ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು 2003 ರಲ್ಲಿ ಬಿಹಾರ ಎಸ್ಐಆರ್ ಅನ್ನು ಜುಲೈನಲ್ಲಿ ನಡೆಸಲಾಯಿತು ಎಂದು ಹೇಳಿದರೆ. ಆದರೆ ಆ ವರ್ಷ ಯಾವುದೇ ಚುನಾವಣೆಗಳು ನಡೆದಿಲ್ಲ ಎಂಬುದನ್ನು ಉಲ್ಲೇಖಿಸಲಿಲ್ಲ. ರಾಹುಲ್ ಗಾಂಧಿಯವರು 7 ದಿನಗಳಲ್ಲಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು ಮತ್ತು ಮತದಾರರ ಪಟ್ಟಿಯಲ್ಲಿ ಹಲವು ಬಾರಿ ಹೆಸರುಗಳು ಬಂದಿದ್ದರೆ, ಅದು ಮತ ಕಳ್ಳತನವನ್ನು ತೋರಿಸುವುದಿಲ್ಲ ಎಂದು ಹೇಳಿದರು - ಶ್ರಾವಸ್ತಿ ದಾಸಗುಪ್ತ, ದಿ ವೈರ್
“ಮತ ಕಳ್ಳತನ” ಆರೋಪ ಮತ್ತು ಬಿಹಾರದಲ್ಲಿ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ 65 ಲಕ್ಷ ಮತದಾರರನ್ನು ಕರಡು ಮತದಾರರ ಪಟ್ಟಿಯಿಂದ ಹೊರಗಿಡಲಾಗಿರುವ ವಿವಾದಾತ್ಮಕ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಕುರಿತು ವಿರೋಧ ಪಕ್ಷಗಳ ಟೀಕೆಗಳನ್ನು ಎದುರಿಸುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಮೊದಲ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಭಾನುವಾರ (ಆಗಸ್ಟ್ 17) ಮಾತನಾಡಿದರು.
2024 ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳು ಕಳ್ಳತನವಾಗಿವೆ ಎಂಬ ಆರೋಪದ ಮೇಲೆ ಚುನಾವಣಾ ಆಯೋಗವು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಂದ ಪ್ರಮಾಣವಚನದಡಿಯಲ್ಲಿ (oath) ಅಫಿಡವಿಟ್ ಕೇಳುತ್ತಿದೆಯೇ ಎಂಬ ಪ್ರಶ್ನೆಗೆ ಇಡೀ ಪತ್ರಿಕಾಗೋಷ್ಠಿಯಲ್ಲಿ ಜ್ಞಾನೇಶ್ ಕುಮಾರ್ ಯಾವುದೇ ಉತ್ತರವನ್ನು ನೀಡಲಿಲ್ಲ. ಆದರೆ ರಾಯ್ ಬರೇಲಿ, ವಯನಾಡ್, ಡೈಮಂಡ್ ಹಾರ್ಬರ್ ಮತ್ತು ಕನ್ನೌಜ್‌ನಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಆರೋಪಿಸಿದಾಗ, ಅವರಿಂದ ಚುನಾವಣಾ ಆಯೋಗ ಯಾವುದೇ ಅಫಿಡವಿಟ್ ಕೇಳಿರಲಿಲ್ಲ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಅಭಿಷೇಕ್ ಬ್ಯಾನರ್ಜಿ ಮತ್ತು ಅಖಿಲೇಶ್ ಯಾದವ್ ಅವರು ಲೋಕಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಅನುರಾಗ್ ಠಾಕೂರ್ ಒತ್ತಾಯಿಸಿದರು.
ಬಿಹಾರದಲ್ಲಿ ಎಷ್ಟು ಗಣತಿ ನಮೂನೆಗಳನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಲಾಗಿದೆ ಮತ್ತು ಎಸ್‌ಐಆರ್ ಸಮಯದಲ್ಲಿ ಎಷ್ಟು ವಿದೇಶಿ ದಾಖಲೆರಹಿತ ವಲಸಿಗರು ಕಂಡುಬಂದಿದ್ದಾರೆ ಎಂಬ ಪ್ರಶ್ನೆಗಳಿಗೆ ಹಾಗೂ ರಾಜ್ಯದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ಜಾರಿಗೆ ತರಲು ಈ ಪ್ರಕ್ರಿಯೆಯನ್ನು ಬಳಸಲಾಗುತ್ತಿದೆಯೇ ಎಂಬ ಆರೋಪಗಳಿಗೆ ಕೂಡ ಜ್ಞಾನೇಶ್ ಕುಮಾರ್ ಯಾವುದೇ ಉತ್ತರಗಳನ್ನು ನೀಡಲಿಲ್ಲ.
ವಿಧಾನಸಭಾ ಚುನಾವಣೆಗಳು ಹತ್ತಿರದಲ್ಲಿರುವಾಗ ಮತ್ತು ಅದು ಕೂಡ ಪ್ರವಾಹದ ಸಮಯದಲ್ಲಿ ಎಸ್‌ಐಆರ್ ಅನ್ನು ಏಕೆ ನಡೆಸಲಾಗುತ್ತಿದೆ ಎಂಬ ಪ್ರಶ್ನೆಗೆ ಕುಮಾರ್ ಉತ್ತರಿಸುತ್ತಾ, 2003 ರಲ್ಲಿ ನಡೆದ ಕೊನೆಯ ಪುನರಾವರ್ತನೆಯು (Iteration) ಜುಲೈನಲ್ಲಿ ನಡೆಯಿತು ಎಂದು ಹೇಳಿದರು, ಆದರೆ ವಿಧಾನಸಭಾ ಚುನಾವಣೆಗಳು ಅಕ್ಟೋಬರ್ 2005 ರವರೆಗೆ ಇರಲಿಲ್ಲ ಎಂದು ಉಲ್ಲೇಖಿಸುವುದನ್ನು ಮರೆತಂತಿತ್ತು.
