Home ಅಂಕಣ ಹಿಂದುತ್ವ ರಾಜಕಾರಣದ ಕಥೆ- 20 : “ಹಿಂದುತ್ವ”

ಹಿಂದುತ್ವ ರಾಜಕಾರಣದ ಕಥೆ- 20 : “ಹಿಂದುತ್ವ”

0

ಹಿಂದುತ್ವ ಪುಸ್ತಕದಲ್ಲಿ ಸುಮಾರಾಗಿ ಎಲ್ಲ ಹಿಂದುಯೇತರ ರಾಜರುಗಳನ್ನು ದಾಳಿಕೋರರೆಂದೂ ವಿದೇಶಿಗಳೆಂದೂ ದೇಶ ವಿರೋಧಿಗಳೆಂದೂ ಚಿತ್ರಿಸುವಾಗ ಆಗ ದೇಶವನ್ನಾಳುತ್ತಿದ್ದ ಬ್ರಿಟಿಷರ ಬಗ್ಗೆ ಮಾತ್ರ ದಿವ್ಯಮೌನವನ್ನು ಪಾಲಿಸಲಾಗಿದೆ.

ಮರಾಠ ಎಂಬ ಗುಪ್ತನಾಮದಲ್ಲಿ ಹಿಂದುತ್ವವನ್ನು ಬರೆಯಲಾಗಿತ್ತು. ಇಂದಿನ ಹಿಂದುತ್ವ ರಾಜಕಾರಣದ ಬೈಬಲ್‌ ಎಂದೂ ಸಾವರ್ಕರ್‌ ಅವರ ಮ್ಯಾಗ್ನಂ ಓಪಸ್‌ ಎಂದೂ ಗುರುತಿಸಲ್ಪಡುವ, ಇಂದಿನ ಲೆಕ್ಕದಲ್ಲಿ ಐವತ್ತು ಪುಟಗಳಿಗಿಂತ ತುಸು ಹೆಚ್ಚಿರುವ ಈ ಪುಟ್ಟ ಪುಸ್ತಕದ ಸಾರವನ್ನು ನೋಡುವ ಮೊದಲು ಸಾವರ್ಕರ್‌ ಅವರ ರಾಜಕೀಯ ಸಿದ್ಧಾಂತವನ್ನು ಮತ್ತೊಮ್ಮೆ ಪರಿಶೀಲಿಸಬೇಕಾಗುತ್ತದೆ. ಕ್ಷಮಾಪಣಾ ಪತ್ರಗಳಲ್ಲಿ ಹೇಳಿದ ರೀತಿಯಲ್ಲಿಯೇ ಬ್ರಿಟಿಷ್‌ ಸಂವಿಧಾನಕ್ಕೆ ತಲೆಬಾಗಿ ನಡೆದುಕೊಂಡಿರುವುದಕ್ಕೆ ಉತ್ತಮ ಉದಾಹರಣೆ ಈ ಪುಸ್ತಕ/ಲಲಿತ ಬರಹ. ಅದೇ ಹೊತ್ತು ನವ-ಸಂಪ್ರದಾಯವಾದಿ ರಾಜಕೀಯ ಬ್ರಾಹ್ಮಣಿಸಮ್ಮಿಗೆ ಹೊಸಹುಟ್ಟು ನೀಡುವ ಶ್ರಮವೂ ಹೌದು. ಆ ಬ್ರಾಹ್ಮಣಿಸಮ್ಮಿಗೆ ಭಾರತದ ರಾಷ್ಟ್ರೀಯ ನಾಯಕತ್ವ ಕೈಜಾರಿ ಹೋಯಿತು ಎಂಬ ಎಚ್ಚರವೂ ಈ ಪುಸ್ತಕದ ಹುಟ್ಟಿಗೆ ಕಾರಣವಾಗುತ್ತದೆ. ಅದರ ಜೊತೆಗೆ, ಭಾರತೀಯರು ತಮ್ಮ ಕೈಗೆಟುಕದ ರೀತಿಯಲ್ಲಿ ಗಾಂಧಿಯ ನಾಯಕತ್ವದೊಂದಿಗೆ ರಾಷ್ಟ್ರೀಯ ಆಂದೋಲನವನ್ನು ಜನಪರವಾದ ಹಾದಿಯಲ್ಲಿ ಮುನ್ನಡೆಸುತ್ತಿರುವಾಗ ಅದನ್ನು ಬುಡಮೇಲು ಮಾಡುವ ಶ್ರಮವಾಗಿಯೂ ಈ ಪುಸ್ತಕ ನಿಲ್ಲುತ್ತದೆ. ಹಿಂದೂಗಳು ಮುಸ್ಲಿಮರು ಮತ್ತು ಇತರ ಅನೇಕ ಧರ್ಮಾನುಯಾಯಿಗಳು ಹೆಗಲಿಗೆ ಹೆಗಲು ಕೊಟ್ಟು ಹೋರಾಡುವ ಸಾಧ್ಯತೆಯು ವಾಸ್ತವವಾಗಿ ಕಣ್ಣ ಮುಂದೆ ಬಂದು ನಿಲ್ಲುವಾಗ, ಮುಸ್ಲಿಮರನ್ನು ಭಾರತದ ಪೌರತ್ವದಿಂದಲೇ ಒದ್ದೋಡಿಸುವ ಪ್ರಯತ್ನ ನಡೆಸಿಕೊಂಡು, ಆ ಸೌಹಾರ್ದತೆಯನ್ನು ಮುರಿಯುವ ಬರಹವಾಗಿತ್ತು ಆ ಪುಸ್ತಕ. ಚಿತ್ಪಾವನ ಬ್ರಾಹ್ಮಣಿಸಮ್ಮಿನ ವಿರೋಧವು ಅವರ ರಾಜ್ಯವನ್ನು ಕಿತ್ತುಕೊಂಡ ಬ್ರಿಟಿಷರ ಮೇಲಿನಿಂದ ಇಳಿಸಿ ಇದೀಗ ಮುಸ್ಲಿಮರ ಮತ್ತು ಸ್ವರಾಜ್ಯ ಬೇಡಿಕೆಯಿಡುತ್ತಿರುವ ಗಾಂಧಿಯ ಮೇಲೆ ಹತ್ತಿಸಲಾಗಿತ್ತು. ನಾಯಕತ್ವ ಕಳೆದುಕೊಂಡ ನಿರಾಸೆ, ಅದರಿಂದ ಹುಟ್ಟಿಕೊಳ್ಳುವ ಪ್ರತಿಕಾರದಾಹ ಇಲ್ಲಿ ಪ್ರತಿ ಪುಟದಲ್ಲೂ ತುಂಬಿಕೊಂಡಿದೆ. ಇತಿಹಾಸದ ಮುಖವಾಡ ಧರಿಸಿ ಬರುವ ಬ್ರಾಹ್ಮಣಿಸಮ್ಮಿನ ಕೊನೆಯ ಅಸ್ತ್ರವಾಗಿತ್ತದು. ಅಂದಿನ ಐತಿಹಾಸಿಕ ಸಂದರ್ಭದಲ್ಲಿ ಬ್ರಿಟಿಷರ ಪಾದಸೇವೆಯಾಗಿತ್ತು ಆ ಪುಸ್ತಕ. ಯಾಕೆಂದರೆ, ಒಂದು ಜನಸಮೂಹದಲ್ಲಿ ಮೂಡಿಬರುತ್ತಿದ್ದ ರಾಷ್ಟ್ರೀಯ ಭಾವನೆಯನ್ನು ದ್ವೇಷದ ಸಿದ್ಧಾಂತ ಬಳಸಿ ಹಲವಾಗಿ ಒಡೆಯಲು ಅದು ಪ್ರಯತ್ನಿಸಿತ್ತು.

