ನು ವಿಚಾರಿಸಿ ಗಲ್ಲಿಗೇರಿಸಿದ!

ಲಕ್ಷ್ಮಪ್ಪ ಬಂಗರಸ, ವಿಟ್ಲದ ಅರಸ ಮೊದಲಾದವರನ್ನು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಬಹಿರಂಗವಾಗಿ ಗಲ್ಲಿಗೇರಿಸಲಾಯ್ತು. ಕುಡಿಯ ಸಹೋದರರು, ಪೆರಾಜೆ ಕೃಷ್ಣಯ್ಯ ಮೊದಲಾದವರನ್ನು ಸಿಂಗಾಪುರಕ್ಕೆ ಕಳುಹಿಸಲಾಯ್ತು. ನಾಯಕ ಗುಡ್ಡೆಮನೆ ಅಪ್ಪಯ್ಯನನ್ನು 1837 ಅಕ್ಟೋಬರ್ 31 ರಂದು ಮಡಿಕೇರಿಯ ಕೋಟೆಯ ಎದುರು  ಬಹಿರಂಗವಾಗಿ ಗಲ್ಲಿಗೇರಿಸಲಾಯ್ತು.

ದಂಗೆ ದರೋಡೆ ಅಲ್ಲ…

ಅನೇಕ ಮಂದಿ ಆಂಗ್ಲರ ಪರವಾಗಿ  ನಿಂತು ರಾಜದ್ರೋಹ ಎಸಗಿದ್ದರು. ಈ ದಂಗೆಯನ್ನು ಹತ್ತಿಕ್ಕಲು ನೆರವಾದವರಿಗೆ ಮೆಡಲ್‌, ಕೋವಿ, ಕುದುರೆಗಳನ್ನು ನೀಡಲಾಯಿತು. ದಂಗೆಯನ್ನು ದರೋಡೆ ಎಂಬುದಾಗಿ ಬಿಂಬಿಸಿ ಕಲ್ಯಾಣಪ್ಪನ ಕಾಟಕಾಯಿ-ಸುಲಿಗೆ ಎಂದರು. ಆದರೆ ಇದನ್ನು ಖ್ಯಾತ ಕಾದಂಬರಿಕಾರ ನಿರಂಜನರು(ಕುಳ್ಕುಂದ ಶಿವರಾಯ)ರು ಸಕಾರಣವಾಗಿಯೆ ನಿರಾಕರಿಸಿದ್ದಾರೆ.

ಉಳುವಾರು ರಾಮಯ್ಯ ಗೌಡ, ಕುಡೆಕಲ್ಲು ಗುಡ್ಡಜ್ಜ, ತಿಮ್ಮಯ್ಯ, ಸುಳ್ಯಕೋಡಿ ಕೃಷ್ಣಪ್ಪ, ಕಳಗಿ ಅಣ್ಣು, ಕುಕ್ಕೆಟ್ಟಿ ಚೆನ್ನ ಮುಂತಾದ ಗೌಡರು ದಂಗೆಯಲ್ಲಿದ್ದರಿಂದ ಕೆನರ ಜಿಲ್ಲೆಯ ಕಲೆಕ್ಟರ್ ಎಂ.ಲೆವಿನ್, ಮೇಜರ್ ಜನರಲ್ ವಿಗೋರ್(Vigourheux) ಹಾಗೂ ಚಾರ್ಲ್ಸ್ ರಾಬರ್ಟ್ ಕಾಟನ್ ಅವರಿಗೆ ಒಪ್ಪಿಸಿದ ವರದಿ ಹಾಗೂ ಜಿ.ರಿಕ್ಟರ್ ಕೊಡಗು ಗಜೇಟಿಯರ್ ನಲ್ಲಿ ʼಕೊಡಗು ಬಂಡಾಯʼವೆಂದು ಕರೆಯಲ್ಪಡುವ ಈ ದಂಗೆ ನಿಜವಾಗಿಯೂ ಹೇಳುವುದಾದರೆ ʼಗೌಡರ ಮೇಲ್ಬೀಳುವಿಕೆ ಎಂದು ದಾಖಲಿಸಲಾಗಿದೆ. (ಎನ್.ಎಸ್.ದೇವಿಪ್ರಸಾದ್ ಸಂಪಾಜೆ: ಅಮರ ಸುಳ್ಯದ ದಂಗೆ) ಇಲ್ಲಿ ಪೆರಾಜೆಯ ಬೀರಣ್ಣ ರೈ, ಮುಳ್ಯ ಈಶ್ವರ ಸೋಮಾಯಾಜಿ, ಚೆಟ್ಟಿ-ಕುರ್ತು ಕುಡಿಯರಂತಹ ಬಂಟ, ಬಿಲ್ಲವ, ಮಲೆಕುಡಿಯ, ಜೈನ ಮೊದಲಾದ ಸಮುದಾಯಗಳ ವೀರರು ಹೋರಾಡಿದ್ದಾರೆ.

ಚರಣ್‌ ಐವರ್ನಾಡು, ಸುಳ್ಯ

Related Articles

ಇತ್ತೀಚಿನ ಸುದ್ದಿಗಳು