ಬದಲಾಗಿ, ಜ್ಞಾನೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಬಹಳ ಅಳೆದು ತೂಗಿ ತಮ್ಮ ಉತ್ತರಗಳನ್ನು ನೀಡುತ್ತಿದ್ದರು. ಮನೆ ಸಂಖ್ಯೆಗಳನ್ನು 0 (ಸೊನ್ನೆ) ಎಂದು ಉಲ್ಲೇಖಿಸಲಾಗಿರುವ ಮತದಾರರ ಹೆಸರುಗಳನ್ನು ಬಡವರ ಬಗ್ಗೆ ಮಾಡುವ ತಮಾಷೆ ಎಂದು ಬಿಂಬಿಸಲುಪ್ರಯತ್ನಿಸಿದರು ಮತ್ತು ಮತದಾರರ ಹೆಸರು ಹಲವು ಬಾರಿ ಕಾಣಿಸಿಕೊಳ್ಳುವುದು ಮತ ಕಳ್ಳತನವನ್ನು ತೋರಿಸುವುದಿಲ್ಲ ಅಥವಾ ಅವರು ಒಂದಕ್ಕಿಂತ ಹೆಚ್ಚು ಬಾರಿ ಮತ ಚಲಾಯಿಸಿದ್ದಾರೆ ಎಂದು ಅರ್ಥವಲ್ಲ ಎಂದು ವಾದಿಸಿದರು.
ಜ್ಞಾನೇಶ್ ಕುಮಾರ್ ರಾಹುಲ್ ಗಾಂಧಿಯವರಿಗೆ ಒಂದು ಅಲ್ಟಿಮೇಟಮ್ ಸಹ ಹೊರಡಿಸಿದರು, ಏಳು ದಿನಗಳಲ್ಲಿ ಪ್ರಮಾಣವಚನದಡಿ ಅಫಿಡವಿಟ್ ಸಲ್ಲಿಸಬೇಕು ಅಥವಾ ರಾಷ್ಟ್ರದ ಕ್ಷಮೆಯಾಚಿಸಿ ಎಂದು ಹೇಳಿದರು.
ಚುನಾವಣಾ ಆಯೋಗದ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸದ ಏಳು ಅಂಶಗಳ ಬಗ್ಗೆ ಒಂದು ಒಳನೋಟವನ್ನು ಇಲ್ಲಿ ನೀಡಲಾಗಿದೆ.
ಚುನಾವಣಾ ಆಯೋಗವು ರಾಹುಲ್ ಗಾಂಧಿಯವರಿಂದ ಅಫಿಡವಿಟ್ ಕೇಳಿದೆಯೇ ಹೊರತು, ಅಂತಹದೇ ಆರೋಪಗಳನ್ನು ಮಾಡಿರುವ ಬಿಜೆಪಿಯಿಂದ ಕೇಳಿಲ್ಲ.
ಜ್ಞಾನೇಶ್ ಕುಮಾರ್ ತಮ್ಮ ಪತ್ರಿಕಾಗೋಷ್ಠಿಯನ್ನು ಆರಂಭಿಸುತ್ತಲೇ, ಚುನಾವಣಾ ಆಯೋಗಕ್ಕೆ “ಪಕ್ಷ ಅಥವಾ ವಿಪಕ್ಷ ” (ಆಡಳಿತ ಪಕ್ಷ ಅಥವಾ ವಿರೋಧ ಪಕ್ಷ) ಎಂಬುದು ಇಲ್ಲ ಎಂದು ಹೇಳಿದರು.
“ಚುನಾವಣಾ ಆಯೋಗಕ್ಕೆ ಆಡಳಿತ ಪಕ್ಷಗಳು ಅಥವಾ ವಿರೋಧ ಪಕ್ಷಗಳು ಇಲ್ಲ; ಎಲ್ಲರೂ ಸಮಾನರು. ಯಾವುದೇ ರಾಜಕೀಯ ಪಕ್ಷದಿಂದ ಯಾರೇ ಬಂದರೂ, ಆಯೋಗ ತನ್ನ ಸಾಂವಿಧಾನಿಕ ಕರ್ತವ್ಯಗಳನ್ನು ಮಾಡದೇ ಇರುವುದಿಲ್ಲ” ಎಂದು ಅವರು ಹೇಳಿದರು.
ಹಾಗಿದ್ದೂ, ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಮಾಡಿರುವ ಆರೋಪಗಳು “ಆಧಾರರಹಿತ” ಎಂದು ಜ್ಞಾನೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿ, ಅವರಿಂದ ಅಫಿಡವಿಟ್ ಕೂಡ ಕೇಳಿದರು.
“ಒಬ್ಬ ಮತದಾರನ ವಿರುದ್ಧ ದೂರು ಬಂದರೆ, ಚುನಾವಣಾ ಆಯೋಗ ಅದನ್ನು ಪರಿಶೀಲಿಸುತ್ತದೆ. ಆದರೆ ಸುಮಾರು 1.5 ಲಕ್ಷ ಮತದಾರರ ಬಗ್ಗೆ ಮೇಲೆ ಆರೋಪಗಳು ಬಂದಿವೆ, ಯಾವುದೇ ಪುರಾವೆ ಅಥವಾ ಅಫಿಡವಿಟ್ ಇಲ್ಲದೆ 1.5 ಲಕ್ಷ ಮತದಾರರಿಗೆ ನಾವು ನೋಟಿಸ್ ಕಳುಹಿಸಬೇಕೇ? ಇದು ಕಾನೂನುಬದ್ಧವಾಗುತ್ತದೆಯೇ? ಕಾನೂನಿನಲ್ಲಿ ಅಥವಾ ಅಫಿಡವಿಟ್‌ನಲ್ಲಿ ಯಾವುದೇ ಪುರಾವೆಗಳಿಲ್ಲ. ನಾವು 1.5 ಲಕ್ಷ ಮತದಾರರನ್ನು ಎಸ್‌ಡಿಎಂ [ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್] ಕಚೇರಿಗೆ ಕರೆದು ಅವರು ನಕಲಿ ಮತದಾರರು ಎಂದು ಹೇಳಬೇಕೇ? ಮತದಾರರು ಪುರಾವೆ ಕೇಳುವುದಿಲ್ಲವೇ? ಯಾವುದೇ ಪುರಾವೆ ಇಲ್ಲದೆ, ಮತದಾರರ ಹೆಸರುಗಳನ್ನು ತೆಗೆದುಹಾಕಲು ಸಾಧ್ಯವಿಲ್ಲ,” ಎಂದು ಕುಮಾರ್ ಹೇಳಿದರು.