ಇದಕ್ಕೂ ಮೊದಲು ಖಿಲಾಫತ್‌ ಚಳುವಳಿಯನ್ನು ʼಆಪತ್ತುʼ ಎಂದು ಸಾವರ್ಕರ್‌ ಕರೆದಿದ್ದನ್ನು ನಾವು ಗಮನಿಸಿದೆವು. ಅದೇ ಹೊತ್ತು ಟರ್ಕಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಅದೇ ಜರ್ಮನಿ ಹಿಂದೂ ಮಹಾಸಾಗರದ ಮೂಲಕ ನುಗ್ಗಿ ಅಂಡಮಾನ್‌ ಜೈಲು ಭೇದಿಸಿ ತನ್ನನ್ನು ರಕ್ಷಿಸುವ ಕನಸನ್ನು ಸಾವರ್ಕರ್‌ ಕಂಡಿದ್ದರು. ಹಿಂದುತ್ವವನ್ನು ಬೆಂಬಲಿಸುವ ಲೇಖಕರುಗಳು, ಹಿಂದುತ್ವ ಬರೆಯಲು ಪ್ರೇರಣೆಯಾಗಿ ಬೊಟ್ಟು ಮಾಡುವುದು ಬ್ರಿಟಿಷರು ಕೌನ್ಸಿಲ್‌ಗಳಲ್ಲಿ ಮುಸ್ಲಿಮರಿಗೆ ವಿಶೇಷ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ನೀಡಿದ ಅವಕಾಶ. ಆದರೆ, ಅದೇ ಸುಧಾರಣೆಗಳನ್ನು ಎದೆಗಪ್ಪಿಕೊಂಡು ಸಾವರ್ಕರ್‌ ಬ್ರಿಟಿಷರಿಗೆ ಕ್ಷಮಾಪಣಾ ಪತ್ರಗಳನ್ನು ಬರೆದಿದ್ದರು ಎಂಬುದನ್ನು ಇಲ್ಲಿ ಅವರೆಲ್ಲ ಕಾಣದೇ ಹೋಗುತ್ತಾರೆ ಅಥವಾ ಅದರ ಬಗ್ಗೆ ಕಣ್ಣುಮುಚ್ಚಿ ಕೂರುತ್ತಾರೆ. ಆದ್ದರಿಂದ ಇಂತಹ ಕಡುವೈರುಧ್ಯಗಳ ನಡುವೆ ನಿಂತುಕೊಂಡು ಬರೆಯಲ್ಪಟ್ಟ ಆ ಪುಸ್ತಕ ಎರಡು ಸೂಚನೆಗಳನ್ನು ನೀಡುತ್ತದೆ. ನವ-ಸಂಪ್ರದಾಯವಾದಿ ರಾಜಕೀಯ ಬ್ರಾಹ್ಮಣಿಸಂ ಅದರ ಬ್ರಿಟಿಷ್‌ ವಿರೋಧಿ ನೀತಿಯನ್ನು ಕೊನೆಗೊಳಿಸಿತು ಎಂದು ಮಾತ್ರವಲ್ಲ, ಭಾರತೀಯ ಸ್ವಾತಂತ್ರ್ಯ ಹೋರಾಟದ ವಿರುದ್ಧ ಸಾಮ್ರಾಜ್ಯಶಾಹಿಗೆ ಗುಲಾಮಗಿರಿಯನ್ನೂ ಮಾಡಲು ಅದು ತೀರ್ಮಾನಿಸಿತು. ಹಿಂದುತ್ವ ಪುಸ್ತಕದಲ್ಲಿ ಸುಮಾರಾಗಿ ಎಲ್ಲ ಹಿಂದುಯೇತರ ರಾಜರುಗಳನ್ನು ದಾಳಿಕೋರರೆಂದೂ ವಿದೇಶಿಗಳೆಂದೂ ದೇಶ ವಿರೋಧಿಗಳೆಂದೂ ಚಿತ್ರಿಸುವಾಗ ಆಗ ದೇಶವನ್ನಾಳುತ್ತಿದ್ದ ಬ್ರಿಟಿಷರ ಬಗ್ಗೆ ಮಾತ್ರ ದಿವ್ಯಮೌನವನ್ನು ಪಾಲಿಸಲಾಗಿದೆ.

ಹೀಗೆ ತನ್ನ ರಾಜಕಾರಣದಲ್ಲಿ ಬ್ರಿಟಿಷರು ಬಯಸುತ್ತಿದ್ದ ರೀತಿಯಲ್ಲಿ ಆಂತರಿಕ ಕಂದಕಗಳನ್ನು ಸೃಷ್ಟಿಸಲೆಂದು ಬರೆದ ಪುಸ್ತಕವೇ ಹಿಂದುತ್ವ. ಅಭಿಪ್ರಾಯ ಎಂಬುದಕ್ಕಿಂತ ಇತರರ ಬದುಕಿನ ಮೇಲೆ ಬ್ರಾಹ್ಮಣ್ಯಕ್ಕೆ ಅಧಿಕಾರ ಇದೆಯೆಂಬ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮಿನ ಅಹಮ್ಮಿನ ಅಡಿಪಾಯದ ಮೇಲೆ ನಿಂತುಕೊಂಡು ಇಲ್ಲಿ ಸಾವರ್ಕರ್‌ ಮಾತನಾಡುತ್ತಿರುವುದು. ಹೇರಲ್ಪಡುವ ಪೌರತ್ವ ಕಲ್ಪನೆ ಅದರ ಕೇಂದ್ರ ಬಿಂದು.

ಸುಮಾರಾಗಿ ಅದೇ ಕಾಲದಲ್ಲಿ ೧೯೨೧ರ ಮಲಬಾರ್‌ ಕ್ರಾಂತಿಯ ಕುರಿತು ಬಣ್ಣ ಹಚ್ಚಿದ ಸುಳ್ಳುಗಳೇ ತುಂಬಿಕೊಂಡ ಮಾಲಾ ಕಾಯ್‌ ತ್ಯಾಚೇ? (ನಾನೇಕೆ ಜಾಗ್ರತನಾಗಬೇಕು?) ಎಂಬ ಸಾವರ್ಕರ್‌ ಬರೆದ ಕಾದಂಬರಿ ಪ್ರಕಟವಾಗುವುದು. ಬಾಬಾರಾವ್‌ ಹೆಸರಿನಲ್ಲಿ ಆ ಕಾದಂಬರಿ ಪ್ರಕಟವಾಗಿತ್ತು. ನಂತರದ ಆವೃತ್ತಿಗಳಲ್ಲಿ ಹಿಂದುತ್ವದ ಹಾಗೆ ಇದು ಕೂಡ ಸಾವರ್ಕರ್‌ ಹೆಸರಿಗೆ ಬದಲಾಗಿತ್ತು. ತಾನು ಒಂದು ಕಾಲದಲ್ಲಿ ಹೊಂದಿದ್ದ ಬ್ರಿಟಿಷ್‌ ವಿರೋಧಿ ನಿಲುವಿಗಿಂತಲೂ ಕಠಿಣವಾದ ಬ್ರಿಟಿಷ್‌ ವಿರೋಧಿ ನಿಲುವನ್ನು ಮಲಬಾರಿನ ಮಾಪ್ಪಿಳಗಳು ಕಟ್ಟಿಕೊಂಡಿದ್ದರು ಎಂಬುದನ್ನು ಮರೆಮಾಚಿ, ಹಿಂದೂ ಧರ್ಮವನ್ನು ನಾಶಗೊಳಿಸಿ ಧರ್ಮರಾಷ್ಟ್ರ ಸ್ಥಾಪಿಸುವುದು ಮಾಪ್ಪಿಳ ಕ್ರಾಂತಿಯ ಉದ್ದೇಶವಾಗಿತ್ತು ಎಂಬರ್ಥದಲ್ಲಿ ಸಾವರ್ಕರ್‌ ನಿರೂಪಿಸಿದ್ದರು. ಕೊಲೆ ಸುಲಿಗೆ ಅತ್ಯಾಚಾರಗಳು ಮಾತ್ರವೇ ಹಿಂದೂಗಳ ಪಾಲಿಗೆ ಲಭಿಸಿತ್ತು ಎಂಬರ್ಥದಲ್ಲಿ ಸಾವರ್ಕರ್‌ ನಿರೂಪಿಸಿದ ಆ ಕಾದಂಬರಿಯನ್ನು ಆಧಾರವಾಗಿಟ್ಟುಕೊಂಡು ನಂತರದ ಕಾಲದ ಹಿಂದುತ್ವವಾದಿಗಳು ಮಲಬಾರ್‌ ಕ್ರಾಂತಿಯನ್ನು ವ್ಯಾಖ್ಯಾನಿಸಿದರು. ಜೊತೆಗೆ ಗಾಂಧಿಯನ್ನು ಮೊಳಕೆಯಲ್ಲಿಯೇ ಚಿವುಟುವ ತಂತ್ರದ ಭಾಗವಾಗಿ, ಗಾಂಧಿಯನ್ನು ಮುಸ್ಲಿಂ ಸಿದ್ಧಾಂತಿಗಳ ಬೂಟುನೆಕ್ಕಿಗನಾಗಿಯೂ ಆ ಕಾದಂಬರಿ ಚಿತ್ರಿಸುತ್ತದೆ. ಆ ಸಿದ್ಧಾಂತಿಗಳು ಗೆಲ್ಲುವಾಗ ಗಾಂಧಿಯನ್ನು ಇನ್ನಿಲ್ಲದಂತೆ ತುಳಿಯುವ ಹಾಗೆಯೂ ಚಿತ್ರಿಸಲಾಗಿದೆ.

ಲಲಿತ ಬರಹಕ್ಕೆ ಸಮಾನವಾದ ಹಿಂದುತ್ವ ಎಂಬ ಈ ಪುಸ್ತಕದ ಈಗ ಪ್ರಚಲಿತದಲ್ಲಿರುವ ಆವೃತ್ತಿಯಲ್ಲಿ ೫೫ ಪುಟಗಳಿವೆ. ಚಂದ್ರನಾಥ ಬಸು ಹಿಂದುತ್ವ ಎಂಬ ಪದವನ್ನು ಮೊದಲ ಬಾರಿ ಬಳಸಿರುವುದು ಎಂದು ಹೇಳಲಾಗುತ್ತದೆ. ಅವರ ಹಿಂದುತ್ವ, ಹಿಂದುರ್‌ ಪ್ರಾಕೃತ ಇತಿಹಾಸ್‌ (ಹಿಂದುತ್ವ, ಹಿಂದೂಗಳ ಪುರಾತನ ಇತಿಹಾಸ) ಎಂಬ ಕೃತಿಯ ಹೆಸರಿನ ಪದ ಇಲ್ಲಿ ಬಳಸಲಾಗಿದೆಯಾದರೂ, ಇದನ್ನು ಮೊದಲ ಬಾರಿಗೆ ಒಂದು ರಾಜಕೀಯ ಸಿದ್ಧಾಂತವಾಗಿ ರೂಪಕಲ್ಪನೆ ನೀಡಿರುವುದು ಸಾವರ್ಕರ್.‌ ೩೧ ಅಧ್ಯಾಯಗಳು ಈ ಪುಸ್ತಕದಲ್ಲಿವೆ. ಸಾಮಾನ್ಯ ಶೈಲಿಗಿಂತ ಭಿನ್ನವಾಗಿ ಸಾವರ್ಕರ್‌ ಈ ಪುಸ್ತಕವನ್ನು ಇಂಗ್ಲಿಷ್‌ ಭಾಷೆಯಲ್ಲಿಯೇ ಬರೆಯುತ್ತಾರೆ. ಮೊದಲ ಅಧ್ಯಾಯದ ಹೆಸರು ಷೇಕ್ಸ್‌ ಪಿಯರನ ಮಾತುಗಳನ್ನು ಬಳಸಿಕೊಂಡ ʼಹೆಸರಿನಲ್ಲೇನಿದೆ?ʼ ಎಂದು. ಅದರ ಮುಖ್ಯ ಸಾಲು ಹೀಗಿದೆ, ʼಮಾತಿಗೆ ವಸ್ತುವಿನೊಂದಿಗೆ ಇರುವ ಈ ಸಂಬಂಧ ಕಾಲಾಂತರದಲ್ಲಿ ಶಕ್ತಿಯುತವಾಗಿ ಬೆಳೆದು ದೀರ್ಘಕಾಲ ಬಾಳಿಕೆ ಬರುವ ಒಂದಾಗಿ ಬದಲಾಗಿದೆ. ಆದ್ದರಿಂದ ಪ್ರಜ್ಞೆಯ ಎರಡು ಧೃವಗಳನ್ನು ಪರಸ್ಪರ ಬಂಧಿಸುವ ಆ ತಂತು ಒಂದು ಧೃವದಿಂದ ಇನ್ನೊಂದು ಧೃವಕ್ಕೆ ಆಲೋಚನೆಗಳನ್ನು ಸರಾಗವಾಗಿ ಸಾಗಿಸಲು ಅನುವು ಮಾಡಿಕೊಡುತ್ತದೆ ಮತ್ತು ಅದರಿಂದಾಗಿ ಅವನ್ನು (ಮಾತು ಮತ್ತು ವಸ್ತು) ಬೇರೆ ಬೇರೆಯಾಗಿಸಲು ಸುಮಾರಾಗಿ ಅಸಾಧ್ಯವೇ ಆಗಿ ಹೋಯಿತು.ʼ ಅಂದರೆ, ಹೆಸರು ಅದು ಸೂಚಿಸುವ ವಸ್ತುವಿಗಿಂತ ಅಷ್ಟರ ಮಟ್ಟಿಗೆ ಅಭಿನ್ನವಾದ ಸಂಗತಿಯಾಗಿ ಸಾವರ್ಕರ್‌ ಕಾಣುವುದು. ನುಡಿ ಮತ್ತು ವಸ್ತುಗಳ ನಡುವಿನ ಸಂಬಂಧವು ಅತಿಸಂಕೀರ್ಣವಾದ ಮಾದರಿಗಳನ್ನು ಸೃಷ್ಠಿಸುವುದು ಭಾಷಾಶಾಸ್ತ್ರ ಮತ್ತು ಸಾಂಸ್ಕೃತಿಕ ಅಧ್ಯಯನದ ಅತಿ ಮುಖ್ಯ ಅಂಶ ಎಂದು ಈ ಸಂಗತಿಗಳ ಬಗ್ಗೆ ಪ್ರಾಥಮಿಕ ಮಾಹಿತಿಗಳನ್ನು ನೋಡುವವರಿಗೆ ಮನದಟ್ಟಾಗುತ್ತದೆ. ಆದರೆ, ಹಿಂದುತ್ವ ಎಂದು ತಾನು ಹೇಳುತ್ತಿರುವ, ತೀರಾ ಕಚ್ಚಾ ರೂಪದ ಆಂತರಿಕ ಕಂದಕಗಳನ್ನು ಮರೆಮಾಚಬೇಕಾದರೆ ಇಂತಹದ್ದೊಂದು ಭಾಷಾ ಶೈಲಿಯನ್ನು ಸ್ವೀಕರಿಸಬೇಕಾಗಿರುವುದು ಅನಿವಾರ್ಯವೆಂದು ಸಾವರ್ಕರ್‌ಗೆ ತಿಳಿದಿತ್ತು ಎಂದು ನಾವಿಲ್ಲಿ ಅರ್ಥೈಸಬಹುದು.

ಐತಿಹಾಸಿಕವಾಗಿ ನೋಡಿದರೆ ತುಕಾರಾಮರಿಂದ ಹಿಡಿದು ಅಂಬೇಡ್ಕರ್‌ ತನಕ ಈ ಕಾಲದಲ್ಲಿಯೇ ಹಿಂದೂ ಎಂಬ ಸಂಜ್ಞೆಯನ್ನು ಮರಾಠಾ ಪ್ರಾಂತ್ಯದ ಒಳಗಡೆಯೇ ಒಡೆದು ಕಟ್ಟಲಾಗಿತ್ತು. ಮನುಸ್ಮೃತಿ ಮತ್ತು ಇತರ ಸ್ಮೃತಿಗಳ ಆಧಾರದಲ್ಲಿ, ಬ್ರಾಹ್ಮಣ ಕೇಂದ್ರಿತ ಹಿಂದೂ ಸಾಮಾಜಿಕ ಕಲ್ಪನೆಗೆ ಕೊಡಲಿಯೇಟು ಬಿದ್ದಿತ್ತು. ಅಂದರೆ, ಹಿಂದೂ ಎಂಬ ಹೆಸರು ಮತ್ತು ಅದು ಸೂಚಿಸುವ ಜನಸಮೂಹದ ನಡುವಿನ ಸಂಬಂಧ ಬೇರೆಯದೇ ಆಗಿತ್ತು. ಬ್ರಾಹ್ಮಣ ಕುಲದ ಒಳಗೆ ನಿಂತುಕೊಂಡೇ ರಾಣಡೆ ಮತ್ತಿತರು ಸಾಮಾಜಿಕ ಕಾರ್ಯದಲ್ಲಿ ಸಮಾಜ ಕಲ್ಯಾಣದ ಪ್ರತಿನಿಧಿ ಎಂಬ ನೆಲೆಯಲ್ಲಿ ಪ್ರಭುತ್ವಕ್ಕೆ ಹಸ್ತಕ್ಷೇಪ ನಡೆಸಬಹುದು ಎಂದು ವಾದಿಸುವಾಗ, ಉಲ್ಲಂಘಿಸಬಾರದ ಸ್ಮೃತಿಮರ್ಯಾದೆಗಳು ಎಂಬ ಕಲ್ಪನೆಯನ್ನೇ ಹೊಡೆದು ಉರುಳಿಸುತ್ತಾರೆ. ಗಾಂಧಿಯ ನಾಯಕತ್ವದಲ್ಲಿ ಮುಸ್ಲಿಮರನ್ನು ಸಹೋದರ/ಸಹೋದರಿ ಎಂದು ಕರೆಯಲು ಧೈರ್ಯವಿರುವ ಹಿಂದೂ ರಂಗದ ಕೇಂದ್ರಕ್ಕೆ ಬಂದಾಗಿತ್ತು. ಆದ್ದರಿಂದ ಸಾವರ್ಕರ್‌ ಮುಂದಕ್ಕೊಯ್ಯಲು ಪ್ರಯತ್ನಿಸಿದ ರಾಜಕೀಯ ಚಿಂತನೆಗೆ ಹಿಂದೂ ಎಂಬ ಪದವನ್ನು ಏಕಶಿಲಾತ್ಮಕವಾಗಿ ಹಿಂದೆಂದಿಗಿಂತಲೂ ಶಕ್ತಿಯುತವಾಗಿ ಒಡೆದು ಕಟ್ಟಬೇಕಿತ್ತು. ಸಂಪ್ರದಾಯವಾದಿ ಬ್ರಾಹ್ಮಣ್ಯಕ್ಕೆ ಆ ಚೈತನ್ಯ ಅದಾಗಲೇ ನಷ್ಟಗೊಂಡಿತ್ತು. ಹಳೆಯ ಪ್ರತಾಪಗಳೆಲ್ಲ ದೇವರ ದಯೆಯಿಂದ ಮರಳಿ ಬರುತ್ತದೆಯೆಂಬ ನಿರೀಕ್ಷೆಯಲ್ಲದೆ ಅವರಿಂದ ಬೇರೇನೂ ನೀರೀಕ್ಷಿಸಲು ಸಾಧ್ಯವಿರಲಿಲ್ಲ. ಸ್ವಂತ ಕುಲದೊಳಗೆ ತಮ್ಮ ಇಂಗಿತಗಳು ನೆಲೆನಿಲ್ಲುವಂತೆ, ತಮ್ಮ ಆಚಾರಗಳನ್ನೂ ಕರ್ಮದ ವೇಶ ಹೊದ್ದು ಬರುವ ಸಾಮಾಜಿಕ ಪ್ರಾಬಲ್ಯವನ್ನೂ ಅವರು ಕಾಯ್ದುಕೊಂಡಿದ್ದರು. ಆದರೆ, ಅದರಾಚಗೆ ಬರಲಿರುವ ಹೊಸ ರಾಜಕೀಯ ಭೂಮಿಕೆಯಲ್ಲಿ ಬಾವುಟ ಹಾರಿಸಲು ಬ್ರಾಹ್ಮಣಿಸಮ್ಮನ್ನು ಹುರಿಗೊಳಿಸಿದ ನವ-ಸಂಪ್ರದಾಯವಾದಿ ರಾಜಕೀಯ ಬ್ರಾಹ್ಮಣಿಸಮ್ಮನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗದ ಕಾರಣ ಅವರೊಂದಿಗಿನ ಸಂಘರ್ಷ ಬ್ರಾಹ್ಮಣ ಕುಲದೊಳಗಡೆಯೇ ನಡೆಯುತ್ತಲೂ ಇತ್ತು.