“ಪ್ರತಿಯೊಬ್ಬ ಮತದಾರರೊಂದಿಗೆ ಚುನಾವಣಾ ಆಯೋಗವು ಗುರಾಣಿಯಂತೆ ನಿಂತಿದೆ. ತಪ್ಪು ವಿಶ್ಲೇಷಣೆ ಮತ್ತು ಅಂಕಿ-ಅಂಶಗಳೊಂದಿಗೆ ಪಿಪಿಟಿ ನೀಡುವ ಮೂಲಕ ಮತ್ತು ‘ಈ ಮಹಿಳೆ ಎರಡು ಬಾರಿ ಮತ ಚಲಾಯಿಸಿದ್ದಾರೆ’ ಎಂದು ಹೇಳುವ ಮೂಲಕ ಚುನಾವಣಾ ಆಯೋಗವು ಇದಕ್ಕೆ ಪ್ರತಿಕ್ರಿಯಿಸುತ್ತದೆ ಎಂದು ಯಾರಾದರೂ ಭಾವಿಸಿದರೆ, ಇಂತಹ ಗಂಭೀರ ಆರೋಪಗಳ ವಿಷಯದಲ್ಲಿ ಅಫಿಡವಿಟ್ ಇಲ್ಲದೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ, ಅದು ಕಾನೂನು ಮತ್ತು ಸಂವಿಧಾನಕ್ಕೆ ವಿರುದ್ಧವಾಗಿರುತ್ತದೆ,” ಎಂದು ಆಯುಕ್ತರು ಹೇಳಿದರು.
ಆಗಸ್ಟ್ 7 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ, ಬಿಜೆಪಿ ಮತ್ತು ಚುನಾವಣಾ ಆಯೋಗದ ನಡುವೆ “ಒಂದು ಸಂಬಂಧವಿದೆ” ಇದೆ ಎಂದು ಆರೋಪಿಸಿದ್ದರು ಮತ್ತು ಮಹದೇವಪುರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳು ಕಳ್ಳತನವಾಗಿವೆ ಎಂದು ಹೇಳಲು ಚುನಾವಣಾ ಆಯೋಗದ ಮತದಾರರ ಪಟ್ಟಿಯನ್ನು ಪುರಾವೆಯಾಗಿ ತೋರಿಸಿದ್ದರು.
ಲೋಕಸಭಾ ಸದಸ್ಯರಾದ ಗಾಂಧಿ (ರಾಯ್ ಬರೇಲಿ), ವಾದ್ರಾ (ವಯನಾಡು), ಯಾದವ್ (ಕನ್ನೌಜ್) ಮತ್ತು ಬ್ಯಾನರ್ಜಿ (ಡೈಮಂಡ್ ಹಾರ್ಬರ್) ವಿರುದ್ಧದ ಬಿಜೆಪಿ ಸಂಸದ ಠಾಕೂರ್ ಅರೋಪಗಳನ್ನು ಮಾಡಿದ್ದರು, ಆದರೆ ಅವರಿಂದ ಚುನಾವಣಾ ಆಯೋಗ ಏಕೆ ಅಫಿಡವಿಟ್ ಕೇಳುತ್ತಿಲ್ಲ ಎಂದು ವರದಿಗಾರರು ಕುಮಾರ್ ಅವರನ್ನು ಕೇಳಿದರು.
ನಿಯಮ 20(3)(b) ರ ಉಲ್ಲೇಖ
ರಾಹುಲ್ ಗಾಂಧಿಯವರ ಹೆಸರನ್ನು ಉಲ್ಲೇಖಿಸದೆ, ಅವರಿಂದ ಅಫಿಡವಿಟ್ ಕೋರುವಾಗ, ಜ್ಞಾನೇಶ್ ಕುಮಾರ್, 1960 ರ ಮತದಾರರ ನೋಂದಣಿ ನಿಯಮಗಳ ನಿಯಮ 20(3)(ಬಿ) ಮೇಲೆ ತಮ್ಮ ವಾದವನ್ನು ಕೇಂದ್ರೀಕರಿಸಿದರು.
“ನೀವು ಆ ಕ್ಷೇತ್ರದ ಮತದಾರರಾಗಿದ್ದರೆ, ನೀವು ನಿಗದಿತ ಸಮಯದೊಳಗೆ ಬೂತ್ ಮಟ್ಟದ ಅಧಿಕಾರಿಗಳ ಮೂಲಕ ಫಾರ್ಮ್ 6, 7 ಮತ್ತು 8 ಅನ್ನು ಭರ್ತಿ ಮಾಡಬಹುದು. ಆದರೆ ನೀವು ಆ ಕ್ಷೇತ್ರದ ಮತದಾರರಲ್ಲದಿದ್ದರೆ, ಕಾನೂನಿನಡಿಯಲ್ಲಿ ನಿಮಗೆ ಒಂದೇ ಒಂದು ಪರಿಹಾರವಿದೆ, ಅದು ನಿಯಮ 20(3)(b).”
“ನೀವು ಆ ಕ್ಷೇತ್ರದ ಮತದಾರರಲ್ಲದಿದ್ದರೆ, ನೀವು ಸಾಕ್ಷಿಯಾಗಿ ನಿಮ್ಮ ದೂರನ್ನು ಸಲ್ಲಿಸಬಹುದು ಎಂಬುದು ಇದರ ಅರ್ಥ. ನೀವು ಚುನಾವಣಾ ನೋಂದಣಿ ಅಧಿಕಾರಿಗೆ ಪ್ರಮಾಣ ವಚನ ಸ್ವೀಕರಿಸಬೇಕು ಮತ್ತು ನೀವು ದೂರು ನೀಡಿದ ವ್ಯಕ್ತಿಯ ಮುಂದೆ ಆ ಪ್ರಮಾಣ ವಚನ ಸ್ವೀಕರಿಸಬೇಕು.”
ಚುನಾವಣಾ ಆಯೋಗದ ಪರಿಷ್ಕರಣಾ ಪ್ರಕ್ರಿಯೆಯ ನಂತರ ಕರಡು ಪಟ್ಟಿಗಳನ್ನು ಸಿದ್ಧಪಡಿಸಿದ ನಂತರ ಎತ್ತಲಾದ ಪ್ರಶ್ನೆಗಳು ಮತ್ತು ಆಕ್ಷೇಪಣೆಗಳಿಗೆ ನಿಯಮ 20(3)(ಬಿ) ಅನ್ವಯಿಸುತ್ತದೆ ಎಂದು ದಿ ವೈರ್ ಈ ಹಿಂದೆ ವರದಿ ಮಾಡಿತ್ತು .
2024 ರ ಲೋಕಸಭಾ ಚುನಾವಣೆಯಲ್ಲಿ ಮಹದೇವಪುರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಮಾಡಿರುವ ಆರೋಪಗಳು ನಿಯಮ 20(3)(b) ದ ವ್ಯಾಪ್ತಿಗೆ ಬರುವುದಿಲ್ಲ, ಏಕೆಂದರೆ ಚುನಾವಣೆ ನಡೆದು ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ ಎಂದು ತಜ್ಞರು ಹೇಳಿದ್ದಾರೆ.
ಪರಿಷ್ಕರಣೆಯ ನಂತರ ಕರಡು ಪಟ್ಟಿಗಳನ್ನು ಸಿದ್ಧಪಡಿಸಿದ ನಂತರ ಎತ್ತಲಾದ ಪ್ರಶ್ನೆಗಳು ಮತ್ತು ಆಕ್ಷೇಪಣೆಗಳಿಗೆ ನಿಯಮ 20(3)(b) ಅನ್ವಯಿಸುತ್ತದೆ ಎಂದು ಕುಮಾರ್ ಉಲ್ಲೇಖಿಸಲಿಲ್ಲ. ಬದಲಾಗಿ, ರಾಹುಲ್ ಗಾಂಧಿಯವರ ಆರೋಪಗಳನ್ನು ಉಲ್ಲೇಖಿಸಿ 45 ದಿನಗಳಲ್ಲಿ ತಾವು ಕಂಡಿರುವ ದೋಷಗಳನ್ನು ಸಲ್ಲಿಸಬೇಕು, ಇಲ್ಲದಿದ್ದರೆ ಅದು “ಸಾರ್ವಜನಿಕರ ಹಾದಿ ತಪ್ಪಿಸಿದಂತೆ” ಎಂದು ಅವರು ಹೇಳಿದರು.
“ನೀವು ನಿಗದಿತ 45 ದಿನಗಳ ಒಳಗೆ ಮತದಾರರ ಪಟ್ಟಿಯಲ್ಲಿರುವ ದೋಷಗಳ ವಿರುದ್ಧ ದೂರು ನೀಡದಿದ್ದರೆ, ಮತ್ತು ನಂತರ ʼಓಟ್ ಚೋರಿ [ಮತ ಕಳ್ಳತನ]ʼ ನಂತಹ ತಪ್ಪು ಪದಗಳನ್ನು ಬಳಸಿದರೆ , ಅದು ಸಾರ್ವಜನಿಕರನ್ನು ದಾರಿ ತಪ್ಪಿಸುವ ಒಂದು ಮಾರ್ಗವಲ್ಲವೇ? ಇದು ಭಾರತದ ಸಂವಿಧಾನದ ಬಗ್ಗೆ ಅಗೌರವವನ್ನು ತೋರಿಸುತ್ತದೆ. ಅಲ್ಲದಿದ್ದರೆ ಮತ್ತೆ ಏನು?” ಅವರು ಹೇಳಿದರು.
ಜ್ಞಾನೇಶ್ ಕುಮಾರ್ ಏಳು ದಿನಗಳಲ್ಲಿ ಗಾಂಧಿಯವರಿಂದ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.
“ದೇಶಕ್ಕೆ ಪ್ರಮಾಣ ವಚನ ನೀಡಿ ಅಥವಾ ಕ್ಷಮೆಯಾಚಿಸಿ. ಮೂರನೇ ಆಯ್ಕೆ ಇಲ್ಲ. ಏಳು ದಿನಗಳಲ್ಲಿ ನಮಗೆ ಅವರಿಂದ ಅಫಿಡವಿಟ್ ಸಿಗದಿದ್ದರೆ, ಈ ಎಲ್ಲಾ ಆರೋಪಗಳು ಆಧಾರರಹಿತವಾಗಿವೆ ಮತ್ತು ‘ನಮ್ಮ ಮತದಾರರು ವಂಚಕರು’ ಎಂದು ಹೇಳುತ್ತಿರುವ ಆ ವ್ಯಕ್ತಿ ಕ್ಷಮೆಯಾಚಿಸಬೇಕು ಎಂದರ್ಥ.”