ಹೀಗೆ, ʼಹಿಂದೂʼ ಎಂಬ ʼಪದʼ ಮತ್ತು ಹಿಂದೂ ಎಂಬ ʼವಸ್ತುʼವಿನ ನಡುವಿನ ಅಂತರವನ್ನು ಒಂದು ಹೊಚ್ಚ ಹೊಸ ಸಿಮೆಂಟ್‌ ಬಳಸಿ ಕಟ್ಟುವ ಪ್ರಯತ್ನವಾಗಿತ್ತು ಸಾವರ್ಕರ್‌ ನಡೆಸುವುದು. ಮೆಡೋನಳ ಸುಂದರವಾದ ಚಿತ್ರದ ಅಡಿಯಲ್ಲಿ ಫಾತಿಮಾ ಎಂದು ಬರೆದರೆ ಸ್ಪೇನಿನ ಜನರು ಅದನ್ನೊಂದು ಕಲಾಕೃತಿ ಎಂಬ ನೆಲೆಯಲ್ಲಿ ನೋಡಬಹುದು. ಸಾವರ್ಕರ್‌ ಬರೆಯುವುದು ಹೀಗೆ. ಆದರೆ, ಮೆಡೋನ ಎಂಬ ಹೆಸರನ್ನೇ ಅದಕ್ಕೆ ನೀಡುವುದಾದರೆ ದಿವ್ಯಮಾತೆಯ ಮತ್ತು ಪ್ರೇಮದ ಸಾಮೀಪ್ಯ ಅವರಿಗೆ ಅನುಭವವಾಗುತ್ತದೆ ಮತ್ತು ಅದರಿಂದಾಗಿ ಅವರು ಆ ಚಿತ್ರದ ಎದುರು ಮೊಣಕಾಲೂರುತ್ತಾರೆ.

ಹಿಂದೂ ಎಂಬ ಶಬ್ದದ ಎದುರು ಅದರೊಂದಿಗೆ ಸಂಬಂಧ ಹೊಂದಿರುವವರೆಲ್ಲರೂ ಮೊಣಕಾಲೂರಬೇಕಾದರೆ, ಬಲಿಪೀಠದಲ್ಲಿ ಅವರ ರಕ್ಷಕನಾಗಿ ಬ್ರಾಹ್ಮಣ್ಯವನ್ನು ತಂದು ಕೂರಿಸಬೇಕಾದರೆ, ಈಗ ಇರುವ ಹಿಂದೂ ಧರ್ಮ ಮತ್ತು ಅದರ ಜ್ಞಾನ–ಕರ್ಮ ಪರಂಪರೆ ಯಾವುದಕ್ಕೂ ಸಾಲುತ್ತಿರಲಿಲ್ಲ. ಸಂಸ್ಥಾಗಳ ಕಲ್ಪನೆಯ ಕಾಲದಲ್ಲಿ ಹಿಂದೂ ಧರ್ಮ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದ ಬ್ರಾಹ್ಮಣ ಧರ್ಮವನ್ನು ಮತ್ತೆ ಮುನ್ನೆಲೆಗೆ ತರಬೇಕಾದರೆ ಹಿಂದೂ ಧರ್ಮವನ್ನು ಜನಾಂಗೀಯವಾಗಿ ವ್ಯಾಖ್ಯಾನಿಸಬೇಕಾಗಿತ್ತು. ಹಲವಾರು ಜಾತಿಗಳಿರುವ, ಪರಸ್ಪರ ಹೊಡೆದಾಡಿಕೊಳ್ಳುವ ಮತ್ತು ಬೆನ್ನು ಹಾಕಿ ನಡೆಯುವ, ರಚನೆಯಲ್ಲಿಯೇ ಯಾವ ರೀತಿಯಲ್ಲೂ ಸಾಮಾನ್ಯ ಅಂಶಗಳನ್ನು ಹೊಂದಿರದ, ಶ್ರೇಣೇಕೃತವಾದ ಬಹುತ್ವದ ಬದಲಿಗೆ ಒಂದೇ ಒಂದು ಸೀಟಿ ಸದ್ದಿಗೆ ಒಟ್ಟು ಸೇರುವ ಸೈನ್ಯದ ರೀತಿಯಲ್ಲಿ ಹಿಂದೂ ಸಮಾಜವನ್ನು ಬದಲಾಯಿಸಬೇಕಾಗಿತ್ತು. ಜಾತೀಯತೆಯನ್ನು ಜನಾಂಗೀಯತೆಯೊಂದಿಗೆ ವಿನಿಮಯ ಮಾಡಿಕೊಳ್ಳುವ ಪ್ರಯತ್ನ. ಜಾತಿ ಕಟ್ಟುಪಾಡುಗಳಾಚೆಗೆ ಬಲಶಾಲಿಗಳನ್ನು ಪ್ರಶ್ನಿಸದೆ ಸೇವೆಗೈಯ್ಯುವ ಜನರನ್ನು ಸೃಷ್ಟಿಸುವ ಜನಾಂಗೀಯತೆ.

ಆದ್ದರಿಂದಲೇ, ಎರಡನೇ ಅಧ್ಯಾಯಕ್ಕೆ ಹಿಂದುತ್ವ ಎಂಬುದು ಹಿಂದೂ ಧರ್ಮಕ್ಕಿಂತ ಭಿನ್ನವಾದದ್ದು ಎಂದು ಸಾವರ್ಕರ್‌ ಹೆಸರಿಡುವುದು. ಸುಮಾರಾಗಿ ಜನಾಂಗೀಯ ಮಾನದಂಡಗಳಿದ್ದ ಸಿದ್ಧಾಂತವಾಗಿತ್ತು ಹಿಂದುತ್ವ. ಹಿಂದೂ ಧರ್ಮದ ಸುತ್ತಲಿರುವ ಎಲ್ಲವನ್ನೂ ಸೇರಿಸಿಕೊಂಡ ಚರಿತ್ರೆಯಾಗಿ ಸಾವರ್ಕರ್‌ ಹಿಂದುತ್ವವನ್ನು ವ್ಯಾಖ್ಯಾನಿಸಿದ್ದರು. ಹಿಂದುತ್ವವೆಂದರೆ ಹಿಂದೂ ಧರ್ಮವಲ್ಲ. ಹಿಂದೂ ಧರ್ಮದ ಅಡಿಪಾಯದಲ್ಲಿರುವ ಜೀವನಶೈಲಿ ಎಂಬ ಅರ್ಥ ಬರುವ ಹಿಂದೂಯಿಸಂ ಕೂಡ ಅಲ್ಲ. ಸಾವರ್ಕರ್‌ ಹೇಳುತ್ತಾರೆ. ಅದೊಂದು ಸಂಪೂರ್ಣ ಚರಿತ್ರೆ. ಹಿಂದೂ ಧರ್ಮ ಮತ್ತು ಹಿಂದೂಯಿಸಂ ಹಿಂದುತ್ವದಿಂದ ಕವಲೊಡೆದ ಉಪಶಾಖೆಗಳು ಮಾತ್ರ. ʼನಮ್ಮ ಹಿಂದೂ ವಂಶದ ಸಂಪೂರ್ಣ ಅಸ್ಮಿತೆಯ, ಚಿಂತನೆಗಳ, ಚಟುವಟಿಕೆಗಳ ಎಲ್ಲ ಶಾಖೆಗಳನ್ನು ಹಿಂದುತ್ವ ಒಳಗೊಳ್ಳುತ್ತದೆ.ʼ ಸಾವರ್ಕರ್‌ ಮುಂದುವರಿಸುತ್ತಾರೆ, ಹಿಂದುತ್ವವೇನೆಂದು ಅರಿಯಲು ಹಿಂದೂ ಯಾರೆಂಬುದನ್ನು ಅರಿಯಬೇಕಾಗಿರುವುದು ಅತ್ಯಂತ ಮುಖ್ಯ.