ಚುನಾವಣೆಗೆ ತುಂಬಾ ಹತ್ತಿರವಿರುವಾಗ ಮತ್ತು ಬಿಹಾರವು ಮಾನ್ಸೂನ್ ಪ್ರೇರಿತ ಪ್ರವಾಹವನ್ನು ಕಾಣುವ ಸಮಯದಲ್ಲಿ – ಬಿಹಾರದಲ್ಲಿ ಎಸ್‌ಐಆರ್‌ನ ಸಮಯದ ಕುರಿತು ಪ್ರಶ್ನೆಗಳಿಗೆ ಕುಮಾರ್ ಉತ್ತರಿಸಲು ಪ್ರಯತ್ನಿಸಿದರು ಮತ್ತು ಈ ಪ್ರಕ್ರಿಯೆಯನ್ನು ಕೊನೆಯ ಬಾರಿಗೆ 2003 ರ ಜುಲೈನಲ್ಲಿ ನಡೆಸಲಾಗಿತ್ತು ಎಂದು ಹೇಳಿದರು.
“ಹವಾಮಾನ ಚೆನ್ನಾಗಿಲ್ಲದಿದ್ದಾಗ ಜುಲೈನಲ್ಲಿ ಏಕೆ ಮಾಡಬೇಕು ಎಂಬ ಪ್ರಶ್ನೆ ಬಂದಿದೆ. ಬಿಹಾರದಲ್ಲಿ 2003 ರಲ್ಲಿ ಎಸ್‌ಐಆರ್ ನಡೆಸಿದಾಗ, ಅದನ್ನು ಜುಲೈ 14 ರಿಂದ ಆಗಸ್ಟ್ 14 ರವರೆಗೆ ಮಾಡಲಾಗಿತ್ತು ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ. ಹಾಗಿದ್ದೂ ಇದನ್ನು ಯಶಸ್ವಿಯಾಗಿ ಮಾಡಲಾಯಿತು, ಈಗ ಕೂಡ ಎಲ್ಲಾ ಎಣಿಕೆ ನಮೂನೆಗಳನ್ನು ಸಂಗ್ರಹಿಸಲಾಗಿದೆ, ”ಎಂದು ಕುಮಾರ್ ಹೇಳಿದರು.
ಹಾಗಿದ್ದೂ, ಬಿಹಾರದಲ್ಲಿ 2003 ರಲ್ಲಿ ಯಾವುದೇ ವಿಧಾನಸಭಾ ಚುನಾವಣೆಗಳು ನಡೆದಿರಲಿಲ್ಲ ಎಂಬುದನ್ನು ಅವರು ಉಲ್ಲೇಖಿಸಲಿಲ್ಲ .
ಮಾರ್ಚ್ 2000 ರಲ್ಲಿ, ಜನತಾದಳ (ಸಂಯುಕ್ತ)ದ ಈಗಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ಒಂದು ದಿನ ಮೊದಲು ರಾಜೀನಾಮೆ ನೀಡಿದರು ಮತ್ತು ರಾಷ್ಟ್ರೀಯ ಜನತಾದಳದ ರಾಬ್ರಿ ದೇವಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರು 2005 ರಲ್ಲಿ ನಡೆದ ವಿಧಾನಸಭಾ ಚುನಾವಣೆಯವರೆಗೂ ಅಧಿಕಾರದಲ್ಲಿ ಮುಂದುವರೆದರು.
2003 ರ SIR ನಡೆಸಲು ನೀಡಿದ ಆದೇಶವು ಇನ್ನೂ ಲಭ್ಯವಿಲ್ಲ ಮತ್ತು ಆ ವರ್ಷದ ಸಂಪೂರ್ಣ ಅವಧಿಯ ಉಲ್ಲೇಖಕ್ಕಾಗಿ ಅದನ್ನು ಪರಿಶೀಲಿಸಲಾಗುವುದಿಲ್ಲ ಎಂದು ದಿ ವೈರ್ ವರದಿ ಮಾಡಿದೆ , ಆದರೆ 2005 ರಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುವುದಕ್ಕೆ ಬಹಳ ಹಿಂದೆಯೇ SIR ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಸ್ಪಷ್ಟವಾಗುತ್ತದೆ.
2004 ರಲ್ಲಿ ಹೊರಡಿಸಲಾದ ತೀವ್ರ ಪರಿಷ್ಕರಣಾ ಆದೇಶದ ಕುರಿತಾದ ಪ್ರಶ್ನೆಗಳಿಗೆ ಕುಮಾರ್ ಉತ್ತರಿಸಲಿಲ್ಲ, ಆ ಆದೇಶದಲ್ಲಿ ಚುನಾವಣಾ ಆಯೋಗವು ಅರುಣಾಚಲ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಆ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ ಮತ್ತು ಆದ್ದರಿಂದ ಈ ರಾಜ್ಯಗಳಲ್ಲಿ ಚುನಾವಣೆಯ ನಂತರ ಪರಿಷ್ಕರಣೆ ನಡೆಯಲಿದೆ ಎಂದು ಹೇಳಿತ್ತು. ಆ ಆದೇಶದ ಪ್ರತಿಯನ್ನು ದಿ ವೈರ್ ಪರಿಶೀಲಿಸಿದೆ.
ಪ್ರತಿ ಚುನಾವಣೆಗೂ ಮುನ್ನ ಪರಿಷ್ಕರಣಾ ಕಾರ್ಯವನ್ನು ಕೈಗೊಳ್ಳಬೇಕು ಎಂದು ಕಾನೂನು ಹೇಳುತ್ತದೆ ಎಂದು ಚುನಾವಣಾ ಮುಖ್ಯಸ್ಥರು ಹೇಳಿದರು. ಈ ವರ್ಷದ ಜನವರಿಯಲ್ಲಿ ಬಿಹಾರದಲ್ಲಿ ಸಾರಾಂಶ ಪರಿಷ್ಕರಣೆಯನ್ನು ನಡೆಸಲಾಗಿದ್ದರೂ, ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಗಳಿಗೆ ಅದು ಸಾಕಾಗುವುದಿಲ್ಲ, ಆದ್ದರಿಂದ ಜುಲೈ ಅನ್ನು ಅರ್ಹತಾ ದಿನಾಂಕವೆಂದು ನಿರ್ಧರಿಸಲಾಯಿತು ಎಂದು ಅವರು ಹೇಳಿದರು.
ಅಕ್ರಮ ವಲಸಿಗರ ಬಗ್ಗೆ ಯಾವುದೇ ಉತ್ತರಗಳಿಲ್ಲ
ಜೂನ್ 24 ರಂದು ಬಿಹಾರದಲ್ಲಿ SIR ಅನ್ನು ಘೋಷಿಸುವಾಗ, ಚುನಾವಣಾ ಆಯೋಗವು ವಿವಿಧ ಕಾರಣಗಳಿಗಾಗಿ ಇದನ್ನು ನಡೆಸುವುದು ಅಗತ್ಯ ಎಂದು ಹೇಳಿದೆ, ಅವುಗಳಲ್ಲಿ “ವಿದೇಶಿ ಅಕ್ರಮ ವಲಸಿಗರೂ” ಮತದಾರರ ಪಟ್ಟಿಯಲ್ಲಿ ಸೇರಿರುವುದು ಸೇರಿದೆ.
ನೇಪಾಳ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಿಂದ ಬಂದ ಅನಿರ್ದಿಷ್ಟ ಸಂಖ್ಯೆಯ ಅಕ್ರಮ ವಲಸಿಗರು ಪಟ್ಟಿಯಲ್ಲಿ ಕಂಡುಬಂದಿದ್ದಾರೆ ಎಂದು ಚುನಾವಣಾ ಆಯೋಗವು ಈ ಹಿಂದೆ ಕೆಲವು ಮಾಧ್ಯಮಗಳಿಗೆ “ಮೂಲಗಳ” ಮೂಲಕ ತಿಳಿಸಿತ್ತು .
ಪತ್ರಿಕಾಗೋಷ್ಠಿಯಲ್ಲಿ ದಾಖಲೆರಹಿತ ವಲಸಿಗರ ಸಂಖ್ಯೆಯ ಬಗ್ಗೆ ಪ್ರಶ್ನೆಯನ್ನು ಕೇಳಿದಾಗ, ಜ್ಞಾನೇಶ್ ಕುಮಾರ್ ಯಾವುದೇ ಅಂಕಿ ಅಂಶವನ್ನು ಒದಗಿಸಲಿಲ್ಲ.
“ಭಾರತದ ಸಂವಿಧಾನದ ಪ್ರಕಾರ, ಭಾರತೀಯ ನಾಗರಿಕರು ಮಾತ್ರ ಸಂಸದರು ಮತ್ತು ಶಾಸಕರ ಚುನಾವಣೆಗಳಿಗೆ ಮತ ಚಲಾಯಿಸಬಹುದು ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಇತರ ದೇಶಗಳ ಜನರಿಗೆ ಆ ಹಕ್ಕಿಲ್ಲ. ಅಂತಹ ಜನರು ಗಣತಿ ನಮೂನೆಯನ್ನು ಭರ್ತಿ ಮಾಡಿದ್ದರೆ, SIR ಪ್ರಕ್ರಿಯೆಯ ಸಮಯದಲ್ಲಿ ಅವರು ಕೆಲವು ದಾಖಲೆಗಳನ್ನು ಸಲ್ಲಿಸುವ ಮೂಲಕ ತಮ್ಮ ರಾಷ್ಟ್ರೀಯತೆಯನ್ನು ಸಾಬೀತುಪಡಿಸಬೇಕಾಗುತ್ತದೆ, ಇವುಗಳನ್ನು ಸೆಪ್ಟೆಂಬರ್ 30 ರವರೆಗೆ ಪರಿಶೀಲಿಸಲಾಗುತ್ತಿದೆ. ಭಾರತೀಯ ನಾಗರಿಕರಲ್ಲದವರನ್ನು ಕಂಡುಹಿಡಿಯಲಾಗುತ್ತದೆ ಮತ್ತು ಅವರನ್ನು ಮತದಾರರಾಗಿ ಸೇರಿಸಲಾಗುವುದಿಲ್ಲ,” ಎಂದು ಅವರು ಹೇಳಿದರು.
ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ಜಾರಿಗೆ ತರಲು SIR ಪ್ರಕ್ರಿಯೆಯನ್ನು ಬಳಸಲಾಗುತ್ತಿದೆಯೇ ಎಂಬುದಕ್ಕೆ ಅವರು ಯಾವುದೇ ಉತ್ತರಗಳನ್ನು ನೀಡಲಿಲ್ಲ.