ಅಂದರೆ, ಭಾರತದ ಪ್ರಾಚೀನ ಇತಿಹಾಸವೆಂಬ ಅತಿಸಂಕೀರ್ಣ ಸಂಗತಿಯೊಂದನ್ನು ಹಿಂದೂಗಳ ಚರಿತ್ರೆಯಾಗಿ ಬಿಂಬಿಸುವ ಸುಲಭದ ದಾರಿಯನ್ನು ಹುಡುಕುತ್ತಿದ್ದರು ಸಾವರ್ಕರ್.‌ ಅಂದರೆ, ಸ್ಮೃತಿಗಳ ಶೈಲಿಯಾದ ಅಧಿಕಾರಯುತ ಭಾಷೆಯಲ್ಲಿ ಆಧುನಿಕ ಇತಿಹಾಸವನ್ನು ನಿರೂಪಿಸುವುದು. ಸ್ಮೃತಿಗಳೆಂದರೆ ಪ್ರಶ್ನಿಸಲಾಗದ ಅಧಿಕಾರಯುತ ಸಂಗತಿಗಳು. ಕಾರಣ, ಸ್ಮೃತಿಕಾರ ಅಧಿಕಾರದ ಅತ್ಯಂತ ಉನ್ನತ ಸ್ಥಾನದಲ್ಲಿರುತ್ತಾನೆ. ಆ ರೀತಿಯಲ್ಲಿ ತನ್ನನ್ನು ತಾನೇ ಆದರ್ಶಗೊಳಿಸಿಕೊಂಡೂ ಅಧಿಕಾರಯುತಗೊಳಿಸಿಕೊಂಡೂ ಒಂದು ವ್ಯಾಖ್ಯಾನ ಕಟ್ಟಿಕೊಂಡು ಅದಕ್ಕೆ ಇತಿಹಾಸ ಎಂದು ಹೆಸರಿಡುವುದು. ಉಳಿದ ಇತಿಹಾಸದ ಮೂಲಗಳ ಮೇಲೆ ನಡೆಸುವ ಈ ಆಕ್ರಮಣವನ್ನು ಲೇಖನಿ ಶಕ್ತಿಯ ಮೂಲಕ ಗೆಲ್ಲುವುದು.

ಮೂರನೇ ಅಧ್ಯಾಯ ಹಿಂದೂ ಅಂದರೆ ಏನು? ಎಂದು. ಇಲ್ಲಿ ಅದನ್ನು ಸಾವರ್ಕರ್‌ ನಿರೂಪಿಸುತ್ತಾರೆ. ಸಂಪ್ರದಾಯವಾದಿ ಬ್ರಾಹ್ಮಣ ಪುರಾಣಗಳಲ್ಲಿ ಕಾಣುವಂತೆ ಬ್ರಹ್ಮನ ಮುಖದಿಂದ ಜನಿಸಿದ ಬ್ರಾಹ್ಮಣರ ಕಥೆಯನ್ನು ಇಲ್ಲಿ ಸಾವರ್ಕರ್‌ ಹೇಳುವುದೇ ಇಲ್ಲ. ಬದಲಿಗೆ ಆರ್ಯ ವಲಸೆಯನ್ನು ಸಾವರ್ಕರ್‌ ಒಪ್ಪಿಕೊಳ್ಳುತ್ತಾರೆ. ಆರ್ಯರು ಏಳು ನದಿಗಳ ನಡುವೆ, ಸಪ್ತಸಿಂಧೂಗಳ ನಡುವೆ ವಾಸಿಸಲು ಶುರುಮಾಡಿ ಅವರ ಪರ್ಶಿಯನ್‌ ಪರಂಪರೆಯ ಕೊಂಡಿಯನ್ನು ಸಂಪೂರ್ಣವಾಗಿ ಕಡಿದುಕೊಳ್ಳುವಲ್ಲಿಂದ ಸಾವರ್ಕರ್‌ ಚರಿತ್ರೆಯನ್ನು ಆರಂಭಿಸುತ್ತಾರೆ. ಕೃಷಿ ಅವರ ಮುಖ್ಯ ಉದ್ಯೋಗ. ಲೋಕದ ಅತ್ಯಂತ ಹಳೆಯ ದಾಖಲೆಯಾದ ಋಗ್ವೇದವನ್ನು ಬರೆದವರು ಅವರು. ಸಿಂಧೂನದಿ ನಾಯಕತ್ವ  ನೀಡಿದ ಏಳು ನದಿಗಳ ತಟಗಳು ಅವರಿಗೆ ಒಂದು ರಾಷ್ಟ್ರೀಯತೆ ಮತ್ತು ಸಂಸ್ಕೃತಿಯನ್ನು ನೀಡಿತು. ಅವರು ತಮ್ಮನ್ನು ಸ್ವತಃ ಸಿಂಧೂಗಳು ಎಂದು ಕರೆದುಕೊಳ್ಳಲಿಲ್ಲ. ಆದರೆ, ಅವರ ಸುತ್ತಲಿನ ರಾಷ್ಟ್ರಗಳ ಜನರು ಅವರನ್ನು ಸಪ್ತ ಸಿಂಧೂಗಳು ಎಂದು ಕರೆದರು. ಸ ಎಂಬ ಅಕ್ಷರ ಭಾರತೀಯ ಮತ್ತು ಭಾರತೀಯವಲ್ಲದ ಕೆಲವು ಪುರಾತನ ಭಾಷೆಗಳಲ್ಲಿ ಇರಲಿಲ್ಲವಾದ ಕಾರಣ ಅವರು ಅದಕ್ಕೆ ಬದಲಾಗಿ ಹ ಬಳಸಿದರು. ಸಪ್ತ ಎಂಬುದು ಭಾರತೀಯ ಭಾಷೆಗಳಲ್ಲಿ ಹಪ್ತವಾಗುತ್ತದೆ. ವಾರ ಎಂಬರ್ಥದಲ್ಲಿ. ಯುರೋಪಿನಲ್ಲಿ ಅದು ಹೆಪ್ಟಾರ್ಕಿಯಾಗುತ್ತದೆ. ಸಿಂಹಕ್ಕೆ ಹಿಂದಿಯಲ್ಲಿ ಕೇಸರಿ ಎಂದು ಹೇಳುತ್ತಾರೆ. ಹಳೆಯ ಹಿಂದಿಯಲ್ಲಿ ಅದು ಕೇಹರಿ ಆಗುತ್ತದೆ. ಸರಸ್ವತಿ ಪರ್ಷಿಯನ್‌ ಭಾಷೆಯಲ್ಲಿ ಹರಹ್ವತಿ ಮತ್ತು ಅಸುರ್‌ ಅಹುರ್‌ ಆಗುತ್ತದೆ. ಸಪ್ತಸಿಂಧೂ ಹಪ್ತಹಿಂದೂ ಆಗುತ್ತದೆ. ಆದ್ದರಿಂದ ಪರ್ಷಿಯನ್ನರು ಸಿಂಧೂಗಳನ್ನು ಹಿಂದೂಗಳೆಂದು ಕರೆದರು. ಹೀಗೆ ವೇದಕಾಲದ ಆರ್ಯರು ಹಿಂದೂಗಳಾದರು.

ಸಾವರ್ಕರ್‌ ಹೇಳುವ ಈ ಚರಿತ್ರೆ ಸಾಮಾನ್ಯವಾಗಿ ಎಲ್ಲರೂ ಅಂಗೀಕರಿಸಿರುವುದೇ ಆಗಿದೆ. ಅಂದರೆ, ಹಿಂದೂ ಎಂಬ ಹೆಸರು ಧಾರ್ಮಿಕ ಗುರುತಿನ ಮೂಲಕ ಹುಟ್ಟಿಕೊಂಡಿರುವುದಲ್ಲ. ಅದರ ಹುಟ್ಟಿಗೆ ಭೌಗೋಳಿಕತೆಯೇ ಮುಖ್ಯ ಕಾರಣವಾಗಿತ್ತು.

ಆದರೂ ಪುರಾತನ ಹೆಸರು ಎಂಬ ಅಧ್ಯಾಯದಲ್ಲಿ ಹಿಂದೂ ಎಂಬ ಶಬ್ದಕ್ಕೆ ಆರ್ಯರಿಗಿಂತಲೂ ಹಿಂದಿನ ಇತಿಹಾಸವಿದೆಯೆಂದು ಸಾವರ್ಕರ್‌ ಚರ್ಚಿಸುತ್ತಾರೆ. ಸ್ಥಳೀಯರು ಸಿಂಧೂ ನದಿಯನ್ನು ಹಿಂದೂ ಎಂದು ಕರೆಯುತ್ತಿದ್ದರು. ಆರ್ಯರ ಆಗಮನದೊಂದಿಗೆ ಅದು ಸಿಂಧೂ ಆಗುತ್ತದೆ. ಆರ್ಯಭಾಷೆಯಾದ ಸಂಸ್ಕೃತದಲ್ಲಿ. ಇಲ್ಲಿ ಸಾವರ್ಕರ್‌ ಆರ್ಯರ ಆಗಮನಕ್ಕಿಂತಲೂ ಹಿಂದೆ ಸಿಂಧೂ ನದಿತೀರದಲ್ಲಿ ಜನವಸತಿ ಇದ್ದುದಾಗಿ ಸಮ್ಮತಿಸುತ್ತಾರೆ. ಆದರೆ, ಹೊಸತೊಂದು ಜನಸಮುದಾಯದ ಆಗಮನವನ್ನು ಅವರು ಸ್ವಾಗತಿಸಿದರು ಎಂದು ಹೇಳುತ್ತಾರೆ. ಜೊತೆಗೆ, ಆರ್ಯರಲ್ಲದ ಎಲ್ಲರನ್ನೂ ಮ್ಲೇಚ್ಛರಾಗಿಯೂ ಕಾಣುತ್ತಾರೆ. ಆರ್ಯರ ಆಗಮನಕ್ಕಿಂತ ಮೊದಲು ಇಲ್ಲಿದ್ದ ಚದುರಿ ಹೋಗಿದ್ದ ಸ್ಥಳೀಯರು, ವಿದ್ಯಾಧರ, ಯಕ್ಷ, ಕಿನ್ನರ, ಗಂಧರ್ವಾದಿಗಳಲ್ಲಿ ಹಲವರು ಆರ್ಯರೊಂದಿಗೆ ಸೌಹಾರ್ದತೆ ಸಾಧಿಸಿದ್ದರೆಂದೂ ಅವರಲ್ಲಿ ಕೆಲವರು ಆರ್ಯರಿಗೆ ದಾರಿತೋರುಗರಾದರೆಂದೂ ಹೇಳುತ್ತಾರೆ. ಅವರನ್ನು ಉದಾರಿಗಳೂ ಉತ್ತಮ ಸ್ವಭಾವದವರೂ ಎಂದು ಸಾವರ್ಕರ್‌ ದಾಖಲಿಸುತ್ತಾರೆ. ಅಂದರೆ, ಆರ್ಯನ್-ಸ್ಥಳೀಯ ಸಂಘರ್ಷದ ಯಾವ ಸೂಚನೆಯನ್ನೂ ಸಾವರ್ಕರ್‌ ಇಲ್ಲಿ ನೀಡುವುದಿಲ್ಲ. ಅಂದರೆ, ಸ್ಥಳೀಯರು ಹಾಸಿದ ಕೆಂಪು ಹಾಸಿನ ಮೇಲೆ ನಡೆದುಕೊಂಡು ಆರ್ಯರು ಬಂದರು ಎಂಬ ರೀತಿಯಲ್ಲಿ. ಮುಸ್ಲಿಮರ ಆಗಮನದ ಹೊತ್ತಿಗೆ ಅದು ಸಂಘರ್ಷ, ಆರ್ಯರು ಬರುವಾಗ ಸ್ವಾಗತ. ಸಾವರ್ಕರ್‌ ಸಹಿತದ ಚಿತ್ಪಾವನ ಬ್ರಾಹ್ಮಣರ ಸಾಮ್ರಾಜ್ಯವನ್ನು ಸೋಲಿಸಿ ಆಕ್ರಮಿಸಿಕೊಂಡ ಬ್ರಿಟಿಷರ ವಿರುದ್ಧ, ಅವರ ಆಡಳಿತದಡಿಯಲ್ಲಿ ಕುಳಿತು ಬರೆದ ಹಿಂದುತ್ವದಲ್ಲಿ ಒಂದಕ್ಷರದ ವಿಮರ್ಶೆಯೂ ಇಲ್ಲ. ತನಗೆ ಬೇಕಾದ ಇತಿಹಾಸ ರಚನೆಯನ್ನು ಸಾವರ್ಕರ್‌ ಇಲ್ಲಿ ನಡೆಸುತ್ತಿರುವುದು. ಆದ್ದರಿಂದ, ಇತಿಹಾಸ ಎಂಬುದು ತನ್ನ ಆತ್ಮನಿಷ್ಠೆಗೆ ಮತ್ತು ನವ-ಸಂಪ್ರದಾಯವಾದಿ ರಾಜಕೀಯ ಬ್ರಾಹ್ಮಣಿಸಮ್ಮಿನ ಚಲನಾತ್ಮಕತೆಗೆ ಬೇಕಾದ ಮಾಧ್ಯಮ ಮಾತ್ರವೇ ಆಗಿತ್ತು. ಭವಿಷ್ಯಪುರಾಣ ಮತ್ತು ರಾಮಾಯಣ ತರಹದವನ್ನು ನಿಜಾರ್ಥದ ಐತಿಹಾಸಿಕ ದಾಖಲೆಗಳಾಗಿ ಸಾವರ್ಕರ್‌ ಬಳಸುವುದು ಇದೇ ಕಾರಣಕ್ಕೆ.

ಮುಂದಿನ ಅಧ್ಯಾಯ ಹಿಂದೂಗಳು, ಒಂದು ರಾಷ್ಟ್ರ ಎಂಬುದು. ಸಪ್ತಸಿಂಧೂ ತೀರದ ಕಾಡುಗಳನ್ನು ಕಡಿದು ಕೃಷಿ ನಡೆಸಿ, ನಗರಗಳನ್ನು ಕಟ್ಟಿ, ರಾಷ್ಟ್ರಗಳನ್ನೂ ರಾಷ್ಟ್ರಾಡಳಿತಗಳನ್ನೂ ಗೆದ್ದುಕೊಂಡು ಆರ್ಯರು ಮುನ್ನೇರಿದ ಕಥೆಯನ್ನು ಸಾವರ್ಕರ್‌ ಇಲ್ಲಿ ಹೇಳುತ್ತಿರುವುದು. ಅವರು ಕುರುಗಳೆಂದೂ ಕಾಶಿಗಳೆಂದೂ ವೈದೇಹುಗಳೆಂದೂ ಮಗಧರೆಂದೂ ಗುರುತಿಸಲು ಶುರುವಾಗುವಾಗ ಅವರ ಅಡಿಪಾಯದಲ್ಲಿದ್ದ ಅತ್ಯಂತ ಹಳೆಯ ಹೆಸರಾದ ಹಿಂದೂಗಳು ಅಥವಾ ಸಿಂಧೂಗಳು ಕತ್ತಲಿಗೆ ತಳ್ಳಲ್ಪಟ್ಟಿತು. ಆದರೆ ಅದು ನಂತರದ ಕಾಲದಲ್ಲಿ ಪುನರುಜ್ಜೀವನಗೊಂಡಿತು. ಸಾವರ್ಕರ್‌ ಹಿಂದೂ ರಾಷ್ಟ್ರದ ಗಡಿರೇಖೆಗಳು ರೂಪುಗೊಳ್ಳುವ ಬಗ್ಗೆ ಹೇಳುವುದು ಇನ್ನೂ ಚೆನ್ನಾಗಿದೆ.