ಪರಿಶೀಲನಾ ದಾಖಲೆಗಳೊಂದಿಗೆ ಸ್ವೀಕರಿಸಲಾದ ಗಣತಿ ನಮೂನೆಗಳ ಸಂಖ್ಯೆಯ ಬಗ್ಗೆ ಸ್ಪಷ್ಟ ಉತ್ತರವಿಲ್ಲ
ಜುಲೈ 25 ರಂದು ಗಣತಿ ನಮೂನೆಗಳನ್ನು ಸಂಗ್ರಹಿಸಲು ಮೀಸಲಾಗಿರುವ SIR ಹಂತದ ಕೊನೆಯಲ್ಲಿ, 99.8% ನಮೂನೆಗಳನ್ನು ಮತದಾರರಿಂದ ಸಂಗ್ರಹಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಈ ಪ್ರಕ್ರಿಯೆಯಲ್ಲಿ ಪ್ರಮುಖ ವಿವಾದಾತ್ಮಕ ಅಂಶವೆಂದರೆ ಆಯೋಗವು ಮತದಾರರಿಂದ ಅವರ ಅರ್ಹತೆಯ ಪುರಾವೆಯಾಗಿ ಕೇಳುತ್ತಿರುವ 11 ದಾಖಲೆಗಳ ಪಟ್ಟಿ. ಅರ್ಹ ದಾಖಲೆಗಳೊಂದಿಗೆ ಎಷ್ಟು ಫಾರ್ಮ್‌ಗಳನ್ನು ಸ್ವೀಕರಿಸಲಾಗಿದೆ ಅಥವಾ ಬೂತ್ ಮಟ್ಟದ ಅಧಿಕಾರಿಗಳು ‘ಶಿಫಾರಸು ಮಾಡಿದ್ದಾರೆ’ ಮತ್ತು ‘ಶಿಫಾರಸು ಮಾಡಿಲ್ಲ’ ಎಂಬ ಮತದಾರರ ನಡುವೆ ಈಗ ವ್ಯತ್ಯಾಸ ಏಕೆ ಇದೆ ಎಂಬುದರ ಕುರಿತು ಕುಮಾರ್ ಯಾವುದೇ ಸ್ಪಷ್ಟ ಉತ್ತರಗಳನ್ನು ನೀಡಿಲ್ಲ.
“ಬಿಹಾರದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ, ಎಷ್ಟು ಜನರನ್ನು ಸ್ವೀಕರಿಸಲಾಗಿದೆ, ಎಷ್ಟು ಜನರನ್ನು ಶಿಫಾರಸು ಮಾಡಲಾಗಿದೆ ಮತ್ತು ಪ್ರತಿಯೊಬ್ಬ ಬೂತ್ ಮಟ್ಟದ ಅಧಿಕಾರಿ ಏನು ಶಿಫಾರಸು ಮಾಡಿದ್ದಾರೆ ಎಂಬುದರ ದಾಖಲೆಗಳು – ಈ ಡೇಟಾವನ್ನು ಸಂಗ್ರಹಿಸುವ ಪ್ರಯತ್ನ ನಡೆಯುತ್ತಿದೆ. ಚುನಾವಣಾ ಆಯೋಗವು ಬಹು ಹಂತದಲ್ಲಿ ಈ ಕೆಲಸ ಮಾಡುತ್ತಿದೆ” ಎಂದು ಕುಮಾರ್ ಹೇಳಿದರು.
“ಮೊದಲು ಬೂತ್ ಮಟ್ಟದ ಅಧಿಕಾರಿ, ನಂತರ ಬೂತ್ ಮಟ್ಟದ ಮೇಲ್ವಿಚಾರಕ, ನಂತರ SDM, ನಂತರ DM ಮತ್ತು ನಂತರ ಮುಖ್ಯ ಚುನಾವಣಾ ಅಧಿಕಾರಿ ಇರುತ್ತಾರೆ. ಕಾನೂನು ಪ್ರಕ್ರಿಯೆಯನ್ನು ಅನುಸರಿಸದೆ ಚುನಾವಣಾ ಆಯೋಗ ಅಥವಾ ಬೇರೆ ಯಾರೂ ಯಾವುದೇ ಮತವನ್ನು ಸೇರಿಸಲು ಸಾಧ್ಯವಿಲ್ಲ. ಈ ವಿಕೇಂದ್ರೀಕೃತ ರಚನೆಯ ಅಡಿಯಲ್ಲಿ, ಎಷ್ಟು ದಾಖಲೆಗಳನ್ನು ತೆಗೆದುಕೊಳ್ಳಲಾಗಿದೆಯೋ ಇಲ್ಲವೋ, ಇನ್ನೂ SDM ಮಟ್ಟದಲ್ಲಿ ನಡೆಯುತ್ತಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಇದು ಇನ್ನೂ ಹೊರಬರಬೇಕಿದೆ, ಅದಕ್ಕೂ ಮುಂಚಿತವಾಗಿ ಏನನ್ನೂ ಹೇಳುವುದು ಸರಿಯಲ್ಲ,” ಎಂದು ಅವರು ಹೇಳಿದರು.
ಮನೆ ನಂಬರ್ – 0
ಬಿಹಾರದ ಮತದಾರರ ಪಟ್ಟಿಯಲ್ಲಿ ಹಲವಾರು ಮತದಾರರ ಮನೆ ಸಂಖ್ಯೆಗಳು 0 ಎಂದು ದಾಖಲಾಗಿವೆ ಎಂದು ವರದಿಗಳು ಹೊರಬಿದ್ದಿವೆ, ಆದರೆ ಅದನ್ನು ಪ್ರಶ್ನಿಸುವುದು ಬಡ ಮತದಾರರನ್ನು ತಮಾಷೆ ಮಾಡಿದಂತೆ ಎಂದು ಜ್ಞಾನೇಶ್ ಕುಮಾರ್ ಹೇಳಿದರು.
“ಹಲವರಿಗೆ ಮನೆ ಇಲ್ಲ, ಆದರೆ ಮತದಾರರ ಪಟ್ಟಿಯಲ್ಲಿ ಅವರ ಹೆಸರುಗಳಿವೆ. ಹಾಗಾದರೆ ಅವರ ವಿಳಾಸ ಏನು? ಅವರು ರಾತ್ರಿ ಮಲಗಲು ಹೋಗುವ ಸ್ಥಳವೇ ವಿಳಾಸ; ಕೆಲವೊಮ್ಮೆ ರಸ್ತೆಯ ಬದಿಯಲ್ಲಿ, ಕೆಲವೊಮ್ಮೆ ಸೇತುವೆಯ ಕೆಳಗೆ, ಕೆಲವೊಮ್ಮೆ ದೀಪದ ಕಂಬದ ಪಕ್ಕದಲ್ಲಿ. ಅವರನ್ನು ನಕಲಿ ಮತದಾರರು ಎಂದು ಹೇಳಿದರೆ, ಅದು ನಮ್ಮ ಬಡ ಮತದಾರರು, ಸಹೋದರಿಯರು, ಸಹೋದರರು ಮತ್ತು ಹಿರಿಯರ ಬಗ್ಗೆ ದೊಡ್ಡ ವ್ಯಂಗ್ಯ ಮಾಡಿದಂತೆ,” ಎಂದು ಅವರು ಹೇಳಿದರು.