ʼಅಯೋಧ್ಯೆಯ ವೀರ ರಾಜಕುಮಾರನು ಸಿಲೋನಿಗೆ ವಿಜಯಶಾಲಿಯಾಗಿ ಬಂದು ಹಿಮಾಲಯದಿಂದ ಸಮುದ್ರದ ತನಕದ ಪ್ರದೇಶವನ್ನು ಒಂದೇ ಪರಮಾಧಿಕಾರದ ಅಡಿಗೆ ತರುವುದರೊಂದಿಗೆ ಒಂದು ರಾಷ್ಟ್ರ ಮತ್ತು ಅದರ ಗಡಿಗಳನ್ನು ಗುರುತಿಸುವ ಆ ಮಹತ್ತರವಾದ ಗುರಿಯು ಕೊನೆಗೆ ಪೂರ್ಣವಾಗುತ್ತದೆ. ಸೋಲದೆ, ಸೋಲಿಸಲಾಗದೆ ವಿಜಯದ ಕುದುರೆಯು ಅಯೋಧ್ಯೆಗೆ ಮರಳಿ ಬಂದ ಆ ದಿನ, ಪರಮಾಧಿಕಾರದ ರಾಜಛತ್ರಿಯು ರಾಮಚಂದ್ರನೆಂಬ ಧೀರನ, ರಾಮಚಂದ್ರನೆಂಬ ಗುಣವಂತನ ಸಾಮ್ರಾಜ್ಯ ಸಿಂಹಾಸನದ ಮೇಲೆ ಅರಳಿದ ಆ ದಿನ, ಸ್ನೇಹ ತುಂಬಿದ ಸಖ್ಯವು, ಆರ್ಯ ರಕ್ತ ಹರಿಯುವ ರಾಜಕುಮಾರರ ನಡುವೆ ಮಾತ್ರವಲ್ಲ, ಬದಲಿಗೆ ಹನುಮಾನ್‌, ಸುಗ್ರೀವ, ವಿಭೀಷಣ ಮೊದಲಾದ ದಕ್ಷಿಣಾತ್ಯರೊಂದಿಗೂ ಬೆಸೆದುಕೊಂಡ ದಿನ ನಾವು ಹಿಂದೂಗಳಿಗೆ ನಿಜವಾದ ಹುಟ್ಟುದಿನ.ʼ

ಭಾರತದ ಇತಿಹಾಸ ಹೇಳುವುದಲ್ಲ, ಬದಲಿಗೆ ಬ್ರಿಟಿಷ್‌ ಸ್ನೇಹಿ, ಆಗ ನಡೆಯುತ್ತಿದ್ದ ರಾಷ್ಟ್ರೀಯ ಆಂದೋಲನವನ್ನು ಒಡೆಯುವ, ಹಿಂದೂ–ಮುಸ್ಲಿಂ ಸೌಹಾರ್ದತೆಯನ್ನು ಇಲ್ಲವಾಗಿಸುವ ಒಂದು ರಾಜಕೀಯ ಸಿದ್ಧಾಂತವನ್ನು ನಿರ್ಮಿಸುವುದು ೧೯೨೩ರಲ್ಲಿ ಹಿಂದುತ್ವ ಬರೆಯುವಾಗ ಸಾವರ್ಕರ್‌ ಗುರಿಯಾಗಿತ್ತು ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ತೋರಿಸಿಕೊಡುವ ಮಾತುಗಳು ಈ ಮೇಲಿನವು. ಆರ್ಯ ವಲಸೆ ಮತ್ತು ಅದರ ಪರಿಣಾಮಗಳ ಬಗ್ಗೆ ಐತಿಹಾಸಿಕವಾಗಿ ಮಾತನಾಡುವ ಸಾವರ್ಕರ್‌ ಇದ್ದಕ್ಕಿದ್ದ ಹಾಗೆ ಪುರಾಣಗಳಿಗೆ ಹೊರಳಿಕೊಳ್ಳುತ್ತಾರೆ. ರಾಮಾಯಣ ಎಂಬ ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾ ಭಾಗಗಳಲ್ಲಿ ವ್ಯಾಪಕವಾಗಿ ಓದಲ್ಪಟ್ಟಿದ್ದ ಕಥೆಯ ಸಾರವನ್ನು ಇತಿಹಾಸವೆಂಬಂತೆ ಸಾವರ್ಕರ್‌ ನಮ್ಮ ಮುಂದಿಡುತ್ತಾರೆ. ಮಹಾಭಾರತವನ್ನು ಹಾಗೆ ಓದಲಾಗದು. ಯಾಕೆಂದರೆ ಅದರಲ್ಲಿ ಆರ್ಯರು ಆರ್ಯರ ಜೊತೆಗೇ ಯುದ್ಧ ಮಾಡುತ್ತಾರೆ. ಹೀಗಿರುವಾಗ ಬ್ರಿಟಿಷ್‌ ಇಂಡಿಯಾದ ಮತ್ತು ಇತರ ದೇಸೀ ಸಂಸ್ಥಾನಗಳ ಪ್ರಾಂತ್ಯಗಳ ಒಳಗೆ ನಿಂತುಕೊಂಡು ಅದರ ಭೂತಕಾಲದಿಂದ ಮುಸ್ಲಿಂ ರಾಜರನ್ನು ಮತ್ತು ಅವರ ಇತಿಹಾಸವನ್ನು ಒದ್ದೋಡಿಸಲು ಸಿಗುವ ಏಕೈಕ ಕಥೆ ರಾಮಾಯಣ. ಯಾಕೆಂದರೆ, ಆರ್ಯಾವರ್ತವನ್ನು ದಾಟಿ ಅದರಾಚೆಗೆ ವಿಜಯಶಾಲಿಗಳಾದ ಆರ್ಯರು ಎಂಬ ನೆಲೆಯಲ್ಲಿ ಸಿಗುವುದು ಅದೊಂದು ಮಾತ್ರ. ಆದರೆ, ಅದು ಕಥೆ. ಈಗಿರುವ ದಾರಿಯೆಂದರೆ ಕಥೆಯನ್ನು ಇತಿಹಾಸವಾಗಿ ಕಟ್ಟುವುದು. ಇನ್ನು ಕಥೆಯೊಳಗಡೆಯೇ ಇದಕ್ಕೆಲ್ಲ ವಿರೋಧಾಭಾಸ ಸಂಗತಿಯಿದ್ದರೆ? ಅದನ್ನು ಗಮನಿಸದೆ ಕಣ್ಣುಮುಚ್ಚಿಕೊಳ್ಳುವುದು. ಹಾಗೆ ಗಮನಿಸದೆ ಕಣ್ಣುಮುಚ್ಚಿಕೊಳ್ಳುವ ಒಂದು ಸಂಗತಿ, ಲಂಕಾದಲ್ಲಿ ರಾವಣನೊಂದಿಗೆ ಯುದ್ಧ ಮಾಡುವಾಗ ರಾಮನು ರಾಜಕುಮಾರನೇ ಅಲ್ಲ ಎಂಬುದು. ಸ್ವಂತ ನಾಡಿನಿಂದ ದೇಶಭ್ರಷ್ಟನಾಗಿ ಕಾಡಿನಲ್ಲಿ ಬದುಕುತ್ತಿದ್ದ ಒಬ್ಬ ಸಾಮಾನ್ಯ ವ್ಯಕ್ತಿ ಮಾತ್ರವೇ ಆಗಿದ್ದ ರಾಮ. ಆ ಯುದ್ಧ ಅಯೋಧ್ಯೆ ಮತ್ತು ಲಂಕಾಗಳೆಂಬ ಎರಡು ದೇಶಗಳ ನಡುವೆ ನಡೆದ ಯುದ್ಧ ಆಗಿರಲಿಲ್ಲ. ರಾಮನ ಖಾಸಗಿ ಸೇನೆ ಲಂಕಾದೊಂದಿಗೆ ಯುದ್ಧಕ್ಕೆ ಹೊರಟಿತ್ತು. ಅಪಹರಣಗೊಂಡ ಸೀತೆಯನ್ನು ಮರಳಿ ತರಲು ನಡೆದ ಯುದ್ಧ. ದೇಶ ಗೆಲ್ಲಲೆಂದು ನಡೆದ ಯುದ್ಧವಲ್ಲ. ಲಂಕಾ ಯುದ್ಧದಿಂದ ತುಂಡು ಭೂಮಿಯೂ ಅಯೋಧ್ಯೆಗೆ ದಕ್ಕಲಿಲ್ಲ. ಆದರೆ, ಸಾವರ್ಕರ್‌ ಇಲ್ಲಿ ಕೊಚ್ಚಿಕೊಳ್ಳುತ್ತಿರುವುದು ಪರಮಾಧಿಕಾರದ ರಾಜಛತ್ರಿಯು ಅರಳಿತು ಎಂದು.

ಸುಗ್ರೀವ, ಹನಮಂತ, ವಿಭೀಷಣರೊಂದಿಗೆ ನಡೆದದ್ದು ಒಪ್ಪಂದವೆಂದಾದರೆ, ವಾಲಿ, ರಾವಣ ಮತ್ತು ಇತರ ಅನೇಕ ರಾಕ್ಷಸರೊಂದಿಗೆ ರಾಮನಿಗೆ ಯುದ್ಧ ಮಾಡಬೇಕಾಗಿ ಬಂದಿತು. ಅಂದರೆ, ದಕ್ಷಿಣಾತ್ಯರ ಮೈತ್ರಿಯ ಜೊತೆಗೆ ವಿರೋಧವನ್ನೂ ಎದುರಿಸಬೇಕಾಗಿ ಬಂದ ಬಗ್ಗೆ ಸಾವರ್ಕರ್‌ ತುಟಿ ಬಿಚ್ಚುವುದಿಲ್ಲ. ಹಾಗೇನಾದರು ಮಾತನಾಡುತ್ತಿದ್ದರೆ, ಸಾವರ್ಕರ್‌ ಬೊಟ್ಟು ಮಾಡಿ ತೋರಿಸುವ ಘಜ್ನಿಗೆ ಸಮಾನನಾದ ದಾಳಿಕೋರನಾಗಿ ರಾಮ ಬದಲಾಗುತ್ತಿದ್ದ.

ಹೀಗೆ ಕಲ್ಪನೆಯ ಹಿಂದೂರಾಷ್ಟ್ರವನ್ನು ಇತಿಹಾಸದ ರಂಗಭೂಮಿಯಲ್ಲಿ ಸ್ಥಾಪಿಸಿದ ನಂತರ ಆ ಹಿಂದೂರಾಷ್ಟ್ರಕ್ಕೆ ಯಾವ ಹೆಸರಿಡಬೇಕು ಎಂಬುದನ್ನು ಇತರ ಹೆಸರುಗಳು, ಹೇಗೆ ಹೆಸರುಗಳನ್ನು ಇಡುವುದು ಇತ್ಯಾದಿ ಅಧ್ಯಾಯಗಳಲ್ಲಿ ಸಾವರ್ಕರ್‌ ಪರಾಮರ್ಶಿಸುತ್ತಾರೆ. ಆರ್ಯಾವರ್ತ, ಬ್ರಹ್ಮಾವರ್ತ ಮೊದಲಾದ ಹೆಸರುಗಳು ಸಾಲುವುದಿಲ್ಲವೆಂದು ಹೇಳುತ್ತಾರೆ. ಆರ್ಯಾವರ್ತವೆಂದರೆ ಹಿಮಾಲಯ ಮತ್ತು ವಿಂಧ್ಯಾಪರ್ವತಗಳ ನಡುವಿನ ಪ್ರದೇಶವೆಂದು ಹಳೆಯ ಕಾಲದ ಬರಹಗಾರರು ವ್ಯಾಖ್ಯಾನಿಸಿದ್ದಾರೆ. ಸಾವರ್ಕರ್‌ ದೃಷ್ಟಿಕೋನದಲ್ಲಿ, ರಾಮನ ಲಂಕಾ ಪ್ರವೇಶ ಮತ್ತು ಗೆಲುವಿನ ನಂತರ ದಕ್ಷಿಣಾಪಥ ಕೂಡ ಸೇರಿಕೊಂಡು ಭೌಗೋಳಿಕತೆಯು ಆರ್ಯಾವರ್ತಕ್ಕಿಂತ ಆಚೆ ಬೆಳೆಯಿತು. ಅದರ ಜೊತೆಗೆ ದಕ್ಷಿಣದವರು ಅನಾರ್ಯರಾದ ಕಾರಣ ಆರ್ಯಾವರ್ತ, ಆರ್ಯಭೂಮಿ ಮೊದಲಾದ ಹೆಸರುಗಳು ಅವರನ್ನೂ ಒಳಗೊಳ್ಳದೇ ಇರುವುದರಿಂದ ಬೇರೊಂದು ಹೆಸರಿನ ಅಗತ್ಯತೆ ಹುಟ್ಟಿಕೊಂಡಿತು. ಈ ಹೊತ್ತಿನಲ್ಲಿ ಭರತನ ಹೆಸರು ಮುಂದಕ್ಕೆ ಬರುತ್ತದೆ. ಈ ಭರತ ವೈದಿಕ ಭರತನೋ ಅಥವಾ ಜೈನ ಭರತನೋ, ಯಾವ ಕಾಲದಲ್ಲಿ ಆತ ರಾಜನಾಗಿದ್ದ ಎಂಬುದೆಲ್ಲವನ್ನು ಊಹಿಸುವ ಅಗತ್ಯವೂ ಇಲ್ಲವೆಂದು ಸಾವರ್ಕರ್‌ ಒತ್ತಿ ಹೇಳುತ್ತಾರೆ. ಯಾಕೆಂದರೆ, ಆರ್ಯರು ಮತ್ತು ದಕ್ಷಿಣಾಪಥದ ಅನಾರ್ಯರು ಎಲ್ಲರೂ ಭರತನನ್ನು ಒಂದೇ ರೀತಿಯಲ್ಲಿ ಸ್ವೀಕರಿಸಿದ್ದರು. ದೇಶ ಬೆಳೆದಂತೆ ಅದರ ಕೇಂದ್ರವನ್ನು ಸಿಂಧೂ ನದೀತೀರದಿಂದ ಗಂಗಾನದಿ ಮುಖಜ ಭೂಮಿಗೆ ಕಿತ್ತು ತಂದು ನೆಡಲಾಗಿತ್ತು. ಇದೆಲ್ಲವನ್ನು ಪರಿಗಣಿಸಿದರೆ ಭರತಖಂಡ ಎಂಬ ಹೆಸರು ಆರ್ಯಾವರ್ತ ಎಂಬ ಹೆಸರಿಗಿಂತ ಹೆಚ್ಚು ಸೂಕ್ತವಾಗುತ್ತದೆ. ಆದ್ದರಿಂದಲೇ ವಿಷ್ಣುಪುರಾಣದಲ್ಲಿ ʼಸಮುದ್ರದ ಉತ್ತರಕ್ಕೂ, ಹಿಮಾಲಯದ ದಕ್ಷಿಣಕ್ಕೂ ಇರುವ ದೇಶವನ್ನು ಭಾರತವೆಂದೂ ಅಲ್ಲಿ ವಾಸಿಸುವ ಜನರನ್ನು ಭರತನ ವಂಶಜರೆಂದೂʼ ಹೇಳಿರುವುದು.

ಆದರೂ ಭಾರತ, ಭರತಖಂಡ, ಭರತವರ್ಷ ಮೊದಲಾದ ಹೆಸರುಗಳು ತೊಟ್ಟಿಲ ಹೆಸರಾದ ಸಿಂಧೂ/ಹಿಂದೂ ಎಂಬುದನ್ನು ಸೂಚಿಸದಿರುವುದರಿಂದ ಒಂದರ್ಥದಲ್ಲಿ ಅದು ಕೂಡ ಹೊಂದುವುದಿಲ್ಲವೆಂದು ಸಾವರ್ಕರ್‌ ಬೊಟ್ಟು ಮಾಡುತ್ತಾರೆ. ಯಾಕೆಂದರೆ, ಸಿಂಧೂ ಎಂಬ ಪದವು ಗಡಿಪ್ರದೇಶದಲ್ಲಿ ಆಗಲೂ ಚಾಲ್ತಿಯಲ್ಲಿತ್ತು. ಮಹಾಭಾರತದಲ್ಲಿ ಸಿಂಧೂಸೌವೀರರ ಕುರಿತು ಇರುವ ಚರ್ಚೆಯನ್ನು ಮತ್ತು ಸಿಂಧಿ ಎಂಬ ಹೆಸರನ್ನು ಉದಾಹರಣೆಯಾಗಿ ಸಾವರ್ಕರ್‌ ಎತ್ತಿ ತೋರಿಸುತ್ತಾರೆ. ಅದರ ಜೊತೆಗೆ ಪರ್ಷಿಯನ್ನರು, ಯಹೂದಿಗಳು ಮತ್ತು ಗ್ರೀಕರು ಬಳಸುತ್ತಿದ್ದದ್ದು ಸಿಂಧು/ಹಿಂದೂ ಎಂಬ ಸಂಜ್ಞೆಗಳನ್ನು. ಇಲ್ಲಿ ಬಹಳ ವರ್ಷಗಳ ಕಾಲ ಜೀವಿಸಿದ್ದ ಹ್ಯೂಯೆನ್‌ತ್ಸಾಂಗ್‌ ಕೂಡ ಷಿಂಧು/ಹಿಂದು ಎಂಬ ಹೆಸರನ್ನೇ ಬಳಸಿದ್ದ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಹಿಂದುಸ್ತಾನ್‌ ಎಂಬ ಹೆಸರೇ ಅತ್ಯಂತ ಸೂಕ್ತವೆಂದು ಸಾವರ್ಕರ್‌ ಸೂಚಿಸುತ್ತಾರೆ.

You cannot copy content of this page

Exit mobile version