ಕೋಟ್ಯಂತರ” ಜನರ ವಿಳಾಸಗಳ ಮನೆ ನಂಬರ್ 0, ಏಕೆಂದರೆ ಅವರ ಪಂಚಾಯತ್‌ಗಳು ಅಥವಾ ಪುರಸಭೆಗಳು ಅವರ ಮನೆಗಳಿಗೆ ಸಂಖ್ಯೆಗಳನ್ನು ನೀಡಿಲ್ಲ ಎಂದು ಕುಮಾರ್ ಹೇಳಿದರು, ಚುನಾವಣಾ ಆಯೋಗವು ಅಂತಹ ಮತದಾರರಿಗೆ “ಕಾಲ್ಪನಿಕ ಸಂಖ್ಯೆಗಳನ್ನು” ಒದಗಿಸುತ್ತದೆ, ಅದನ್ನು “ಕಂಪ್ಯೂಟರ್‌ನಲ್ಲಿ ಶೂನ್ಯವಾಗಿ ತೋರಿಸಲಾಗುತ್ತದೆ ಎಂದು ಅವರು ಹೇಳಿದರು. “ಇದರರ್ಥ ಅವರು ಮತದಾರರಲ್ಲ ಎಂದು ಅರ್ಥವಲ್ಲ,” ಎಂದು ಜ್ಞಾನೇಶ್ ಹೇಳಿದರು.
ಮತದಾರರ ಪಟ್ಟಿಯಲ್ಲಿ ಅನೇಕ ಬಾರಿ ಮತದಾರನ ಹೆಸರು
ಒಂದೇ ಮತದಾರನನ್ನು ಹಲವಾರು ಮತಗಟ್ಟೆಗಳಲ್ಲಿ ನೋಂದಾಯಿಸಿರುವ ನಿದರ್ಶನಗಳಿವೆ ಎಂದು ಗಾಂಧಿ ಆರೋಪಿಸಿದ್ದರೆ, ಒಬ್ಬ ಮತದಾರನ ಹೆಸರು ಹಲವು ಬಾರಿ ಇದ್ದರೂ ಒಮ್ಮೆ ಮಾತ್ರ ಮತ ಚಲಾಯಿಸಬಹುದು ಎಂದು ಕುಮಾರ್ ಹೇಳಿದರು.
ಮತದಾರರ ಪಟ್ಟಿಯಲ್ಲಿ ಒಬ್ಬ ಮತದಾರರ ಹೆಸರು ಹಲವು ಬಾರಿ ಏಕೆ ಕಾಣಿಸಿಕೊಳ್ಳುತ್ತಿದೆ ಎಂಬುದಕ್ಕೆ ಅವರು ಯಾವುದೇ ಉತ್ತರವನ್ನು ನೀಡಲಿಲ್ಲ.
ಆಗಸ್ಟ್ 7 ರ ಪತ್ರಿಕಾಗೋಷ್ಠಿಯಲ್ಲಿ ಗಾಂಧಿಯವರು ವಿವಿಧ ಬೂತ್‌ಗಳಲ್ಲಿನ ಮತದಾರರ ಪಟ್ಟಿಯಲ್ಲಿ ಮತದಾರರು ಹಲವು ಬಾರಿ ಕಾಣಿಸಿಕೊಂಡಿರುವ ವಿವಿಧ ಉದಾಹರಣೆಗಳನ್ನು ತೋರಿಸಿದ್ದರು.
ಒಬ್ಬ ಮತದಾರ “ಒಮ್ಮೆ ಮಾತ್ರ ಮತ ಚಲಾಯಿಸಬಹುದು. ಮತದಾರರ ಪಟ್ಟಿಯಲ್ಲಿ ಅವರ ಹೆಸರು ಎರಡು ಬಾರಿ ಇದ್ದರೆ ಅದು ಹೇಗೆ ಮತ ಕಳ್ಳತನವಾಗುತ್ತದೆ? ಅದು ಸಾಧ್ಯವಿಲ್ಲ. ಪ್ರತಿಯೊಬ್ಬ ಮತದಾರರು ಒಮ್ಮೆ ಮಾತ್ರ ಮತ ಚಲಾಯಿಸಬಹುದು. ಅದಕ್ಕಾಗಿಯೇ ಚುನಾವಣಾ ಆಯೋಗದ ಡೇಟಾವನ್ನು ತಪ್ಪಾಗಿ ವಿಶ್ಲೇಷಿಸಲಾಗಿದೆ ಮತ್ತು ಮತದಾರರ ಪಟ್ಟಿಗಳು ತಪ್ಪು ಮತ್ತು ಆದ್ದರಿಂದ ಮತದಾನ ತಪ್ಪು ಎಂದು ಹೇಳಲಾಗಿದೆ ಎಂದು ನಾವು ಹೇಳಿದ್ದೇವೆ – ಚುನಾವಣಾ ಪಟ್ಟಿಗಳು ಮತ್ತು ಮತದಾನ ಬೇರೆ ಬೇರೆ” ಎಂದು ಕುಮಾರ್ ಹೇಳಿದರು.
(ಇದು ದಿ ವೈರ್ ಪ್ರಕಟಿಸಿದ Oath Politics, Silence on Forms Received and Number of ‘Illegal’ Immigrants: EC’s Seven Non-Answers ಕನ್ನಡಾನುವಾದ)